More

    ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ 12 ಸಾವಿರ ರೂ. ನಿಗದಿಪಡಿಸಿ

    ಚಿಕ್ಕಮಗಳೂರು: ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆ ಈಡೇರಿಸದಿದ್ದರೆ ಜು.10ರಿಂದ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಹೋರಾಟ ನಡೆಸುತ್ತೇವೆ ಎಂದು ಸರ್ಕಾರವನ್ನು ಎಚ್ಚರಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಮಂಗಳವಾರ ಅಪರ ಜಿಲ್ಲಾಧಿಕಾರಿ ಡಾ. ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

    ಮಾಸಿಕ ಗೌರವಧನ 12 ಸಾವಿರ ರೂ. ನಿಗದಿಪಡಿಸಿ ಅಗತ್ಯ ಆರೋಗ್ಯ ರಕ್ಷಣಾ ಸಾಮಗ್ರಿ ನೀಡಬೇಕು. ಕರೊನಾ ಪಾಸಿಟಿವ್ ಬಂದಿರುವವರಿಗೆ ಉಚಿತ ಚಿಕಿತ್ಸೆ ನೀಡುವ ಜತೆಗೆ ಚಿಕಿತ್ಸಾ ಅವಧಿಯಲ್ಲಿ ಸಂಪೂರ್ಣ ಗೌರವಧನ ನೀಡಬೇಕು, ಮಾಸ್ಕ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಇತ್ಯಾದಿ ವಸ್ತುಗಳನ್ನು ಸಮರ್ಪಕವಾಗಿ ಪೂರೈಸಬೇಕು ಎಂದು ಒತ್ತಾಯಿಸಿದರು.

    ಆಶಾ ಕಾರ್ಯಕರ್ತೆಯರ ಸಮಸ್ಯೆ ಕುರಿತು ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಗೆ ಜನವರಿಯಿಂದಲೂ ರಾಜ್ಯಾದ್ಯಂತ ಹಲವು ಬಾರಿ ಮನವಿ ನೀಡಿದರೂ ಪದಾಧಿಕಾರಿಗಳ ಜತೆ ಸಭೆ ನಡೆಸಿಲ್ಲ. ಈಗ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ಈಗಲಾದರೂ ಸರ್ಕಾರ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷೆ ತಾರಾ ಕೃಷ್ಣ ಆಗ್ರಹಿಸಿದರು.

    ರಾಜ್ಯದಲ್ಲಿ ಪ್ರತೀ ಆಶಾ ಕಾರ್ಯಕರ್ತೆಗೆ ಮಾಸಿಕ 4 ಸಾವಿರ ರೂ. ಗೌರವಧನ ಸೇರಿ ವಿವಿಧ ಚಟುವಟಿಕೆ ಆಧಾರಿತವಾಗಿ 8ರಿಂದ 9 ಸಾವಿರ ರೂ. ನಿಗದಿ ಮಾಡಲಾಗಿದೆ. ಪ್ರೋತ್ಸಾಹಧನ ಹಾಗೂ ವಿವಿಧ ಕೆಲಸಗಳ ಗೌರವಧನವನ್ನು ಬಿಡಿಯಾಗಿ ನೀಡಲಾಗುತ್ತಿದ್ದು, ಇದಕ್ಕಾಗಿ ವೆಬ್ ಪೋರ್ಟಲ್ ಮಾಡಲಾಗಿದೆ. ಈ ವ್ಯವಸ್ಥೆಯಿಂದ ಕಾರ್ಯಕರ್ತೆಯರಿಗೆ ಹಣ ಸಮಯಕ್ಕೆ ಸರಿಯಾಗಿ ಕೈಸೇರದಿರುವ ಬಗ್ಗೆ ಇಲಾಖೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹಾಗಾಗಿ ಪ್ರೋತ್ಸಾಹಧನ ಮತ್ತು ಗೌರವಧನವನ್ನು ಒಗ್ಗೂಡಿಸಿ ಮಾಸಿಕ 12 ಸಾವಿರ ರೂ. ನೀಡಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts