More

    ಸಾರಸ್ವತ ಲೋಕ ಶ್ರೀಮಂತಗೊಳಿಸಿದ ಸಾಧು-ಸಂತರು

    ಲಕ್ಷೆ್ಮೕಶ್ವರ: ಸುಮಾರು 2 ಸಾವಿರ ವರ್ಷಗಳ ಗಟ್ಟಿ ಇತಿಹಾಸ ಹೊಂದಿರುವ ಕನ್ನಡ ಸಾರಸ್ವತ ಲೋಕದ ಶ್ರೀಮಂತಿಕೆ ಹೆಚ್ಚಿಸುವಲ್ಲಿ ಅನೇಕ ಸಾಧು-ಸಂತರು, ವಚನಕಾರರು, ದಾಸಶ್ರೇಷ್ಠರು ಮತ್ತು ಮಠ-ಮಾನ್ಯಗಳ ಕೊಡುಗೆಯೂ ಅಪಾರವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

    ಪಟ್ಟಣದ ಪಂಪ ವೃತ್ತದಲ್ಲಿ ಆಟೋ ಚಾಲಕ- ಮಾಲೀಕರ ಸಂಘದಿಂದ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ಆಟೋ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

    ಗಡಿ ನಾಡು ಸೇರಿ ಕನ್ನಡ ಭಾಷೆಗೆ ನಾಡಿನ ಯಾವ ಭಾಗದಲ್ಲಿ ಹಿನ್ನಡೆಯಿದೆಯೋ ಅಲ್ಲಿ ಕನ್ನಡದ ಜಾಗೃತಿ, ಅಭಿಮಾನ ಮೂಡಿಸುವ ಕಾರ್ಯಕ್ರಮಗಳು ರಾಜ್ಯ ಸರ್ಕಾರ ಮತ್ತು ಕನ್ನಡಪರ ಸಂಘಟನೆಗಳಿಂದ ಜರುಗಬೇಕು. ರಾಜ್ಯ ಸರ್ಕಾರ ಕನ್ನಡ ಕಾವಲು ಸಮಿತಿ ರಚಿಸಿ ಗಡಿಭಾಷೆಯ ಬೆಳೆವಣಿಗೆ ಬಗ್ಗೆ ಹೆಜ್ಜೆ ಇಡುತ್ತಿದೆ. ಕನ್ನಡ ನಾಡಿನಲ್ಲಿ ಕನ್ನಡ ಶಾಲೆಗಳ ಸ್ಥಿತಿ-ಗತಿ ಇನ್ನಷ್ಟು ಸುಧಾರಿಸಬೇಕಿದೆ ಎಂದರು.

    ಪಾಲಕರು ಆಂಗ್ಲ ಭಾಷೆಯ ಮಾಧ್ಯಮ ವ್ಯಾಮೋಹ ಬಿಟ್ಟು ಕನ್ನಡ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ಕೊಡಬೇಕು. ಕನ್ನಡ ಮಾಧ್ಯಮದಲ್ಲಿ ಓದಿದವರೇ ಇಂದು ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಯುವಕರು ಇಂಗ್ಲಿಷ್ ವ್ಯಾಮೋಹ, ಕನ್ನಡ ಭಾಷೆಯ ಬಗೆಗಿನ ಕೀಳರಿಮೆ ತೊರೆದು ಕನ್ನಡದ ಬಗ್ಗೆ ಅಭಿಮಾನ, ಸ್ವಾಭಿಮಾನ, ಗೌರವ ಭಾವನೆ ಹೊಂದಬೇಕು ಎಂದರು.

    ಕನ್ನಡ ಕೇವಲ ಭಾಷೆಯಾಗಿರದೆ ಸಂಸ್ಕೃತಿ, ಶ್ರೇಷ್ಠತೆಗಳ ಸಂಗಮವಾಗಿದೆ. ಮಾಹಿತಿ- ತಂತ್ರಜ್ಞಾನದ ಯುಗದಲ್ಲಿ ಹೊಸ ಸಾಧ್ಯತೆಗಳತ್ತಲೂ ಗಮನಹರಿಸಿ ಕನ್ನಡದ ಅಂತಃಸತ್ವವನ್ನು ಹೆಚ್ಚಿಸುವ ಸಂಕಲ್ಪ ನಮ್ಮೆಲ್ಲರದ್ದಾಗಬೇಕು. ಕನ್ನಡ ನಾಡಿನ ಇತಿಹಾಸದ ಪುಟದಲ್ಲಿ ಗದಗ ಜಿಲ್ಲೆಗೆ ಹಿರಿದಾದ ಸ್ಥಾನವಿದೆ. ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಕಾರ್ಯಕ್ರಮ ವಿಶಿಷ್ಠ ರೀತಿಯಲ್ಲಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

    ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಆನಂದ ಮೆಕ್ಕಿ, ವಿಜಯಕುಮಾರ ಮಹಾಂತಶೆಟ್ಟರ, ಮಹದೇವಪ್ಪ ಅಣ್ಣಿಗೇರಿ, ವಿಜಯ ಹತ್ತಿಕಾಳ, ಪ್ರವೀಣ ಬಾಳಿಕಾಯಿ, ಸಂತೋಷ ಬಾಳಿಕಾಯಿ, ಶಿವಾನಂದ ದೊಡ್ಡಮನಿ, ರುದ್ರಸ್ವಾಮಿ ಘಂಟಾಮಠ, ದ್ಯಾಮಣ್ಣ ಕಲ್ಯಾಣಿ,

    ಗಂಗಾಧರ ಮೆಣಸಿನಕಾಯಿ, ರಮೇಶ ಹಾಳದೋಟದ, ಮಹಾಂತೇಶ ತೋಟದ, ರಾಜು ಬೆಲ್ಲದ, ಜಗದೀಶ ಗೋಜಗೋಜಿ, ಪರಶುರಾಮ ಗೊಜಗೋಜಿ, ಚಂದ್ರು ನೀರೊಳಿ, ಲೋಕೇಶ ಗೊಜಗೋಜಿ, ಸೇರಿ ಮಹಾಕವಿ ಆಟೋ ಚಾಲಕ ಮಾಲೀಕರ ಸಂಘದ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು ಇದ್ದರು. ಬಳಿಕ ಕನ್ನಡದ ಕವಿಗಳು, ಕಲಾವಿದರ ಭಾವಚಿತ, ಹಾಡುಗಳೊಂದಿಗೆ ಪಟ್ಟಣದಲ್ಲಿ ಆಟೋ ಮೆರವಣಿಗೆ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts