More

    ಸಾಮಯಿಕ: ದೇಗುಲಗಳ ಬೀಡು, ಅರಮನೆ ಸೆರೆಮನೆಗಳ ನಾಡು

    ಸಾಮಯಿಕ: ದೇಗುಲಗಳ ಬೀಡು, ಅರಮನೆ ಸೆರೆಮನೆಗಳ ನಾಡುಭಾರತದಲ್ಲಿ ಪ್ರವಾಸೋದ್ಯಮಕ್ಕೆ ಇನ್ನೂ ಸಿಗಬೇಕಾದಷ್ಟು ಪ್ರಾಮುಖ್ಯತೆ ಸಿಕ್ಕಿಲ್ಲ; ಆದರೆ ನಮ್ಮಲ್ಲಿ ಪ್ರವಾಸ ಮಾಡುವ ಜನರ ಸಂಖ್ಯೆ ಇತ್ತೀಚೆಗೆ ಗಮನಾರ್ಹವಾಗಿ ಜಾಸ್ತಿಯಾದಂತೆ ತೋರುತ್ತಿದೆ. ಜಗತ್ತಿನ ಯಾವ ಭಾಗಕ್ಕೆ ಹೋದರೂ ಅಲ್ಲಿಯ ಪ್ರವಾಸಿಗರಲ್ಲಿ ಭಾರತೀಯರ ಕಲರವ ಕೇಳಿಸುತ್ತದೆ. ಕನ್ನಡಿಗರಲ್ಲಿಯೂ ಜಗತ್ತು ಸುತ್ತುವ ಹಂಬಲ ಹೆಚ್ಚು ಕಾಣಿಸುತ್ತಿದೆ; ಪ್ರವಾಸೋದ್ಯಮದಲ್ಲಿ ಕನ್ನಡಿಗರು ಹೆಚ್ಚು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ನಮ್ಮ ಗೆಳೆಯರ ಗುಂಪಿನಲ್ಲಿಯೇ ಇಂಥದೊಂದು ಸಂಸ್ಥೆ ಹೊಸದಾಗಿ ಹುಟ್ಟಿಕೊಂಡಿದೆ. ಬಹುಮಟ್ಟಿಗೆ ಎಲ್ಲರೂ ಪರಿಚಿತರೇ ಆದುದರಿಂದ ಪ್ರವಾಸದಲ್ಲಿ ಕೌಟುಂಬಿಕ ಪರಿಸರ ರೂಪುಗೊಂಡು ಆಪ್ತ ವಾತಾವರಣ ಸೃಷ್ಟಿಯಾಗಿತ್ತು. ನಮ್ಮವರು ಎಂಬ ಭಾವವೇ ಎದುರಾಗುವ ಸಣ್ಣಪುಟ್ಟ ತೊಂದರೆಗಳನ್ನೂ ಸಹನೀಯವಾಗಿಸಿಬಿಡುತ್ತದೆ. ನಮ್ಮ ಇತ್ತೀಚಿನ ಕಾಂಬೋಡಿಯ ಪ್ರವಾಸ ಆ ಬಗೆಯದು. ಪ್ರವಾಸದಲ್ಲಿದ್ದವರೆಲ್ಲ ಬಹುಪಾಲು ಹಿರಿಯರಾದರೂ ತರುಣ ಗೆಳೆಯರು ಪ್ರವಾಸದ ಹೊಣೆ ಹೊತ್ತಿದ್ದರಿಂದ ವ್ಯವಸ್ಥೆ ಅಚ್ಚುಕಟ್ಟಾಗಿತ್ತು; ಕರೊನಾದ ಭಯವಿದ್ದರೂ ಜೊತೆಯಲ್ಲಿ ಸಾಕಷ್ಟು ವೈದ್ಯರಿದ್ದುದರಿಂದ ಧೈರ್ಯವಿತ್ತು; ಮುನ್ನೆಚ್ಚರಿಕೆಯ ಕ್ರಮವೂ ಸಾಕಷ್ಟಿತ್ತು. ಎಲ್ಲರೂ ಮುಸುಕುಧಾರಿಗಳಾಗಿ ಪ್ರವಾಸ ಮಾಡಿದೆವು.

    ಭಾರತದ ದಟ್ಟ ಪ್ರಭಾವಕ್ಕೆ ಒಳಗಾಗಿದ್ದ ನಾಡು ಎಂಬ ಕಾರಣದಿಂದ ನನಗೆ ಕಾಂಬೋಡಿಯ ಬಗ್ಗೆ ಕುತೂಹಲವಿತ್ತು. ನಮಗೆ ಸಿಗುವ ಶಾಸನಗಳ ಆಧಾರದಂತೆ ಎಂಟನೇ ಶತಮಾನದ ವೇಳೆಗೇ ಭಾರತ ಹಾಗೂ ಕಾಂಬೋಡಿಯ ನಡುವೆ ವಾಣಿಜ್ಯ ಸಂಬಂಧವಿದ್ದು ಹಿಂದೂ ಧರ್ಮದ ಪ್ರಭಾವ ಅಲ್ಲಿ ಕಾಣಿಸಿಕೊಂಡಿತ್ತು. ಜಯವರ್ಮ, ಇಂದ್ರವರ್ಮ, ಯಶೋವರ್ಮ, ಹರ್ಷವರ್ಮ, ರಾಜೇಂದ್ರವರ್ಮ ಮೊದಲಾದ ಹಿಂದೂ ಧರ್ಮವನ್ನು ಅನುಸರಿಸಿದ ರಾಜರ ಆಳ್ವಿಕೆ ಅಲ್ಲಿತ್ತು. ಆ ಕಾಲದಲ್ಲಿಯೇ ಒಂದು ಸಾವಿರಕ್ಕೂ ಹೆಚ್ಚು ಹಿಂದೂ ದೇವಾಲಯಗಳು ಅಲ್ಲಿ ನಿರ್ಮಾಣಗೊಂಡವು. ಎರಡನೇ ಸೂರ್ಯವರ್ಮನ ಕಾಲದಲ್ಲಿ ಈ ಸಾಮ್ರಾಜ್ಯ ತನ್ನ ಔನ್ನತ್ಯವನ್ನು ಕಂಡಿತು. ಈತನಿಂದಲೇ ಜಗತ್ಪ್ರಸಿದ್ಧವಾದ ಆಂಕರ್ ವಾಟ್ ದೇವಸ್ಥಾನ ಸಮುಚ್ಚಯ ನಿರ್ಮಾಣಗೊಂಡದ್ದು. ಸುಮಾರು 400 ಎಕರೆ ವಿಸ್ತೀರ್ಣದಲ್ಲಿ ರೂಪುಗೊಂಡಿರುವ ಈ ದೇವಾಲಯ ಜಗತ್ತಿನಲ್ಲಿಯೇ ಅತ್ಯಂತ ವಿಸ್ತಾರವಾದ ದೇವಾಲಯ ಸ್ಮಾರಕವಾಗಿದೆ. ಮೂಲತಃ ಖೆಮರ್ ಸಾಮ್ರಾಜ್ಯದ ಅಧಿದೇವತೆ ವಿಷ್ಣುವಿಗಾಗಿ ರೂಪುಗೊಂಡ ಈ ದೇವಾಲಯ 12ನೇ ಶತಮಾನದ ವೇಳೆಗೆ ಬೌದ್ಧ ಧರ್ಮದ ಪ್ರಭಾವಕ್ಕೊಳಗಾಗಿ ಬುದ್ಧ ಸ್ಮಾರಕವಾಗಿ ರೂಪಾಂತರಗೊಂಡಿತು. ಏಳನೇ ಜಯವರ್ಮ ಬುದ್ಧನ ನಿಷ್ಠಾವಂತ ಅನುಯಾಯಿಯಾಗಿದ್ದು ಕಾಂಬೋಡಿಯಾದಲ್ಲಿ ಬೌದ್ಧಧರ್ಮ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಲು ಸಾಕಷ್ಟು ಶ್ರಮಿಸಿದ. ಆತ ಆಂಕರ್ ವಾಟ್ ಹತ್ತಿರದಲ್ಲಿಯೇ ಮತ್ತೊಂದು ಬೃಹತ್ ಬುದ್ಧ ದೇವಾಲಯವನ್ನೂ ಕಟ್ಟಿಸಿದ್ದಾನೆ.

    12 ನೇ ಶತಮಾನ ಜಗತ್ತಿನಲ್ಲಿ ಅನೇಕ ಪಲ್ಲಟಗಳಿಗೆ ಕಾರಣವಾದ ಕಾಲಘಟ್ಟವೆಂಬಂತೆ ತೋರುತ್ತದೆ. ಕರ್ನಾಟಕದಲ್ಲಿಯೂ ಆ ಕಾಲದಲ್ಲಿಯೇ ನಾವು ಕ್ರಾಂತಿಕಾರಕ ಬದಲಾವಣೆ ಕಂಡಿದ್ದು. ಕಾಂಬೋಡಿಯಾ ಬದುಕಿನಲ್ಲಿಯೂ 12ನೇ ಶತಮಾನ ಮುಖ್ಯವಾದದ್ದು. ಹಿಂದೂ ಧರ್ಮದ ಪ್ರಭಾವ ಕಣ್ಮರೆಯಾಗಿ ಬೌದ್ಧಧರ್ಮ ತನ್ನ ಪ್ರಭಾವವನ್ನು ಸ್ಥಾಪಿಸಿತು. ಈಗ ಅಲ್ಲಿ ಪ್ರಧಾನವಾಗಿ ಮಹಾಯಾನ ಪಂಥಕ್ಕೆ ಸೇರಿದ ಬೌದ್ಧಧರ್ವಿುಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

    ಆಂಕರ್​ವಾಟ್ ದೇವಾಲಯ ಸಮುಚ್ಚಯ ಮನುಷ್ಯನ ಸಾಹಸ ಪ್ರವೃತ್ತಿಗೆ, ಮಹತ್ವಾಕಾಂಕ್ಷೆಯ ಕನಸಿಗೆ, ಕಲಾತ್ಮಕ ಕೌಶಲಕ್ಕೆ ಹಾಗೂ ಧಾರ್ವಿುಕ ಶ್ರದ್ಧೆಗೆ ಸಂಕೇತದಂತಿದೆ. ಅದರ ವಿಸ್ತಾರ, ವೈಭವ ಬೆರಗು ಮೂಡಿಸುತ್ತದೆ. ಆದರೆ ಈಗ ಅದು ಗತಕಾಲದ ವೈಭವವಾಗಿ ನಮ್ಮ ಹಂಪೆಯ ನೆನಪು ತರುತ್ತದೆ. ಯಾವುದೇ ಸಿದ್ಧಾಂತವಾಗಲೀ, ಧರ್ಮವಾಗಲೀ, ಪಕ್ಷವಾಗಲೀ ಹಿಂದಿನದನ್ನು ನಿರಾಕರಿಸಿ ವಿಕೃತಗೊಳಿಸದೆ ತನ್ನನ್ನು ಸ್ಥಾಪಿಸಿಕೊಳ್ಳಲಾಗದು ಎಂಬುದನ್ನು ಇದು ಸಾಬೀತುಪಡಿಸುತ್ತದೆ.

    ನನಗೆ ಅಲ್ಲಿಯ ಕಲಾಕೌಶಲವನ್ನು ನೋಡುವಾಗ ಗಮನ ಸೆಳೆದ ಸಂಗತಿಯೆಂದರೆ ವಿಷ್ಣು ದೇವಾಲಯದ ಕೆತ್ತನೆಯಲ್ಲಿ ರಾಮಾಯಣದ ವಿವರಗಳು ಕಾಣಿಸಿದರೆ, ಬುದ್ಧ ದೇವಾಲಯದ ಪ್ರಾಂಗಣದಲ್ಲಿ ದಿನನಿತ್ಯದ ಸಾಮಾನ್ಯ ಜನರ ಬದುಕಿನ ವಿವರಗಳು ಕೆತ್ತಲ್ಪಟ್ಟಿದ್ದವು. ಎರಡೂ ಕಡೆ ಶೌರ್ಯಕ್ಕೆ ಪ್ರಾಧಾನ್ಯತೆ ಇತ್ತು. ರಾಜನನ್ನು ದೇವರಂತೆ ಕಾಣಿಸುವ ಕ್ರಮವೂ ಅಲ್ಲಿತ್ತು.

    ಈ ದೇವಾಲಯಗಳಲ್ಲಿ ಕಂಡ ಮತ್ತೊಂದು ವಿಶೇಷವೆಂದರೆ ಅಲ್ಲಿದ್ದ ಗ್ರಂಥಾಲಯಗಳ ಅವಶೇಷಗಳು. ಆಂಕರ್ ವಾಟ್​ನಲ್ಲಿ ಆರು ಗ್ರಂಥಾಲಯಗಳಿದ್ದವೆಂಬ ಮಾಹಿತಿಯಿದೆ. ಅಂದರೆ ದೇವಾಲಯಗಳು ಧಾರ್ವಿುಕ ಶ್ರದ್ಧಾಕೇಂದ್ರಗಳು ಮಾತ್ರವಲ್ಲದೆ, ಸಾಂಸ್ಕೃತಿಕ ಕೇಂದ್ರಗಳೂ ಆಗಿದ್ದವೆಂಬುದು ಗಮನಿಸಬೇಕಾದ ಸಂಗತಿ. ನಾನು ಕಲ್ಬುರ್ಗಿ ಬಳಿಯ ಗಾಣಗಾಪುರಕ್ಕೆ ಹೋಗಿದ್ದಾಗಲೂ ಅಲ್ಲಿಯ ಔದುಂಬರ ವೃಕ್ಷದ ಆವರಣದಲ್ಲಿ ಆಸಕ್ತರು ಕುಳಿತು ಓದಲು ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿಗೆ ಬಂದವರು ಆ ಆವರಣದಲ್ಲಿ ಕುಳಿತು ಒಂದಿಷ್ಟು ಪುಟ ಓದಿ ಹೋಗುವುದು ರೂಢಿ. ಒಂದು ಧಾರ್ವಿುಕ ಕೇಂದ್ರ ಹೀಗೆ ಓದುವ ಸಂಸ್ಕೃತಿಯನ್ನು ತನ್ನ ವಿನ್ಯಾಸದಲ್ಲಿಯೇ ಒಳಗೊಂಡಿದೆಯೆಂಬುದು ನಾವಿಂದು ಗಮನಿಸಬೇಕಾದ ಸಂಗತಿ. ಈಗ ನಮ್ಮ ದೇವಾಲಯಗಳು ಏನಾಗಿವೆ?

    ಕಾಂಬೋಡಿಯಾದಲ್ಲಿ ಪಾರ್ಲಿಮೆಂಟರಿ ಪದ್ಧತಿಯಿದ್ದರೂ, ಪ್ರಧಾನಮಂತ್ರಿಯೇ ಪ್ರಭಾವಿಯಾದರೂ ‘ರಾಜ’ನಿದ್ದಾನೆ. ಆತನಿಗೆ ‘ಅರಮನೆ’ಯೂ ಇದೆ. ಯಥಾಪ್ರಕಾರ ಅದು ವೈಭವಯುತವಾಗಿಯೇ ಇದೆ. ಈಗ ಅದು ಪ್ರವಾಸಿತಾಣ. ಅದರ ಒಂದು ಭಾಗದಲ್ಲಿ ರಾಜರ ಖಾಸಗಿ ನಿವಾಸವಿದೆ. ಅಲ್ಲಿ ಈಗಿನ ರಾಜ ನರೊಡೊಮ್ ಸಿಹಮೊನಿ ಇದ್ದಾರೆ. ಅವರು ಅವಿವಾಹಿತ. ತಾಯಿ ಇದ್ದಾರೆ. ಪ್ರಧಾನಿ ಹುನ್​ಸೇನ್ ಅತ್ಯಂತ ಪ್ರಭಾವಿ. ನಮ್ಮ ಮೈಸೂರು ಅರಮನೆ ನೋಡಿದವರಿಗೆ ಅದೇನೂ ವಿಶೇಷವೆನ್ನಿಸುವುದಿಲ್ಲ. ರಾಜಧಾನಿ ನಾಮ್ೆನ್​ನಲ್ಲಿರುವ ಈ ಅರಮನೆ 19ನೇ ಶತಮಾನದಲ್ಲಿ ಕಟ್ಟಿರುವಂಥದು. ಇಲ್ಲಿನ ಮುಖ್ಯ ಆಕರ್ಷಣೆಗಳಲ್ಲೊಂದು ‘ಸಿಲ್ವರ್ ಪಗೋಡ.’ ನೆಲಹಾಸು ಬೆಳ್ಳಿಯದಾದ್ದರಿಂದ ಅದಕ್ಕೆ ಈ ಹೆಸರು. ಇಲ್ಲಿರುವ ಎಮರಾಲ್ಡ್ ಬುದ್ಧ ವಿಶೇಷವಾಗಿ ಗಮನ ಸೆಳೆಯುತ್ತದೆ. ಇಲ್ಲಿ 90 ಕಿಲೋಗ್ರಾಂ ತೂಕದ ಚಿನ್ನದ ಬುದ್ಧನ ವಿಗ್ರಹವಿದೆ. ಅದು ಸುಮಾರು 9600 ವಜ್ರದ ಹರಳುಗಳಿಂದ ಅಲಂಕೃತವಾಗಿದೆ. ಬೆಳ್ಳಿ, ಚಿನ್ನ, ವಜ್ರ, ಎಮರಾಲ್ಡ್ – ಇವುಗಳಿಗೂ ಬುದ್ಧನಿಗೂ ಎಲ್ಲಿಂದೆಲ್ಲಿಯ ಸಂಬಂಧ?

    ಅದೊಂದು ಶಾಲೆ. ಆದರೆ ಅದನ್ನು ಖೆಮರೀಜ್ ಆಡಳಿತದ ಪೊಲ್​ಪೊಟ್ ನಾಯಕತ್ವದ ಸೇನೆ ಸೆರೆಮನೆಯಾಗಿ ರೂಪಾಂತರಿಸಿ ಅನೇಕರನ್ನು ಹಿಂಸಿಸಿ ಸಾವಿನ ಕೂಪಕ್ಕೆ ತಳ್ಳಿತು. ಆ ಭಯಾನಕ ಅನುಭವವನ್ನು ನೆನಪಿಸುವ ಸಂಗ್ರಹಾಲಯವೇ ಸ್ಲೆಂಗ್ ಪ್ರಿಸಂ ಮ್ಯೂಸಿಯಂ. 1960ರ ಸಮಯದಲ್ಲಿ ವ್ಯವಸ್ಥೆಯ ವಿರುದ್ಧ ಬಂಡೆದ್ದ ಗುಂಪೊಂದು ಅರಣ್ಯ ಪ್ರದೇಶಗಳಲ್ಲಿ ಸಂಘಟಿತರಾಗಿ ತಮ್ಮದೇ ಸೇನೆಯ ಪಡೆಯೊಂದನ್ನು ರೂಪಿಸಿಕೊಳ್ಳುತ್ತಾರೆ. ಪೊಲ್​ಪೊಟ್​ನ ನಾಯಕತ್ವದಲ್ಲಿ ಈ ಬಂಡುಕೋರರು 1970ರಲ್ಲಿ ಅಮೆರಿಕದ ಬೆಂಬಲ ಪಡೆದು ರಚಿತವಾಗಿದ್ದ ಸರ್ಕಾರದ ವಿರುದ್ಧ ಸಿಡಿದೆದ್ದು ಅಧಿಕಾರ ಪಡೆಯುತ್ತಾರೆ. ಇವರಿಗೆ ಚೀನಾದ ಕಮ್ಯುನಿಸ್ಟ್ ಪಾರ್ಟಿಯ ಬೆಂಬಲ ಇರುತ್ತದೆ. ಇವರು ಕಾಂಬೋಡಿಯವನ್ನು ‘ಡೆಮಾಕ್ರಟಿಕ್ ಕಾಂಪೂಚಿಯ’ ಎಂದು ಮರು ನಾಮಕರಣ ಮಾಡಿ ಸಮೂಹ ಕೃಷಿಯ ಮೂಲಕ ದೇಶವನ್ನು ರೈತಕೇಂದ್ರಿತ ಸ್ವಸಾಮರ್ಥ್ಯ ಸಂಪದ್ಭರಿತ ದೇಶವನ್ನಾಗಿ ಮಾಡುತ್ತೇವೆಂದು ಹೊಸ ಆಡಳಿತ ನೀತಿ ಜಾರಿಗೆ ತರುತ್ತಾರೆ. ಇದಕ್ಕೆ ಸಾಕಷ್ಟು ಪ್ರತಿರೋಧವೂ ವ್ಯಕ್ತವಾಗುತ್ತದೆ. ಈ ಅಂತಃಕಲಹದಲ್ಲಿ ಸಾವಿರಾರು ಜನರು ಸಾಯುತ್ತಾರೆ; ವಿರುದ್ಧ ಪಕ್ಷದ ಅನೇಕರನ್ನು ಬಂಧಿಸಿ ಹಿಂಸೆಗೆ ಗುರಿಪಡಿಸಿ ಸಾಯಿಸುತ್ತಾರೆ. ಶಾಲೆಗಳೆಲ್ಲವೂ ಸೆರೆಮನೆಗಳಾಗುತ್ತವೆ. ಆ ಸೆರೆಮನೆಯ ಚಹರೆ, ಹಿಂಸೆಯ ಸ್ವರೂಪ ಹೇಗಿತ್ತೆಂಬುದರ ದರ್ಶನವೇ ಈ ಮ್ಯೂಸಿಯಂ. 1975 -79ರ ಈ ಪ್ರಕ್ಷುಬ್ಧ ಸಮಯದಲ್ಲಿ ಹಸಿವು, ಅನಾರೋಗ್ಯವೂ ಅನೇಕರನ್ನು ಕಾಡುತ್ತದೆ. ಅದರಿಂದಲೂ ಸಾವು ಸಂಭವಿಸುತ್ತದೆ. ಸುಮಾರು ಹದಿನೇಳು ಲಕ್ಷಕ್ಕೂ ಹೆಚ್ಚು ಜನರು ಸಾವಿಗೀಡಾದರೆಂದು ಒಂದು ಅಂದಾಜು. ಅಧಿಕಾರಕ್ಕಾಗಿ ನಡೆಯುವ ಕಲಹ ಹೇಗೆ ಜನಸಾಮಾನ್ಯರನ್ನು ಸಂಕಟಕ್ಕೀಡು ಮಾಡುತ್ತದೆ ಎಂಬ ಚಾರಿತ್ರಿಕ ಸತ್ಯದರ್ಶನ ಇಲ್ಲಿ ಸಂವೇದನಾಶೀಲರಿಗಾಗುತ್ತದೆ. ಈ ರಾಜಕೀಯ ಕ್ರೂರ ಹತ್ಯೆಯಲ್ಲಿ ಬದುಕುಳಿದ ಇಬ್ಬರನ್ನು ನಾವು ಭೇಟಿಯಾಗಿದ್ದೆವು. ಅವರು ಸಂದರ್ಶಕರಿಗಾಗಿಯೇ ಅಲ್ಲಿ ಬಂದು ಕುಳಿತುಕೊಳ್ಳುತ್ತಾರೆ. ಒಂಬತ್ತು ವರ್ಷದ ಹುಡುಗನಾಗಿದ್ದಾಗ ಆ ಬೇನೆಯಲ್ಲಿ ಬೆಂದವನಿಗೆ ಈಗ ಐವತ್ತರ ಆಸುಪಾಸು. ಆದರೆ ನೆನಪಿನ ಹುಣ್ಣು ಮಾಸಿಲ್ಲ. ಮತ್ತೊಬ್ಬರಿಗೆ ಈಗ ಎಂಬತ್ತರ ಹತ್ತಿರ. ಇಬ್ಬರೂ ನಿರೂಪಿಸಿದ ಕಥನಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. ತಮ್ಮ ಸಂಕಟವನ್ನೂ ಈಗ ಅವರೇ ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ಅವರಿಗೆ ಈಗಲಾದರೂ ನೆಮ್ಮದಿಯ ಬದುಕು ಸಾಗಿಸಲು ಅಗತ್ಯ ಸವಲತ್ತು ಕಲ್ಪಿಸಿಲ್ಲವೇ? ನಮ್ಮ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ.

    ಕಾಂಬೋಡಿಯ ಇತಿಹಾಸದಲ್ಲಿ ಧರ್ಮ ಹಾಗೂ ರಾಜಕೀಯ ಅನೇಕ ಪಲ್ಲಟಗಳಿಗೆ ಕಾರಣವಾಗಿ ಅಲ್ಲಿಯ ಸಾಮಾಜಿಕ ರಚನೆಯನ್ನು ರೂಪಿಸಿದಂತೆ ತೋರುತ್ತದೆ. ಹಾಗೆ ನೋಡಿದರೆ ಕಾಂಬೋಡಿಯ ಕೃಷಿ ಪ್ರಧಾನ ನಾಡು. ಅಲ್ಲಿಯ ಹೆಚ್ಚು ಜನರು ಬೇಸಾಯಾಧಾರಿತ ಬದುಕಿನವರು. ಹೀಗಾಗಿ ಸಹಜವಾಗಿಯೇ ಬಡತನದಲ್ಲಿ ಸಿಲುಕಿದವರು. ರೈತರ ಸ್ಥಿತಿ ಎಲ್ಲ ಕಡೆಯೂ ಕಷ್ಟಕರವೇ! ಕಾಂಬೋಡಿಯಾದ ರಾಜಧಾನಿ ನಾಮ್ೆನ್​ನಿಂದ ಹೋಚಿಮಿನ್ ನಗರಕ್ಕೆ ನಾವು ಅಲ್ಲಿಯ ಸರ್ಕಾರಿ ಬಸ್ಸಿನಲ್ಲಿಯೇ ಪ್ರಯಾಣ ಮಾಡಿದೆವು. ಸುಮಾರು ಏಳೆಂಟು ಗಂಟೆಗಳ ಆ ಪ್ರಯಾಣದಲ್ಲಿ ಗ್ರಾಮೀಣ ಪ್ರದೇಶದ ದರ್ಶನವೂ ಆಯಿತು. ಅವೂ ನಮ್ಮ ಹಳ್ಳಿಗಳಂತೆಯೇ ಕಂಡು ಕಾಂಬೋಡಿಯ ಅಪರಿಚಿತ ಭಾವ ಮೂಡಿಸಲಿಲ್ಲ. ನಾವು ಹೋದಲ್ಲೆಲ್ಲ ದಕ್ಷಿಣ ಭಾರತದ ಹೋಟೆಲ್​ಗಳೂ ಇದ್ದುದರಿಂದ ಆಹಾರದಲ್ಲಿಯೂ ಅಂತಹ ವ್ಯತ್ಯಾಸ ಕಾಣಿಸಲಿಲ್ಲ. ಅಲ್ಲಿಯ ಹೋಟೆಲೊಂದರಲ್ಲಿ ಕನ್ನಡ ಮಾತನಾಡುತ್ತ ಉಪಚಾರ ಮಾಡಿ ಬಡಿಸಿದ್ದು ಆಪ್ತತೆಯ ಭಾವ ಮೂಡಿಸಿತ್ತು. ಭಾಷೆಯ ಶಕ್ತಿಯ ಅರಿವಾಯಿತು. ಭಾಷೆ ಭಾವಸಂಬಂಧ ಸೃಷ್ಟಿಸುವ ಸಾಧನ! ಕಾಂಬೋಡಿಯ ರೈತಪ್ರಧಾನ ದೇಶವಾದರೂ ಟೆಕ್ಸ್​ಟೈಲ್ ಹಾಗೂ ಟೂರಿಸಂ ಈಗ ಅಲ್ಲಿ ಪ್ರಮುಖ ಸಂಪನ್ಮೂಲ ಸಾಧನವಾಗಿವೆ. ಆದರೆ ಸಾಮಾನ್ಯ ಜನರ ಪಾಡು ಕಷ್ಟದಾಯಕವಾಗಿಯೇ ಇದೆ. ಆಡಳಿತ ವ್ಯವಹಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿರುವುದು ಜನಸಾಮಾನ್ಯರ ಬದುಕನ್ನು ಮತ್ತಷ್ಟು ಸಂಕಟಮಯವಾಗಿಸಿದೆ ಎಂಬುದು ಅಲ್ಲಿನ ಜನರನ್ನು ಮಾತನಾಡಿಸಿದಾಗ ತಿಳಿದುಬಂದ ಕಟುಸತ್ಯ. ಭ್ರಷ್ಟಾಚಾರದ ಅನುಭವ ನಮಗೂ ಕೊಂಚ ಮಟ್ಟಿಗೆ ಆಯಿತು. ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿ ಕಾಂಬೋಡಿಯ ಅತ್ಯಂತ ಕೆಳಗಿನ ಸ್ಥಿತಿಯಲ್ಲಿದೆ.

    ಕಾಂಬೋಡಿಯ ಪ್ರವಾಹದಂತಹ ಪ್ರಕೃತಿಯ ವಿಕೋಪಕ್ಕೆ ಆಗಾಗ ಗುರಿಯಾಗುವುದುಂಟು. ಅದಕ್ಕೆ ಅಲ್ಲಿಯ ರೈತಾಪಿ ಜನರು ಕಂಡುಕೊಂಡಿರುವ ಉಪಾಯವೂ ಗಮನಿಸುವಂಥದು. ನಾವು ಅಂಥದೊಂದು ಹಳ್ಳಿಗೆ ಹೋಗಿದ್ದೆವು. ಕೆಳಗೆ ಮರದ ಕಂಬಗಳನ್ನು ನೆಟ್ಟು ಎತ್ತರದ ಅಟ್ಟಣಿಗೆಗಳನ್ನು ನಿರ್ಮಿಸಿದ್ದಾರೆ. ಅದರ ಮೇಲೆ ಮನೆಗಳು. ಪ್ರವಾಹ ಬಂದಾಗ ನದಿಯ ಮಧ್ಯೆಯೇ ಮನೆಗಳು ಸುರಕ್ಷಿತವಾಗಿರುತ್ತವೆ. ದೋಣಿಯಲ್ಲಿ ಓಡಾಡುವ ವ್ಯವಸ್ಥೆ. ನಾವು ಹೋದಾಗ ಪ್ರವಾಹವಿರಲಿಲ್ಲ. ಅಟ್ಟಣಿಗೆಯ ಕೆಳಭಾಗವನ್ನು ಸಂಗ್ರಹ ಕೋಣೆಗಳಾಗಿ, ಅಂಗಡಿಗಳಾಗಿ ಮಾರ್ಪಡಿಸಿಕೊಂಡಿದ್ದರು. ಮಹಡಿ ಮನೆಯಲ್ಲಿ ವಾಸ. ಆ ಮನೆಗಳು ಅತ್ಯಾಧುನಿಕವಾಗಿ ಕಾಣುತ್ತಿದ್ದವು. ಈಗ ಅದು ಪ್ರವಾಸಿ ತಾಣವಾಗಿಯೂ ಗುರ್ತಿಸಲ್ಪಟ್ಟಿರುವುದರಿಂದ ಹಳ್ಳಿಯ ಜನರಿಗೆ ಉಪ ಉದ್ಯೋಗಗಳೂ ದೊರಕಿದಂತಾಗಿದೆ. ಇದು ದೇಸಿ ತಂತ್ರಜ್ಞಾನದ ಪರಿ! ಅಂತಹ ಅಟ್ಟಣಿಗೆಯ ಶಾಲೆಯೊಂದರಲ್ಲಿ ಮುದ್ದಾದ ಮಕ್ಕಳ ಕಲರವ ಕೇಳಿಸುತ್ತಿತ್ತು. ಗುಡಿಸಿಲ ಮಣ್ಣಿನ ಗೋಡೆಯ ಮೇಲೆ ಇದ್ದಲಿನಿಂದ ಬಿಡಿಸಿದ ನವಿಲಿನ ಚಿತ್ರ ನರ್ತಿಸುತ್ತಿತ್ತು.

    ಕಾಂಬೋಡಿಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತಿದ್ದಂತೆ ನಮಗೂ ಅವರಿಗೂ ಭಾವಸಂಬಂಧವಿರುವಂತೆ ತೋರಿತು. ಅವರ ಇತಿಹಾಸದ ಪುಟಗಳು ಕಣ್ಮುಂದೆ ಬಂದು ಮನಸ್ಸು ಆರ್ದ್ರವಾಯಿತು.

    (ಲೇಖಕರು ಖ್ಯಾತ ವಿಮರ್ಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts