More

    ಬೆಲೆ ಬಾಳುವ ಶ್ರೀಗಂಧ ಕಳ್ಳರ ಪಾಲು

    ಬಂಕಾಪುರ: ಪಟ್ಟಣದ ಸುತ್ತಮುತ್ತಲಿನ ವ್ಯಾಪ್ತಿಯ ಜಮೀನು, ಮನೆ, ಹಿತ್ತಲುಗಳಲ್ಲಿ ಸ್ವಾಭಾವಿಕವಾಗಿ ಬೆಳೆದ ಮತ್ತು ರೈತರು ಬೆಳೆಸಿದ ಗಂಧದ ಮರಗಳು ಕಳ್ಳರ ಪಾಲಾಗುತ್ತಿವೆ. ಹಲವು ದಿನಗಳಿಂದ ಜತನದಿಂದ ಕಾಯ್ದು ಬೆಳೆಸಿದ ಬೆಲೆಬಾಳುವ ಮರಗಳು ನಾಪತ್ತೆಯಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

    ಇತ್ತೀಚಿನ ದಿನಗಳಲ್ಲಿ ಗಂಧದ ಮರ ಕಳವು ಪ್ರಕರಣಗಳು ಪಟ್ಟಣದಲ್ಲಿ ಹೆಚ್ಚಾಗುತ್ತಿವೆ. ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

    ಪಟ್ಟಣದ ಅರಳೆಲೆಮಠ ಖಾಸಗಿ ಆಸ್ಪತ್ರೆ ಬಳಿ ಅಭಿಷೇಕ ಸಜ್ಜನಗೌಡ್ರ ಅವರ ಮನೆ ಹಿತ್ತಲಿನಲ್ಲಿನ ಗಂಧದ ಮರವನ್ನು ಭಾನುವಾರ ಕಡಿದು ಸಾಗಿಸಲಾಗಿದೆ. ಇದಲ್ಲದೆ, ಕೆಲ ದಿನಗಳ ಹಿಂದೆ ಹೈಸ್ಕೂಲ್ ರಸ್ತೆಯ ಕೊಟ್ರಯ್ಯಸ್ವಾಮಿ ಆದವಾನಿಮಠ ಅವರ ಮನೆ ಹಿಂಭಾಗದಲ್ಲಿನ ಎರಡು ಮತ್ತು ಅವರ ಮನೆ ಪಕ್ಕದ ಶಿವಾನಂದ ಆದವಾನಿಮಠ ಅವರ ಹಿತ್ತಲಿನಲ್ಲಿನ ಎರಡು, ಅಂಕದಖಣದ ಶಿವಪುತ್ರಯ್ಯ ಕೆಂಡದಮಠ ಅವರ ಒಂದು ಗಂಧದ ಮರಗಳನ್ನು ಕಡಿದು ಸಾಗಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದ ತೊಟದಲ್ಲಿನ ಸುಮಾರು ಐದು ಗಂಧದ ಮರಗಳನ್ನು ಕಳ್ಳರು ಕಡಿದು ಸಾಗಿಸಲಾಗಿದೆ.

    ಹಗಲಲ್ಲಿ ಗಿಡಗಳನ್ನು ಗುರುತಿಸುವ ಕಳ್ಳರು ರಾತ್ರಿ ವೇಳೆ ಕತ್ತರಿಸಿಕೊಂಡು ಹೋಗುತ್ತಿದ್ದಾರೆ. ಈ ಕುರಿತು ಗಂಧದ ಗಿಡಗಳ ಮಾಲೀಕರು ಬಂಕಾಪುರ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದಾರೆ. ಆದರೆ, ಗಂಧದ ಮರ ಕಳ್ಳತನ ಮಾತ್ರ ನಿರಂತರವಾಗಿ ಸಾಗಿದೆ.

    ಹಲವು ಅಪರಾಧ ಪ್ರಕರಣಗಳನ್ನು ಭೇದಿಸಿ ಉತ್ತಮ ಠಾಣಾ ಪ್ರಶಸ್ತಿ ಪಡೆದಿರುವ ಬಂಕಾಪುರ ಠಾಣೆ ಪಿಎಸ್​ಐ ಮತ್ತು ಸಿಬ್ಬಂದಿಗೆ ಪಟ್ಟಣದಲ್ಲಿ ನಡೆಯುತ್ತಿರುವ ಗಂಧದ ಮರ ಕಳ್ಳರನ್ನು ಹಿಡಿಯುವುದು ಸವಾಲಾಗಿ ಪರಿಣಮಿಸಿದೆಯೇ ? ಅಥವಾ ಪೊಲೀಸರೇ ಇಂಥ ಪ್ರಕರಣಗಳ ಕಡೆಗೆ ಗಮನ ಹರಿಸುತ್ತಿಲ್ಲವೇ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಉದ್ಭವಿಸಿದೆ.

    ಹೊರ ರಾಜ್ಯಗಳಿಗೆ ಸಾಗಾಟ: ಐತಿಹಾಸಿಕ ಹಿನ್ನೆಲೆಯುಳ್ಳ ಬಂಕಾಪುರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನ, ಮಠಗಳು ಮತ್ತು ದರ್ಗಾಗಳಿವೆ. ಜೊತೆಗೆ ಶ್ರೀಗಂಧದ ಮರಗಳು ಸಹ ಹೇರಳವಾಗಿವೆ. ಇಲ್ಲಿರುವ ದರ್ಗಾ ಮತ್ತು ದೇವಸ್ಥಾನಗಳಲ್ಲಿ ನಡೆಯುವ ಧಾರ್ವಿುಕ ಕಾರ್ಯಕ್ರಮ, ಪೂಜಾ ವಿಧಿ ವಿಧಾನಗಳಿಗೆ ಶ್ರೀಗಂಧ ಉಪಯೋಗಿಸುವುದು ವಾಡಿಕೆಯಾಗಿದೆ. ಆದ್ದರಿಂದ ಇಲ್ಲಿನ ಪ್ರತಿ ಮನೆ ಹಿತ್ತಲಿನಲ್ಲಿ ಗಂಧದ ಮರಗಳು ಕಾಣಸಿಗುತ್ತವೆ. ಯಾವುದೇ ಆರ್ಥಿಕ ಲಾಭದ ಉದ್ದೇಶವಿಲ್ಲದೆ, ಧಾರ್ವಿುಕ ಕಾರ್ಯಕ್ರಮಗಳಿಗೆ ಉಪಯೋಗಿಸಲು ಹಿತ್ತಲುಗಳಲ್ಲಿ ಬೆಳೆಸಲಾಗಿರುವ ಮತ್ತು ಸ್ವಾಭಾವಿಕವಾಗಿ ಬೆಳೆದಿರುವ ಗಂಧದ ಮರಗಳ ಮೇಲೆ ಇತ್ತೀಚೆಗೆ ಕಳ್ಳರ ಕಣ್ಣು ಬಿದ್ದಿದೆ. ಹಣ ಗಳಿಸುವ ದುರಾಸೆಯಿಂದ ಕಳ್ಳರು ನಿತ್ಯ ಮರಗಳನ್ನು ಕಡಿದು ಹೊರ ರಾಜ್ಯದ ಸುಗಂಧ ದ್ರವ್ಯ, ಧೂಪ ತಯಾರಿಸುವ ಕಾರ್ಖಾನೆಗಳಿಗೆ ಸಾಗಿಸುತ್ತಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts