More

    ವಿಶ್ವಶಾಂತಿ ಸಾಧನೆಗಾಗಿ ಸನಾತನ ಧರ್ಮದ ಸೂತ್ರ

    ವಿಶ್ವಶಾಂತಿ ಸಾಧನೆಗಾಗಿ ಸನಾತನ ಧರ್ಮದ ಸೂತ್ರಸನಾತನ ಧರ್ಮ ಹೇಳುವಂತೆ ಯಾರೂ ಪರರಲ್ಲ. ಎಲ್ಲರೂ ನಮ್ಮವರೇ. ಎಲ್ಲರೂ ಪರಮಾತ್ಮನ ಪ್ರತಿಬಿಂಬಗಳೇ ಎಂಬ ಈ ಸತ್ಯವನ್ನು ಅರಿತವರಿಗೆ ಶಾಂತಿ, ಸಮರಸಗಳು ಸಹಜಸಿದ್ಧವಾಗಿರುತ್ತವೆ. ಮಾನವನ ಅಂತರಂಗದಲ್ಲಿನ ಶಾಂತಿ, ವಿಶ್ವಶಾಂತಿಗೆ ಕಾರಣವಾಗುತ್ತದೆ. ಹೀಗೆ ಅಂತರಂಗ-ಬಹಿರಂಗಗಳ ಶಾಂತಿಗೆ ಆತ್ಮಜ್ಞಾನವೇ ಮೂಲ.

    ಪರಿಪೂರ್ಣ ಶಾಂತಿ, ಸಮರಸಗಳಿಂದ ತುಂಬಿ ತುಳುಕುವ ಆದರ್ಶ ಜಗತ್ತಿನ ಕಲ್ಪನೆ ಮಾನವ ಜನಾಂಗದ ನಿರಂತರ ಆಶಯವಾಗಿದ್ದರೂ, ಅದು ಎಂದೂ ಕಾರ್ಯಗತವಾಗಲಿಲ್ಲ ಎಂಬುದು ಇತಿಹಾಸದ ಕಠೋರ ಸತ್ಯ. ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲಿಯೂ ಶಾಂತಿ, ಸಮರಸಗಳು ಮೂಲಭೂತ ಮೌಲ್ಯಗಳಾಗಿವೆ; ಇವುಗಳ ಸಿದ್ಧಿಗಾಗಿ ಅಸಂಖ್ಯಾತ ಪ್ರಾರ್ಥನೆಗಳನ್ನೂ ಕಾಣಬಹುದು. ಭಾರತೀಯ ಸಂಸ್ಕೃತಿಯಲ್ಲಿ ಎಲ್ಲ ಪ್ರಾರ್ಥನೆಗಳು ‘ಓಂ ಶಾಂತಿಃ ಶಾಂತಿಃ ಶಾಂತಿಃ’ ಎಂಬ ಪಠಣದೊಂದಿಗೆ ಅಂತ್ಯವಾಗುತ್ತವೆ. ಯೆಹೂದೀಯ ಸಂಪ್ರದಾಯದಲ್ಲಿ ‘ಶಾಲೋಮ್ ಎಂದರೆ, ಕ್ರೖೆಸ್ತ ಸಂಸ್ಕೃತಿಯಲ್ಲಿ ‘ನಿಮಗೆ ಶಾಂತಿ ಸಿದ್ಧಿಸಲಿ’ ಎಂದು ಹರಸುತ್ತಾರೆ. ಆದರೆ ಇಂದಿಗೂ ವಿಶ್ವಶಾಂತಿ ಕಲ್ಪನೆ ಕನಸಿನ ಮಾತಾಗಿಯೇ ಉಳಿದಿದೆ.

    ಕಳೆದ ಎರಡು ಶತಮಾನಗಳಲ್ಲಂತೂ ಜಗತ್ತಿನ ಉದ್ದಗಲಗಳಲ್ಲಿ ನಡೆದಿರುವ ಘರ್ಷಣೆ, ಆಕ್ರಮಣ ಹಾಗೂ ಉಗ್ರವಾದಿ ಪ್ರಕ್ರಿಯೆಗಳು ಮಾನವತೆ, ಶಾಂತಿಯ ಕನಸನ್ನು ನುಚ್ಚು ನೂರಾಗಿಸಿವೆ. ಈ ಅವಧಿಯಲ್ಲಿ ಮಾನವನು ಸಾಧಿಸಿದ ವೈಜ್ಞಾನಿಕ ಹಾಗೂ ಸಾಮಾಜಿಕ ಪ್ರಗತಿಗಳಾದರೋ ಊಹಾತೀತ. ಶಾಂತಿ, ಸಮರಸಗಳ ಸ್ಥಾಪನೆಗಾಗಿ ನಡೆದ ಮಾತುಕತೆಗಳು ಹಾಗೂ ಒಪ್ಪಂದಗಳು ಅಸಂಖ್ಯಾತ. ಆದರೆ ಈ ಎಲ್ಲ ಪ್ರಯತ್ನಗಳಿಗೆ ಫಲವಾಗಿ ಲಭ್ಯವಾದದ್ದು ಮಾತ್ರ ಶೂನ್ಯವೆಂದೇ ಹೇಳಬಹುದು.

    ವಿಶ್ವಶಾಂತಿ ಸಾಧನೆಗಾಗಿ ಸನಾತನ ಧರ್ಮ ತೋರುವ ಪಥವನ್ನು ಈಗ ಪರಿಶೀಲಿಸೋಣ. ಪ್ರಪಂಚವನ್ನು ವ್ಯಾಪಿಸಿರುವ ಅಶಾಂತಿಗೆ ಮೂಲ ಕಾರಣ ಶೋಧಿಸುತ್ತ ಸನಾತನ ಧರ್ಮ ಮಾನವನ ದೃಷ್ಟಿಯನ್ನು ಹೊರಗಿನ ಜಗತ್ತಿನಿಂದ ಅಂತರಂಗದ ಜಗತ್ತಿಗೆ ತಿರುಗಿಸುತ್ತದೆ.

    ಮೂಲಭೂತವಾಗಿ ಶಾಂತಿ ಎಂಬುದು ಅಂತರಂಗದ ಪರಿಪೂರ್ಣ ವಿಶ್ರಾಂತಿ ಹಾಗೂ ಸಾಮರಸ್ಯದ ಒಂದು ಸ್ಥಿತಿ. ಇಂತಹ ಸ್ಥಿತಿಯನ್ನು ಮಾನವನು ಹೇಗೆ ಸಾಧಿಸಬಹುದು? ಇದಕ್ಕಾಗಿ ಮಾನವ ವ್ಯಕ್ತಿತ್ವದ ಮೂರು ಘಟಕಗಳನ್ನು ತಿಳಿದುಕೊಳ್ಳೋಣ. ಮೊದಲನೆಯದು ಭೌತಿಕ ದೇಹ; ಎರಡನೆಯದು ಮನಸ್ಸು; ಮೂರನೆಯದು ಆತ್ಮ, ಇದನ್ನೇ ಜೀವಾತ್ಮವೆಂದೂ ಕರೆಯುತ್ತಾರೆ. ಜೀವಾತ್ಮವೆಂದರೆ ಜೀವಿಯಲ್ಲಿ ಕಂಡುಬರುವ ಏಕಮೇವ ಪರಮಾತ್ಮನ ಪ್ರತಿಬಿಂಬ. ಒಬ್ಬನೇ ಸೂರ್ಯನು ನೀರಿನಿಂದ ತುಂಬಿದ ಅನೇಕ ಪಾತ್ರೆಗಳಲ್ಲಿ ಅನೇಕ ಪ್ರತಿಬಿಂಬಗಳಾಗಿ ಕಾಣುತ್ತಾನೆ, ಅದೇ ರೀತಿಯಲ್ಲಿ ಒಬ್ಬನೇ ಪರಮಾತ್ಮನು ಅನೇಕ ಜೀವಿಗಳಲ್ಲಿ ಅನೇಕ ಜೀವಾತ್ಮಗಳಾಗಿ ತೋರುತ್ತಾನೆ. ನಾವು ನಮ್ಮನ್ನು ನಮ್ಮ ವ್ಯಕ್ತಿತ್ವದ ಮೊದಲ ಘಟಕವಾದ ದೇಹವೆಂದೇ ಭಾವಿಸುತ್ತೇವೆ. ಇತರರು ನಮ್ಮ ವ್ಯಕ್ತಿತ್ವದ ಎರಡನೆಯ ಭಾಗವಾದ ಮನಸ್ಸಿನ ಆಧಾರದಲ್ಲಿ ನಮ್ಮ ವ್ಯಕ್ತಿತ್ವವನ್ನು ನಿರ್ಣಯಿಸುತ್ತಾರೆ. ಆದರೆ ನಿಜವಾಗಿ ಇವೆರಡು ನಾವಲ್ಲ. ನಾವು ಸತ್ಯವಾಗಿ ಆತ್ಮವೇ! ಈ ದೃಷ್ಟಿಯಿಂದ ಶಾಂತಿಯನ್ನು ಈ ಮೂರೂ ಘಟಕಗಳಲ್ಲಿಯೂ (ದೇಹ, ಮನಸ್ಸು, ಆತ್ಮ) ಸ್ಥಾಪಿಸಬೇಕು. ಆದ್ದರಿಂದಲೇ ಭಾರತೀಯ ಸಂಸ್ಕೃತಿಯ ಶಾಂತಿಮಂತ್ರಗಳಲ್ಲಿ ‘ಶಾಂತಿಃ ಶಾಂತಿಃ ಶಾಂತಿಃ’ ಎಂದು ಮೂರು ಬಾರಿ ಉಚ್ಚರಿಸುತ್ತೇವೆ.

    ದೇಹ ಯಾವುದೇ ರೋಗರುಜಿನಗಳಿಲ್ಲದೆ ಆರೋಗ್ಯವಾಗಿರುವುದು ಮೊದಲನೆಯ ಮಟ್ಟದ ಶಾಂತಿ. ರೋಗ ಮಾತ್ರವಲ್ಲದೆ ಉದರದಲ್ಲಿನ ಹಸಿವೆ ಕೂಡ ಶಾಂತಿಯನ್ನು ಕದಡಬಹುದು. ಆದ್ದರಿಂದ ದೇಹದ ಉತ್ತಮ ಆರೋಗ್ಯ ಶಾಂತಿಗೆ ಪ್ರಥಮ ಸೋಪಾನ. ಇಂತಹ ಆರೋಗ್ಯ ನಮ್ಮ ಜೀವನವಿಧಾನ, ಅಭ್ಯಾಸ ಹಾಗೂ ಆಹಾರ-ವಿಹಾರಗಳನ್ನು ಹೊಂದಿಕೊಂಡಿರುತ್ತದೆ. ಎರಡನೆಯ ಮಟ್ಟದ ಶಾಂತಿ ಮನಸ್ಸಿಗೆ ಸಂಬಂಧಿಸಿದ್ದು. ಮನಸ್ಸು ಎಂದರೆ, ನಮ್ಮ ಎಲ್ಲ ರೀತಿಯ ಯೋಚನೆ ಹಾಗೂ ಭಾವನೆಗಳ ಮೂಟೆ. ಮನಸ್ಸಿನಲ್ಲಿ ಉತ್ತಮ ಧನಾತ್ಮಕ ಯೋಚನೆ ಹಾಗೂ ಭಾವನೆಗಳು ಇದ್ದಾಗ ಮನಶಾಂತಿ ಸಹಜ. ಇಂತಹ ಉತ್ತಮ ಯೋಚನೆ ಹಾಗೂ ಭಾವನೆಗಳು ನಮಗೆ ಉತ್ತಮರ ಸಂಗದಲ್ಲಿರುವಾಗ ಸುಲಭಸಾಧ್ಯ. ಆದ್ದರಿಂದಲೇ ಸನಾತನ ಧರ್ಮ ‘ಸತ್ಸಂಗ’ಕ್ಕೆ ಪ್ರಾಧಾನ್ಯ ನೀಡಿದೆ. ಮೂರನೆಯದಾಗಿ ಅಂತರಂಗದ ಆತ್ಮ ಅಥವಾ ಜೀವಾತ್ಮದ ಮಟ್ಟದಲ್ಲಿ ಶಾಂತಿ ಸಾಧಿಸಬೇಕು. ಜೀವಾತ್ಮ ಪರಿಪೂರ್ಣ ಶಾಂತಿಯ ಸ್ವರೂಪವೇ ಆಗಿರುವ ಪರಮಾತ್ಮನ ಪ್ರತಿಬಿಂಬ ಆಗಿರುವಾಗ ಜೀವಾತ್ಮನಿಗೆ ಅಶಾಂತಿ ಎಲ್ಲಿಂದ ಬರುತ್ತದೆ? ಆತ್ಮ ಸದಾ ಶಾಂತಿಯ ಆಗರ ಆಗಿರುತ್ತದೆಂಬುದು ನಿಜ. ಆದರೆ ದೇಹ ಹಾಗೂ ಮನಸ್ಸುಗಳಲ್ಲಿ ಸಾಮರಸ್ಯವಿಲ್ಲದಿದ್ದರೆ ಆತ್ಮದ ಶಾಂತಿ ಅನುಭವಕ್ಕೆ ಬರುವುದಿಲ್ಲ. ಸನಾತನ ಧರ್ಮದಲ್ಲಿ ಇಂತಹ ಸಾಮರಸ್ಯವನ್ನು ತ್ರಿಕರಣ ಶುದ್ಧಿಯೆಂದು ಕರೆಯುತ್ತಾರೆ. ತ್ರಿಕರಣ ಶುದ್ಧಿಯೆಂದರೆ ನಮ್ಮ ಯೋಚನೆ, ಮಾತು ಹಾಗೂ ಕೃತಿಗಳು ಒಂದೇ ಆಗಿರುವುದು. ನಮ್ಮನ್ನು ನಾವು ದೇಹ ಹಾಗೂ ಮನಸ್ಸುಗಳ ಸಂಕೀರ್ಣವೆಂದು ಭಾವಿಸಿದರೆ ತ್ರಿಕರಣ ಶುದ್ಧಿ ಸಾಧ್ಯವಿಲ್ಲ. ಬದಲಿಗೆ ನಮ್ಮನ್ನು ದಿವ್ಯಾತ್ಮವೆಂದು ಅರಿತರೆ ಯೋಚನೆ, ಮಾತು ಹಾಗೂ ಕೃತಿಗಳು ದಿವ್ಯವಾಗಿ ಒಂದೇ ಆಗಿರುತ್ತವೆ. ಆದ್ದರಿಂದ ನಮ್ಮ ಸತ್ಯಸ್ವರೂಪ ಆತ್ಮವೆಂಬುದನ್ನು ಅರಿತುಕೊಳ್ಳಬೇಕು. ಇದನ್ನೇ ಆತ್ಮಜ್ಞಾನವೆಂದು ಹೇಳುತ್ತಾರೆ.

    ಯಾವುದೇ ಕುಟುಂಬ, ಸಮಾಜ, ದೇಶ ಅಥವಾ ವಿಶ್ವದ ಮೂಲ ಘಟಕವೆಂದರೆ ವ್ಯಕ್ತಿ. ಆದ್ದರಿಂದ ವಿಶ್ವಶಾಂತಿಗೆ ಆಧಾರ ವ್ಯಕ್ತಿಯ ಶಾಂತಿ. ವ್ಯಕ್ತಿ ತಾನು ದಿವ್ಯಾತ್ಮನೇ ಹಾಗೂ ಎಲ್ಲ ಜೀವಿಗಳೂ ದಿವ್ಯಾತ್ಮಸ್ವರೂಪಗಳೇ ಎಂಬ ಸತ್ಯ ಅರಿತಾಗ ಅವನ ಅಂತರಂಗದಲ್ಲಿ ಶಾಂತಿ ಸಹಜಸಿದ್ಧವಾಗುತ್ತದೆ. ಇಂತಹ ದಿವ್ಯ ಮನೋಭಾವದ ಆಧಾರದಲ್ಲಿ ಯಾವುದೇ ಘರ್ಷಣೆ, ಕಲಹಗಳಿಗೆ ಕಾರಣವಿರುವುದಿಲ್ಲ. ಸನಾತನ ಧರ್ಮದ ಮೂಲಗ್ರಂಥಗಳಾದ ಉಪನಿಷತ್ತುಗಳು ಜೀವಿಯ ದಿವ್ಯತೆಯನ್ನು ಅನೇಕ ರೀತಿಗಳಲ್ಲಿ ಉದ್ಘೋಷಿಸಿವೆ.

    ‘ಅಹಂ ಬ್ರಹ್ಮಾಸ್ಮಿ- ನಾನು ಬ್ರಹ್ಮನೇ ಆಗಿದ್ದೇನೆ’ (ಬೃಹದಾರಣ್ಯಕ

    ಉಪನಿಷತ್ತು 1.4.10),

    ‘ತತ್ತ್ವಮಸಿ- ನೀನು ಅದೇ ಆಗಿದ್ದೀಯೇ’ (ಛಾಂದೋಗ್ಯ ಉಪನಿಷತ್ತು 6.8.7),

    ‘ಪ್ರಜ್ಞಾನಂ ಬ್ರಹ್ಮ- ಪ್ರಜ್ಞಾನವೇ ಬ್ರಹ್ಮ’ (ಐತರೇಯ ಉಪನಿಷತ್ತು 3.3), ‘ಅಯಂ ಆತ್ಮಾ ಬ್ರಹ್ಮ- ಈ ಆತ್ಮವೇ ಬ್ರಹ್ಮ’ (ಮಾಂಡೂಕ್ಯ ಉಪನಿಷತ್ತು 1.2), ‘ಸರ್ವ ಖಲ್ವಿದಂ ಬ್ರಹ್ಮ- ಇದೆಲ್ಲವೂ ಬ್ರಹ್ಮವೇ ಆಗಿದೆ’ (ಛಾಂದೋಗ್ಯ ಉಪನಿಷತ್ತು 3.14.1). ಉಪನಿಷತ್ತುಗಳ ಈ ಮಹಾವಾಕ್ಯಗಳ ಸತ್ಯವನ್ನು ಅರಿತಾಗ ಶಾಶ್ವತವಾದ ಶಾಂತಿ ಲಭ್ಯವಾಗುತ್ತದೆ. ‘ಶಾಶ್ವತವಾದ ಶಾಂತಿ ಯಾರಿಗೆ ಲಭ್ಯವಾಗುತ್ತದೆ?’ ಎಂಬ ಪ್ರಶ್ನೆಗೆ ಉತ್ತರವಾಗಿ ಕಠೋಪನಿಷತ್ತು ಹೀಗೆ ಘೊಷಿಸಿದೆ.

    ನಿತ್ರೊà—ನಿತ್ಯಾನಾಂ ಚೇತನಶ್ಚೇತನಾನಾಮ್

    ಏಕೋ ಬಹೂನಾಂ ಯೋ ವಿದಧಾತಿ ಕಾಮಾನ್ |

    ತಮಾತ್ಮಸ್ಥಂ ಯೆà—ನುಪಶ್ಯನ್ತಿ ಧೀರಾಃ

    ತೇಷಾಂ ಶಾಂತಿಶ್ಶಾಶ್ವತೀ ನೇತರೇಷಾಮ್ || ಕಠೋಪನಿಷತ್ತು (2.2.13)

    ‘ಅನಿತ್ಯವಾದ ವಸ್ತುಗಳಲ್ಲಿ ನಿತ್ಯಸ್ವರೂಪನಾಗಿ ಬೆಳಗುವ, ಜೀವಿಗಳಲ್ಲಿ ಚೇತನವಾಗಿ ಪ್ರಕಾಶಿಸುವ ಹಾಗೂ ಎಲ್ಲ ಜೀವಿಗಳ ಕಾಮನೆಗಳನ್ನು ಪೂರೈಸುವ ಒಬ್ಬನೇ ಆದ ಪರಮಾತ್ಮನನ್ನು ಯಾವ ಧೀರರು ತಮ್ಮ ಅಂತರಂಗದಲ್ಲಿ ಕಂಡುಕೊಳ್ಳುತ್ತಾರೆಯೋ ಅವರಿಗೆ ಮಾತ್ರ ಶಾಶ್ವತ ಶಾಂತಿ ಲಭ್ಯವಾಗುತ್ತದೆ, ಇತರರಿಗೆ ಅಲ್ಲವೇ ಅಲ್ಲ’.

    ಒಬ್ಬನೇ ಪರಮಾತ್ಮ ಎಲ್ಲ ಜೀವಿಗಳಲ್ಲಿಯೂ ಚೇತನ ಸ್ವರೂಪನಾಗಿದ್ದಾನೆಂಬ ಸತ್ಯವನ್ನು ಅರಿತಾಗ, ನಾವೆಲ್ಲರೂ ಒಂದೇ ದೇಹದ ವಿವಿಧ ಅಂಗಾಂಗಗಳೆಂದು ನಮಗೆ ತಿಳಿಯುತ್ತದೆ. ಅಕಸ್ಮಾತ್ತಾಗಿ ನಮ್ಮ ಬೆರಳಿನಿಂದ ನಮ್ಮ ಕಣ್ಣಿಗೆ ತೊಂದರೆಯಾದಾಗ ಬೆರಳನ್ನು ಕತ್ತರಿಸುವುದಿಲ್ಲ; ಅದೇ ರೀತಿಯಲ್ಲಿ ಹಲ್ಲುಗಳು ಅಕಸ್ಮಾತ್ತಾಗಿ ನಾಲಿಗೆಯನ್ನು ಕಚ್ಚಿದರೆ ಹಲ್ಲುಗಳನ್ನು ಕೀಳುವುದಿಲ್ಲ! ಏಕೆಂದರೆ ‘ಕಣ್ಣಾಗಲೀ, ಬೆರಳಾಗಲೀ, ನಾಲಿಗೆಯಾಗಲೀ, ಹಲ್ಲುಗಳಾಗಲೀ’- ಎಲ್ಲವೂ ನಮ್ಮವೇ ಎಂಬ ನಿಜವೂ ಸದಾ ಅನುಭವದಲ್ಲಿರುತ್ತದೆ. ಆದ್ದರಿಂದ ಅಂಗಾಂಗಗಳ ಮಧ್ಯೆ ಅನುಕಂಪ ಹಾಗೂ ಕ್ಷಮೆಗಳು ಸಹಜ. ಇದೇ ತತ್ತ್ವವನ್ನು ಕುಟುಂಬ, ಸಮಾಜ, ದೇಶ ಹಾಗೂ ಜಗತ್ತಿಗೆ ಅನ್ವಯಿಸಿದಾಗ ಎಲ್ಲ ಘರ್ಷಣೆ ಹಾಗೂ ಕಲಹಗಳು ಮಾಯವಾಗುತ್ತವೆ. ಏಕೆಂದರೆ ನಾವು ಯಾರಿಗೆ ಹಾನಿ ಮಾಡಿದರೂ ನಮಗೆ ನಾವೇ ಹಾನಿ ಮಾಡಿಕೊಂಡಂತೆ. ಇಂತಹ ವಿಶಾಲ ಮನೋಭಾವನೆಯ ಆಶ್ರಯದ ಆಧಾರದಲ್ಲಿ ಪರಸ್ಪರ ಸಹನೆ ಹಾಗೂ ಕ್ಷಮೆಗಳು ಸಹಜವಾಗುತ್ತದೆ. ಶಾಂತಿ, ಸಮರಸಗಳ ಸಾಧನೆಗಾಗಿ ಬಾಹ್ಯವಾಗಿ ನಡೆಯುವ ಎಲ್ಲ ರಾಜಕೀಯ ಅಥವಾ ಸಾಮಾಜಿಕ ಪ್ರಕ್ರಿಯೆಗಳಿಗೆ ಆಧಾರವಾಗಿರುವುದು- ಪ್ರತೀಕಾರ ಮನೋಭಾವನೆಯಿಂದ ನಾವು ಹಿಂಸಾತ್ಮಕ ಕ್ರಿಯೆಗಳಲ್ಲಿ ತೊಡಗಬಾರದು, ಏಕೆಂದರೆ ಇಂತಹ ಪ್ರತೀಕಾರ ಮನೋಭಾವನೆಯಿಂದ ಇತರರಿಗೆ ಮಾಡಿದ ಹಾನಿ ಅವರನ್ನು ಹಿಂಸಾತ್ಮಕ ಕ್ರಿಯೆಗಳಿಗೆ ಪ್ರಚೋದಿಸಿ, ಅದರಿಂದ ನಮಗೆ ಕೂಡ ಹಾನಿಯಾಗಬಹುದು, ಎಂಬ ಕಾರಣಕ್ಕಾಗಿ. ನಾವು ಹಾಗೂ ಪರರು ಎಂಬ ಭೇದಭಾವನೆ ಇರುವವರೆಗೆ ಪರಸ್ಪರ ಪ್ರತೀಕಾರದ ಕ್ರಿಯೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ಸನಾತನ ಧರ್ಮ ಹೇಳುವಂತೆ ಯಾರೂ ಪರರಲ್ಲ. ಎಲ್ಲರೂ ನಮ್ಮವರೇ. ಎಲ್ಲರೂ ಪರಮಾತ್ಮನ ಪ್ರತಿಬಿಂಬಗಳೇ ಎಂಬ ಈ ಸತ್ಯವನ್ನು ಅರಿತವರಿಗೆ ಶಾಂತಿ, ಸಮರಸಗಳು ಸಹಜಸಿದ್ಧವಾಗಿರುತ್ತವೆ. ಮಾನವನ ಅಂತರಂಗದಲ್ಲಿನ ಶಾಂತಿ, ವಿಶ್ವಶಾಂತಿಗೆ ಕಾರಣವಾಗುತ್ತದೆ. ಹೀಗೆ ಅಂತರಂಗ-ಬಹಿರಂಗಗಳ ಶಾಂತಿಗೆ ಆತ್ಮಜ್ಞಾನವೇ ಮೂಲವೆಂದು ಸನಾತನ ಧರ್ಮ ಸಾರುತ್ತದೆ.

    ಎಲ್ಲ ಜೀವಿಗಳ ಏಕತ್ವ ದರ್ಶನದ ಅನುಭವ ಸಮಾಜದಲ್ಲಿ ಎಲ್ಲರಿಗೂ ಸಾಧ್ಯವಿಲ್ಲವೆಂಬುದು ನಿಜ. ಆದರೆ ಏಕತ್ವದಲ್ಲಿ ವಿಶ್ವಾಸ ಬೆಳೆಸಿಕೊಂಡರೆ, ನಾವೆಲ್ಲರೂ ವಿಶ್ವದ ಒಂದೇ ಕುಟುಂಬದ ಸದಸ್ಯರೆಂಬ ಭಾವನೆ ಸಹಜವಾಗಿ ಬರುತ್ತದೆ. ಋಗ್ವೇದದಲ್ಲಿ ಹೇಳಿರುವಂತೆ, ‘ಯತ್ರ ವಿಶ್ವಮ್ ಭವತ್ಯೇಕ ನೀಡಂ- ಎಲ್ಲಿ ಇಡೀ ವಿಶ್ವ ಎಲ್ಲ ಜೀವಿಗಳಿಗೆ ಒಂದೇ ಆಶ್ರಯ ಸ್ಥಾನವಾಗುತ್ತದೆಯೋ’ ಎಂಬ ಪರಿಕಲ್ಪನೆ ‘ವಸುಧೈವ ಕುಟುಂಬಕಂ- ಇಡೀ ವಿಶ್ವವೇ ಒಂದು ಕುಟುಂಬ’ ಎಂಬ ವಿಶಾಲ ಮನೋಭಾವನೆಗೆ ಎಡೆಮಾಡಿಕೊಡುತ್ತದೆ. ಚಿಕ್ಕ ಕ್ರಿಮಿಕೀಟಗಳಿಂದ ಹಿಡಿದು ಪರಿಪೂರ್ಣ ವಿಕಾಸ ಪಡೆದ ಮಾನವರವರೆಗೆ ಎಲ್ಲರೂ ಒಂದೇ ಕುಟುಂಬದ ಸದಸ್ಯರೆಂಬ ಪರಮೋಚ್ಚ ಆದರ್ಶ ಭಾರತೀಯ ಸಂಸ್ಕೃತಿಯಲ್ಲಿ ಮಾತ್ರ ಎದ್ದು ಕಾಣುವ ಮಹೋನ್ನತ ಆದರ್ಶ. ವೇದೋಪನಿಷತ್ತುಗಳಲ್ಲಿ ಕಂಡುಬರುವ ಎಲ್ಲ ಶಾಂತಿಮಂತ್ರಗಳೂ ನಾವು ಪರಸ್ಪರ ಒಬ್ಬರಿಗೊಬ್ಬರು ಹಾನಿ ಮಾಡಿಕೊಳ್ಳುವುದು ಬೇಡವೆಂಬ ಭಾವನೆಯನ್ನು ಪ್ರತಿಬಿಂಬಿಸುತ್ತವೆ. ಇಂತಹ ಒಂದು ಬಹುಜನಪ್ರಿಯ ಪ್ರಾರ್ಥನೆಯೆಂದರೆ ‘ಸರ್ವೆ ಭವಂತು ಸುಖಿನಃ ಸರ್ವೆ ಸಂತು ನಿರಾಮಯಾಃ, ಸರ್ವೆ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖಭಾಕ್ಭವೇತ್- ಎಲ್ಲರೂ ಸುಖವಾಗಿ ಬಾಳಲಿ, ಎಲ್ಲರೂ ಪರಿಪೂರ್ಣ ಆರೋಗ್ಯ ಪಡೆಯುವಂತಾಗಲಿ, ಎಲ್ಲರೂ ಯಾವಾಗಲೂ ಎಲ್ಲೆಡೆಗಳಲ್ಲಿಯೂ ಶುಭವನ್ನೇ ಕಾಣಲಿ, ಯಾರಿಗೂ ಯಾವುದೇ ದುಃಖವು ಬಾರದಿರಲಿ’.

    ಅಥವಾ ‘ಲೋಕಾಃ ಸಮಸ್ತಾಃ ಸುಖಿನೋ ಭವಂತು- ಎಲ್ಲ ಲೋಕಗಳ ಜೀವಿಗಳು ಸುಖವಾಗಿರಲಿ’ ಎಂಬ ಪ್ರಾರ್ಥನೆ, ಸರ್ವಜೀವ ಹಿತಸಾಧನೆಗೆ ಸ್ಪೂರ್ತಿ ನೀಡುತ್ತದೆ. ನಾನು-ನನ್ನದು ಎಂಬ ಸ್ವಾರ್ಥಪರ ಯೋಚನೆ ಬಿಟ್ಟು ಮನೋವೈಶಾಲ್ಯದಿಂದ ಸರ್ವರ ಸುಖ, ಶಾಂತಿಗಾಗಿ ಶ್ರಮಿಸಬೇಕೆಂಬುದು ಸನಾತನ ಧರ್ಮದ ಮೂಲಮಂತ್ರವಾಗಿದೆ. ಚರಾಚರ ವಿಶ್ವವೆಲ್ಲವೂ ಭಗವಂತನ ಸ್ವರೂಪವೇ ಆಗಿದೆಯೆಂಬ ತತ್ತ್ವದ ಆಧಾರದಲ್ಲಿ ಮಾತ್ರ ವ್ಯಕ್ತಿಶಾಂತಿಯ ಬುನಾದಿಯ ಮೇಲೆ ವಿಶ್ವಶಾಂತಿಯ ಸೌಧ ನಿರ್ವಿುಸಬಹುದೆಂಬುದು ಸನಾತನ ಧರ್ಮದ ಸೂತ್ರವಾಗಿದೆ. ‘ನಾನ್ಯಃ ಪಂಥಾ ಅಯನಾಯ ವಿದ್ಯತೇ- ಇದನ್ನು ಬಿಟ್ಟು ಬೇರೆಯ ಮಾರ್ಗವೇ ಇಲ್ಲ!’

    ಓಂ ಶಾಂತಿಃ ಶಾಂತಿಃ ಶಾಂತಿಃ

    (ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts