More

    ಕರೊನಾ ವೈರಸ್​, ಲಾಕ್​ಡೌನ್​ ಕಾರಣ ವಿಶ್ವ ರೋದಿಸುತ್ತಿದೆ, ಪ್ರಕೃತಿ ನಲಿಯುತ್ತಿದೆ!

    ಲಾಕ್​ಡೌನ್​ನಿಂದಾಗಿ ದೇಶದ ಕೆಲ ಭಾಗಗಳಲ್ಲಿ ಸಂಭವಿಸಿದ ಹಲವು ಪ್ರಾಕೃತಿಕ ಕೌತುಕಗಳು ನಿಜಕ್ಕೂ ನಮ್ಮನ್ನು ಬಡಿದೆಬ್ಬಿಸಿವೆ. ಮಾನವ ಹಸ್ತಕ್ಷೇಪದಿಂದ ನಗರ ಪ್ರವೇಶಿಸುತ್ತಿದ್ದ ವನ್ಯಮೃಗಗಳು ನೆಮ್ಮದಿಯಿಂದ ಇರುವುದು ಕಂಡುಬಂದಿದೆ. ಅಪರೂಪ ಎನಿಸುವ ಜೀವವೈವಿಧ್ಯಗಳು ಗೋಚರಿಸತೊಡಗಿವೆ.

    ಕರೊನಾ ವೈರಸ್​, ಲಾಕ್​ಡೌನ್​ ಕಾರಣ ವಿಶ್ವ ರೋದಿಸುತ್ತಿದೆ, ಪ್ರಕೃತಿ ನಲಿಯುತ್ತಿದೆ!ನಾವು ಅರಣ್ಯ ಸಂಪತನ್ನು ನಾಶಮಾಡಿದ್ದೇವೆ. ಜೌಗು ಭೂಮಿ ಖಾಲಿ ಮಾಡುತ್ತಿದ್ದೇವೆ. ವಾಯು, ನೀರನ್ನು ಬೇಕಾಬಿಟ್ಟಿಯಾಗಿ ಮಲಿನಗೊಳಿಸಿದ್ದೇವೆ. ಜೀವವೈವಿಧ್ಯಗಳ ಬದುಕನ್ನೇ ಕಿತ್ತುಕೊಳ್ಳುತ್ತಿದ್ದೇವೆ. ತಾಯಿ ಸಮಾನ ಪೃಥ್ವಿಯನ್ನು ಇನ್ನಿಲ್ಲದಂತೆ ದುರ್ಬಳಕೆ ಮಾಡಿದ್ದೇವೆ… ಇಷ್ಟೆಲ್ಲ ಅನಾಹುತಗಳ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದರೂ ನಮಗೆ ಬುದ್ಧಿ ಬಂದಿಲ್ಲ. ಕನಿಷ್ಠ ನಮ್ಮ ವರ್ತನೆಯೂ ಬದಲಾಗಿಲ್ಲ, ಆ ಲಕ್ಷಣವೂ ಕಾಣುತ್ತಿಲ್ಲ. ಈ ವಿಪರ್ಯಾಸಗಳ ಮಧ್ಯೆ, ಕಣ್ಣಿಗೆ ಕಾಣದ ಕರೊನಾ ಸೋಂಕು ನಮ್ಮೆಲ್ಲರನ್ನೂ ಬಾಧಿಸತೊಡಗಿದೆ. ನಮ್ಮ ಭವಿಷ್ಯವೇನು ಎಂದು ಚಿಂತಿತರಾಗಿ ಕೂರುವಂತೆ ಮಾಡಿದೆ ಈ ವೈರಾಣು. ನಮ್ಮದೀಗ ಪಕ್ಕದಲ್ಲಿರುವ ವ್ಯಕ್ತಿಯನ್ನು ಮುಟ್ಟಲೂ ಭಯವಾಗುವ ಹೀನ ಸ್ಥಿತಿ!

    ಎಲ್ಲಿಗೆ ಬಂತು ನೋಡಿ ಮನುಷ್ಯನ ಬದುಕು? ನಿನ್ನೆಯಷ್ಟೇ (ಏಪ್ರಿಲ್ 22) ವಿಶ್ವ ಭೂಮಿ ದಿನ ಆಚರಿಸಿದ್ದೇವೆ. ಇಡೀ ಭೂಮಿಯನ್ನು (ವಿಶ್ವ) ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಹಪಹಪಿಸುವ ದೇಶ, ನಾಯಕರನ್ನು ಕರೊನಾ ವೈರಸ್ ಮಕಾಡೆ ಮಲಗಿಸಿದೆ. ಇದಕ್ಕೆ ‘ದೊಡ್ಡಣ್ಣ’ ಎಂದು ಕುಣಿದಾಡುತ್ತಿದ್ದ ಅಮೆರಿಕಕ್ಕಿಂತ ಒಳ್ಳೆಯ ಉದಾಹರಣೆ ಬೇಕೆ? ಈ ಕಾಣದ ವೈರಾಣುವನ್ನು ಕೊಲ್ಲಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಸೋಂಕಿನ ನಿಯಂತ್ರಣಕ್ಕೆ ಜಗತ್ತೇ ಹರಸಾಹಸ ಪಡುತ್ತಿದೆ. ವೈರಾಣು ಕಲಿಸುತ್ತಿರುವ ಪಾಠಗಳು ಭೂಮಿ, ಪರಿಸರ ಹಾಗೂ ಮುಂದಿನ ತಲೆಮಾರಿನ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದು ಮತ್ತು ನಾವದನ್ನು ಒಪ್ಪಿಕೊಳ್ಳಲೇಬೇಕಿದೆ.

    ಕರೊನಾ ಸೋಂಕಿಗೆ ಜನ ಬಲಿಯಾಗುತ್ತಿರಲು ವಾಯುಮಾಲಿನ್ಯವೂ ಪ್ರಮುಖ ಕಾರಣ ಎಂಬ ಪ್ರಬಲ ವಾದವಿದೆ. ವಾಯುಮಾಲಿನ್ಯದಿಂದಾಗಿ ವಿಶ್ವದ ಅದೆಷ್ಟೋ ನಗರಗಳಲ್ಲಿ ಜನರು ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎನ್ನುವುದು ಹೊಸ ಸುದ್ದಿಯೇನಲ್ಲ. ಕ್ಯಾನ್ಸರ್, ಹೃದಯರೋಗ, ಮಧುಮೇಹ ಸೇರಿ ವಿವಿಧ ಕಾಯಿಲೆಗಳಿಗೆ ಮೂಲ ವಾಯುಮಾಲಿನ್ಯವೇ ಎಂದ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕರೊನಾ ವೈರಸ್​ಗೆ ಸಾಯುತ್ತಿರುವವರಲ್ಲಿ ಮೇಲೆ ಹೇಳಿದ ಕಾಯಿಲೆಯಿದ್ದವರ ಪ್ರಮಾಣ ಹೆಚ್ಚಿರುವುದು ನಿಜಕ್ಕೂ ಬೆಚ್ಚಿ ಬೀಳಿಸುವ ಸುದ್ದಿ. ಹೀಗಿದ್ದಾಗ, ವಾಯುಮಾಲಿನ್ಯಕ್ಕೂ-ಕರೊನಾ ಸೋಂಕಿಗೂ ನೇರಾ ನೇರ ಸಂಬಂಧವಿದೆ ಎಂದಾಯಿತು. ಇದೇ ಕಾರಣಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ತಮ್ಮ ದೇಶದ ಪರಿಸರ ರಕ್ಷಣೆ ಕಾಯ್ದೆಯಲ್ಲಿ ಮತ್ತಷ್ಟು ಕಠಿಣಾತಿ ಕ್ರಮಗಳನ್ನು ಸೇರಿಸಲು ನಿರ್ಧರಿಸಿದ್ದಾರೆ. 50ನೇ ಭೂಮಿ ದಿನದಂದೇ ಈ ಪ್ರಸ್ತಾಪ ಮುಂದಿಟ್ಟಿದ್ದಾರೆ. ಮಾಲಿನ್ಯದಿಂದ ಕಂಗೆಟ್ಟಿರುವ ಭಾರತಕ್ಕೂ ಕೋವಿಡ್-19 ಹತ್ತು ಹಲವು ಪಾಠಗಳನ್ನು ಕಲಿಸುತ್ತಿದೆ.

    ಹಲವು ರಾಷ್ಟ್ರಗಳೀಗ ಲಾಕ್​ಡೌನ್ ಸ್ಥಿತಿಯಲ್ಲಿವೆ. ಪರಿಣಾಮವಾಗಿ ವಾಹನಗಳು ಓಡಾಡುತ್ತಿಲ್ಲ. ಕಟ್ಟಡ ಕಾಮಗಾರಿ ನಡೆಯುತ್ತಿಲ್ಲ. ಕಾರ್ಖಾನೆಗಳ ಮಲಿನ, ವಿಷಕಾರಿ ತ್ಯಾಜ್ಯಗಳು ನದಿ ಸೇರುತ್ತಿಲ್ಲ. ಸಮುದ್ರ ದಂಡೆಗಳಲ್ಲಿ ಪ್ಲಾಸ್ಟಿಕ್ ರಾಶಿ ಕಾಣುತ್ತಿಲ್ಲ. ವಿಶ್ವದಲ್ಲೇ ಅತಿ ಹೆಚ್ಚು ವಿಷಕಾರಿ ವಾಯು ಹೊಂದಿರುವ ನಗರಗಳಲ್ಲಿ ಒಂದಾಗಿರುವ ಭಾರತದ ರಾಜಧಾನಿ ದೆಹಲಿ ಇತ್ತೀಚಿನ ವರ್ಷಗಳಲ್ಲಿ ಕಾಣದ ಆಹ್ಲಾದಕರ ವಾತಾವರಣಕ್ಕೆ ತೆರೆದುಕೊಂಡಿದೆ. ಕರಿಮೋಡಗಳು ಮರೆಯಾಗಿ ನೀಲಿ ಬಾನನ್ನು ದೆಹಲಿ ನಿವಾಸಿಗರು ನೋಡುತ್ತಿದ್ದೇವೆ. ಪರಿಸರದ ಮಹತ್ವವೇನು ಎಂಬುದನ್ನು ಸಮಾಜಕ್ಕೆ ಒತ್ತಿಹೇಳುತ್ತಿದೆ ಈ ವೈರಾಣು. ಜೀವನದಲ್ಲಿ ಶಿಸ್ತು, ಸಂಯಮ, ಸ್ವಚ್ಛತೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಎಷ್ಟು ಮುಖ್ಯ ಎಂಬುದು ಸಾಮಾನ್ಯ ತಿಳಿವಳಿಕೆ ಇರುವಾತನಿಗೆ ಸ್ವಲ್ಪಮಟ್ಟಿಗಾದರೂ ಅರ್ಥವಾಗಿರಬಹುದು.

    ಆದರೆ, ಇದೆಲ್ಲ ಎಷ್ಟು ದಿನ ಇದ್ದೀತು? ಲಾಕ್​ಡೌನ್ ಮುಗಿಯುವುದಕ್ಕೇ ಕಾಯುತ್ತಿರುವ ಮಾನವ, ತನ್ನ ಬದುಕು ಸಹಜಸ್ಥಿತಿಗೆ ಮರಳಿದ ಬಳಿಕ ನಿಸರ್ಗವನ್ನು ಮತ್ತದೇ ಶೋಚನೀಯ ಸ್ಥಿತಿಗೆ ನೂಕುವುದಿಲ್ಲವೇ? ನಾನು-ನನ್ನದು ಎಂದು ಯೋಚಿಸುವ ಮನಸ್ಸು ಕರೊನೋತ್ತರ ದಿನಗಳಲ್ಲಿ ಪರಿಸರ ಹಾಗೂ ಈ ಭೂಮಿಯ ರಕ್ಷಣೆಗೆ ಬದ್ಧತೆ ಪ್ರದರ್ಶಿಸಬಹುದೇ? ಆಳುವ ವರ್ಗಗಳು ಅಭಿವೃದ್ಧಿಯ ಹೆಸರಲ್ಲಿ ಪರಿಸರ ನಾಶ ಮಾಡುವುದಕ್ಕೆ ಕಡಿವಾಣ ಹಾಕುವವೇ? ಸ್ವಚ್ಛತೆಯ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಪರಿಣಾಮಕಾರಿ ನೀತಿ ಪ್ರಕಟಿಸಬಹುದೇ? ಕರೊನಾ ಮುಗಿದ ಬಳಿಕವಾದರೂ ಮನುಷ್ಯನಿಗೆ ಪರಿಸರದ ಮೇಲೆ ಕನಿಷ್ಠ ಪ್ರೀತಿ ಮೂಡೀತೇ? ಹೀಗೆ… ಇಂಥ ನಿರೀಕ್ಷೆಗಳ ಗುಚ್ಛ ಪರಿಸರ ಪ್ರೀತಿಸುವ ಪ್ರತಿಯೊಬ್ಬನಲ್ಲೂ ಮೂಡಿದೆ.

    ಲಾಕ್​ಡೌನ್​ನಿಂದಾಗಿ ದೇಶದ ಕೆಲ ಭಾಗಗಳಲ್ಲಿ ಸಂಭವಿಸಿದ ಹಲವು ಪ್ರಾಕೃತಿಕ ಕೌತುಕಗಳು ನಿಜಕ್ಕೂ ನಮ್ಮನ್ನು ಬಡಿದೆಬ್ಬಿಸಿವೆ. ಮಾನವ ಹಸ್ತಕ್ಷೇಪದಿಂದ ನಗರ ಪ್ರವೇಶಿಸುತ್ತಿದ್ದ ವನ್ಯಮೃಗಗಳು ನೆಮ್ಮದಿಯಿಂದ ಇರುವುದು ಕಂಡುಬಂದಿದೆ. ಅಪರೂಪ ಎನಿಸುವ ಜೀವವೈವಿಧ್ಯಗಳು ಗೋಚರಿಸತೊಡಗಿವೆ. ಉತ್ತರಾಖಂಡದ ಹಿಮಕರಡಿಗಳು ಎಲ್ಲಿ ಹೋದವು ಎಂಬ ಚರ್ಚೆಗಳ ಮಧ್ಯೆ ಕೆಲ ದಿನಗಳ ಹಿಂದೆ ಹಿಮಕರಡಿಯೊಂದು ಕಾಣಿಸಿಕೊಂಡಿದೆ. ಮುಂಬೈ ನಗರದ ಸಮುದ್ರ ದಂಡೆಗಳು ಸ್ವಚ್ಛತೆಯಿಂದ ನಳನಳಿಸುತ್ತಿವೆ.

    ಕುಡಿಯುವಷ್ಟು ಶುದ್ಧಳಾದ ಗಂಗೆ!: ಕಳೆದ 30-35 ವರ್ಷಗಳಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಗಂಗಾ ಶುದ್ಧೀಕರಣಕ್ಕೆ ಸಾವಿರಾರು ಕೋಟಿ ಖರ್ಚು ಮಾಡುವೆ. ಆದರೂ, ಗಂಗೆ ಶುದ್ಧಗೊಳ್ಳಲಿಲ್ಲ. ಗಂಗೆಯನ್ನು ನಾವು ದೇವರಂತೆ ಪೂಜಿಸುತ್ತೇವೆ. ಆದರೆ, ರಕ್ಷಣೆಗೇನು ಮಾಡಿದ್ದೇವೆ? ಒಂದೆಡೆ ನಗರಗಳ ವಿಷಕಾರಿ ತ್ಯಾಜ್ಯಗಳನ್ನೆಲ್ಲ ನದಿಗೆ ಬಿಟ್ಟು, ಮತ್ತೊಂದೆಡೆ ‘ಕೈ ಮುಗಿದು ನಮ್ಮನ್ನು ಕಾಪಾಡು ತಾಯಿ’ ಎಂದು ಪ್ರಾರ್ಥಿಸಿಕೊಳ್ಳುತ್ತೇವೆ. ಇದೆಂಥ ವ್ಯತಿರಿಕ್ತ ಧೋರಣೆ? ಹಾಗಂತ ವಾಸ್ತವ ನಾವು ಅರ್ಥಮಾಡಿಕೊಂಡೆವಾ? ನದಿ ರಕ್ಷಣೆ ಹೆಸರಲ್ಲಿ ಸಾವಿರಾರು ಕೋಟಿ ಬಿಡುಗಡೆಯಾದರೂ ನದಿ ಶುದ್ಧಗೊಳ್ಳಲಿಲ್ಲ. ಲಾಕ್​ಡೌನ್​ನಿಂದಾಗಿ ಈಗ ಗಂಗೆಯ ಚಿತ್ರಣವೇ ಬದಲಾಗಿದೆ. ಮನುಷ್ಯನಿಂದ ಸಾಧ್ಯವಾಗದ್ದನ್ನು ಪ್ರಕೃತಿಮಾತೆಯೇ ಮಾಡಿ ತೋರಿಸಿದ್ದಾಳೆ. ಹರಿದ್ವಾರದ ಹರ್ ಕೀ ಪೌರಿ ಪ್ರದೇಶದಲ್ಲಿ ಕುಡಿಯಲು ಅಯೋಗ್ಯ ಎನಿಸಿದ ಗಂಗೆ ಈಗ ಕುಡಿಯಲು ಯೋಗ್ಯ ಎಂದೆನೆಸಿಕೊಂಡಿದೆ. ಹರ್ ಕಿ ಪೌರಿಗಿಂತ ಮೊದಲು ಸಿಕ್ಕುವ, ಜನ ಓಡಾಟ ಕಡಿಮೆ ಇರುವ ಹರಿದ್ವಾರದ ಹನುಮಾನ್ ಘಾಟ್​ನಲ್ಲಿ ಹರಿಯುತ್ತಿದ್ದ ಗಂಗೆ ತಕ್ಕಮಟ್ಟಿಗೆ ಶುದ್ಧತೆ ಕಾಯ್ದುಕೊಂಡಿತ್ತು. ಆದರೆ, ನಗರ ತಲುಪುತ್ತಿದ್ದಂತೆಯೇ ನೀರು ಮಲಿನಗೊಂಡು ದೇವಾಲಯಗಳ ಪರಿಸರದಲ್ಲಂತೂ ನೀರಿನ ಬಣ್ಣ ಕಡು ಕಪ್ಪಿಗೆ ತಿರುಗುತ್ತಿತ್ತು. ಆದರೆ, ವರ್ಷವೊಂದರಲ್ಲಿ ಭೇಟಿ ನೀಡುವ ಕೋಟ್ಯಂತರ ಪ್ರವಾಸಿಗರು ಹಾಗೂ ಯಾತ್ರಿಕರ ಹಸ್ತಕ್ಷೇಪ ಕಡಿಮೆಯಾಗುತ್ತಿದ್ದಂತೇ 40 ವರ್ಷಗಳ ಹಿಂದಿನ ಶುದ್ಧ ಗಂಗೆಗೆ ನಾವೆಲ್ಲರೂ ಸಾಕ್ಷಿಯಾಗುತ್ತಿದ್ದೇವೆ. ಲಾಕ್​ಡೌನ್ ಬಳಿಕ ಹರಿದ್ವಾರದಲ್ಲಿ ನೀರನ್ನು ಮಲಿನಗೊಳಿಸುವ ಕೋಲಿಫಾಮ್ರ್ ಬ್ಯಾಕ್ಟೀರಿಯಾ ಪ್ರಮಾಣ ಶೇಕಡ 40ರಷ್ಟು ತಗ್ಗಿದ್ದರೆ, ಬಯೋಕೆಮಿಕಲ್ ಆಕ್ಸಿಜನ್ ಶೇ.20ರಷ್ಟು ಕಡಿಮೆಯಾಗಿದೆ ಎಂದು ಉತ್ತರಾಖಂಡ ಪರಿಸರ ರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ನೀಡಿದೆ. ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ (ಯುಪಿಪಿಸಿಬಿ) ಪ್ರಕಾರ, ಆರೋಗ್ಯಕರ ನೀರಿನಲ್ಲಿ dissolved oxygen level ಲೀಟರ್​ಗೆ ಕನಿಷ್ಠ 7 ಮಿಗ್ರಾಂ ನಷ್ಟಿರಬೇಕು. ಸದ್ಯ, ಮೇಲ್ಭಾಗದಿಂದ ಹರಿದು ಬರುವ ಗಂಗಾ ನದಿಯಲ್ಲಿ dissolved oxygen level ಪ್ರತಿ ಲೀಟರ್​ಗೆ 8.9 ಮಿಗ್ರಾಂ ಇದ್ದರೆ ಮತ್ತು ಕೆಳಭಾಗದಲ್ಲಿ ಲೀಟರ್​ಗೆ 8.3 ಮಿಗ್ರಾಂನಷ್ಟಿದೆ. ಅಂದರೆ ನೀರಿನ ಗುಣಮಟ್ಟ ಗಮನಾರ್ಹವಾಗಿ ಸುಧಾರಿಸಿದೆ ಮತ್ತು ಸ್ನಾನ ಮಾಡಲು ಸೂಕ್ತವಾಗಿದೆ ಎಂಬುದು ಸ್ಪಷ್ಟ. ಅದೇ ರೀತಿ, ಯಮುನಾ ನದಿಯಲ್ಲೂ ತಕ್ಕ ಮಟ್ಟಿಗೆ ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ. ಒಟ್ಟಿನಲ್ಲಿ, ದೇಶಾದ್ಯಂತ ಕರೊನಾ ವೈರಾಣುವಿನಿಂದ ಮನುಷ್ಯನ ರೋದನ ಮುಗಿಲು ಮುಟ್ಟಿದ್ದರೆ, ಗಂಗಾಮಾತೆ ಸಂತಸದಿಂದ ಹರಿಯುತ್ತಿದ್ದಾಳೆ ಎನ್ನಬಹುದೇನೋ!

    ಜಲಂಧರ್​ಗೆ ಕಂಡಿತು ಹಿಮಾಲಯ!: ಲಾಕ್​ಡೌನ್ ನಡುವೆಯೇ ಜಲಂಧರ್ ಜನರಿಗೆ ಏಪ್ರಿಲ್ 4ರ ಮುಂಜಾನೆಯಂದು ಪ್ರಕೃತಿಯ ಆಶ್ಚರ್ಯವೊಂದು ಕಾದು ಕುಳಿತಿತ್ತು. ಬೆಳಗ್ಗೆದ್ದು ಜನ ತಮ್ಮ ಮನೆಯ ಬಾಲ್ಕನಿಗಳಿಗೆ ಬಂದು ನೋಡಿದರೆ 210-220 ಕಿಮೀ ದೂರದಲ್ಲಿರುವ ಹಿಮಾಲಯದ ಧೌಲಾಧರ್ ಪರ್ವತ ಶ್ರೇಣಿಗಳು ಬರಿಗಣ್ಣಿಗೆ ಕಾಣುತ್ತಿದ್ದವು. ಇದುವರೆಗೆ ಕಾಣದ-ಕೇಳದ ದೃಶ್ಯವೊಂದಕ್ಕೆ ನಗರ ಸಾಕ್ಷಿಯಾಗಿತ್ತು. ಜಲಂಧರ್​ನಲ್ಲಿ ಎಂದಿಗೂ ಕಾಣದ ಹಾಲ್ಬಣ್ಣದ ಬೆಟ್ಟಸಾಲುಗಳು ಲಾಕ್​ಡೌನ್ ಹೊತ್ತಲ್ಲಿ ಕಂಡಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಉತ್ತರ-ವಾಯುಮಾಲಿನ್ಯ ತಗ್ಗಿರುವುದು. ಅಂದರೆ, ಕೈಗಾರಿಕೆ, ಆಟೋಮೊಬೈಲ್ ಉತ್ಪಾದನಾ ಚಟುವಟಿಕೆ, ವಾಹನ ಸಂಚಾರ, ವಾಯುಮಾಲಿನ್ಯದಿಂದಾಗಿಯೇ ಇದು ಸಾಧ್ಯವಾಗಿರಲಿಲ್ಲ ಎಂದಾಯಿತು. ನಿಜ, ದೇಶ ಅಭಿವೃದ್ಧಿಯಾಗಬೇಕು. ಆದರೆ, ಅದಕ್ಕೆ ಪರಿಸರ ಬಲಿ ಕೊಡಬೇಕೆ? ಪರಿಸರ-ಅಭಿವೃದ್ಧಿ ಎರಡರಲ್ಲೂ ಸಮತೋಲನ ಕಾಯ್ದುಕೊಳ್ಳುವ ದಿನಗಳು ಇನ್ನಾದರೂ ಬರಬಹುದೇ?

    ಲಾಕ್​ಡೌನ್​ನಿಂದ ಪರಿಸರಕ್ಕೆ ಏನು ಬೇಕಿತ್ತೋ ಅವೆಲ್ಲವೂ ಆಗಿದೆ ಎಂದೇನಲ್ಲ. ಜೈವಿಕ ತ್ಯಾಜ್ಯಗಳ ಸಂಸ್ಕರಣೆ ನಿಂತಿದೆ, ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ, ನೈಸರ್ಗಿಕ ಪರಿಸರ ವ್ಯವಸ್ಥೆಯ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಹೀಗೆ ಹತ್ತು ಹಲವು ಸವಾಲುಗಳೂ ಇವೆ. ಅವೆಲ್ಲದರ ನಡುವೆಯೂ ಕೋವಿಡ್-19 ಪರಿಸರ ರಕ್ಷಣೆಯ ಅಗತ್ಯ ಸಂದೇಶ ರವಾನಿಸಿದೆ. ಇದನ್ನು ಜಗತ್ತಿನ ಆಳುವ ವರ್ಗ ಮತ್ತು ಸಾರ್ವಜನಿಕರು ಹೇಗೆ ಅರ್ಥಮಾಡಿಕೊಳ್ಳುತ್ತಾರೆ ಎಂಬುದರ ಮೇಲೆ ಸದೃಢ ಭವಿಷ್ಯ ನಿಂತಿದೆ.

    (ಲೇಖಕರು ‘ವಿಜಯವಾಣಿ’ ದೆಹಲಿ ಪ್ರತಿನಿಧಿ)

    ಕರೊನಾ ವೈರಸ್​ ಸಂಕಷ್ಟ; ಕೋಡಿಮಠದ ಶ್ರೀಗಳು ಹೇಳಿದ್ದಾರೆ ಭವಿಷ್ಯ…ಕರ್ನಾಟಕದ ಕೆಲ ಸಚಿವರಿಗೆ ಕಾದಿದ್ಯಂತೆ ಕಂಟಕ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts