More

    ಕನ್ನಡ ಲಿಪಿಯಿಂದ ರೂಪುಗೊಂಡಿವೆ ಸಂಸ್ಕೃತ ಶಾಸನಗಳು

    ಹಾಸನ : ಕನ್ನಡ ಲಿಪಿ ಅತಿ ಪುರಾತನವಾದದ್ದು. ಸಂಸ್ಕೃತ ಮತ್ತು ನೆರೆಯ ತಮಿಳು ಭಾಷೆಗಳು ಲಿಪಿ ಹೊಂದುವುದಕ್ಕಿಂತ ಮುಂಚಿತವಾಗಿಯೇ ಇದ್ದ ಕನ್ನಡದ ಲಿಪಿಯನ್ನು ಬಳಸಿಕೊಂಡೆ ಸಂಸ್ಕೃತದ ಶಾಸನಗಳು ರೂಪಗೊಂಡಿವೆ. ಇದು ಸಂಶೋಧನೆಗಳಿಂದ ಸಾಬೀತಾಗಿವೆ ಎಂದು ಹಿರಿಯ ಸಾಹಿತಿ, ವಿಮರ್ಶಕ, ಕಾದಂಬರಿಕಾರ ಎನ್.ಬೋರಲಿಂಗಯ್ಯ ತಿಳಿಸಿದರು.

    ಚನ್ನರಾಯಪಟ್ಟಣ ತಾಲೂಕಿನ ಕಸಬಾ ಹೋಬಳಿ ಕಲ್ಕೇರೆ ಕಟ್ಟೆಮನೆಯಲ್ಲಿನ ಸರ್ಕಾರ ಪ್ರೌಢಶಾಲೆ ಆವರಣದಲ್ಲಿ ಗುರುವಾರ ಅಯೋಜಿಸಿದ್ದ ಹೋಬಳಿ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ಅವರು ಮಾತನಾಡಿದರು.


    ಕನ್ನಡ ಭಾಷೆಯೂ ಸ್ವತಂತ್ರ ಭಾಷೆಯೆಂಬ ಹೆಗ್ಗಳಿಕೆ ಹೊಂದಿದೆ. ಆದಿ ದ್ರಾವಿಡ ಭಾಷೆ ಎಂಬುದಾಗಿ ಕರೆಸಿಕೊಳ್ಳುವ ಕನ್ನಡ ಭಾಷೆಗೆ ನೆರೆಹೊರೆಯ ತಮಿಳು, ತೆಲುಗು ಭಾಷೆಗಳ ಸಾಮ್ಯತೆ ಇದೆ ಎಂದರು.


    ಸಾಹಿತಿ ರಮಾ ಡಾ.ಸಿದ್ದಲಿಂಗಯ್ಯ ಮಾತನಾಡಿ, ಇಂದು ಕನ್ನಡಕ್ಕೆ ಶೋಚನಿಯ ಸ್ಥಿತಿ ಇದೆ. ಕನ್ನಡ ಶಾಲೆಗಳನ್ನು ಮುಚ್ಚಿ, ಇಂಗ್ಲಿಷ್ ಶಾಲೆಯನ್ನು ತೆರೆಯಲಾಗುತ್ತಿದೆ. ಕನ್ನಡ ನಾಡು, ನುಡಿ, ನೆಲ, ಜಲ, ಕಲೆ, ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ದೊಡ್ಡ ಪರಂಪರೆ ಹೊಂದಿರುವ ಕನ್ನಡವನ್ನು ಉಳಿಸುವ ಕೆಲಸ ಯುವಕರಿಂದಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ಕೂಡ ಕನ್ನಡವನ್ನು ಕಟ್ಟುವ ಕೆಲಸ ಮಾಡುತ್ತಿದೆ ಎಂದರು.


    ಸಾಹಿತಿ ಮೇಟಿಕೆರೆ ಹಿರಿಯಣ್ಣ ಅವರ ಕೈದಿ ನಂ.1997 ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶ್‌ಗೌಡ, ವಿಶ್ವದಲ್ಲಿ ಕನ್ನಡ ಸಾಹಿತ್ಯಕ್ಕೆ ವಿರಾಜಮಾನವಾದ ಆಗ್ರಸ್ಥಾನವಿದೆ. ಇದು ಸಾಧ್ಯವಾಗಿದ್ದು ನಮ್ಮ ಜನಪದದಿಂದ. ನಮ್ಮ ಸಾಹಿತ್ಯದ ಮೂಲ ಬೇರು ಇರುವುದು ಜನಪದದಲ್ಲಿ. ಅಂತಹ ಜನಪದ ಸೊಗಡಿನಲ್ಲಿ ಬೆಳೆದ ನೂರಾರು ಮನಸ್ಸುಗಳ ಸಮ್ಮುಖದಲ್ಲಿ ಸಮ್ಮೇಳನ ಅಯೋಜನೆ ಅರ್ಥಪೂರ್ಣವಾದದು ಎಂದರು.


    ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಮಕ್ಕಳು ಕಲಿಕೆಯಲ್ಲಿ ವ್ಯಾಕರಣಬದ್ಧ ಕನ್ನಡಕ್ಕೆ ಆದ್ಯತೆ ನೀಡಬೇಕು. ವ್ಯಾಕರಣ ತಪ್ಪಾದ್ದಲ್ಲಿ ಭಾಷೆಯಲ್ಲಿ ಅನರ್ಥ ಮೂಡುತ್ತದೆ. ಕನ್ನಡ ಭಾಷೆಗೆ ತನ್ನದೇ ಆದ ಶಕ್ತಿ ಇದೆ. ಶಾಸ್ತ್ರೀಯ ಸ್ಥಾನಮಾನ ಹೊಂದಿದೆ ಎಂದರು.


    ಬದುಕನ್ನು ಕಟ್ಟಿಕೊಳ್ಳಲು ಇಂಗ್ಲಿಷ್ ಸೇರಿ ಅನ್ಯ ಭಾಷೆಗಳ ಅಗತ್ಯವಿದೆ. ಆದರ ನೆಪದಲ್ಲಿ ತಾಯಿ ಭಾಷೆಯನ್ನು ಎಂದೂ ಮರೆಯಬಾರದು. ತಾಯಿ ಭುವನೇಶ್ವರಿ ತೇರು ಎಳೆಯುವ ಕಾರ್ಯ ಮಾಡುತ್ತಿರುವ ಸಾಹಿತ್ಯ ಪರಿಷತ್ತಿಗೆ ಕೈಜೋಡಿಸುವುದು ನಮ್ಮ ಕರ್ತವ್ಯ. ಅವರಿಗೆ ಬೇಕಾದ ಸಹಕಾರ ನೀಡಿ ಸಮ್ಮೇಳನಕ್ಕೆ ಗೌರವ ತರಲಾಗಿದೆ ಎಂದರು.


    ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಮಾತನಾಡಿ, ಮನುಷ್ಯ ಜನ್ಮ ಅತಿ ಪವಿತ್ರವಾದದ್ದು. ಆ ಪವಿತ್ರತೆಗೆ ಅರ್ಥ ಬರಬೇಕಾದರೆ ಸಮಾಜಕ್ಕೆ ಒಳಿತು ಮಾಡುವ ಸಂಕಲ್ಪ ಹೊಂದಬೇಕು. ಯಾವುದೇ ಕ್ಷೇತ್ರವಾಗಲಿ ಆ ಕ್ಷೇತ್ರದಲ್ಲಿ ಜನ ಮೆಚ್ಚುವ ರೀತಿ ಕೆಲಸ ಮಾಡಬೇಕು. ಕನ್ನಡ ಸಾಹಿತ್ಯ ಕ್ಷೇತ್ರ ಸಮ್ಮೇಳನಕ್ಕೆ ಸೀಮಿತವಾಗಬಾರದು, ಹುಟ್ಟಿದ ನಾಡು, ಹೆತ್ತ ತಾಯಿ ಸ್ವರ್ಗಕ್ಕಿಂತ ಮಿಗಿಲು. ಇವೆರಡರ ಸೇವೆ ಮಾಡಲು ಮುಂದಾಗಬೇಕು. ಸಂಸ್ಕೃತದ ನಂತರ ಅತಿ ಶ್ರೀಮಂತಿಕೆ ಹೊಂದಿರುವ ಕನ್ನಡ ಭಾಷೆಯ ಸಾಹಿತ್ಯ, ಕಲೆ, ನೃತ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮೀಣ ಭಾಗಕ್ಕೆ ತಂದು ಮತ್ತಷ್ಟು ಶ್ರೀಮಂತಗೊಳಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.


    ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಪ್ರಾಸ್ತವಿಕವಾಗಿ ಮಾತನಾಡಿದರೆ, ಕಸಬಾ ಹೋಬಳಿ ಅಧ್ಯಕ್ಷ ದಯಾನಂದ್ ಶೆಟ್ಟಿಹಳ್ಳಿ ಗಣ್ಯರನ್ನು ಸ್ವಾಗತಿಸಿದರು.


    ಕಲ್ಕೇರೆ ಗ್ರಾ.ಪಂ. ಅಧ್ಯಕ್ಷೆ ಭವ್ಯಮಧು, ಸಾಹಿತಿ ಹೊನ್ನಶೆಟ್ಟಿಹಳ್ಳಿ ಗಿರಿರಾಜ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮದನ್‌ಗೌಡ, ಪ್ರೊ.ಚಂದ್ರೇಗೌಡ, ನಿಂಬೆಹಳ್ಳಿ ಚಂದ್ರೇಗೌಡ, ಡಿವೈಎಸ್‌ಪಿ ಪಿ.ರವಿಪ್ರಸಾದ್, ಅನಿಲ್ ಮರಗೂರು, ಮುಳ್ಳುಕೆರೆ ಪ್ರಕಾಶ್, ಹೆತ್ತೂರು ನಾಗರಾಜ್, ಜಾವಗಲ್ ಪ್ರಸನ್ನಕುಮಾರ್, ಬೊಮ್ಮೇಗೌಡ, ಅರಳಾಪುರ ಮಂಜೇಗೌಡ, ಕಲ್ಕೇರೆ ಮೋಹನ್, ಚ.ನಾ.ಅಶೋಕ್, ತಾಲೂಕು ನೌಕರರ ಸಂಘದ ಅಧ್ಯಕ್ಷ ಟಿ.ಮಂಜಪ್ಪ, ಬಿಇಒ ಎಚ್.ಎನ್.ದೀಪಾ, ಬಿಆರ್‌ಸಿ ಅನಿಲ್, ಸಿಡಿಪಿಒ ಇಂದ್ರಾ ಸೇರಿ ಇತರರು ಇದ್ದರು.

    ಫೋಟೋ ಶೀರ್ಷಿಕೆ 08 ಸಿಆರ್‌ಪಿ-2ಎ
    ಚನ್ನರಾಯಪಟ್ಟಣ ತಾಲೂಕಿನ ಕಸಬಾ ಹೋಬಳಿ ಕಲ್ಕೇರೆಯಲ್ಲಿ ನಡೆದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊರತರಲಾದ ಸ್ಮರಣ ಸಂಚಿಕೆ ಸಾಹಿತ್ಯ ದಿವಟಿಕೆ ಬಿಡುಗಡೆಗೊಳಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts