More

    ನೆಲದ ಮೇಲೆ ಆಮೆ ವೇಗ; ನೀರಿನಲ್ಲಿ ಶರವೇಗ; ಅಚ್ಚರಿಗಳ ಆಗರ ಅನಾಕೊಂಡಾ!

    |ಸುರೇಶ್ ಮರಕಾಲ ಸಾಯ್ಬರಕಟ್ಟೆ.

    ಹಾವಿಗೂ ಹೆದರಿಕೆಗೂ ಅತೀ ಹತ್ತಿರದ ಸಂಬಂಧ. ಪೂರ್ಣಚಂದ್ರ ತೇಜಸ್ವಿಯವರು ʼಪರಿಸರದ ಕತೆಗಳುʼ ಪುಸ್ತಕದ ‘ಕಾಳಪ್ಪನ ಕೋಬ್ರ’ ಕತೆಯಲ್ಲಿ, ಮನುಷ್ಯನಿಗೆ ಹಾವಿನ ಹೆದರಿಕೆ ಎಂತಹ ಪರಿಸ್ಥಿತಿ ತರಬಲ್ಲದು ಎಂಬುದನ್ನು ಅತ್ಯಂತ ಮನೋಜ್ಞವಾಗಿ ಹಾಸ್ಯಮಿಶ್ರಿತ ಶೈಲಿಯಲ್ಲಿ ಬಿಂಬಿಸಿದ್ದಾರೆ. ಹಾವು- ಕೈಕಾಲುಗಳಿಲ್ಲದ ಪ್ರಾಣಿ- ತಪ್ಪಿಸಿಕೊಳ್ಳಲು ಬೇರೆ ಮಾರ್ಗವೇ ಇಲ್ಲದಿದ್ದಾಗ ಅಥವಾ ಏಕಾಏಕಿ ನೋವಾದಾಗ- ಮುಖ್ಯವಾಗಿ ತನ್ನ ಆತ್ಮ ರಕ್ಷಣೆಗೆ ಮಾತ್ರ ಕಚ್ಚುತ್ತದೆ. ಆದರೆ ಕಚ್ಚಿದ ನಂತರ- ವಿಷದ ಹಾವುಗಳಲ್ಲಿ- ಪರಿಣಾಮ ವಿಪರೀತ ಆಗುವುದರಿಂದ, ಎಲ್ಲ ಹಾವುಗಳನ್ನು ಜನರು ಯಮನ ಏಜೆಂಟ್‌ಗಳೆಂದೇ ಭಾವಿಸುತ್ತಾರೆ! ಹಾವು ಕಡಿಯಿತೆಂದರೆ, ಯಾವ ಹಾವದು ಎಂಬುದನ್ನೂ ಗಮನಿಸಲು ಹೋಗದೆ, ಒಂದೋ ಎಲ್ಲರೂ ಗಡಿಬಿಡಿ ಬಿದ್ದು, ಹಾವನ್ನೂ ಗಾಬರಿಗೊಳಿಸಿ ಓಡಿಸಿ ಬಿಡುತ್ತೇವೆ! ಇಲ್ಲವೇ, “ಇದರ ಮನೆ ಹಾಳಾಗ” ಎಂದು ʼಏಕ್ ಮಾರ್ ದೋ ತುಕಡಾʼ ಮಾಡಿ ಕೃತಾರ್ಥರಾಗುತ್ತೇವೆ! ಅನೇಕ ಸಂದರ್ಭಗಳಲ್ಲಿ ಹಾವಿನ ವಿಷಕ್ಕಿಂತ ಹಾವಿನ ಕಡಿತದ ಭಯದಿಂದ ಸಾಯುವ ಘಟನೆಗಳೇ ಅಧಿಕ! ʼಹಾವು-ಸಾವುʼ ಜೋಡಿ ಪದಗಳಾಗಿ ಬಿಟ್ಟಿರುವುದರಿಂದ ಹಾವೊಂದು ಕಾಣಿಸಿದ ತಕ್ಷಣ ಅದರ ಕತೆ ಮುಗಿಸಿದರೆ ಮಾತ್ರ ನಾವು ನೆಮ್ಮದಿಯ ಉಸಿರು ಬಿಡುವುದು! ಮನುಷ್ಯನ ಭಯಕ್ಕೆ ಸಿಕ್ಕಿ ಈ ರೀತಿ ಸಾಯುವ ಹಾವುಗಳಲ್ಲಿ ನಿರಪಾಯಕಾರಿ ಹಾವುಗಳೇ ಅಧಿಕ. ಯಾವ ಹಾವೂ ಮನುಷ್ಯನಷ್ಟು ವಿಷಕಾರಿಯಲ್ಲ ಎಂಬುದನ್ನು ನಾವು ಮರೆಯುತ್ತೇವೆ!

    ಅನಾಕೊಂಡಾ ಪ್ರಪಂಚದ ಅತ್ಯಂತ ದೊಡ್ಡ ಹಾವು! ಎಷ್ಟು ದೊಡ್ಡದೆಂದರೆ, ಅನಾಕೊಂಡಾಕ್ಕೆ ಅನಾಕೊಂಡಾವೇ ಸಾಟಿ! ಜೀವ ಜಗತ್ತಿನ ಕೌತುಕದ ಖಜಾನೆಯಾದ ಅಮೆಜಾ಼ನ್ ಕಾಡು ಮತ್ತು ಅದರ ಸುತ್ತಮುತ್ತಲ ಪ್ರದೇಶ ಈ ಹಾವಿನ ನೆಲೆವೀಡು! ಇಲಿಯನ್ನು ಅಟ್ಟಿಸಿಕೊಂಡು ಮನೆಯೊಳಗೆ ಬರುವ ಕೇರೆ ಹಾವನ್ನೇ ಉತ್ಪ್ರೇಕ್ಷೆ ಮಾಡಿ, ಐದು ಹೆಚ್.ಪಿ. ಪಂಪುಸೆಟ್ಟಿನ ಪೈಪನ್ನು ತೋರಿಸಿ, “ಇಷ್ಟು ದಪ್ಪವಿತ್ತು ಮಾರಾಯ್ರಾ” ಎನ್ನುವವರು, ಅನಾಕೊಂಡಾವನ್ನೇನಾದರೂ ನೋಡಿದರೆ, ರೈಲ್ವೆ ಸುರಂಗವನ್ನೇ ತೋರಿಸಿಯಾರು!! ಪ್ರಪಂಚದ ಈ ದೈತ್ಯ ಉರಗ ಇಪ್ಪತ್ತರಿಂದ ಮುವತ್ತು ಅಡಿಗಳವರೆಗೆ ಬೆಳೆಯುತ್ತದೆ, ಚೆನ್ನಾಗಿ ಬೆಳೆದ ಅನಾಕೊಂಡಾ ಮುನ್ನೂರು ಕೆ.ಜಿ.ಗಳವರೆಗೂ ತೂಗುತ್ತದೆ! 1940ರಲ್ಲಿ ಪೂರ್ವ ಕೊಲಂಬಿಯಾದಲ್ಲಿ ಹಿಡಿದ ಒಂದು ಅನಾಕೊಂಡಾದ ಉದ್ದ ಮೂವತ್ತೇಳು ಅಡಿಗಳು!! ಇದು ಉರಗ ವಂಶದಲ್ಲಿಯೇ ಅತ್ಯಂತ ಉದ್ದನೆಯ ಹಾವೆಂದು ಇಂದಿಗೂ ತನ್ನ ದಾಖಲೆಯನ್ನು ಉಳಿಸಿಕೊಂಡಿದೆ!

    ನೆಲದ ಮೇಲೆ ಆಮೆ ವೇಗ; ನೀರಿನಲ್ಲಿ ಶರವೇಗ; ಅಚ್ಚರಿಗಳ ಆಗರ ಅನಾಕೊಂಡಾ!

    ಅನಾಕೊಂಡಾ ಮೂಲತಃ ಹೆಬ್ಬಾವಿನ ಜತಿಗೆ ಸೇರಿದ್ದು, ವಿಷರಹಿತ ಹಾವು. ಹೆಬ್ಬಾವು ಕೂಡಾ ಅನಾಕೊಂಡಾದಷ್ಟೆ ಉದ್ದ ಬೆಳೆಯಬಲ್ಲದು. ಆದರೆ ಅನಾಕೊಂಡಾದ ಘನತೆ ಇರುವುದೇ ಅದರ ದಪ್ಪದಲ್ಲಿ. ಪ್ರಪಂಚದ ಯಾವ ಹಾವಿಗೂ ಅನಾಕೊಂಡಾದಷ್ಟು ದಪ್ಪವಾಗಿ ಭಾರವಾಗಲು ಸಾಧ್ಯವಿಲ್ಲ! ಅನಾಕೊಂಡಾಕ್ಕೂ ಹೆಬ್ಬಾವಿಗೂ ಇರುವ ಇನ್ನೊಂದು ಮೂಲ ವ್ಯತ್ಯಾಸವೆಂದರೆ ಅನಾಕೊಂಡಾ ಕಡುಹಸಿರು ಬಣ್ಣದಲ್ಲಿದ್ದು, ದೇಹದ ಸುತ್ತಲೂ ಕಡುಬಣ್ಣದ ಪಟ್ಟೆಗಳು ಇರುತ್ತವೆ. ಜೊತೆಗೆ ಅನಾಕೊಂಡಾ ಬಹುತೇಕ ವಾಸಿಸುವುದು ನೀರಿರುವ ಜೌಗು ಪ್ರದೇಶಗಳಲ್ಲಿ.

    ʼಅನಾಕೊಂಡಾ’ ಎಂಬ ಪದ ನಮಗೆ ದಕ್ಷಿಣ ಅಮೆರಿಕಾ ಹಾಗೂ ಅಮೆಜಾನ್ ಕಾಡುಗಳನ್ನು ನೆನಪಿಸುತ್ತದೆ. ಆದರೆ ಈ ಪದ ಮೂಲತಃ ಭಾರತ ಮೂಲದ ತಮಿಳು ಭಾಷೆಯಿಂದ ಹುಟ್ಟಿಕೊಂಡದ್ದು. ಈ ಪದವನ್ನು ಮೊತ್ತಮೊದಲು ಜಗತ್ತಿಗೆ ಪರಿಚಯಿಸಿದವರು 1768ರಲ್ಲಿ ಆರ್. ಎಡ್ವಿನ್ ಎಂಬುವವರು ಶ್ರೀಲಂಕಾದಲ್ಲಿ- ಅಲ್ಲಿನ ಸ್ಥಳೀಯ ಜನರು ಈ ಹಾವನ್ನು “ಆನೈಕೊಂದ್ರಾ/ಆನೈಕೊಲ್ರಾ” ಎಂದು ಉಚ್ಛರಿಸಿದ್ದನ್ನು ಕೇಳಿ. ತಮಿಳಿನಲ್ಲಿ ʼಆನೈಕೊಂದ್ರಾʼ ಅಥವಾ ʼಆನೈಕೊಲ್ರಾʼ ಎಂದರೆ ಆನೆಯನ್ನೇ ಕೊಲ್ಲಬಲ್ಲ ಹಾವು ಎಂದರ್ಥ. ಆನೈಕೊಲ್ರಾ ಮುಂದೆ ಅನಾಕೊಂಡಾವಾಗಿ ಅಪಭ್ರಂಶವಾಯ್ತು. ಬಹುಪಾಲು ಪ್ರಾಣಿ ಪಕ್ಷಿಗಳಲ್ಲಿ ಗಂಡು, ಹೆಣ್ಣಿಗಿಂತ ದೈಹಿಕವಾಗಿ ದೊಡ್ಡದು ಮತ್ತು ಪ್ರಬಲ. ಇದಕ್ಕೆ ಅಪವಾದ ಇಲ್ಲವೆಂದಲ್ಲ, ಅಮೆರಿಕಾದ ಅತ್ಯಂತ ವಿಷಪೂರಿತವಾದ ವಿಧವಾ ಜೇಡ, ಯೂರೋಪ್ನ ಗ್ಲೋ-ವರ್ಮ್, ಓರಿಯೆಂಟಲ್ ಜಿರಲೆ, ಭಾರತ ಹಾಗೂ ಶ್ರೀಲಂಕಾದ ನಕ್ಷತ್ರ ಆಮೆಗಳು, ಯೂರೋಪ್, ಆಫ್ರಿಕಾ, ಏಷ್ಯಾಗಳಲ್ಲಿ ಕಂಡು ಬರುವ ಡೊಂಗರು ಕಪ್ಪೆಗಳು, ಸಮುದ್ರ ಗಿಡುಗ, ಆಸ್ಟ್ರೇಲಿಯಾದ ಪ್ರಸಿದ್ಧ ಎಮು, ಉತ್ತರ ಆಸ್ಟ್ರೇಲಿಯಾದ ಮನುಷ್ಯನನ್ನೇ ತುಳಿದು ಕೊಲ್ಲಬಲ್ಲ ಹಾರಲಾರದ ಧಾಳಿಕೋರ ಪಕ್ಷಿ ಕ್ಯಾಸೋವರಿ ಮೊದಲಾದವುಗಳಲ್ಲಿ ಹೆಣ್ಣು ಗಂಡಿಗಿಂತ ದೊಡ್ಡದು ಮತ್ತು ಬಲಶಾಲಿ. ಅನಾಕೊಂಡಾ ಕೂಡಾ ಇದೇ ಜಾತಿಗೆ ಸೇರಿದ್ದು, ಎಂದರೆ ಇವುಗಳಲ್ಲಿ ಹೆಣ್ಣು ಅನಾಕೊಂಡಾ ಗಂಡಿಗಿಂತ ಗಾತ್ರದಲ್ಲಿ ದೊಡ್ಡದು ಮತ್ತು ಶಕ್ತಿಶಾಲಿ.

    ಅನಾಕೊಂಡಾ ಹೆಚ್ಚಾಗಿ ನೀರಿನಲ್ಲಿ ವಾಸಿಸಲು ಇಷ್ಟಪಡುತ್ತವೆ. ಅದರ ದಡೂತಿ ದೇಹವನ್ನು ನೆಲದಲ್ಲಿ ತೆವಳಿಸಿಕೊಂಡು ಹೊಗಲು ಅನಾಕೊಂಡಾಕ್ಕೆ ಬಹಳ ಕಷ್ಟ. ಹೀಗಾಗಿ ಅನಾಕೊಂಡಾದ್ದು ನೆಲದಲ್ಲಿ ಆಮೆಯ ವೇಗ! ಆದರೆ ನೀರಿನಲ್ಲಿ ಮಾತ್ರ ಶರವೇಗದ ಈಜುಗಾರ! ಸಿಕ್ಕ ಪ್ರಾಣಿಯನ್ನು- ಅದೆಷ್ಟೇ ದೊಡ್ಡದಿರಲಿ- ನೀರಿನೊಳಕ್ಕೆ ಎಳೆದು ಉಸಿರು ಕಟ್ಟಿಸಿ ತಿನ್ನುತ್ತದೆ. ನೆಲದ ಮೇಲೂ ತಿಳಿಯದೆ ಅನಾಕೊಂಡಾದ ವ್ಯೂಹದಲ್ಲಿ ಕಾಲಿಡುವ ಪ್ರಾಣಿಯನ್ನು ಕಣ್ಮುಚ್ಚಿ ತೆರೆಯುವುದರೊಳಗೆ ಬಿಡಿಸಲಾರದ ಸುರುಳಿಯೊಳಗೆ ಸುತ್ತಿಬಿಡುತ್ತದೆ. ಒಳಗೆ ಸಿಕ್ಕಿಕೊಂಡ ಪ್ರಾಣಿಯು ಎಷ್ಟೆಷ್ಟು ಮಿಸುಕಾಡುತ್ತದೊ, ಅನಾಕೊಂಡಾದ ಬಿಗಿತ ಅಷ್ಟೇ ಬಿಗಿಯಾಗುತ್ತದೆ! ಎಷ್ಟು ಬಿಗಿ ಎಂದರೆ, ಪ್ರಾಣಿಯ ಪಕ್ಕೆಲುಬುಗಳು ಪುಡಿಪುಡಿಯಾಗಿ ಹೃದಯ, ಶ್ವಾಸಕೋಶದೊಳಗೆ ನುಗ್ಗಿ, ಕೊನೆಗೆ ಪ್ರಾಣಿ ಉಸಿರುಗಟ್ಟಿ ಸಾಯುತ್ತದೆ! ಅನಾಕೊಂಡಾದ ದೇಹ ಎಷ್ಟೊಂದು ಅದ್ಭುತವಾದುದೆಂದರೆ ತನ್ನ ಸುರುಳಿಯೊಳಗೆ ಸಿಕ್ಕಿಬಿದ್ದ ಪ್ರಾಣಿಯ ಉಸಿರಾಟ, ಹೃದಯ ಬಡಿತ ಎಲ್ಲವೂ ಕಂಪನಗಳ ಮೂಲಕ ಅನಾಕೊಂಡಾದ ಮಿದುಳಿಗೆ ತಲುಪುತ್ತದೆ. ಯಾವಾಗ ಪ್ರಾಣಿಯ ಹೃದಯ ಬಡಿತ ನಿಂತಿತೊ, ಆಗ ಹಾವು ಸುರುಳಿಯೊಳಗಿರುವ ಪ್ರಾಣಿಯ ತಲೆಯನ್ನು ಹುಡುಕತೊಡಗುತ್ತದೆ; ಏಕೆಂದರೆ ಯಾವುದೇ ಪ್ರಾಣಿಯನ್ನಿರಲಿ, ತಲೆಯ ಮೂಲಕ ತಿನ್ನಲು ಆರಂಬಿಸಿದರೆ ಅವುಗಳ ಕಾಲುಗಳು ಬಾಯಿಗೆ ಅಡ್ಡ ಸಿಗದೆ ಸುಲಭವಾಗಿ ನುಂಗಬಹುದು! ಎಲ್ಲ ಹಾವುಗಳಂತೆ ಅನಾಕೊಂಡಾಕ್ಕೂ ಕೂಡಾ ದವಡೆಯ ಮೂಳೆಗಳು ಒಂದಕ್ಕೊಂದು ಸೇರಿಲ್ಲ. ಅಷ್ಟೊಂದು ತೆಳ್ಳಗಿನ ಕೇರೆ ಹಾವು, ನಾಗರ ಹಾವುಗಳೇ ಕೋಳಿ ಗೂಡಿಗೆ ನುಗ್ಗಿ ಕಾವಿಗೆ ಇಟ್ಟಿರುವ ಮೊಟ್ಟೆಯನ್ನು ಇಡಿಯಾಗಿ ನುಂಗಿ, ಕಿರಿಕಿರಿಯಾಗಿ ನಂತರ ಸಾಲುಸಾಲಾಗಿ ಒಂದೊಂದನ್ನೆ ಇಡಿಯಾಗಿ ವಾಂತಿ ಮಾಡುವುದನ್ನು ನೋಡಿರುತ್ತೇವೆ! ಅಷ್ಟು ಚಿಕ್ಕ ಹಾವುಗಳೇ ತಮ್ಮ ಬಾಯಿಯ ಮೂರು-ನಾಲ್ಕು ಪಟ್ಟು ದೊಡ್ಡದಿರುವ ಮೊಟ್ಟೆಗಳನ್ನು ಇಡಿಯಾಗಿ ನುಂಗುತ್ತವೆ ಎಂದರೆ, ರಾಕ್ಷಸ ಗಾತ್ರದ ಅನಾಕೊಂಡಾ ಏನೇನ್ನೆಲ್ಲ ನುಂಗಬಹುದು ಯೋಚಿಸಿ?! ಚೆನ್ನಾಗಿ ಬೆಳೆದ ಅನಾಕೊಂಡಾ ದೊಡ್ಡ ದೊಡ್ಡ ಮೀನುಗಳನ್ನು, ಆಮೆಗಳನ್ನು, ದೊಡ್ಡ ಹಂದಿಗಳನ್ನು, ಕೆಫೆಬರಾವನ್ನು (ದಕ್ಷಿಣ ಅಮೆರಿಕಾದ ಹೆಗ್ಗಣ ಜಾತಿಯ, ಆದರೆ ಕುರಿಯ ಮರಿಯಷ್ಟು ದೊಡ್ಡದಾಗಿ ಬೆಳೆಯುವ ಪ್ರಾಣಿ. ಇದರ ಮಾಂಸವೆಂದರೆ ಅಲ್ಲಿಯ ಮೂಲನಿವಾಸಿಗಳು ಪ್ರಾಣ ಬಿಡುತ್ತಾರೆ!), ಜಿಂಕೆಗಳನ್ನು, ಚಿರತೆಗಳನ್ನು ಇಡಿಯಾಗಿ ನುಂಗಬಲ್ಲದು! ಹೆಚ್ಚೇಕೆ, ಸುಮಾರು ಎಂಟುನೂರು ಕೆ.ಜಿ. ತೂಗುವ, ನಾಲ್ಕಡಿ ಎತ್ತರದ ನೀರಾನೆ-ಹಿಪೋಪೊಟಾಮಸ್ (ಸರಿಯಾದ ಹೆಸರು ʼನೀರು ಕುದುರೆʼ)ಯನ್ನು ನುಂಗಿ ಅರಗಿಸಿಕೊಳ್ಳಲಾಗದೆ, ಉಸಿರಾಡಲು ಕಷ್ಟವಾಗಿ ಇಡಿಯಾಗಿ ಹಾಗೇ ಬಾಯಿಯಿಂದ ಹೊರಗೆ ಕಕ್ಕಿದ ಮೈನವಿರೇಳಿಸುವ ವಿಡಿಯೋ ದೃಶ್ಯವನ್ನು ʼಯೂ-ಟ್ಯೂಬ್ʼನಲ್ಲಿ ನೋಡಿದ ಅನೇಕರು ಇಲ್ಲಿಯ ವಾಚಕರಲ್ಲೇ ಇರಬಹುದು! ಹಸಿವೆಯಾದಾಗ ಅನಾಕೊಂಡಾಕ್ಕೆ ತಿನ್ನಲು ಯಾವ ಪ್ರಾಣಿಯಾದರೂ ಆದೀತು. ಎದುರಾಳಿಯ ಗಾತ್ರ, ಶಕ್ತಿ-ಸಾಮರ್ಥ್ಯಗಳ ಬಗ್ಗೆ ಅದು ಎಂದೂ ಯೋಚಿಸುವುದಿಲ್ಲ!

    ನೆಲದ ಮೇಲೆ ಆಮೆ ವೇಗ; ನೀರಿನಲ್ಲಿ ಶರವೇಗ; ಅಚ್ಚರಿಗಳ ಆಗರ ಅನಾಕೊಂಡಾ!

    ಹೆಬ್ಬಾವಿನಂತೆ ಅನಾಕೊಂಡಾ ಕೂಡಾ ಆಹಾರವನ್ನು ಅಗಿಯದೆ, ಇಡಿಯಾಗಿ ನುಂಗುವ ಕಾರಣ ಹೊಟ್ಟೆಯಲ್ಲಿ ಅದು ಜೀರ್ಣವಾಗುವುದು ಅತ್ಯಂತ ನಿಧಾನ. ಒಮ್ಮೆ ಆಹಾರವನ್ನು ನುಂಗಿದ ನಂತರ, ಅದು ಹೊಟ್ಟೆಯಲ್ಲಿ ಕೊಳೆಯುವ ಮೊದಲು ಪಚನವಾಗಲೇಬೇಕು. ಆದರೆ ಕೆಲವೊಮ್ಮೆ ದೊಡ್ಡ ದೊಡ್ಡ ಪ್ರಾಣಿಗಳನ್ನು ನುಂಗಿದ ಸಂದರ್ಭಗಳಲ್ಲಿ ಅವು ಹೊಟ್ಟೆಯಲ್ಲಿ ಜೀರ್ಣವಾಗುವ ಮೊದಲೆ ಕೊಳೆಯಲು ಆರಂಭಿಸುತ್ತವೆ! ಅಂತಹ ಸಂದರ್ಭಗಳಲ್ಲಿ, ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ನುಂಗಿದ ಆಹಾರವನ್ನು ಅನಾಕೊಂಡಾ ವಾಂತಿ ಮಾಡುತ್ತದೆ. ಒಮ್ಮೆ ಭರ್ಜರಿ ಊಟ ಆಯಿತೆಂದರೆ, ಅನಾಕೊಂಡಾ ನಂತೆ ವಾರಗಟ್ಟಲೆ, ಕೆಲವೊಮ್ಮೆ ತಿಂಗಳವರೆಗೆ ಆಹಾರವಿಲ್ಲದೆ ಆರಾಮವಾಗಿ ಬಿದ್ದಿರಬಲ್ಲದು! ಅಜಗರ ವೃತ್ತಿ ಎಂದು ಅದಕ್ಕೇ ಅಲ್ಲವೆ ಇದನ್ನು ಕರೆಯುವುದು ಮತ್ತೆ?!

    ಆಹಾರ ಬೇಟೆಯಾಡುವ ಕಾಲದಲ್ಲಿ ಅನಾಕೊಂಡಾ ತೋರಿಸುವ ತಾಳ್ಮೆ ನಮ್ಮ ಊಹೆಗೂ ಮೀರಿದ್ದು! ನೀರಿನಲ್ಲಿ ಮುಳುಗಿ ಕಣ್ಣು ಮತ್ತು ಮೂಗನ್ನು ಮಾತ್ರ ಬಿಟ್ಟುಕೊಂಡು, ನೀರು ಕುಡಿಯಲು ಬರುವ ಪ್ರಾಣಿಗಾಗಿ ವಾರಗಟ್ಟಲೆ ನಿಶ್ಪಂದವಾಗಿ, ನಿಶ್ಚಲವಾಗಿ ಮರದ ಕೊರಡಿನಂತೆ ಬಿದ್ದುಕೊಳ್ಳಬಲ್ಲದು! ನೀರು ಕುಡಿಯಲು ಬರುವ ಪ್ರಾಣಿಗಳ ಪ್ರತಿ ಚಲನವಲನಗಳನ್ನು ನೀರಿನಲ್ಲಿದ್ದುಕೊಂಡೇ ಸೂಕ್ಷ್ಮವಾಗಿ ಗಮನಿಸುತ್ತಾ, ಪ್ರಾಣಿಗಳಿಗೆ ಕಿಂಚಿತ್ತೂ ಸಂಶಯ ಬಾರದಂತೆ ದಿನಗಟ್ಟಲೆ, ಹೆಚ್ಚೇಕೆ ಸೂಕ್ಷ್ಮ ಪ್ರವೃತ್ತಿಯ ಬೇಟೆಯಾದರೆ ವಾರಗಟ್ಟಲೆ ಮಿಸುಕಾಡದೆ ಕಾಯುತ್ತದೆ! ನೀರು ಕುಡಿಯುವ ಪ್ರಾಣಿಗೆ ಅಲ್ಲೊಂದು ದೈತ್ಯ ದೇಹದ ಸಂಹಾರಿ ತನಗಾಗಿ ಕಾಯುತ್ತಾ ಬಿದ್ದುಕೊಂಡಿದೆ ಎಂಬ ವಿಚಾರದ ಲವಲೇಶವೂ ತಿಳಿಯದೆ ನೀರಿಗೆ ಇಳಿಯುತ್ತದೆ. ಸರಿಯಾಗಿ ತನ್ನ ಗುರಿಯ ವ್ಯಾಪ್ತಿಯೊಳಗೆ ಬರದ ಹೊರತು ಅನಾಕೊಂಡಾ ಯಾವ ಪ್ರಾಣಿಯ ಮೇಲೂ ಎರಗುವುದಿಲ್ಲ! ಯಾವಾಗ ಬೇಟೆ ತನ್ನ ಸರಹದ್ದಿನೊಳಗೆ ಕಾಲಿಟ್ಟಿತೋ, ತಗೊಳ್ಳಿ!, ಕಣ್ಮುಚ್ಚಿ ತೆರೆಯುವುದರೊಳಗೆ ನೀರಿನಿಂದ ಆಸ್ಪೋಟನೆಯೊಂದು ಹೊರ ಬಂದಿರುತ್ತದೆ. ರೆಪ್ಪೆ ಮಿಟುಕಿಸುವುದರೊಳಗೆ- ಒಂದೇ ನಿಮಿಷದ ಹಿಂದೆ ಅಲ್ಲೊಂದು ಪ್ರಾಣಿ ಇತ್ತು ಎಂಬ ಕುರುಹೂ ಇಲ್ಲದಂತೆ- ನೀರು ಕುಡಿಯಲು ಬಂದ ಪ್ರಾಣಿ ನೀರಿನೊಳಗೆ ಅದೃಶ್ಯವಾಗಿರುತ್ತದೆ!!

    ಗಂಡು-ಹೆಣ್ಣು ಅನಾಕೊಂಡಾಗಳು ವರ್ಷದ ಎಪ್ರಿಲ್, ಮೇ ತಿಂಗಳುಗಳಲ್ಲಿ ಕೂಡುತ್ತವೆ. ಗಂಡು-ಹೆಣ್ಣಿನ ಮಿಲನ ಸಂದರ್ಭದಲ್ಲಿ ಹೆಣ್ಣು ಹಾವಿನ ಸುತ್ತ ಹತ್ತಾರು ಗಂಡುಗಳು ಚೆಂಡಿನಂತೆ ಸುತ್ತಿಕೊಂಡು ಪೈಪೋಟಿ ನಡೆಸುತ್ತವೆ. ಬೃಹತ್ ಮಾಂಸದ ಚೆಂಡಿನಂತೆ ಕಾಣುವ ಇದಕ್ಕೆ ಪ್ರಾಣಿ ವಿಜ್ಞಾನದಲ್ಲಿ “ಬ್ರೀಡಿಂಗ್ ಬಾಲ್” ಎಂದೇ ಹೆಸರು. ಚೆಂಡಿನಾಕಾರದಲ್ಲಿ ನಡೆಯುವ ಹೆಣ್ಣಿಗಾಗಿನ ಈ ಪೈಪೋಟಿ ಕೆಲವೊಮ್ಮೆ ನಾಲ್ಕು ವಾರಗಳ ಕಾಲ ಮುಂದುವರೆಯುತ್ತದೆ! ಹೆಣ್ಣು ಹಾವು ಗರ್ಭ ಧರಿಸಿ ಒಮ್ಮಗೆ ಎರಡರಿಂದ ಹನ್ನೆರಡು ಮೊಟ್ಟೆ ಇಡುತ್ತದೆ. ಆಗ ತಾನೆ ಹುಟ್ಟಿದ ಮರಿ ಕನಿಷ್ಟ ಎರಡು ಫೀಟ್ ಉದ್ದವಿರುತ್ತದೆ! ಮತ್ತು ಹುಟ್ಟಿದ ಕ್ಷಣದಿಂದಲೆ ಈಜಾಡುವ ಮತ್ತು ಪ್ರಾಣಿಗಳನ್ನು ಬೇಟೆಯಾಡುವ ಸಾಮರ್ಥ್ಯವನ್ನೂ ಪಡೆದಿರುತ್ತವೆ!

    ನೆಲದ ಮೇಲೆ ಆಮೆ ವೇಗ; ನೀರಿನಲ್ಲಿ ಶರವೇಗ; ಅಚ್ಚರಿಗಳ ಆಗರ ಅನಾಕೊಂಡಾ!ಲೇಖನದ ಆರಂಭದಲ್ಲಿ ಹೇಳಿದಂತೆ, ಅನಾಕೊಂಡಾಗಳು ಗರಿಷ್ಟ ಮೂವತ್ತೇಳುವರೆ ಅಡಿ ಉದ್ದ ಬೆಳೆದ ದಾಖಲೆ ಇದ್ದರೂ, ಇಂದು ಅಷ್ಟೊಂದು ದೊಡ್ಡ ಹಾವುಗಳು ಕಾಣಸಿಗುತ್ತಿಲ್ಲ. ಬೃಹತ್ ಗಾತ್ರದ ಅನಾಕೊಂಡಾಕ್ಕಾಗಿ ಉರಗ ತಜ್ಞರು ಹುಡುಕುತ್ತಲೇ ಇರುತ್ತಾರೆ. ಜೊತೆಗೆ ಅಮೇರಿಕಾದ ಅನೇಕ ಮೃಗಾಲಯಗಳು ಮೂವತ್ತು ಅಡಿಗಿಂತ ಉದ್ದದ ಅನಾಕೊಂಡಾವನ್ನು ಹಿಡಿದುಕೊಟ್ಟರೆ, ಹಾವಿಗೊಂದಕ್ಕೆ ಇಂದಿನ ಬೆಲೆಯ ಸುಮಾರು ಮುವ್ವತ್ತು-ಮುವ್ವತ್ತೈದು ಲಕ್ಷ ರೂಪಾಯಿಗಳ ಬಹುಮಾನ ಇಟ್ಟಿದ್ದಾರೆ! ಪರವಾನಿಗೆ ಪಡೆದು ಯಾರೂ ಪ್ರಯತ್ನಿಸಬಹುದು, ಹಾವು ಸಿಕ್ಕಿದರೆ ದುಡ್ಡಿನ ದೊಡ್ಡ ಗಂಟೂ ಸಿಗಬಹುದು! ಆದರೆ ಮುಖ್ಯ ವಿಚಾರವೊಂದು ಮನಸ್ಸಿನಲ್ಲಿರಬೇಕು, ದುಡ್ಡಿನ ಗಂಟನ್ನು ತಲೆಯಲ್ಲಿಟ್ಟುಕೊಂಡು ಕಾರು, ಬಂಗಲೆ, ಚಂದದ ಹೆಂಡತಿ ಸಿಗುತ್ತಾಳೆ ಅಂದುಕೊಂಡು ಕನಸು ಕಾಣುತ್ತಾ ಅನಾಕೊಂಡಾವನ್ನು ಹಿಡಿಯಲು ಹೋಗಿ, ಹಿಡಿಯುವವರು ಅದರ ಹೊಟ್ಟೆ ಸೇರದಿದ್ದರೆ ಸಾಕು!! ಹಾಗೇನಾದರೂ ಆದರೆ ಅಮೆಜಾ಼ನ್ ಕಾಡಿಗೆ ಹೋಗಿ ಅನಕೊಂಡಾದ ಹೊಟ್ಟೆ ಸೇರಿದವನ ಪ್ರೇತಾತ್ಮಕ್ಕೆ ಜಕ್ಕಣಿ ಕಾಯಿ ಒಡೆಯುವವರು ಯಾರು?!

    ಈ ಸರ್ಪಗಳು ಕಚ್ಚಲ್ಲ… ಕಣ್ಣಿಗೆ ಗುರಿಯಿಟ್ಟು ಉಗುಳಿದ್ರೆ ಅಷ್ಟೇ ಕಥೆ…

    ಇದು ಒದ್ದರೆ ಕತ್ತೆಯೂ ನಾಚಬೇಕು… ತೂಕ ಮಾಡಿದರೆ ಆನೆಯೇ ತಲೆತಗ್ಗಿಸಬೇಕು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts