More

    11,111 ದೀಪೋತ್ಸವ 21ರಂದು

    ಹುಬ್ಬಳ್ಳಿ: ರಾಜರಾಜೇಶ್ವರ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿ ನಿಮಿತ್ತ ಎಸ್​ಎಸ್​ಕೆ ಸಮಾಜದ ಮುಖಂಡರಿಂದ ನ. 21ರಂದು ಸಂಜೆ 6.30ಕ್ಕೆ 11,111 ದೀಪ ಪ್ರಜ್ವಲನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಾಜಿಬಾನ ಪೇಟೆಯ ಶ್ರೀ ತುಳಜಾಭವಾನಿ ದೇವಸ್ಥಾನದಿಂದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿನ ಶ್ರೀ ಚಾಂಗದೇವ ಮಹಾರಾಜ ಮಂದಿರದವರೆಗೆ ದೀಪೋತ್ಸವ ಸಾಗಲಿದೆ ಎಂದು ಅಖಂಡ ದೀಪೋತ್ಸವ ಕಮಿಟಿ ಮುಖಂಡ ಲಕ್ಷ್ಮಣ ದಲಬಂಜನ ತಿಳಿಸಿದರು.

    ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ತಿಕ ಮಾಸದಲ್ಲಿ ದೀಪೋತ್ಸವ ನಡೆಯುವುದು ವಿಶೇಷ. ಆದರೆ, ಶ್ರೀ ಸಹಸ್ರಾರ್ಜುನ ಮಹಾರಾಜರ ಅಖಂಡ 11 ಜ್ಯೋತಿಗಳ ದ್ಯೋತಕವಾಗಿ 11,111 ದೀಪೋತ್ಸವ ಹಮ್ಮಿಕೊಂಡಿದ್ದೇವೆ ಎಂದರು.

    ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಉದ್ಘಾಟಿಸುವರು. ಎಸ್​ಎಸ್​ಕೆ ಸಮಾಜದ ಮುಖ್ಯ ಧರ್ಮದರ್ಶಿ ನೀಲಕಂಠಸಾ ಜಡಿ ಅಧ್ಯಕ್ಷತೆ ವಹಿಸುವರು. ಶಾಸಕರಾದ ಪ್ರಸಾದ ಅಬ್ಬಯ್ಯ, ಪ್ರದೀಪ ಶೆಟ್ಟರ್, ಮಾಜಿ ಶಾಸಕ ಅಶೋಕ ಕಾಟವೆ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಇತರರು ಅತಿಥಿಗಳಾಗಿ ಆಗಮಿಸುವರು ಎಂದರು.

    ಎಸ್​ಎಸ್​ಕೆ ಸಮಾಜದ ಮುಖಂಡ ವಿಠ್ಠಲ ಲದವಾ ಮಾತನಾಡಿ, ನಮ್ಮ ಸಮಾಜದಲ್ಲೂ ಹಿಂದುಳಿದವರಿದ್ದಾರೆ. ಅವರ ಅಭಿವೃದ್ಧಿಗೆ ನಿಗಮ ಸ್ಥಾಪನೆ ಅಗತ್ಯ. ಹಾಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಲು ನಿರ್ಧರಿಸಿದ್ದೇವೆ. ಬ್ರಾಹ್ಮಣ, ಮರಾಠ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಷ್ಟೇ ಅಲ್ಲ ಎಲ್ಲ ಸಮಾಜದವರ ಅಭಿವೃದ್ಧಿಗಾಗಿ ನಿಗಮ ಮಂಡಳಿ ರಚನೆ ಅತ್ಯಗತ್ಯ ಎಂದರು.

    ಮುಖಂಡರಾದ ವಿಶ್ವನಾಥ ಇರಕಲ್, ಆನಂದ ಬದ್ದಿ, ಅಂಬಾಸಾ ಬಾಕಳೆ, ವಿಜಯ ಮೆಹರವಾಡೆ, ಅಮೃತ್ ದಾನಿ, ಶಂಕರ ಮಿಸ್ಕಿನ್, ದೀಪಕ ಸುದ್ದಿಗೋಷ್ಠಿಯಲ್ಲಿದ್ದರು.

    ಭಾವಚಿತ್ರ ಮೆರವಣಿಗೆ ರದ್ದು: ಹುಬ್ಬಳ್ಳಿಯಲ್ಲಿ ಎಸ್​ಎಸ್​ಕೆ ಸಮಾಜದ ಜನರು ತೈಲ ವರ್ಣದ ಭಾವಚಿತ್ರ ಮೆರವಣಿಗೆ ಮಾಡುತ್ತಿದ್ದರು. 1993ರಲ್ಲಿ 54 ಕೆಜಿ ಬೆಳ್ಳಿಯ 6 ಅಡಿ ಎತ್ತರದ ಶ್ರೀ ಸಹಸ್ರಾರ್ಜುನ ಮಹಾರಾಜರ ಮೂರ್ತಿ ಕೊಲ್ಹಾಪುರದಿಂದ ತಂದ ನಂತರ ಬೆಳ್ಳಿ ಮೂರ್ತಿಯ ಮೆರವಣಿಗೆ ಮಾಡಲಾಗುತ್ತಿದೆ. ಶ್ರೀ ಸಹಸ್ರಾರ್ಜುನ ಪುರಾತನ ಮಂದಿರ ಮಧ್ಯಪ್ರದೇಶದ ಮಹೇಶ್ವರದಲ್ಲಿದೆ. ಅಲ್ಲಿ ಸಾವಿರಾರು ವರ್ಷಗಳಿಂದ 11 ಅಖಂಡ ತುಪ್ಪದ ದೀಪಗಳು ಬೆಳಗುತ್ತಿವೆ. 2019ರಲ್ಲಿ ಸುಮಾರು 150 ಜನರು ಮಹೇಶ್ವರಕ್ಕೆ ತೆರಳಿದರು. ಅಲ್ಲಿ ಹೋಮ-ಹವನ ಮಾಡಿ ಮರಳಿದರು. 2020ರ ಫೆಬ್ರವರಿಯಲ್ಲಿ ಮತ್ತೆ 150 ಜನರು ತೆರಳಿ ಮಹೇಶ್ವರದ ಮಂದಿರದಲ್ಲಿರುವ ಅಖಂಡ 11 ಜ್ಯೋತಿಗಳಿಂದ 5 ಜ್ಯೋತಿಗಳನ್ನು ಪ್ರಜ್ವಲಿಸಿ ಮಹೇಶ್ವರದಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು. ಅಲ್ಲಿಂದ ಹುಬ್ಬಳ್ಳಿಗೆ ಆಗಮಿಸಿ ಶಿವರಾತ್ರಿಯ ದಿನದಂದು ಹುಬ್ಬಳ್ಳಿಯಲ್ಲಿ ಅಖಂಡ ಜ್ಯೋತಿಗಳ ಭವ್ಯ ಮೆರವಣಿಗೆ ನಡೆಯಿತು. 2 ಅಖಂಡ ಜ್ಯೋತಿಗಳನ್ನು ದಾಜಿಬಾನಪೇಟೆಯ ಶ್ರೀ ತುಳಜಾಭವಾನಿ ಮಂದಿರದ ಆವರಣದಲ್ಲಿರುವ ಶ್ರೀ ಸಹಸ್ರಾರ್ಜುನ ಮಹಾರಾಜರ ಬೆಳ್ಳಿ ಮೂರ್ತಿಯ ಮಂದಿರದಲ್ಲಿ ಅನಾವರಣಗೊಳಿಸಲಾಯಿತು. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಮೆರವಣಿಗೆ ಬದಲು ದೀಪೋತ್ಸವ ನಡೆಯುತ್ತಿದೆ ಎಂದು ಅಖಂಡ ದೀಪೋತ್ಸವ ಕಮಿಟಿ ಮುಖಂಡ ಲಕ್ಷ್ಮಣ ದಲಬಂಜನ ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts