More

    ಉಪ್ಪುನೀರು ನುಗ್ಗಿ ಕೃಷಿ ಭೂಮಿ ಹಾನಿ

    ಕೋಟ: ಇಲ್ಲಿನ ಕೋಡಿ ಕನ್ಯಾಣ ಗ್ರಾಮ ಪಂಚಾಯಿತಿ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಯಕ್ಷಿಮಠ ಪಾರಂಪಳ್ಳಿಯ ಹಲವು ಭಾಗಗಳಲ್ಲಿ ಹೊಳೆಯಿಂದ ಉಪ್ಪು ನೀರು ನುಗ್ಗಿ ಕೃಷಿ ಭೂಮಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗುತ್ತಿದೆ. ಇದರಿಂದ ಭತ್ತ, ಶೇಂಗಾ, ಉದ್ದು ಹೀಗೆ ಹಲವು ಬಗೆಯ ಬೆಳೆಗಳು ನಾಶವಾಗುತ್ತಿವೆ.

    ಈ ಬಗ್ಗೆ ತಡೆಗೋಡೆ ನಿರ್ಮಿಸಲು ಹಲವು ಬಾರಿ ಸ್ಥಳೀಯಾಡಳಿತದ ಜನಪ್ರತಿನಿಧಿಗಳು ಶಾಸಕರು ಹಾಗೂ ಸಚಿವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಶೀಘ್ರಗತಿಯಲ್ಲಿ ಈ ಬಗ್ಗೆ ಕ್ರಮಕೈಗೊಂಡು ಹೊಳೆಗೆ ಶಾಶ್ವತ ತಡೆದಂಡೆ ನಿರ್ಮಿಸಿದರೆ ಕೃಷಿಕರ ಬಾಳು ಹಸನಾಗುವುದರಲ್ಲಿ ಸಂಶಯವಿಲ್ಲ.

    ಕೋಡಿ ಕನ್ಯಾಣದ ಗ್ರಾಪಂ ಹಲವು ವ್ಯಾಪ್ತಿ ಸೇರಿದಂತೆ, ಸಾಲಿಗ್ರಾಮ ಪಪಂ ವ್ಯಾಪ್ತಿಯ ಪಾರಂಪಳ್ಳಿ ಪಡುಕರೆ, ಯಕ್ಷಿಮಠ ಭಾಗಗಳ ಸಮುದ್ರ ಸಂಪರ್ಕಿಸುವ ಉಪ್ಪು ನೀರಿನ ಹೊಳೆ ಸಮಾರು 10 ಕಿ.ಮೀ.ಉದ್ದ ಭಾಗದಲ್ಲಿ ಕೃಷಿಭೂಮಿ ಸೇರಿದಂತೆ ಮನೆತೋಟಗಳಿಗೆ ನುಗ್ಗುತ್ತಿದ್ದು ಪ್ರತಿವರ್ಷ ಭಾರೀ ಪ್ರಮಾಣದ ಬೆಳೆ ಹಾನಿಯಾಗುತ್ತಿದೆ. ಈ ಬಗ್ಗೆ ಸ್ಥಳೀಯಾಡಳಿತದ ಮುಖಂಡರ ಮೂಲಕ ಮಹಾಬಲ ಕುಂದರ್ ನೇತೃತ್ವದಲ್ಲಿ ಸ್ಥಳೀಯ ಶಾಸಕ, ಸಚಿವರ ಗಮನಕ್ಕೆ ತಂದರೂ ತಡೆದಂಡೆ ನಿರ್ಮಿಸಲು ಮೀನಾಮೇಷ ಎಣಿಸುವ ಸ್ಥಿತಿ ಸೃಷ್ಟಿಯಾಗಿದೆ.

    ಕಾಮಗಾರಿಗಿಲ್ಲ ಹಸಿರುನಿಶಾನೆ: ಸ್ಥಳೀಯ ಬಿಜೆಪಿ ಮುಖಂಡ ಮಹಾಬಲ ಕುಂದರ್ ಅವರ ಮನವಿಯ ಮೇರೆಗೆ ಸ್ಥಳೀಯ ಶಾಸಕರ ಪ್ರೇರಣೆಯಂತೆ ಆಗಿನ ಬಿಜೆಪಿ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಡೆದಂಡೆಗೆ ಒಂದು ಕೋಟಿ ರೂ. ಮಂಜೂರಾತಿಗೆ ಆಗಿನ ಕಾಂಗ್ರೆಸ್ ಸರ್ಕಾರ ಸಚಿವ ಶಿವರಾಜ್ ತಂಗಡಗಿ ಶಿಫಾರಸು ಮಾಡಿದರೂ ಕಾಮಗಾರಿ ಮಾತ್ರ ಇನ್ನೂ ಆಗಿಲ್ಲ.

    ಕಳೆದ ಹಲವಾರು ವರ್ಷಗಳಿಂದ ಈ ಸಮಸ್ಯೆ ಗೋಳು ಸೃಷ್ಟಿಸುತ್ತಿದೆ. ನಾವು ಬೆಳೆದ ಫಸಲಿನಿಂದ ಹಿಡಿದು ಮನೆಗಳಿಗೆ ನೀರು ನುಗ್ಗುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು ಸೂಕ್ತ ಕ್ರಮಕೈಗೊಂಡು ಶಾಶ್ವತ ಪರಿಹಾರಕ್ಕಾಗಿ ಮನವಿ ಮಾಡುತ್ತಿದ್ದೇನೆ.
    ಉದಯ ಪೂಜಾರಿ, ಕೃಷಿಕ, ಕೋಡಿ ಕನ್ಯಾಣ

    ಈ ಹಿಂದಿನ ಅವಧಿಯ ಸರ್ಕಾರದಲ್ಲಿ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ನಿಜ. ಆದರೆ ಪ್ರಕ್ರಿಯೆ ಆಗಲಿಲ್ಲ. ಇದೀಗ ಪುನಹ ಪ್ರಸ್ತಾವನೆ ಮುಂದಿಟ್ಟಿದ್ದು, ಅನುದಾನ ಬಿಡುಗಡೆಯ ನಿರೀಕ್ಷೆಯಲ್ಲಿದ್ದೇವೆ.
    ಕೋಟ ಶ್ರೀನಿವಾಸ ಪೂಜಾರಿ
    ದ.ಕ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts