More

    ಕೌಶಲಾಭಿವೃದ್ಧಿಗೆ ಬ್ರಾಹ್ಮಣರು ಆದ್ಯತೆ ನೀಡಲಿ ; ಮಾಜಿ ಸಚಿವ ಆರ್.ವಿ.ದೇಶಪಾಂಡೆ ಸಲಹೆ

    ತುಮಕೂರು: ಬ್ರಾಹ್ಮಣ ಜನಾಂಗವು ತಲೆತಲಾಂತರಗಳಿಂದಲೂ ಸ್ವಾವಲಂಬಿ ಜೀವನ ನಡೆಸಿದ್ದು, ಇಡೀ ಹಿಂದು ಸಮಾಜಕ್ಕೆ ಹಾಗೂ ದೇಶಕ್ಕೆ ಮಾರ್ಗದರ್ಶನ ನೀಡುವ ಸಮುದಾಯವೆನಿಸಿದೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

    ನಗರದ ಜಯನಗರ ಬಡಾವಣೆಯ ವಿಪ್ರ ಭವನದಲ್ಲಿ ಜಿಲ್ಲಾ ಬ್ರಾಹ್ಮಣ ಸಭಾ ವತಿಯಿಂದ ಭಾನುವಾರ ಆಯೋಜಿಸಿದ್ದ ದ್ವಿಜ ಬಿಸಿನೆಸ್ ಫೋರಂ ಉದ್ಘಾಟಿಸಿ ಮಾತನಾಡಿದ ಅವರು, ಬ್ರಾಹ್ಮಣರು ಎಂದಿಗೂ ಸಮಾಜಕ್ಕೆ ಪೆಟ್ಟು ಬೀಳುವುದನ್ನು ಬಯಸುವುದಿಲ್ಲ ಎಂದರು.
    ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ ಅನಿವಾರ್ಯವಾಗಿದೆ. ಕೌಶಲವಿದ್ದಲ್ಲಿ ಯಶಸ್ಸು ಸಾಧಿಸಬಹುದು. ಹಾಗಾಗಿ, ಬ್ರಾಹ್ಮಣ ಸಮುದಾಯ ಕೌಶಲಾಭಿವೃದ್ಧಿಗೆ ಗಮನ ನೀಡಬೇಕು. ಬ್ರಾಹ್ಮಣ ಸಂಘಟನೆಗಳು ಇದರತ್ತ ವಿಶೇಷ ಒತ್ತು ಕೊಡಬೇಕು. ಪ್ರಸ್ತುತ ಬೃಹತ್ ಕೈಗಾರಿಕೆಗಳಿಗಿಂತ ಸಣ್ಣ ಸಣ್ಣ ಕೈಗಾರಿಕೆಗಳೇ ಹೆಚ್ಚು ಪರಿಣಾಮಕಾರಿ. ಸಣ್ಣ ಕೈಗಾರಿಕೆ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸ್ವಾವಲಂಬಿಗಳಾಗಬಹುದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳನ್ನೂ ಸೃಷ್ಟಿಸಬಹುದು. ಈ ನಿಟ್ಟಿನಲ್ಲಿ ನಮ್ಮ ಸಮಾಜದ ಯುವಕರು ಗಮನಹರಿಸಬೇಕು ಎಂದು ಸಲಹೆಯಿತ್ತರು.

    ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಿದಾನಂದಮೂರ್ತಿ ಮಾತನಾಡಿ, ಬ್ರಾಹ್ಮಣರು ಆರ್ಥಿಕವಾಗಿ ಸದೃಢರಾಗಬೇಕು. ಸರ್ಕಾರದ ಹಲವಾರು ಸವಲತ್ತು ಹಾಗೂ ಯೋಜನೆಗಳನ್ನು ಪಡೆದುಕೊಳ್ಳಲು ಎಲ್ಲ ಬ್ರಾಹ್ಮಣರು ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪತ್ರ ಪಡೆಯಬೇಕು. ಸರ್ಕಾರದ ಬಳಿ ನಮ್ಮ ಜನಸಂಖ್ಯೆಯ ಅಂಕಿ-ಅಂಶ ಇಲ್ಲ ಎಂದರು.

    ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಎನ್.ಆರ್.ನಾಗರಾಜರಾವ್ ಅಧ್ಯಕ್ಷತೆ ವಹಿಸಿದ್ದರು. ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ಸ್ ಮಾಜಿ ಅಧ್ಯಕ್ಷ ಅಸಗೋಡು ಜಯಸಿಂಹ, ಬ್ರಾಹ್ಮಣ ಮಂಡಳಿ ನಿರ್ದೇಶಕ ರಂಗವಿಠಲ, ಪಾಲಿಕೆ ಸದಸ್ಯ ಸಿ.ಎನ್. ರಮೇಶ್, ಕೈಗಾರಿಕೋದ್ಯಮಿ ಎಚ್.ಜಿ.ಚಂದ್ರಶೇಖರ್, ಯು.ಸುರೇಶ್ ಹೊಳ್ಳ, ಹೊಸಪುರ ಇಂಡಸ್ಟ್ರಿಯಲ್ ಏರಿಯಾ ಅಧ್ಯಕ್ಷ ಶಿವಶಂಕರ ರಮಣ, ದ್ವಿಜ ಬಿಸಿನೆಸ್ ಫೋರಂ ಕಾರ್ಯದರ್ಶಿ ಡಾ.ಹರೀಶ್ ಹಿರಿಯಣ್ಣ, ಉಪಾಧ್ಯಕ್ಷ ಜಿ.ವಿ.ಶ್ರೆನಿವಾಸ್, ಖಜಾಂಚಿ ಭಾಸ್ಕರ್ ಉಪಸ್ಥಿತರಿದ್ದರು.

    ಜಾತಿಭೇದ ಮಾಡಿದ್ದರೆ ರಾಜಕೀಯದಲ್ಲಿ ಇರಲಾಗುತ್ತಿರಲಿಲ್ಲ: ಬ್ರಾಹ್ಮಣರು ಎಂದಿಗೂ ಜಾತಿಭೇದ ಮಾಡಿಲ್ಲ. ನಾನು 8 ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದೇನೆ. ನನ್ನ ಕ್ಷೇತ್ರದಲ್ಲಿ ಇರುವುದು ಕೇವಲ ಒಂದು ಪರ್ಸೆಂಟ್ ಬ್ರಾಹ್ಮಣರು ಅಷ್ಟೇ. ನಾವು ಜಾತಿಭೇದ ಮಾಡಿ ಬೇರೆಯವರನ್ನು ಕೀಳಾಗಿ ಕಂಡಿದ್ದರೆ ನಾನು ಈವರೆಗೂ ರಾಜಕೀಯದಲ್ಲಿ ಇರಲಾಗುತ್ತಿರಲಿಲ್ಲ ಎಂದು ಆರ್.ವಿ.ದೇಶಪಾಂಡೆ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts