More

    ‘ಪುತ್ರ ಮಡಿದ ಸುದ್ದಿಯನ್ನು ಸೊಸೆಯೇ ತಿಳಿಸಿದಳು…ನೋವಿದೆ..ಅಷ್ಟೇ ಹೆಮ್ಮೆಯಿದೆ’: ಕರ್ನಲ್​ ತಾಯಿಯ ಕಣ್ಣೀರು

    ತೆಲಂಗಾಣ: ‘ತುಂಬ ದುಃಖವಾಗುತ್ತಿದೆ…ಹಾಗೇ ನನ್ನ ಮಗನ ಬಗ್ಗೆ ಅಷ್ಟೇ ಹೆಮ್ಮೆಯೂ ಆಗುತ್ತಿದೆ…’ ಇದು ಚೀನಾದೊಂದಿಗಿನ ಸಂಘರ್ಷದಲ್ಲಿ ಮಡಿದ ಭಾರತ ಸೇನಾ ಕರ್ನಲ್​ ಸಂತೋಷ್​ ಬಾಬು ಅವರ ತಾಯಿಯ ಮಾತುಗಳು.

    ನಿನ್ನೆ ಭಾರತ-ಚೀನಾ ಗಡಿ ಪ್ರದೇಶ ಪೂರ್ವ ಲಡಾಖ್​​ನ ಗಲ್ವಾನ್​ ಕಣಿವೆಯಲ್ಲಿ ಎರಡೂ ದೇಶಗಳ ಸೈನಿಕರ ನಡುವೆ ಘರ್ಷಣೆ ತಾರಕಕ್ಕೇರಿ, ಭಾರತದ ಒಟ್ಟು 20 ಯೋಧರು ಹುತಾತ್ಮರಾಗಿದ್ದಾರೆ. ಅದಕ್ಕೆ ಪ್ರತಿಯಾಗಿ ಚೀನಾದ 43 ಸೈನಿಕರನ್ನು ಹತ್ಯೆಗೈದಿದ್ದಾಗಿ ಸೇನಾ ಮೂಲಗಳು ತಿಳಿಸಿವೆ.

    ಈ ಸಂಘರ್ಷದಲ್ಲಿ ಹುತಾತ್ಮರಾದ ಬಿಹಾರ ರೆಜಿಮೆಂಟ್​ನ ಕರ್ನಲ್​ ಸಂತೋಷ್​ ಬಾಬು ಅವರ ತಾಯಿ ಮಗನನ್ನು ಕಳೆದುಕೊಂಡ ಸಂಕಟದಲ್ಲಿದ್ದಾರೆ, ಕಣ್ಣೀರು ಹಾಕುತ್ತಿದ್ದಾರೆ. ಹಾಗೇ, ನನ್ನ ಪುತ್ರ ದೇಶಕ್ಕಾಗಿ ಜೀವ ಕೊಟ್ಟಿದ್ದಾನೆ. ಆ ಬಗ್ಗೆ ನನಗೆ ತುಂಬ ಹೆಮ್ಮೆಯಿದೆ ಎಂದು ಹೇಳಿದ್ದಾರೆ.

    ದೆಹಲಿಯಲ್ಲಿದ್ದ ನನ್ನ ಸೊಸೆ ಮಧ್ಯಾಹ್ನ 2 ಗಂಟೆಹೊತ್ತಿಗೆ ಫೋನ್​ ಮಾಡಿ ಈ ದುಃಖದ ವಿಷಯ ತಿಳಿಸಿದಳು. ಅವಳಿಗೆ ತುಂಬ ಮೊದಲೇ ವಿಚಾರ ಗೊತ್ತಿತ್ತು. ಸೇನಾಧಿಕಾರಿಗಳು ತಿಳಿಸಿದ್ದರು. ಆದರೂ ಸ್ವಲ್ಪ ಹೊತ್ತು ತಡೆದು ನನಗೆ ತಿಳಿಸಿದಳು. ನಾನು ಶಾಕ್​ಗೆ ಒಳಗಾಗಿ, ಅಸ್ವಸ್ಥಳಾಗಬಹುದು ಎಂಬ ಭಯದಿಂದ ಒಮ್ಮೆಲೇ ವಿಷಯ ಹೇಳಲಿಲ್ಲ ಎಂದು ಸಂತೋಷ್​ ತಾಯಿ ಮಂಜುಳಾ ಹೇಳಿದ್ದಾರೆ. ಇದನ್ನೂ ಓದಿ: ಮಹಿಳಾ ಅಕೌಂಟ್ಸ್ ಸೂಪರಿಂಡೆಂಟ್ ಕಿರುಕುಳಕ್ಕೆ ಬೇಸತ್ತು ಗುತ್ತಿಗೆದಾರ ಆತ್ಮಹತ್ಯೆಗೆ ಯತ್ನ

    ನನ್ನ ಮಗನಿಗೆ ಹೈದರಾಬಾದ್​ಗೆ ಟ್ರಾನ್ಸ್​ಫರ್​ ಆಗಿತ್ತು. ಆದರೆ ಲಾಕ್​ಡೌನ್​ ಇದ್ದುದರಿಂದ ಅವನು ನಾವಿದ್ದಲ್ಲಿಗೆ ಬರಲಿಲ್ಲ. ಆದಷ್ಟು ಶೀಘ್ರದಲ್ಲಿಯೇ ಬಂದು ನಿಮ್ಮನ್ನು ನೋಡುತ್ತೇನೆ ಎಂದು ಆತ ಹೇಳಿದ್ದ. ಆದರೆ ಈಗವನೇ ಇಲ್ಲ. ಸಾಯುವಂಥ ವಯಸ್ಸಲ್ಲ ಅವನದು. ಚಿಕ್ಕವನು ಎಂದು ತಂದೆ ಉಪೇಂದ್ರ ಅವರು ಕಂಬನಿ ಮಿಡಿದಿದ್ದಾರೆ.
    ನನಗೆ ಸೈನ್ಯವನ್ನು ಸೇರುವ ಆಸೆಯಿತ್ತು. ಆದರೆ ಆಗಿರಲಿಲ್ಲ. ನಂತರ ನನ್ನ ಮಗ ಯೋಧನಾಗಿ ಆ ಆಸೆ ನೆರವೇರಿಸಿದ್ದ ಎಂದು ಹೇಳಿದ್ದಾರೆ.

    ಕರ್ನಲ್​ ಸಂತೋಷ್ ಬಾಬು ಅವರು ತೆಲಂಗಾಣದ ಸೂರ್ಯಪೇಟ್​ ಜಿಲ್ಲೆಯವರು. ತಂದೆ ನಿವೃತ್ತ ಬ್ಯಾಂಕ್​ ನೌಕರ. ತಾಯಿ ಅಪ್ಪಟ ಗೃಹಿಣಿ. ಸಂತೋಷ್ ಬಾಬು ಅವರ ತಂದೆ-ತಾಯಿ ಸೂರ್ಯಪೇಟ್​ನಲ್ಲಿಯೇ ಇದ್ದಾರೆ. ಇವರು ಪತ್ನಿ ಹಾಗೂ 9 ವರ್ಷದ ಮಗಳು, ನಾಲ್ಕು ವರ್ಷದ ಮಗನೊಂದಿಗೆ ದೆಹಲಿಯಲ್ಲಿ ವಾಸವಾಗಿದ್ದರು.

    ಸಂತೋಷ್​ ಬಾಬು ಅವರು ಸೂರ್ಯಪೇಟ್​ನಲ್ಲಿ ಓದು ಮುಗಿಸಿ ಆಂಧ್ರಪ್ರದೇಶದ ಕೊರುಕೊಂಡ ಸೈನಿಕ್​ ಸ್ಕೂಲ್​ಗೆ ಸೇರಿಕೊಂಡಿದ್ದರು. ಕಲಿಕೆಯಲ್ಲಿ ತುಂಬ ಬುದ್ಧಿವಂತರಾಗಿದ್ದರು. ಡೆಹ್ರಾಡೂನ್​ನಲ್ಲಿರುವ ಇಂಡಿಯನ್​ ಮಿಲಿಟರಿ ಅಕಾಡೆಮಿಗೆ ಸೇರ್ಪಡೆಗೊಳ್ಳುವ ಮೊದಲು, ಪುಣೆಯಲ್ಲಿ ಪದವಿ ಪಡೆದರು. ನಂತರ ಮೊಟ್ಟಮೊದಲು 2004ರಲ್ಲಿ ಜಮ್ಮು-ಕಾಶ್ಮೀರದಲ್ಲಿ ನಿಯೋಜನೆಗೊಂಡರು. ಇದನ್ನೂ ಓದಿ: ದ.ಕ. ಜಿಲ್ಲೆಗೆ ಸೌದಿ ಆಘಾತ, ಒಂದೇ ದಿನ 79 ಪ್ರಕರಣ, 11 ಮಂದಿ ಬಿಡುಗಡೆ

    2007ರಲ್ಲಿ ಭಾರತ-ಪಾಕ್​ ಗಡಿಯಲ್ಲಿ ಭಾರತೀಯ ಸೇನೆ ನಡೆಸಿದ್ದ ಕಾರ್ಯಾಚರಣೆಯಲ್ಲಿ ಪಾಕ್​​ನ ಮೂವರು ನುಸುಳುಕೋರರನ್ನು ಸಂತೋಷ್ ಹತ್ಯೆ ಮಾಡಿದ್ದರು. 15 ವರ್ಷದ ಸರ್ವೀಸ್​ನಲ್ಲಿ ಕಾಶ್ಮೀರ, ಅರುಣಾಚಲ ಪ್ರದೇಶ, ಲಡಾಖ್​​ಗಳಲ್ಲಿ ಕೆಲಸ ಮಾಡಿದ್ದಾರೆ. ಸಣ್ಣ ವಯಸ್ಸು ಅಂದರೆ 37 ವರ್ಷಕ್ಕೆಲ್ಲ ಕರ್ನಲ್​ ಆದ ಹೆಗ್ಗಳಿಕೆ ಇವರದ್ದು. (ಏಜೆನ್ಸೀಸ್​)

    'ಪುತ್ರ ಮಡಿದ ಸುದ್ದಿಯನ್ನು ಸೊಸೆಯೇ ತಿಳಿಸಿದಳು...ನೋವಿದೆ..ಅಷ್ಟೇ ಹೆಮ್ಮೆಯಿದೆ': ಕರ್ನಲ್​ ತಾಯಿಯ ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts