More

    ಸಮತಾಮೂರ್ತಿ ಅನಾವರಣ: ವಿಶ್ವದ 2ನೇ ಅತಿ ಎತ್ತರದ ಪ್ರತಿಮೆ ಲೋಕಾರ್ಪಣೆ ಮಾಡಿದ ಮೋದಿ

    | ಶ್ರೀಕಾಂತ್​ ಶೇಷಾದ್ರಿ ಹೈದರಾಬಾದ್​

    ಸಮಾನತೆಯ ಹರಿಕಾರ, ಸಂತ, ತತ್ವಜ್ಞಾನಿ ಶ್ರೀ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೈದರಾಬಾದ್ ಸಮೀಪ ಅನಾವರಣಗೊಳಿಸಿದರು.

    ಶತಮಾನಗಳ ಹಿಂದೆಯೇ ಸಮಾನತೆ ಬಗ್ಗೆ ಅರುಹಿದ, ಸರ್ವರಿಗೂ ದೇಗುಲ ಪ್ರವೇಶಕ್ಕೆ ಪ್ರೋತ್ಸಾಹ ನೀಡಿ, ವಸುಧೈವ ಕುಟುಂಬಕಂ ಸಂದೇಶವನ್ನು ಸಾರಿದ ಮಹಾತ್ಮರ 1003ನೇ ಜಯಂತಿ ಸಂದರ್ಭದಲ್ಲಿ ಸಮತಾಮೂರ್ತಿ ಸ್ಥಾಪನೆಯಾಗಿದೆ.

    ಶ್ರೀ ರಾಮಾನುಜಾಚಾರ್ಯರ 216 ಅಡಿ ಎತ್ತರದ ಬೃಹತ್​ ವಿಗ್ರಹವನ್ನು ಸಮತಾಮೂರ್ತಿ ಎಂದು ಕರೆಯಲಾಗಿದೆ. ಹೈದರಾಬಾದ್​ ಬಳಿಯ ರಂಗಾರೆಡ್ಡಿ ಜಿಲ್ಲೆಯ ಮುಚ್ಚಿಂತಲ್‌ನಲ್ಲಿರುವ ಶ್ರೀ ತ್ರಿದಂಡಿ ಚಿನ್ನ ಜೀಯರ್ ಸ್ವಾಮಿ ಆಶ್ರಮದಲ್ಲಿ ಈ ಮಹಾಮೂರ್ತಿ ಪ್ರತಿಷ್ಠಾಪನೆಗೊಂಡಿದೆ.

    ಇದು ವಿಶ್ವದ ಎರಡನೇ ಅತಿ ಎತ್ತರದ ಪ್ರತಿಮೆ ಎಂದು ಗುರುತಿಸಲಾಗಿದೆ. ಸುಮಾರು 216 ಅಡಿ ಉದ್ದವಿದ್ದು, ಈ ಪ್ರತಿಮೆಯ ನಿರ್ಮಾಣಕ್ಕೆ 1800 ಟನ್‌ಗಳಿಗಿಂತ ಹೆಚ್ಚು ಪಂಚ ಲೋಹಗಳನ್ನು ಬಳಸಲಾಗಿದೆ. ರಾಮಾನುಜಾಚಾರ್ಯರ ಸಹಸ್ರಾಬ್ಧಿ ಕಾರ್ಯಕ್ರಮ‌ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಯಜ್ಞಗಳನ್ನು ಎರಡು ವಾರ ನಡೆಸಲಾಗುತ್ತಿದೆ.

    ಸ್ಥಾಪನೆ ಉದ್ದೇಶ: ಸಮಾನತಾ ಪ್ರತಿಮೆ ಸ್ಥಾಪನೆಯ ಉದ್ದೇಶ ಬಹಳ ದೊಡ್ಡದಿದೆ ಎಂದು ಶ್ರೀ ತ್ರಿದಂಡಿ ಚಿನ್ನಜೀಯರ್ ತಿಳಿಸುತ್ತಾರೆ. ರಾಮಾನುಜಾಚಾರ್ಯರ ಕಾಲದಲ್ಲಿ ದೇವಸ್ಥಾನಗಳು ಸಮಾಜದ ಒಂದು ವರ್ಗದ, ಒಂದು ನಿರ್ದಿಷ್ಟ ಜಾತಿಯ ನಿಯಂತ್ರಣದಲ್ಲಿ ಆಡಳಿತದ ಕೇಂದ್ರಗಳಾಗಿದ್ದವು. ಇದನ್ನು ಗಮನಿಸಿದ ರಾಮಾನುಜಾಚಾರ್ಯರು ಕಂದಕ ದೂರ ಮಾಡಿ ಸಮಾನತೆ ತರಲು ಪ್ರಯತ್ನಿಸಿದರು. ಅವರ ಪ್ರಯತ್ನ ಸಾಕಷ್ಟು ಫಲ‌ನೀಡಿತ್ತು. ಅಷ್ಟೇ ಅಲ್ಲದೇ ಶ್ರೀ ರಾಮಾನುಜಾಚಾರ್ಯರು ಜಾತಿಗೆ ಪ್ರಾಮುಖ್ಯತೆ ಕೊಡದೆ, ಮಂತ್ರವನ್ನು ಎಲ್ಲರೊಂದಿಗೆ ಹಂಚಿಕೊಂಡರು.

    ಶ್ರದ್ಧೆ ಮತ್ತು ಕಲಿಯಲು ಉತ್ಸುಕರಾಗಿರುವುದನ್ನು ಅರ್ಹತೆ ಎಂದು ಭಾವಿಸಿದ್ದಲ್ಲದೆ, ಎಲ್ಲಾ ಜಾತಿಗಳ ಜನರು ದೇವಾಲಯಗಳ ನಿರ್ವಹಣೆಯಲ್ಲಿ ಪಾಲ್ಗೊಳ್ಳಬೇಕೆಂದು ಬಯಸಿದರು.

    ಸಮತಾಮೂರ್ತಿ ಅನಾವರಣ: ವಿಶ್ವದ 2ನೇ ಅತಿ ಎತ್ತರದ ಪ್ರತಿಮೆ ಲೋಕಾರ್ಪಣೆ ಮಾಡಿದ ಮೋದಿ

    ಮುಖ್ಯಾಂಶ

    • ಶ್ರೀ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆ ಮತ್ತು ದೇವಾಲಯದ ಸಂಕೀರ್ಣವು ತ್ರಿದಂಡಿ ಶ್ರೀ ಚಿನ್ನ ಜೀಯರ್ ಸ್ವಾಮೀಜಿಯವರ ಪರಿಕಲ್ಪನೆಯಾಗಿದೆ.
    • ನೆಲದಿಂದ ತುದಿಯವರೆಗೆ ಒಟ್ಟು 216 ಅಡಿ ಇದ್ದು, ಇದು ವಿಶ್ವದ ಎರಡನೇ ಅತಿ ಎತ್ತರದ, ಕುಳಿತಿರುವ ಭಂಗಿಯ ಪ್ರತಿಮೆಯಾಗಿದೆ.
    • 45 ಎಕರೆ ವಿಶಾಲ ಪ್ರದೇಶದಲ್ಲಿ ಸಂಕೀರ್ಣ ನಿರ್ಮಿಸಲಾಗಿದೆ. ಒಟ್ಟು ನಾಲ್ಕು ಬೃಹತ್ ಪ್ರವೇಶ ದ್ವಾರಗಳು ಹಾಗೂ ಸುಮಾರು 3000 ವಾಹನಕ್ಕೆ ಪಾರ್ಕಿಂಗ್ ಸ್ಥಳವಿದೆ.
    • ಪ್ರವೇಶ ದ್ವಾರದ ವಿನ್ಯಾಸವನ್ನು ತೆಲಂಗಾಣದ ವಿಶಿಷ್ಟವಾದ ‘ಕಾಗಡಿಯಾ’ ಶೈಲಿಯಲ್ಲಿ ಮಾಡಲಾಗಿದ್ದರೆ, ಮುಖ್ಯದ್ವಾರದಲ್ಲಿ ಹನುಮಾನ್ ಮತ್ತು ಗರುಡನ ಎತ್ತರದ ವಿಗ್ರಹಗಳನ್ನು ಸ್ಥಾಪಿಸಲಾಗಿದೆ.
    • ಸಂಕೀರ್ಣದಲ್ಲಿ ಆನ್​ಲೈನ್ ಡಿಜಿಟಲ್ ಲೈಬ್ರರಿ ನಿರ್ಮಿಸಲಾಗಿದೆ. ಓಮ್ನಿಮ್ಯಾಕ್ಸ್ ಥಿಯೇಟರ್ ಸಹ ಇದೆ. ಸಂದರ್ಶಕರ ಅನುಕೂಲಕ್ಕಾಗಿ ಪ್ರವೇಶ ಟಿಕೆಟ್ ಕೌಂಟರ್ ಬಳಿಯೇ ಲಗೇಜ್‌, ಚೆಕ್-ಇನ್ ಕೌಂಟರ್ ಸ್ಥಾಪಿಸಲಾಗಿದೆ.
    • ತಾಮ್ರದಿಂದ ಮಾಡಿದ 42 ಅಡಿ ಎತ್ತರದ ಸಂಗೀತ ಕಾರಂಜಿ ನಿರ್ಮಿಸಲಾಗಿದೆ. ಬಲಿಪೀಠದಲ್ಲಿ ಶ್ರೀ ರಾಮಾನುಜಾಚಾರ್ಯರ 54 ಇಂಚು ಎತ್ತರದ ಚಿನ್ನದ ದೇವರ ಪ್ರತಿಮೆ ಇದೆ. 24 ಕ್ಯಾರೆಟ್​​ನ 120 ಕೆ.ಜಿ. ಚಿನ್ನ ಬಳಸಿ ದೇವರ ಪ್ರತಿಮೆ ನಿರ್ಮಾಣ ಮಾಡಲಾಗಿದೆ.
    • ಪ್ರತಿಮೆಯು 108 ದೇವಾಲಯಗಳಿಂದ ಸುತ್ತುವರಿದಿರುತ್ತದೆ. ಬದರೀನಾಥ, ಮುಕ್ತಿನಾಥ, ಅಯೋಧ್ಯೆ, ಬೃಂದಾವನ, ಕುಂಭಕೋಣಂ, ತಿರುಮಲ, ಶ್ರೀರಂಗಂ, ಕಂಚಿ ಇತರ ದೇವಾಲಯ ಮಾದರಿಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts