More

    ಕೊನೇ ಕ್ಷಣದಲ್ಲಿ ಟ್ವಿಸ್ಟ್! ‘ಇಂದ್ರ’ಜಾಲದಲ್ಲಿ ಸಿಲುಕಿರುವ ದರ್ಶನ್​ ಪ್ರಕರಣದ ಇನ್​ಸೈಡ್​ ಸ್ಟೋರಿ ಇದು

    ಸಾರಥಿ ಹಲ್ಲೆ ಕೇಸ್​ ದಿನಕ್ಕೊಂದು ತಿರುವು ಪಡೆಯುತ್ತಿದೆ. ವೇಯ್ಟರ್ ಮೇಲ್ ಹಲ್ಲೆ ನಡೆಸಲಾಗಿದೆ ಎಂದು ಇಂದ್ರಜಿತ್ ಲಂಕೇಶ್ ದೂರಿದ ಬೆನ್ನಲ್ಲೇ ಇದೀಗ ಇದಕ್ಕೆ ಪೂರಕ ಎಂಬಂತಹ ಮಹತ್ತರ ಸಾಕ್ಷ್ಯವೊಂದು ಇದೀಗ ಬಯಲಾಗಿದೆ. ಘಟನೆ ನಡೆದ ಸಂದೇಶ್ ಹೋಟೆಲ್​ ಮಾಲೀಕ ಸಂದೇಶ್​ ಅಂದಿನ ಘಟನೆ ಬಗ್ಗೆ ಮಾತನಾಡಿರೋ ಆಡಿಯೋ ರಿಲೀಸ್ ಆಗಿದೆ. ಇದರಲ್ಲಿ ದರ್ಶನ್ ಹಲ್ಲೆ ನಡೆಸಿರೋದು ನಿಜ ಅಂತಾ ಸಂದೇಶ್ ಹೇಳಿರುವುದು ಇಡೀ ಕೇಸ್​ಗೆ ಟ್ವಿಸ್ಟ್ ನೀಡಿಬಿಟ್ಟಿದೆ.

    ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್​​ನಲ್ಲಿ ನಟ ದರ್ಶನ್, ವೇಯ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದು ಇಂದ್ರಜಿತ್ ಲಂಕೇಶ್ ಆರೋಪ. ಇದಾದ ಬೆನ್ನಲ್ಲೇ ಮೈಸೂರಿನಲ್ಲಿ ಪೊಲೀಸರು ವಿಚಾರಣೆ ಆರಂಭಿಸಿದ ಬಳಿಕ ಆರೋಪಕ್ಕೆ ಪುಷ್ಠಿ ನೀಡುವಂತಹ ಸಾಕ್ಷಿಗಳು ಸಿಕ್ತಿಲ್ಲ ಅಂತಾ ಅನ್ಕೊಳ್ಳೋ ಹೊತ್ತಿಗೆ ಧುತ್ ಅಂತಾ ಪ್ರತ್ಯಕ್ಷವಾಗಿದೆ ಒಂದು ಆಡಿಯೋ ಬಾಂಬ್. ಓರ್ವ ಅನಾಮಧೇಯನಿಂದ ದೊರೆತ ಈ ಆಡಿಯೋ ದರ್ಶನ್​ ಬಹುಕಾಲದ ಗೆಳೆಯ, ನಿರ್ಮಾಪಕ, ಹೋಟೆಲ್ ಸಂದೇಶ್ ದಿ ಪ್ರಿನ್ಸ್​​ನ ಮಾಲೀಕ ಸಂದೇಶ್​​ರದ್ದು ಎಂದು ಹೇಳಲಾಗಿದೆ. ಆಡಿಯೋದಲ್ಲಿ ಅಂದಿನ ಘಟನೆಯನ್ನ ಸಂದೇಶ್ ಮಿತ್ರರೊಬ್ಬರಿಗೆ ಎಳೆಎಳೆಯಾಗಿ ವಿವರಿಸಿದ್ದಾರೆ.

    ಅಂದು ರಾತ್ರಿ ದರ್ಶನ್ ಹಾಗೂ ಅವರ ಜತೆಗಿದ್ದ 15 ಮಂದಿ ಸ್ನೇಹಿತರು ವೇಯ್ಟರ್ ಮೇಲೆ ಹಲ್ಲೆ ನಡೆಸಿದ ಬಗ್ಗೆ ಸಂದೇಶ್ ಸ್ಪಷ್ಟವಾಗಿ ಹೇಳುತ್ತಾರೆ. ಈ ಸಂದರ್ಭದಲ್ಲಿ ಸಪ್ಲೈಯರ್ ಮೇಲೆ ಹಲ್ಲೆ ನಡೀತಿದ್ರೂ ಸೈಲೆಂಟ್ ಆಗಿದ್ದ ದರ್ಶನ್ ಸ್ನೇಹಿತರಾದ ರಾಕೇಶ್​ ಪಾಪಣ್ಣ, ಹರ್ಷ ಮೆಲಾಂಟಾಗೆ ಬೈಯ್ದು ಬುದ್ಧಿ ಹೇಳಿದ್ದು ಕೂಡ ಈ ಅಡಿಯೋದಲ್ಲಿ ಇದೆ. ​ಇದಲ್ಲದೆ, ದರ್ಶನ್ ಜತೆ ಒಳ್ಳೆಯ ಸ್ನೇಹಿತರು ಈಗ ಉಳಿದಿಲ್ಲ ಎಂಬುದನ್ನ ಕೂಡ ಸಂದೇಶ್ ತಮ್ಮ ಸ್ನೇಹಿತರ ಬಳಿ ಹೇಳಿರೋದು ಈ ಆಡಿಯೋದಲ್ಲಿದೆ. ಇಷ್ಟು ಮಾತ್ರವಲ್ಲ, ಆಡಿಯೋದಲ್ಲಿ ದರ್ಶನ್ ಪವಿತ್ರಾಗೌಡ ಹೆಸರೂ ಕೇಳಿಬರುತ್ತದೆ. ಜತೆಗೆ ದರ್ಶನ್ ಜತೆ ಇರುವವರು ಒಳ್ಳೆಯವರಲ್ಲ ಎಂದು ಕೂಡ ಸಂದೇಶ್ ಹೇಳಿದ್ದಾರೆ. ಇಷ್ಟಲ್ಲದೆ, ದರ್ಶನ್ ಸಹವಾಸ ಬೇಡ ಅಂತಾ ತಮ್ಮ ತಂದೆ ಸಂದೇಶ್ ನಾಗರಾಜ್ ತಮಗೆ ಹೇಳಿದ ಬಗ್ಗೆಯೂ ಇಲ್ಲಿ ನಿರ್ಮಾಪಕ ಸಂದೇಶ್ ಆಡಿಯೋದಲ್ಲಿ ವಿವರಿಸಿದ್ದಾರೆ. ಮತ್ತೆ ದರ್ಶನ್ ಸಹವಾಸ ಮಾಡಿದ್ರೆ ಹೋಟೆಲ್ ಸಿಬ್ಬಂದಿ ಜತೆಗಲ್ಲದೆ, ಗಾಂಧಿನಗರದಲ್ಲೂ ಮರ್ಯಾದೆ ಸಿಗೋದಿಲ್ಲ ಅನ್ನೋ ಧಾಟಿಯಲ್ಲಿ ಸಂದೇಶ್ ನಾಗರಾಜ್ ಹೇಳಿರೋ ಸಂಗತಿಯನ್ನ ಸಂದೇಶ್ ಫೋನ್​ನಲ್ಲಿ ಗೆಳೆಯರ ಬಳಿ ಹೇಳೋದು ಆಡಿಯೋದಲ್ಲಿ ಕೇಳಿ ಬಂದಿದೆ.

    ಶುಕ್ರವಾರ ಬೆಳಗ್ಗೆಯಿಂದಲೂ ದರ್ಶನ್ ಹಲ್ಲೆ ಕೇಸ್​ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಲೇ ಇದೆ. ಬೆಳಗ್ಗೆಯಿಂದ ಮೈಸೂರು ಹೋಟೆಲ್​ನಲ್ಲಿ ನಡೆದ ಪೊಲೀಸ್ ವಿಚಾರಣೆ ವೇಳೆ ವೇಯ್ಟರ್ ಹಾಗೂ ಸಿಬ್ಬಂದಿ ದರ್ಶನ್ ಹಲ್ಲೆ ನಡೆಸಿಲ್ಲ ಅಂತಾ ಹೇಳಿದ ಸಂದರ್ಭ ದರ್ಶನ್ ಪರ ಸಹಾನುಭೂತಿ ವ್ಯಕ್ತವಾದ್ರೆ, ಯಾವಾಗ ಆಡಿಯೋ ರಿಲೀಸ್ ಆಯ್ತೋ, ಇಡೀ ಸೀನ್ ಚೇಂಜ್ ಆಗಿಬಿಟ್ಟಿತು. ಸಂದೇಶ್ ಹಾಗೂ ಇಂದ್ರಜಿತ್ ಲಂಕೇಶ್ ನಡುವೆ ನಡೆದ ಮೊಬೈಲ್ ಸಂಭಾಷಣೆ ಎನ್ನಲಾದ ಈ ಆಡಿಯೋದಲ್ಲಿ ಸಂದೇಶ್ ದರ್ಶನ್ ಹಲ್ಲೆ ನಡೆಸಿದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು ಕೇಸ್​​ಗೆ ದೊಡ್ಡ ತಿರುವು ಕೊಟ್ಟಂತಾಗಿದೆ.

    ಇನ್ನೊಂದೆಡೆ, ತಮ್ಮ ಮಾತಿಗೆ ಈಗಲೂ ಬದ್ಧ ಎಂದಿರೋ ನಿರ್ದೇಶಕ ಇಂದ್ರಜಿತ್ ಲಂಕೇಶ್, ಹೋಟೆಲ್​ನಲ್ಲಿ ದರ್ಶನ್ ಹಲ್ಲೆ ನಡೆಸಿರೋದು ನಿಜ ಅಂತಾ ಪುನರುಚ್ಛರಿಸಿದ್ದಾರೆ. ತಾವು ಯಾವತ್ತಿದ್ರೂ ನ್ಯಾಯದ ಪರ ಹೋರಾಟ ಮುಂದುವರೆಸೋದಾಗಿ ತಿಳಿಸಿದ ಇಂದ್ರಜಿತ್ ಲಂಕೇಶ್, ಈಗಲಾದ್ರೂ ಒದೆ ತಿಂದ ಬಡ ಸಪ್ಲೈಯರ್ ಹಾಗೂ ಇತರರ ಬಳಿ ದರ್ಶನ್​ ಕ್ಷಮೆಯಾಚಿಸಬೇಕು ಅಂತಾ ಒತ್ತಾಯಿಸಿದ್ದಾರೆ. ಇನ್ನು ಆಡಿಯೋದಲ್ಲಿ ನಿರ್ಮಾಪಕ ಸಂದೇಶ್ ಜತೆ ಮಾತನಾಡಿದ್ದು ತಾವೇ ಎಂಬುದನ್ನ ಕೂಡ ಇಂದ್ರಜಿತ್ ಲಂಕೇಶ್ ಒಪ್ಪಿಕೊಂಡಿದ್ದಾರೆ. ಅಲ್ಲದೆ, ತಮ್ಮ ಜತೆ ಸಂದೇಶ್ ನಾಗರಾಜ್ ಅಲ್ಲದೇ, ಪ್ರತ್ಯಕ್ಷದರ್ಶಿಗಳು ಕೂಡ ಸಂಪರ್ಕದಲ್ಲಿದ್ದಾರೆ ಎಂದ ಇಂದ್ರಜಿತ್, ತಮ್ಮದೇ ಆದ ಮೂಲಗಳಿಂದ ತನಿಖೆ ನಡೆಸುತ್ತಿರೋದಾಗಿ ಕೂಡ ಹೇಳಿದ್ದಾರೆ.

    ಒಂದೆಡೆ, ದಚ್ಚು ಹೋಟೆಲ್ ಕಾರ್ಮಿಕನ ಮೇಳೆ ಹಲ್ಲೆ ನಡೆಸಿದ ಬಗ್ಗೆ ಆಡಿಯೋ ಸಾಕ್ಷ್ಯ ಸಿಕ್ಕಿದ್ರೆ, ಮತ್ತೊಂದೆಡೆ, ಬೆಳಗ್ಗೆಯಿಂದ ನಡೆದ ಘಟನಾವಳಿಗಳನ್ನ ಅವಲೋಕಿಸಿದ್ರೆ ಇಂದ್ರಜಿತ್​ರೇ ಸುಳ್ಳು ಹೇಳಿದ್ರಾ ಎಂಬ ಅನುಮಾನ ಹುಟ್ಟು ಹಾಕಿದ್ದು ನಿಜ. ಏಕೆಂದರೆ, ದರ್ಶನ್​ರಿಂದ ಹಲ್ಲೆಗೊಳಗಾದರು ಅಂತಾ ಹೇಳಲಾಗುತ್ತಿದ್ದ ವೇಯ್ಟರ್ ಖುದ್ದು ಹೋಟೆಲ್​​ನಲ್ಲಿ ಪ್ರತ್ಯಕ್ಷರಾದರು. ತಮ್ಮ ಮೇಳೆ ಹಲ್ಲೆ ನಡೆದೇ ಇಲ್ಲ ಅಂತಾ ಪೊಲೀಸರೆದುರು ವೇಯ್ಟರ್ ಗಂಗಾಧರ್ ಸ್ಟೇಟ್​ಮೆಂಟ್ ಕೊಟ್ಟರು. ಇನ್ನ, ಹೋಟೆಲ್​ನಲ್ಲಿ ಪರಿಶೀಲನೆ ನಡೆಸಿದ ಪೊಲೀಸರು, ಸಿಸಿಟಿವಿ ಸರ್ವರ್ ಸೇರಿದಂತೆ ಹಲವು ದಾಖಲೆ ಗಳನ್ನ ತೆಗೆದುಕೊಂಡು ಹೋಗಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಲ್ಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಯಾವಾಗ ನಿರ್ದೇಶಕ ಇಂದ್ರಜಿತ್ ಲಂಕೇಶ್, ದರ್ಶನ್ ಹೋಟೆಲ್ ವೇಯ್ಟರ್​​ ಮೇಲೆ ಹಲ್ಲೆ ನಡೆಸಿದ್ದಾರೆ ಅಂತಾ ಬೊಟ್ಟು ಮಾಡಿದರೋ, ಮತ್ತೊಮ್ಮೆ ವಿವಾದದ ಸೆಂಟರ್​ ಪಾಯಿಂಟ್ ಆಗಿದ್ದಾರೆ ಸಾರಥಿ. ಇದರ ಜತೆಗೇ ದರ್ಶನ್ ಮೈಸೂರಿಗೆ ಆಗಮಿಸಿದ್ದು ಎಲ್ಲರ ಕುತೂಹಲ ಅರಮನೆನಗರಿಯತ್ತ ಹರಿಯುವಂತೆ ಮಾಡಿದ್ದು ಸುಳ್ಳಲ್ಲ. ಯಾವಾಗ ಇಂದ್ರಜಿತ್ ಲಂಕೇಶ್​ ದರ್ಶನ್ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದರೋ, ಮೈಸೂರು ಪೊಲೀಸರು ಸೈಲೆಂಟ್ ಆಗಿ ಉಳಿಯಲಿಲ್ಲ. ಮೊದಲೇ ಇಂದ್ರಜಿತ್, ಮೈಸೂರು ಪೊಲೀಸ್ ಸ್ಟೇಷನ್​ಗಳು ಸೆಟಲ್​ಮೆಂಟ್ ಸ್ಟೇಷನ್ ಆಗ್ತಿವೆ ಅಂತಾ ದೂರಿದ್ದು. ಆನಂತರ ಗೃಹಸಚಿವ ಬಸವರಾಜ ಬೊಮ್ಮಾಯಿಗೆ ಮನವಿ ಪತ್ರ ಕೊಟ್ಟ ಪರಿಣಾಮ ಪೊಲೀಸರು ಕೂಡ ಹೈ ಅಲರ್ಟ್​ ಆಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾದ ಸಂದೇಶ್ ದಿ ಪ್ರಿನ್ಸ್​ ಹೋಟೆಲ್​​ಗೆ ಪೊಲೀಸ್ ಅಧಿಕಾರಿಗಳು ವಿಸಿಟ್ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳು ಹೋಟೆಲ್​​ನಲ್ಲಿ ಘಟನೆ ನಡೆದ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದೇ ಸಮಯದಲ್ಲಿ ನೋಡಿ.. ಕೇಸ್​​ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು.!

    ಯಾವ ವೇಯ್ಟರ್​ ಮೇಲೆ ದರ್ಶನ್ ಮನಸೋಯಿಚ್ಛೆ ಥಳಿಸಿದ್ದಾರೆ ಅಂತಾ ಇಂದ್ರಜಿತ್ ಬೊಟ್ಟು ಮಾಡಿದರೋ, ಯಾವ ಸಪ್ಲೈಯರ್ ಕಣ್ಣು ಬ್ಲರ್ ಆಗಿದೆ ಅಂತಾ ಇಂದ್ರಜಿತ್ ದೂರಿದರೋ, ಏಟು ತಿಂದ ನಂತರ ಕೆಲಸ ಬಿಟ್ಟುಹೋಗಿದ್ದಾನೆ ಅಂತಾ ಲಂಕೇಶ್ ಹೇಳಿದರೋ, ಅದೇ ಗಂಗಾಧರ್ ಎಲ್ಲೂ ಹೋಗಿಲ್ಲ. ಅದೇ ಸಂದೇಶ್ ದಿ ಪ್ರಿನ್ಸ್​ ಹೋಟೆಲ್​​ನಲ್ಲೇ ಇವತ್ತಿಗೂ ಕೆಲಸ ಮಾಡ್ತಿದ್ದಾರೆ. ಇಲ್ಲಿಗೆ ಬರೋ ಕಸ್ಟಮರ್​ಗಳಿಗೆ ಎಂದಿನಂತೆ ಗಂಗಾಧರ್ ಸಪ್ಲೈ ಮಾಡ್ತಿದ್ದಾರೆ. ಸಂದೇಶ್​ ಹೋಟೆಲ್​ಗೆ ತೆರಳಿದ ಪೊಲೀಸರು, ಇದೇ ಗಂಗಾಧರ್​ರನ್ನ ವಿಚಾರಣೆಗೊಳಪಡಿಸಿದರು. ಅಂದು ನಡೆದ ಘಟನೆಗಳ ಸಂಪೂರ್ಣ ವಿವರವನ್ನ ಪೊಲೀಸರು ಪಡೆದುಕೊಂಡರು. ಆಗ್ಲೇ ಕೇಸ್​ಗೆ ಸಿಕ್ಕಿದ್ದು ಮತ್ತೊಂದು ಟ್ವಿಸ್ಟ್.

    ಇಲ್ಲಿ ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಸರ್ವಿಸ್ ಮ್ಯಾನೇಜರ್ ಗಂಗಾಧರ್ ಮೊದಲು ಹೇಳಿದ್ದು, ತಮ್ಮ ಮೇಲೆ ದರ್ಶನ್ ಹಲ್ಲೆ ನಡೆಸಿಲ್ಲ ಅಂತಾ. ಅಂದು ದರ್ಶನ್ ಗೆ ತಾನೇ ಸರ್ವ್​ ಮಾಡಿದೆ ಎಂದು ಒಪ್ಪಿಕೊಂಡ ಗಂಗಾಧರ್, ಊಟ ತಡವಾದ ಕಾರಣ ಏಕೆ ಲೇಟ್ ಅಂತಾ ದರ್ಶನ್ ರೇಗಿದರೇ ಹೊರತು ಕೈಮಾಡಲಿಲ್ಲ ಅಂತಾ ಪೊಲೀಸರೆದುರು ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ.

    ಇದಲ್ಲದೆ, ಇಂದ್ರಜಿತ್ ಲಂಕೇಶ್ ಹೇಳಿರುವಂತೆ ತಮ್ಮ ಕಣ್ಣು ಮಂಜಾಗಿಲ್ಲ. ಕಣ್ಣಿನ ದೃಷ್ಟಿ ಚೆನ್ನಾಗೇ ಇದೆ ಅಂತಾ ಕೂಡ ಗಂಗಾಧರ್ ಪೊಲೀಸರಿಗೆ ಕಣ್ಣನ್ನ ತೋರಿಸಿದ್ದಾರೆ. ಜತೆಗೆ ಘಟನೆ ನಡೆದ ಮಾರನೇ ದಿನಬೆಳಗ್ಗೆ ವೇಯ್ಟರ್ ಪತ್ನಿ ಹೋಟೆಲ್​ಗೆ ಬಂದು ಗಲಾಟೆ ಮಾಡಿದರು ಅಂತಾ ಇಂದ್ರಜಿತ್ ಹೇಳಿದ್ದೂ ಸುಳ್ಳು ಎಂದ ಗಂಗಾಧರ್, ತಮಗೆ ಮದುವೆಯೇ ಆಗಿಲ್ಲ, ತಾವು ಬ್ಯಾಚುಲರ್ ಎಂದಿದ್ದಾರೆ. ಇಲ್ಲಿಗೆ ಇಂದ್ರಜಿತ್ ದೂರುಗಳ ಸರಮಾಲೆ ಗೂ..ಇಲ್ಲಿನ ಘಟನಾವಳಿಗಳಿಗೂ ತಾಳೆ ಆಗುತ್ತಿಲ್ಲ ಅಂದಾಯ್ತು. ಈ ಮುನ್ನ ದರ್ಶನ್​ರಿಂದ ಏಟು ತಿಂದು ಕೋಮಾದಲ್ಲಿದ್ದಾನೆ ಎಂದು ದೂರಿದ್ದ ಬೆನ್ನಲ್ಲೇ ಪ್ರತ್ಯಕ್ಷರಾದ ಸ್ನೇಹಿತ ಗೋಪಾಲರಾಜೇ ಅರಸ್ ತಮಗೇನೂ ಆಗಿಲ್ಲ ಅಂತಾ ಸ್ಪಷ್ಟಪಡಿಸಿದ್ದು ಇಂದ್ರಜಿತ್​​ಗೆ ಇರುಸುಮುರುಸು ತಂದಿತ್ತು.

    ಇಷ್ಟು ಮಾತ್ರವಲ್ಲ. ದಲಿತ ವೇಯ್ಟರ್ ಗಂಗಾಧರ್ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ ಅನ್ನೋ ಮೂಲಕ ಜಾತಿ ಅಸ್ತ್ರ ಬಳಸೋಕೆ ಮುಂದಾದ ಇಂದ್ರ ಜಿತ್​ಗೆ ಇಲ್ಲೂ ನಿರಾಸೆಯಾಗಿದೆ. ಏಕೇಂದ್ರೆ, ಖುದ್ದು ಈ ಬಗ್ಗೆ ಸ್ಪಷ್ಟನೆ ಕೊಟ್ಟ ವೇಯ್ಟರ್ ಗಂಗಾಧರ್, ತಾವು ದಲಿತ ಸಮುದಾಯಕ್ಕೆ ಸೇರಿಲ್ಲ. ಬದಲಾಗಿ ತಮ್ಮದು ಕೇರಳದ ನಾಯರ್ ಜನಾಂಗ ಎಂದು ಸ್ಪಷ್ಟಪಡಿಸಿದ್ದಾರೆ. ಗಂಗಾಧರ್ ಸುದೀರ್ಘ ವಿಚಾರಣೆ ನಡೆಸಿದ ಪೊಲೀಸರು, ಎಷ್ಟು ದಿನಗಳಿಂದ ಇಲ್ಲಿ ಕೆಲಸ ಮಾಡ್ತಿರೋದು? ದರ್ಶನ್ ಎಷ್ಟು ಸಮಯದಿಂದ ಪರಿಚಯ? ಹೀಗೆ ಹಲವಾರು ಪ್ರಶ್ನೆಗಳನ್ನ ಕೂಡ ಕೇಳಿದ್ದಾರೆ. ಇದಾದ ಬಳಿಕ ವೇಯ್ಟರ್​​ ಗಂಗಾಧರ್ ಬಳಿಯಿಂದ ಪ್ರಕರಣ ಸಂಬಂಧಪಟ್ಟಂತೆ ಸ್ಟೇಟ್​ಮೆಂಟ್ ಪಡೆದಿದ್ದಾರೆ.

    ಇದೇ ಸಂದರ್ಭದಲ್ಲಿ ಸಂದೇಶ್ ಹೇಳಿದ ಬಿಹಾರಿ ಟ್ರೈನಿ ಸಮೀರ್ ಎಂಬಾತನನ್ನೂ ಪೊಲೀಸರು ವಿಚಾರಣೆಗೊಳಪಡಿಸಿದರು. ಎಷ್ಟು ದಿನದಿಂದ ಸಂದೇಶ್ ದಿ ಪ್ರಿನ್ಸ್​ನಲ್ಲಿ ಕೆಲಸ ಮಾಡ್ತಿರೋದು? ದರ್ಶನ್ ಪರಿಚತರೇ? ಅಂದು ಏನಾಯ್ತು? ಹೀಗೆ ಅಂದು ನಡೆದ ಘಟನೆ ಬಗ್ಗೆ ಸಮೀರ್ ಬಳಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಇದರ ಜತೆಗೆ ಹೋಟೆಲ್​ನ ಇತರೆ ಕೆಲವು ಸಿಬ್ಬಂದಿಯಿಂದಲೂ ಪೊಲೀಸರು ಈ ಸಂಬಂಧ ವಿವರ ಪಡೆದುಕೊಂಡಿದ್ದಾರೆ. ಇಷ್ಟಲ್ಲದೆ, ಹೋಟೆಲ್​ನಲ್ಲಿ ಪೊಲೀಸರು ಕೆಲ ದಾಖಲೆಗಳನ್ನ ಕೂಡ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

    ಇನ್ನೊಂದೆಡೆ, ಘಟನೆ ಬಗ್ಗೆ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಮಾಲೀಕರ ಬಳಿಯೂ ದರ್ಶನ್ ಭೇಟಿ ಬಗ್ಗೆ ಪೊಲೀಸರು ಕೆಲವು ಮಾಹಿತಿಗಳನ್ನ ಪಡೆದಿದ್ದಾರೆ. ಇದೇ ಸಂದರ್ಭದಲ್ಲಿ ಹೋಟೆಲ್ ಪರಿಶೀಲನೆ ನಡೆಸಿದ ಪೊಲೀಸರು ಸಿಸಿಟಿವಿ ವಿಶೂಯಲ್ಸ್​ ಬಗ್ಗೆ ಹೋಟೆಲ್ ಮಾಲೀಕರ ಬಳಿ ಮಾಹಿತಿ ಕೇಳಿದ್ದಾರೆ. ಈ ಸಂದರ್ಭದಲ್ಲಿ ಹೋಟೆಲ್ ಮಾಲೀಕ ಸಂದೇಶ್, ಸಿಸಿಟಿವಿ ದೃಶ್ಯ ಡಿಲೀಟ್ ಆಗಿದೆ ಎಂದು ಉತ್ತರ ಕೊಟ್ಟಿದ್ದಾರೆ. ಹೀಗಾಗಿ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಮಾಲೀಕರಿಗೆ ಮೈಸೂರು ಪೊಲೀಸರು ಸಿಸಿಟಿವಿ ವಿಡಿಯೋ ಡಿಲೀಟ್ ಮಾಡಿದ ಬಗ್ಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.

    ಅತ್ತ ಮೈಸೂರಿನಲ್ಲಿ ಪೊಲೀಸರೆದುರು ಹಾಜರಾದ ಹೋಟೆಲ್ ವೇಟರ್ ಗಂಗಾಧರ್, ದರ್ಶನ್ ತಮ್ಮ ಮೇಲೆ ಹಲ್ಲೆ ನಡೆಸಿಲ್ಲ ಅಂತಾನೋ ಸ್ಟೇಟ್​ಮೆಂಟ್ ಕೊಟ್ಟಿದ್ದಾರೆ. ಇಲ್ಲಿಗೆ ಕೇಸ್ ಮುಗೀತು ಅಂತಾ ಅನ್ಕೊಳ್ಳೋ ಹೊತ್ತಿಗೆ ಬಯಲಾಗಿದೆ ಸ್ಫೋಟಕ ಆಡಿಯೋ. ಇದರ ಬೆನ್ನಲ್ಲೇ ಭಯದಿಂದಾಗಿ ವೇಯ್ಟರ್ ಗಂಗಾಧರ್ ಸುಳ್ಳು ಹೇಳುತ್ತಿದ್ದಾರೆ ಅಂತಾ ಹೇಳಿರೋ ಇಂದ್ರಜಿತ್ ಲಂಕೇಶ್, ದರ್ಶನ್ ಹಲ್ಲೆ ಮಾಡಿರೋದು ನಿಜ ಅಂತಾ ಪುನರುಚ್ಛರಿಸಿದ್ದಾರೆ. ಇದು ಯಾವುದು ನಿಜ? ಯಾವುದು ಸುಳ್ಳು ಅನ್ನೋ ಬಗ್ಗೆ ಜನರಿಗೆ ಇನ್ನಷ್ಟು ಕನ್​ಫ್ಯೂಷನ್ ಹೆಚ್ಚಿಸಿದೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಲ್ಲೆ ಕೇಸ್​​ನಲ್ಲಿ ಯಾವುದು ಸತ್ಯ? ಯಾವುದು ಮಿಥ್ಯ ಎಂಬುದೇ ತಲೆನೇವಾಗಿ ಪರಿಣಮಿಸಿದೆ. ಅರುಣಾಕುಮಾರಿ ಕೇಸ್ ಅಂತ್ಯ ಆಯ್ತೆಂದು ನಿರಾಳವಾಗೋ ಹೊತ್ತಿಗೆ ಸಾರಥಿಗೆ ಎದುರಾಗಿದೆ ಹಲ್ಲೆ ಕೇಸ್ ಚಕ್ರವ್ಯೂಹ.! ಅತ್ತ ಮೈಸೂರಿನಲ್ಲಿ ಪೊಲೀಸ್ ತನಿಖೆ ಸಂದರ್ಭದಲ್ಲಿ ದರ್ಶನ್ ಹಲ್ಲೆಯನ್ನೇ ನಡೆಸಿಲ್ಲ ಅಂತಾ ಪ್ರಕರಣದ ಕೇಂದ್ರಬಿಂದು ವೇಯ್ಟರ್ ಹೇಳಿದ ಬಳಿಕ ಎಲ್ಲವೂ ತಣ್ಣಗಾಯ್ತು ಅಂತಾ ಭಾವಿಸಿ ದವರೇ ಹೆಚ್ಚು. ಆದ್ರೆ, ಯಾವಾಗ ಆಡಿಯೋ ರಿಲೀಸ್ ಆಯ್ತೋ, ಕೇಸ್​ ಮತ್ತೊಂದು ಟರ್ನ್​ ಪಡೆದುಬಿಟ್ಟಿತು.!

    ಅತ್ತ ಮೈಸೂರಿನಲ್ಲಿ ಮೊದಲು ನಡೆದ ಬೆಳವಣಿಗೆಗಳನ್ನ ಗಮನಿಸಿದ್ರೆ, ಇಂದ್ರಜಿತ್ ಸುಳ್ಳು ಹೇಳುತ್ತಿದ್ದಾರೆ ಎಂದೇ ಅನಿಸಿದ್ದು ನಿಜ. ದರ್ಶನ್ ಫ್ರೆಂಡ್ ಕೋಮಾದಲ್ಲಿದ್ದಾನೆ ಅಂತಾ ಇಂದ್ರಜಿತ್ ಗುರುವಾರ ಹೇಳಿದ್ರೆ, ಆತ ನೋಡಿದ್ರೆ ಇಲ್ಲಿ ಕಲ್ಲುಗುಂಡಂತೆ ಇದ್ದಾನೆ. ಇನ್ನ, ಇಲ್ಲಿ ವೇಯ್ಟರ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದ್ರೆ ಗಂಗಾಧರ್ ನೋಡಿದ್ರೆ ಯಾವ ಹಲ್ಲೆಯೂ ನಡೆದಿಲ್ಲ ಅಂತಾ ಕ್ಲಾರಿಫೈ ಮಾಡಿದ್ದಾರೆ. ಇನ್ನ, ಗಂಗಾಧರ್ ಕಣ್ಣು ಬ್ಲರ್ ಆಗಿದೆ ಅಂತಾ ಇಂದ್ರಜಿತ್ ದೂರಿದ್ರೆ, ಇವರು ಮಾತ್ರ ಇದು ಸುಳ್ಳು ಅಂತಾ ಕಣ್ಣರಳಿಸಿ ತೋರಿದ್ದಾರೆ. ಇದಲ್ಲದೆ, ವೇಯ್ಟರ್ ದಲಿತ ಸಮುದಾಯಕ್ಕೆ ಸೇರಿದವರು ಎಂದು ಇಂದ್ರಜಿತ್ ಹೇಳಿದ್ರೆ, ಇತ್ತ ತಾವು ಕೇರಳದ ನಾಯರ್ ಅಂತಿದ್ದಾರೆ ಗಂಗಾಧರ್. ಇನ್ನ, ಘಟನೆ ನಡೆದ ಮಾರನೇ ದಿನ ಬೆಳಗ್ಗೆ ವೇಯ್ಟರ್ ಹೆಂಡ್ತಿ ಪೊರಕೆ ಹಿಡಿದು ಬಂದಿದ್ಳು ಅಂತಾ ಇಂದ್ರಜಿತ್ ವಾದಿಸಿದ್ರೆ, ಇತ್ತ ತನಗೆ ಮದುವೆಯೇ ಆಗಿಲ್ಲ..ಪತ್ನಿ ಬರೋದಾದ್ರೂ ಎಲ್ಲಿ ಅಂತಾ ಗಂಗಾಧರ್ ಪ್ರ್ರಶ್ನಿಸಿದ್ದಾರೆ. ಇದರೊಂದಿಗೆ ಇಂದ್ರಜಿತ್ ಹೇಳಿದ ಮಾತಿಗೂ..ಇಲ್ಲಿನ ಚಿತ್ರಣಕ್ಕೂ ಟ್ಯಾಲಿಯೇ ಆಗಿಲ್ಲ.

    ಇಷ್ಟೆಲ್ಲಾ ಪ್ರಶ್ನಾರ್ಥಕ ಚಿಹ್ನೆಗಳನ್ನ ಆಡಿಯೋ ಬಾಂಬ್ ಹೊಡೆದುಹಾಕಿದೆ ಅಂತಾನೇ ಹೇಳಬಹುದು. ಇನ್ನೊಂದೆಡೆ, ವೇಯ್ಟರ್ ಮೇಲೆ ಹಲ್ಲೆ ನಡೆ ದಿರೋ ಬಗೆಗಿನ ತಮ್ಮ ಮಾತಿಗೆ ಬದ್ಧ ಎಂದಿರೋ ಇಂದ್ರಜಿತ್ ಲಂಕೇಶ್, ಭಯದಿಂದಾಗಿ ತಮ್ಮ ಮೇಲೆ ದರ್ಶನ್ ಹಲ್ಲೆ ನಡೆಸಿಲ್ಲ ಅಂತಾ ವೇಯ್ಟರ್ ಹೇಳಿದ್ದಾರೆ ಅಂದಿದ್ದಾರೆ. ಬಡವರಾದ ವೇಯ್ಟರ್ ಹಾಗೂ ಇತರರು, ಕೆಲಸ ಕೇಳದುಕೊಳ್ಳೋ ಹಾಗೂ ಸಮಾಜವನ್ನ ಎದುರು ಹಾಕಿಕೊಳ್ಳೋ ಭೀತಿ ಯಿಂದ ಈ ರೀತಿ ಹೇಳುತ್ತಿದ್ದಾರೆ ಎಂದು ಇಂದ್ರಜಿತ್ ಆರೋಪಿಸಿದ್ದಾರೆ.

    ಇಲ್ಲಿ ಆಡಿಯೋ ಖಚಿತತೆ ಬಗ್ಗೆ ಹೇಳೋದಾದ್ರೆ, ಒಂದು ಕಡೆಯಲ್ಲಿ ತಾವು ಮಾತನಾಡಿದ್ದಾಗಿ ಇಂದ್ರಜಿತ್ ಒಪ್ಪಿಕೊಂಡಿದ್ದಾರೆ. ಜತೆಗೆ ಇತ್ತೀಚೆಗಿನ ವಿದ್ಯಮಾನಗಳನ್ನ ಅವಲೋಕಿಸಿದ್ರೆ ಸಂದೇಶ್ ಈ ಧಾಟಿಯಲ್ಲಿ ಮಾತನಾಡಿರಬಹುದೇನೋ ಎನಿಸುತ್ತಿದೆ. ಒಟ್ಟಾರೆ, ವೇಯ್ಟರ್, ವಾಚ್ ಮ್ಯಾನ್, ಗೆಳೆಯ ಗೋಪಾಲರಾಜೇ ಅರಸ್, ನಿರ್ದೇಶಕರು..ಹೀಗೆ ಎಲ್ಲರ ಮೇಲೆ ಹಲ್ಲೇ ಮಾಡೋದೇ ದರ್ಶನ್ ಚಾಳಿ ಅಂತಾ ಇಂದ್ರಜಿತ್ ಲಂಕೇಶ್ ಈ ಹಿಂದೆಯೇ ಆರೋಪಿಸಿದ್ದಾರೆ. ಇದೀಗ ಗಂಗಾಧರ್, ಗೋಪಾಲರಾಜೇ ಅರಸ್ ಮುಂತಾದವರು ತಮ್ಮ ಮೇಲೆ ಹಲ್ಲೆಯೇ ನಡೆದಿಲ್ಲ ಅಂತಾ ಕ್ಲಾರಿಫೈ ಮಾಡಿದ್ದಾರೆ. ಆದ್ರೆ, ಇದರ ಬೆನ್ನಲ್ಲೇ ರಿಲೀಸ್ ಆದ ಆಡಿಯೋ, ಗಂಗಾಧರ್ ಮಾತನ್ನೇ ಡೌಟ್​​ ಪಡುವಂತೆ ಮಾಡಿದೆ. ಇಲ್ಲಿ ಇಂದ್ರಜಿತ್ ಹೇಳಿದಂತೆ ಇವರೆಲ್ಲಾ ಭಯದಿಂದ ದರ್ಶನ್ ರಕ್ಷಣೆಗೆ ನಿಂತರಾ ಎಂಬ ಪ್ರಶ್ನೆಯೂ ಮೂಡಿದೆ.

    ಇನ್ನೊಂದೆಡೆ, ಹಲ್ಲೆ ಆರೋಪ ಎದುರಿಸ್ತಿರೋ ನಟ ದರ್ಶನ್ ಪರ ಸಚಿವ ಬಿಸಿ ಪಾಟೀಲ್ ಕೂಡ ನಿಂತಿದ್ದಾರೆ. ಇದಲ್ಲದೆ, ಮಾಜಿ ಸಚಿವ ಹಳ್ಳಿಹಕ್ಕಿ ಎಚ್​ ವಿಶ್ವನಾಥ್ ಕೂಡ ದರ್ಶನ್ ಪರವೇ ದನಿ ಎತ್ತಿದ್ದಾರೆ. ಒಟ್ಟಾರೆ, ಇಂದ್ರಜಿತ್ ಆರೋಪ, ವೇಯ್ಟರ್ ಸ್ಟೇಟ್​ಮೆಂಟ್, ಆಡಿಯೋ..ಹೀಗೆ ಒಂದೊಂದು ಸೀನ್ ಒಂದೊಂದು ರೀತಿ ಅನುಮಾನ ಸೃಷ್ಟಿಸಿದೆ. ಇದೀಗ ಸಂದೇಶ್ ದಿ ಪ್ರಿನ್ಸ್​​ ಹೋಟೆಲ್​​ನಲ್ಲಿ ಪರಿಶೀಲನೆ ನಡೆಸಿರೋ ಮೈಸೂರು ಪೊಲೀಸರು, ಸರ್ವರ್​ ಮುಂತಾದ ಹಲವು ದಾಖಲೆಗಳನ್ನ ಕೊಂಡೊಯ್ದಿದ್ದಾರೆ. ಸಿಬ್ಬಂದಿಯಿಂದ ಹೇಳಿಕೆ ಪಡೆದಿದ್ದಾರೆ. ತಂತ್ರಜ್ಞಾನದ ನೆರವಿನಿಂದ ಸಿಸಿಟಿವಿ ದೃಶ್ಯ ಡಿಲೀಟ್ ಆಗಿದ್ರೂ ಹೊರತೆಗೆಯೋ ಅವಕಾಶ ಇದೆ. ಈ ಎಲ್ಲದರ ಮುಖಾಂತರ ಸತ್ಯ ಹೊರಬರುತ್ತಾ ಅನ್ನೋದು ಈಗಿನ ಕುತೂಹಲ.

    ವಿವಾದಗಳ ಸರಮಾಲೆಯಲ್ಲಿ ಸಿಲುಕಿರೋ ದಾಸನಿಗೆ ಇದೀಗ ಹೋಟೆಲ್ ಸಪ್ಲೈಯರ್ ಮೇಲಿನ ಹಲ್ಲೆ ಕೇಸ್ ಹೊಸ ಸಂಕಷ್ಟ ತಂದಿದೆ. ವೇಯ್ಟರ್ ಏನೋ ದರ್ಶನ್ ಹಲ್ಲೆ ಮಾಡಿಲ್ಲ ಅಂತಾ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ. ಆದ್ರೆ, ಆನಂತಯರ ಹೊರಬಂದ ಆಡಿಯೋ ಬಾಂಬ್, ಬೇರೆಯದ್ದೇ ಆದ ಕತೆ ಹೇಳುತ್ತಿದೆ. ಇಲ್ಲಿ ಒಂದು ಕಾಲದ ದರ್ಶನ್ ಕುಚುಕು ಗೆಳೆಯ ಸಂದೇಶ್, ಆಡಿಯೋದಲ್ಲಿ ದಚ್ಚುವಿನ ಇತ್ತೀಚೆಗಿನ ನಡವಳಿಕೆಗಳ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದಾರೆ. ಒಟ್ಟಾರೆ, ಈ ಕೇಸ್​ ಎಲ್ಲಿಗೆ ಹೋಗಿ ಮುಟ್ಟುತ್ತೋ ಅನ್ನೋದೇ ಸದ್ಯದ ಕುತೂಹಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts