More

    ಸಚಿವರು ಯಾರೆಂಬುದೇ ಗೊಂದಲ!: ಕಾಂಗ್ರೆಸ್ ಆರೋಗ್ಯ ಹಸ್ತ ಸಮಿತಿ ಅಧ್ಯಕ್ಷ ಧ್ರುವನಾರಾಯಣ್ ಟಾಂಗ್

    ರಾಮನಗರ: ನೆರೆ ರಾಜ್ಯಗಳು ಮುನ್ನೆಚ್ಚರಿಕೆ ವಹಿಸಿ ಕರೊನಾ ನಿಯಂತ್ರಣಕ್ಕೆ ಕಡಿವಾಣ ಹಾಕಿವೆೆ. ಆದರೆ, ಕರ್ನಾಟಕ ಸರ್ಕಾರ ರೋಗ ನಿಯಂತ್ರಿಸುವಲ್ಲಿ ವಿಫಲವಾಗಿದ್ದು, ಇಲ್ಲಿ ಆರೋಗ್ಯ ಸಚಿವರು ಯಾರು ಎಂಬುದೇ ಗೊಂದಲವಾಗಿದೆ ಎಂದು ಆರೋಗ್ಯ ಹಸ್ತ ಸಮಿತಿ ಅಧ್ಯಕ್ಷ ಧ್ರುವನಾರಾಯಣ್ ಗುಡುಗಿದರು.

    ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಪ್ರತಿನಿತ್ಯ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಮಂತ್ರಿಗಳು ಹೇಳಿಕೆಗಳಿಗಷ್ಟೇ ಸೀಮಿತವಾಗಿದ್ದಾರೆ. ಕೇಂದ್ರ ಸರ್ಕಾರ ಪ್ರಾರಂಭದಲ್ಲಿ ಹೊರ ದೇಶದಿಂದ ಬಂದವರನ್ನು ತಪಾಸಣೆಗೆ ಒಳಪಡಿಸಿ ಮುಂಜಾಗ್ರತೆ ವಹಿಸಿದ್ದರೆ ದೇಶದಲ್ಲಿ ಇಷ್ಟೊಂದು ವ್ಯಾಪಕವಾಗಿ ಕರೊನಾ ಹರಡುತ್ತಿರಲಿಲ್ಲ. ಅಲ್ಲದೆ ಆರ್ಥಿಕ ವ್ಯವಸ್ಥೆ ಮೇಲೆ ಯಾವುದೇ ಪರಿಣಾಮ ಬೀರುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಇಂತಹ ಸಮಯದಲ್ಲಿ ಕಾಂಗ್ರೆಸ್ ಪಕ್ಷ ರೋಗ ಸರಪಳಿಗೆ ಕಡಿವಾಣ ಹಾಕಲು ಆರೋಗ್ಯಹಸ್ತ ಕಾರ್ಯಕ್ರಮದ ಮೂಲಕ ರಾಜ್ಯಾದ್ಯಂತ 15 ಸಾವಿರ ಕರೊನಾ ಸೇನಾನಿಗಳನ್ನು ನೇಮಿಸಿ, 6 ಕೋಟಿ ರೂ. ವೆಚ್ಚದಲ್ಲಿ 7,800 ಆರೋಗ್ಯ ಹಸ್ತದ ಕಿಟ್‌ಗಳನ್ನು ವಿತರಿಸಿದೆ ಎಂದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಬಿ.ಸಿ. ಪಾರ್ವತಮ್ಮ, ಬ್ಲಾಕ್ ಅಧ್ಯಕ್ಷ್ಷರಾದ ಎಂ.ಡಿ.ವಿಜಯ್‌ದೇವ್, ವಿ.ಎಚ್.ರಾಜು, ಗಂಗಾಧರ್, ಕೃಷ್ಣಮೂರ್ತಿ, ವೀರೇಗೌಡ, ಮುಖಂಡರಾದ ಶರತ್‌ಚಂದ್ರ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಮತ್ತಿತರರು ಇದ್ದರು.

    ಆರೋಗ್ಯಹಸ್ತ – ರಾಮನಗರ ಮೊದಲು: 224 ವಿಧಾನಸಭಾ ಕ್ಷೇತ್ರಗಳ ಪ್ರತಿ ಗ್ರಾಪಂಗೆ ಇಬ್ಬರು ಕಾಂಗ್ರೆಸ್ ಕರೊನಾ ಸೇನಾನಿಗಳನ್ನು ಆಯ್ಕೆ ಮಾಡಿ ತರಬೇತಿ ತಪಾಸಣೆಯಲ್ಲಿ ತೊಡಗಿದ್ದಾರೆ. ಈ ಕಾರ್ಯಕ್ಕೆ ಪಕ್ಷದ ಶಾಸಕರು, ಮಾಜಿ ಮುಖಂಡರು ದೇಣಿಗೆ ನೀಡಿದ್ದಾರೆ. ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರೋಗ್ಯಹಸ್ತ ಕಾರ್ಯಕ್ರಮ ಯಶಸ್ಸಿನಲ್ಲಿ ರಾಜ್ಯದಲ್ಲಿಯೇ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ಶೇ.30 ತಪಾಸಣೆ ಕಾರ್ಯ ಮುಗಿದಿದೆ. ಬಾಕಿ ಕಾರ್ಯ ಇಪ್ಪತ್ತು ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಧ್ರುವನಾರಾಯಣ್ ತಿಳಿಸಿದರು.

    ಕೇಂದ್ರ ಸರ್ಕಾರಕ್ಕೆ ಅತೀ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳ ಪೈಕಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಜಿಎಸ್‌ಟಿಯಲ್ಲಿ ರಾಜ್ಯದ ಪಾಲು 13.672 ಕೋಟಿಯಷ್ಟಿದೆ. ಇದನ್ನು ನೀಡದ ಪರಿಣಾಮ ರಾಜ್ಯ ಸರ್ಕಾರ 3.68 ಲಕ್ಷ ಕೋಟಿ ರೂ. ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕಿದೆ ಎಂದರು.

    ಕಾಯ್ದೆ, ಮಸೂದೆಗಳನ್ನು ಅಂಗೀಕರಿಸುವ ಮುನ್ನ ರಾಜಕೀಯ ಪಕ್ಷಗಳು, ರೈತಪರ ಸಂಘಟನೆಗಳ ಜತೆ ಚರ್ಚೆ ನಡೆಸದೆ ಏಕಾಏಕಿ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿರುವುದು ದುರಂತ. ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಸದನದಲ್ಲಿ ಮತ್ತು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಇದನ್ನು ಖಂಡಿಸಿ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಿ ರೈತರ ಹಿತ ಕಾಯಲಾಗುವುದು.
    ಧ್ರುವನಾರಾಯಣ್ ಅಧ್ಯಕ್ಷರು, ಕಾಂಗ್ರೆಸ್ ಆರೋಗ್ಯ ಹಸ್ತ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts