More

    ನಿರಂತರ ಪ್ರಯತ್ನವಿದ್ದರೆ ಸಾಧನೆ ಸಾಧ್ಯ ; ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿಕೆ

    ತುಮಕೂರು : ಮನುಷ್ಯನಿಗೆ ಸಾಧಿಸುವ ಛಲ, ಕಾಯಕ ನಿಷ್ಠೆ ಜತೆಗೆ ನಿರಂತರ ಪ್ರಯತ್ನವಿದ್ದರೆ ಯಾರೂ ಸಾಧನೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

    ನಗರದ ಶ್ರೀ ಸಿದ್ಧಗಂಗಾ ತಾಂತ್ರಿಕ ಕಾಲೇಜಿನಲ್ಲಿ ಶನಿವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಕೇಂದ್ರ ಸಚಿವನಾಗಿದ್ದರೆ ಅದಕ್ಕೆ ಬಸವಣ್ಣ, ಡಾ.ಶಿವಕುಮಾರ ಸ್ವಾಮೀಜಿ ಆದರ್ಶ ಪಾಲಿಸಿದ್ದು ಕಾರಣ, ಸಿದ್ಧಗಂಗಾ ಸಂಸ್ಥೆಯ ಗೌರವ ಉಳಿಸುವ ನಿಟ್ಟಿನಲ್ಲಿ ಸಾರ್ವಜನಿಕ ಜೀವನದಲ್ಲಿ ಮುನ್ನಡೆಯುತ್ತೇನೆ ಎಂದು ಭರವಸೆ ನೀಡಿದರು.

    ಸಮಾಜದಲ್ಲಿ ಒಬ್ಬರು ಮಾಡಿದ ಸಾಧನೆಯನ್ನು ಮತ್ತೊಬ್ಬರು ಮಾಡಲು ಕಷ್ಟಸಾಧ್ಯ, ನಮ್ಮಅಭಿರುಚಿ ಅವಕಾಶಗಳಿಗೆ ಅನುಗುಣವಾಗಿ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕು. ನಾನು ರಾಜಕೀಯ ಕ್ಷೇತ್ರ ಆಯ್ದುಕೊಂಡೆ. ಯಶಸ್ಸು ಸಿಕ್ಕಮೇಲೆ ಸಮಾಜ ಗುರುತಿಸಿ, ಸನ್ಮಾನಿಸುತ್ತದೆ. ಈ ಸನ್ಮಾನಗಳು ನಮ್ಮ ಊರು, ನಮ್ಮ ಶಾಲೆ, ಕಾಲೇಜಿನಲ್ಲಿ ನಡೆದಾಗ ಅದರ ತೃಪ್ತಿಯೇ ಬೇರೆ, ಎಸ್‌ಐಟಿ ವತಿಯಿಂದ ನಡೆದ ಸನ್ಮಾನ ನನಗೆ ಖುಷಿ ನೀಡಿದೆ ಎಂದರು.

    ನಮ್ಮ ಏಳು-ಬೀಳು ನೋಡಿದವರ ಮುಂದೆ ಸನ್ಮಾನ ಪಡೆಯುವುದು ಆತ್ಮತೃಪ್ತಿ ನೀಡುತ್ತದೆ, ಸಾಧನೆಯ ಹಾದಿಯಲ್ಲಿ ಜತೆಯಲ್ಲಿದ್ದವರು ಖುಷಿಪಟ್ಟು ಮಾಡಿದ ಈ ಕಾರ್ಯಕ್ರಮ ನನ್ನ ಜೀವನದಲ್ಲಿ ಸ್ಮರಣಾರ್ಹ. ನಾನು ನನ್ನ ತಪ್ಪು, ಆಲಸ್ಯಗಳನ್ನು ನೆನಪು ಮಾಡಿಕೊಂಡು ಅವು ಮರುಕಳಿಸದಂತೆ ಭವಿಷ್ಯದಲ್ಲಿ ನಡೆದುಕೊಳ್ಳುತ್ತೇನೆ, ನಿಮ್ಮ ಸನ್ಮಾನ ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದರು.
    ಮೋದಿ ಅವರ ಆದರ್ಶ, ಮಾನದಂಡ ಇಟ್ಟುಕೊಂಡು ಎಲ್ಲ ಜನಪ್ರತಿನಿಧಿಗಳೂ ಕೆಲಸ ಮಾಡಿದಾಗ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ, ಅಭಿವೃದ್ಧಿಯಲ್ಲಿ ಹೊಸಮೈಲಿಗಲ್ಲು ಸ್ಥಾಪಿಸಿದ್ದೇವೆ ಎಂದರು.

    ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಬೀದರ್ ಬಸವಣ್ಣನವರು ಓಡಾಡಿದ ಭೂಮಿಯಾಗಿದ್ದು ಅಲ್ಲಿನ ಮಣ್ಣಿನ ಸಂಸ್ಕೃತಿ, ಗುಣಸ್ವಭಾವ ಭಗವಂತ ಖೂಬಾ ವ್ಯಕ್ತಿತ್ವದಲ್ಲಿಯೇ ಕಾಣಿಸುತ್ತಿದೆ, ಕಾಯಕದ ಮೂಲಕವೇ ಪ್ರಧಾನಿ ನರೇಂದ್ರ ಮೋದಿ ಅವರ ಮನಸ್ಸು ಗೆದ್ದು ಕೇಂದ್ರ ಸಚಿವರಾಗಿ ಅವಕಾಶ ಲಭಿಸಿದ್ದು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲಿ ಎಂದರು.
    ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ನರೇಂದ್ರ ಮೋದಿ ಅವರ ಕ್ಯಾಬಿನೆಟ್‌ನಲ್ಲಿ ಸಿದ್ಧಗಂಗಾ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿ ಸಚಿವರಾಗಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ. ರಾಜಕೀಯ ಕ್ಷೇತ್ರದಲ್ಲಷ್ಟೇ ಅಲ್ಲದೇ ಎಲ್ಲ ಕ್ಷೇತ್ರದಲ್ಲಿ ಎಸ್‌ಐಟಿಯಲ್ಲಿ ಕಲಿತ ಸಾವಿರಾರು ಸಾಧಕರು ಇದ್ದಾರೆ ಎಂದು ಸ್ಮರಿಸಿದರು.

    ಸಿಇಒ ಡಾ.ಶಿವಕುಮಾರಯ್ಯ ಮಾತನಾಡಿ, ನಮ್ಮ ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿ ಎನಿಸಿರುವ ಕೇಂದ್ರ ಸಚಿವ ಖೂಬ 1987ರಿಂದ 1991ರವರೆಗೆ ಸಿದ್ಧಗಂಗಾ ಕಾಲೇಜು ವಿದ್ಯಾರ್ಥಿಯಾಗಿದ್ದರು, ಗುತ್ತಿಗೆದಾರರಾಗಿ ಯಶಸ್ವಿ ಉದ್ಯಮಿಯಾಗಿ, ರಾಜಕಾರಣಿಯಾಗಿ ಜನಸ್ನೇಹಿಯಾಗಿ ಗುರುತಿಸಿಕೊಂಡಿದ್ದಾರೆ ಎಂದರು. ಎಸ್‌ಐಟಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ, ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ಟಿ.ನಂಜುಂಡಪ್ಪ, ಪ್ರಾಚಾರ್ಯ ಎಸ್.ವಿ.ದಿನೇಶ್ ಇದ್ದರು.

    ಜಿಎಸ್‌ಟಿ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ : ಜಿಎಸ್‌ಟಿ ರಾಜಕೀಯ ಮಾಡುವ ವಿಚಾರವಲ್ಲ, ಕಾಂಗ್ರೆಸ್ ರಾಜಕೀಯಕ್ಕೆ ಜಿಎಸ್‌ಟಿ ವಿಚಾರ ಮುಂದಿಟ್ಟುಕೊಂಡು ಮಾತನಾಡುತ್ತಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
    ಕೇಂದ್ರ ಸರ್ಕಾರ ಜಿಎಸ್‌ಟಿ ಸೇರಿದಂತೆ ರಾಜ್ಯದ ಪಾಲಿನ ಎಲ್ಲಾ ಅನುದಾನಗಳನ್ನು ಸಕಾಲದಲ್ಲಿ ನೀಡಲಿದೆ, ಈ ವಿಚಾರದಲ್ಲಿ ರಾಜಕೀಯ ಬೇಡ ಎಂದರು. ಜಿಎಸ್‌ಟಿ ಸಂಬಂಧ ಪ್ರತಿ ತಿಂಗಳು ನಡೆಯುವ ಸಭೆಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಪಾಲ್ಗೊಳ್ಳುವ ಸಚಿವರು ವಿಷಯ ಮಂಡಿಸುತ್ತಾರೆ. ಆದ್ದರಿಂದ ವಿನಾ ಕಾರಣ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುವುದು ಸರಿಯಲ್ಲ ಎಂದು ಹೇಳಿದರು. ತನ್ನ ಖಾತೆಗೆ ಸಂಬಧಿಸಿದಂತೆ ರಾಜ್ಯಕ್ಕೆ ಫಾರ್ಮಸಿಟಿಕಲ್ ಪಾರ್ಕ್ ಘೋಷಣೆ ಮಾಡಲಾಗಿದೆ, ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಯಾಗಲಿದೆ. ಸೋಲಾರ್ ಪಾರ್ಕ್‌ಗಳನ್ನು ಸ್ಥಾಪಿಸುವ ಸಂಬಂಧ ಟೆಂಡರ್ ಕರೆಯಲಾಗಿದೆ ಎಂದರು.

    ತುಮಕೂರಿನ ಎಸ್‌ಐಟಿ ಕಾಲೇಜು ಸಂಸ್ಕಾರ, ಸಂಬಂಧಗಳನ್ನು ಕಲಿಸಿದೆ. ಸಾವಿರಾರು ಜನರಿಗೆ ಪರದೇಶದಲ್ಲಿಯೂ ನೆಮ್ಮದಿಯಿಂದ ಬದುಕುವ ಜೀವನ ಕಲೆ ಲಭಿಸಿದೆ. ಕೇಂದ್ರ ಸಚಿವನಾಗಿರುವ ನನಗೂ ತುಮಕೂರು ಜಿಲ್ಲೆಯ ಬಗ್ಗೆ ಹುಟ್ಟೂರಿನಷ್ಟೇ ಪ್ರೀತಿಯಿದೆ. ಭಾವನಾತ್ಮಕ ಸಂಬಂಧವಿರುವ ತುಮಕೂರಿನ ಸಮಗ್ರ ಅಭಿವೃದ್ಧಿಗೆ ನಾನೂ ಶ್ರಮಿಸುತ್ತೇನೆ.
    ಭಗವಂತ ಖೂಬಾ, ಕೇಂದ್ರ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts