More

    ಮಾನವನನ್ನು ಮಹದೇವನಾಗಿಸಿದ ಶ್ರೀ ರೇಣುಕಾಚಾರ್ಯರು

    (ಮಾನವನ ದಾನವ ಗುಣಗಳನ್ನು ದಹಿಸಿ ಆತನನ್ನು ಮಹಾದೇವನನ್ನಾಗಿಸುವ ಅಪೂರ್ವ ಸಿದ್ಧಾಂತವನ್ನು ನೀಡಿದವರು ಶ್ರೀ ಜಗದ್ಗುರು ರೇಣುಕಾಚಾರ್ಯರು. ಜೀವಿ ಶಿವನಾಗುವ, ಮಾನವ ಮಹಾದೇವನಾಗುವ, ಅಂಗ ಲಿಂಗವಾಗುವ ಅದ್ಭುತ ಸಿದ್ಧಾಂತವನ್ನು ಜಗತ್ತಿಗೆ ಬೋಧಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಅವತರಿಸಿದ ಪುಣ್ಯ ದಿನವೇ ಪಾಲ್ಗುಣ ಶುದ್ಧ ತ್ರಯೋದಶಿ)

    • ಪ್ರಶಾಂತ್ ರಿಪ್ಪನ್​ಪೇಟೆ

    ನುಕುಲದ ಕಲ್ಯಾಣಕ್ಕಾಗಿ ಹಲವು ಆಚಾರ್ಯರು, ಪ್ರವಾದಿಗಳು, ಈ ಭುವಿಯ ಮೇಲೆ ಅವತರಿಸಿ ಬಂದಿದ್ದಾರೆ. ಅಂತಹ ಪರಂಪರೆಯಲ್ಲಿ ಅವತರಿಸಿದ ಆದಿಜಗದ್ಗುರು ರೇಣುಕಾದಿ ಪಂಚಾಚಾರ್ಯರು ಪರಶಿವನ ಆದೇಶದಂತೆ ಈ ಭೂತಲದಲ್ಲಿ ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರಚುರಪಡಿಸಿ ವೀರಶೈವ ಧರ್ಮವನ್ನು ನೆಲೆಗೊಳಿಸಿದ್ದಾರೆ.

    ನೆರೆಯ ತೆಲಂಗಾಣ ರಾಜ್ಯದ ಕೊಲ್ಲಿಪಾಕಿ ಸ್ವಯಂಭು ಸೋಮೇಶ್ವರ ಲಿಂಗದಿಂದ ಅವತರಿಸಿದ ಜಗದ್ಗುರು ರೇಣುಕಾಚಾರ್ಯರು ಮಲಯಾಚಲಕ್ಕೆ ಬಂದು ಮಹಾಮುನಿ ಅಗಸ್ಱ ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿದ್ದಾರೆ. ಆ ಸಾರ ಸಂಗ್ರಹವೇ ರೇಣುಕಾಗಸ್ಱ ಸಂವಾದ ರೂಪದಲ್ಲಿ ರಚಿಸಲ್ಪಟ್ಟ ಶ್ರೀ ಸಿದ್ಧಾಂತ ಶಿಖಾಮಣಿ ಧರ್ಮಗ್ರಂಥ.

    ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿರುವ ತತ್ವ-ಸಿದ್ಧಾಂತಗಳು ಕೇವಲ ಬೋಧನೆಗೆ ಸೀಮಿತವಾಗದೆ ಸಮಾಜದ ಸುಧಾರಣೆಗೆ ಸೋಪಾನವಾಗಿವೆ. ಕೊಲ್ಲಿಪಾಕಿಯಲ್ಲಿ 18 ಜಾತಿ ಜನಾಂಗಗಳಿಗೂ ಮಠಗಳನ್ನು ಕಟ್ಟಿ ಶಿಷ್ಯರನ್ನು ನೇಮಿಸಿ, ಸಂಸ್ಕಾರ ನೀಡಿದ್ದು ರೇಣುಕಾಚಾರ್ಯರ ಸಾಮಾಜಿಕ ಕ್ರಾಂತಿಯ ಮೊದಲ ಹೆಜ್ಜೆ. ಆ 18 ಮಠಗಳ ಕುರುಹು ಇಂದಿಗೂ ಕೊಲ್ಲಿಪಾಕಿ ಕ್ಷೇತ್ರದಲ್ಲಿವೆ.

    ಭದ್ರಾ ತಟದಲ್ಲಿ ವೀರಸಿಂಹಾಸನ ಪೀಠ: ವಿಜ್ಞಾನ ಎಷ್ಟೇ ಬೆಳೆದರೂ ಮನುಷ್ಯನಿಗೆ ಮಾನಸಿಕ ನೆಮ್ಮದಿ ಸಿಗುವುದು ಆಧ್ಯಾತ್ಮದಲ್ಲಿ ಮಾತ್ರ. ಅಂತಹ ಆಧ್ಯಾತ್ಮದ ಅರಿವಿಗೆ ಸಂಸ್ಕಾರ ಅಗತ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಧರ್ಮ-ಸಂಸ್ಕಾರವನ್ನು ನೀಡುವ ಪರಂಪರೆಯ ಮೂಲ ಪ್ರವರ್ತಕರಾದ ಜಗದ್ಗುರು ರೇಣುಕಾಚಾರ್ಯರು ಮಲಯಾಚಲದ ಪರ್ವತ ಶ್ರೇಣಿಯಲ್ಲಿ ಪೃಥ್ವಿ ತತ್ವದ ಸಂಕೇತವಾದ ಹಸಿರು ಧ್ವಜವನ್ನು ಹಿಡಿದು ಭದ್ರಾನದಿ ತಟದಲ್ಲಿ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಪೀಠವನ್ನು ಸಂಸ್ಥಾಪಿಸಿದ್ದಾರೆ.

    ಜಗದ್ಗುರು ರೇಣುಕಾಚಾರ್ಯರಿಂದ ಸ್ಥಾಪನೆಗೊಂಡ ಶ್ರೀ ರಂಭಾಪುರಿ ವೀರಸಿಂಹಾಸನ ಪೀಠದಲ್ಲಿ ಇಲ್ಲಿಯವರೆಗೆ 120 ಜಗದ್ಗುರುಗಳು ಆಗಿ ಹೋಗಿದ್ದಾರೆ. ಆ ಎಲ್ಲ ಲಿಂಗೈಕ್ಯ ಜಗದ್ಗುರುಗಳು ರೇಣುಕಾಚಾರ್ಯರ ಆಶಯದಂತೆ ಮಾನವ ಕುಲಕೋಟಿಗೆ ಧರ್ಮ-ಸಂಸ್ಕಾರವನ್ನು ನೀಡಿ ಸಮಾಜವನ್ನು ಮುನ್ನಡೆಸುವ ಕಾರ್ಯ ಮಾಡಿದ್ದಾರೆ. ಅದರಲ್ಲೂ 119ನೇ ಪೀಠಾಧಿಪತಿಗಳಾಗಿದ್ದ ಲಿಂಗೈಕ್ಯ ಜಗದ್ಗುರು ವೀರಗಂಗಾಧರ ಭಗವತ್ಪಾದರು ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ದಿವ್ಯವಾಣಿಯ ಮೂಲಕ ಜಾಗತಿಕ ಶಾಂತಿ ಸಂದೇಶವನ್ನು ಸಾರಿದ್ದಾರೆ.

    ಸದ್ಯ ಇರುವ ವೀರ ರುದ್ರಮುನಿ ಜಗದ್ಗುರುಗಳ ಕರಕಮಲ ಸಂಜಾತರಾದ ಡಾ. ವೀರಸೋಮೇಶ್ವರ ಜಗದ್ಗುರುಗಳು 121ನೇ ಪೀಠಾಧಿಪತಿಗಳಾಗಿದ್ದು, ಸಾಹಿತ್ಯ ಸಂಸ್ಕೃತಿ ಸಂವರ್ಧಿಸಿ, ಶಾಂತಿ ಸಮೃದ್ಧಿ ಸರ್ವರಿಗಾಗಲಿ ಎಂಬ ಉದಾತ್ತ ಸಂದೇಶದ ಮೂಲಕ ಪಂಚಪೀಠಗಳ ವಿಶಾಲತೆಯನ್ನು ವಿಸ್ತರಿಸಿದ್ದಾರೆ. ವೀರಸಿಂಹಾಸನ ಪೀಠವನ್ನು ಸರ್ವಾಂಗೀಣ ಅಭಿವೃದ್ಧಿ ಪಡಿಸುವ ಮೂಲಕ ಪೀಠದ ಗುರು ಪರಂಪರೆಯಲ್ಲಿ ತಮ್ಮ ಕಾಲಾವಧಿಯನ್ನು ಸುವರ್ಣಯುಗದಂತೆ ದಾಖಲಿಸಿದ್ದಾರೆ.

    ಸೌಹಾರ್ದ ಶಾಂತಿ ಸಮ್ಮೇಳನ

    ಪಾಲ್ಗುಣ ಶುದ್ಧ ತ್ರಯೋದಶಿಯಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಮತ್ತು ಕ್ಷೇತ್ರನಾಥ ವೀರಭದ್ರ ಸ್ವಾಮಿ ಮಹಾರಥೋತ್ಸವವನ್ನು ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಪ್ರತಿ ವರ್ಷ ಆಚರಿಸಲಾಗುತ್ತದೆ. ಅಂತೆಯೇ ಮಾ. 25ರಿಂದ 30ರವರೆಗೆ ಒಂದು ವಾರ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಮಾ. 26ರಂದು ಶ್ರೀ ರಂಭಾಪುರಿ ಮತ್ತು ಕೇದಾರ ಜಗದ್ಗುರುಗಳ ದಿವ್ಯಸಾನಿಧ್ಯದಲ್ಲಿ ಸೌಹಾರ್ದ ಶಾಂತಿ ಸಮ್ಮೇಳನ ನಡೆಯಲಿದೆ. ದ್ವೇಷ-ಅಸೂಯೆಗಳನ್ನು ಬಿಟ್ಟು ಶಾಂತಿ-ಸಹಬಾಳ್ವೆಯ ಮಹತ್ವವನ್ನು ಅರಿಯಬೇಕೆಂಬ ಉದ್ದೇಶದಿಂದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವವನ್ನು ಸೌಹಾರ್ದ ಶಾಂತಿ ಸಮ್ಮೇಳನದ ಹೆಸರಿನಲ್ಲಿ ಆಯೋಜಿಸಲಾಗಿದೆ.

    ಸುರಗಿ ಸಮಾರಾಧನೆ

    ಮಾ. 27ರಂದು ದೀಪೋತ್ಸವ, ಕುಂಕುಮೋತ್ಸವ, ಶಯನೋತ್ಸವ ಹಾಗೂ ಶಿವಾನಂದ ಎಸ್ಟೇಟಿನಲ್ಲಿ ಜಗದ್ಗುರುಗಳ ಮಹಾಪೂಜೆ, ಮಾ. 28ರಂದು ವಸಂತೋತ್ಸವ, ಮಾ. 29ರಂದು ಕೆಂಡಾರ್ಚನೆ, ಮಾಧ್ಯಮ ಸಮ್ಮೇಳನ ಹಾಗೂ ಮಾ. 30ರಂದು ಭದ್ರಾನದಿ ತೀರದಲ್ಲಿ ಸುರಗಿ ಸಮಾರಾಧನೆ ನಡೆಯಲಿದೆ.

    ಇದೇ ವೇಳೆ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಡಾ. ಸುದರ್ಶನ ಬಲ್ಲಾಳ ಅವರು 2021ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ 1 ಲಕ್ಷ ರೂ. ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಸಮಾರಂಭದಲ್ಲಿ ಸಂಶೋಧಕರಾದ ಡಾ. ಸಂಗಮೇಶ ಸವದತ್ತಿಮಠ ಅವರು ರಚಿಸಿರುವ ‘ವೀರಶೈವ ಪರಿಶೋಧ ಪರಂಪರೆ ಇತಿಹಾಸ ಮತ್ತು ವರ್ತಮಾನ’ ಎಂಬ ಮಹತ್ವದ ಗ್ರಂಥವನ್ನು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರು ಬಿಡುಗಡೆಗೊಳಿಸಲಿದ್ದಾರೆ. ವಿವಿಧ ಮಠಾಧೀಶರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ರಾಜಕೀಯ ನಾಯಕರು, ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts