More

    ಹಾಸ್ಯದ ಬಾಗಿನ ನೀಡಿದ ‘ಅಧಿಕ ಪ್ರಸಂಗ’

    ಹುಬ್ಬಳ್ಳಿ : ಅಖಿಲ ಭಾರತ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಇಲ್ಲಿನ ಚಂದ್ರನಾಥ ನಗರದ ಗೋವರ್ಧನ ಹಾಲ್​ನಲ್ಲಿ ಮಂಗಳವಾರದಂದು ‘ಶ್ರಾವಣದಾಗ ಅಧಿಕ ಪ್ರಸಂಗ’ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಅಣಕುವಾಡು, ಹಾಸ್ಯ ಕವಿತೆಗಳು, ನಗೆ ಹನಿ, ಕಿರು ಪ್ರಹಸನ, ಬದುಕಿನ ಹಾಸ್ಯ ಪ್ರಸಂಗಗಳು ಸೇರಿದಂತೆ ತರಹೇವಾರಿ ಹಾಸ್ಯದ ಹೊನಲು ಕಾರ್ಯಕ್ರಮದಲ್ಲಿ ಕಂಡುಬಂದಿತು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಧುರೀಣ ಡಿ.ಪಿ. ಪಾಟೀಲ, ಧಾರಾವಾಹಿಗಳ ಪ್ರಭಾವದಿಂದಾಗಿ ನಗುವ ಮನೆಯ ವಾತಾವರಣವೇ ಮಾಯವಾಗಿದೆ. ಇಂಥ ಸಾಹಿತ್ಯದ ಕಾರ್ಯಕ್ರಮಗಳು ಹೊಸ ಚೈತನ್ಯ ಮೂಡಿಸುತ್ತವೆ ಎಂದು ಹೇಳಿದರು.

    ಬ್ಯಾಂಕ್ ನಿವೃತ್ತ ನೌಕರ ಮಾಧವ ಗೋಖಲೆ ಅವರು ಹಾಸ್ಯದ ಹೊನಲು ಹರಿಸಿದರೆ, ಪ್ರೊ. ಕೆ.ಎಸ್. ಕೌಜಲಗಿ ಅವರು ಭಾಷೆಯಲ್ಲಿ ಆಗುವ ಅನಾಹುತ ಅರ್ಥಗಳ ಬಗ್ಗೆ ಹಾಸ್ಯ ಪ್ರಸಂಗಗಳನ್ನು ವಿವರಿಸಿದರು. ಶರದ ದೇಶಪಾಂಡೆ ಅವರು ಮಾತಿನ ಮೂಲಕ ನಗೆ ಹರಿಸಿದರು.

    ಹಿರಿಯ ಪತ್ರಕರ್ತ ಗಣಪತಿ ಗಂಗೊಳ್ಳಿ ಮಾತನಾಡಿ, ನಗುತ್ತ ಇದ್ದರೆ ವೈಷಮ್ಯವೇ ಇರುವುದಿಲ್ಲ. ಇಂಥ ಕಾರ್ಯಕ್ರಮಗಳಿಂದ ಸಮಾಜವನ್ನು ಒಂದುಗೂಡಿಸಲು ಸಾಧ್ಯವಿದೆ ಎಂದು ಹೇಳಿದರು.

    ಸುನೀಲ ಪತ್ರಿ ಹಾಗೂ ಪರಿಷತ್ತನ ವಲಯ ಸಂಚಾಲಕ ಜನಮೇಜಯ ಉಮರ್ಜಿ, ಮಧ್ಯೆ ಮಧ್ಯೆ ತೂರಿಕೊಂಡು ಅಧಿಕ ಪ್ರಸಂಗಗಳ ಆಳಗಲವನ್ನು ಹೇಳುತ್ತಲೇ ನಿರೂಪಣೆ ಮಾಡಿದ್ದು ವಿಶೇಷ ಎನ್ನಿಸಿತು.

    ನಿವೃತ್ತ ಶಿಕ್ಷಣಾಧಿಕಾರಿ ಶಿವಶಂಕರ ಹಿರೇಮಠ, ಡಾ. ಗೋವಿಂದ ಹೆಗಡೆ ಅವರು ಪ್ರಬುದ್ಧವಾಗಿ ಹಾಸ್ಯ ಚಟಾಕಿ ಹಾರಿಸಿ, ನಗೆಗಡಲಲ್ಲಿ ತೇಲಿಸಿದರೆ, ರೂಪಾ ಜೋಶಿ ಅವರು ಭಾಷಾ ಅವಾಂತರದ ಬಗ್ಗೆ ಅಭಿನಯಿಸಿದರು. ಶಿ.ಕ. ಮಾಲಿಪಾಟೀಲ ಅಣಕುವಾಡಗಳನ್ನು ಹೇಳಿ ರಂಜಿಸಿದರು. ಹಿರಿಯ ಕವಯಿತ್ರಿ ಭಾರತಿ ಹಿರೇಮಠ ಹಾಡುಗಳ ಮಿಮಿಕ್ರಿ ಮಾಡಿದರು. ಮಾಲತೇಶ ಹುಬ್ಬಳ್ಳಿ, ಆರ್. ಎಂ. ಗೋಗೇರಿ, ವೀಣಾ ಬರಗಿ, ಅಶ್ವಿನಿ ಮಠದ, ಗೋವಿಂದ ಹೆಗಡೆ, ಪವನ ದೇಸಾಯಿ, ಗುರುಸಿದ್ದಪ್ಪ ಬಡಿಗೇರ, ಪದ್ಮಜಾ ಉಮರ್ಜಿ, ಸಂಧ್ಯಾ ದೀಕ್ಷಿತ, ಗಿರಿಜಾ ಚಿಕ್ಕಮಠ ಇಬ್ಬರ ಪ್ರಹಸನ ನಗೆಯಲ್ಲಿ ತೇಲಿಸಿತು. ಶ್ರೀವಲ್ಲಭ ಕುಲಕರ್ಣಿ, ಜಾಹ್ನವಿ ಉಮರ್ಜಿ, ವಿರೂಪಾಕ್ಷ ಕಟ್ಟಿಮನಿ, ನೇತ್ರ ಭೂಸನೂರಮಠ, ಮಂಗಳ ನಾಡಕರ್ಣಿ, ಮಂಜುಳಾ ಕುಲಕರ್ಣಿ, ಮಾಂತಪ್ಪ ನಂದೂರು, ಗದಿಗಯ್ಯ ಹಿರೇಮಠ, ಗಾಯತ್ರಿ ರವಿ ಮತ್ತಿತರರು ಸಭಿಕರನ್ನು ನಗೆಸಿದರು. ಡಾ. ರಾಮು ಮೂಲಗಿ ಜಾನಪದ ಗೀತೆ ಹಾಡಿದರು. ಎರಡುವರೆ ಗಂಟೆಗಳ ಕಾಲ ನಗೆಯ ಬಾಗಿನ ಸಭಿಕರಿಗೆ ಉಣಿಸಿದ್ದು ವಿಶೇಷ ಎನ್ನಿಸಿತು.

    ಅಗ್ನಿಪಥಕ್ಕೆ ಆಯ್ಕೆಯಾದ ಸ್ಥಳೀಯ ಯುವಕ ಚೇತನ ಬರಡ ಅವರನ್ನು ಸನ್ಮಾನಿಸಲಾಯಿತು. ಸುಶೀಲೇಂದ್ರ ಕುಂದರಗಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts