More

    ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ರಾಜ್ಯ ಸರ್ಕಾರ ಪಾಸ್: ಸಚಿವ ಎಸ್.ಸುರೇಶ್ ಕುಮಾರ್ ಸಂತಸ

    ಬೆಂಗಳೂರು: ಕರೊನಾತಂಕದಿಂದಾಗಿ ಪಾಲಕರ ತಳಮಳ, ತೀವ್ರ ವಿರೋಧ, ನೆರೆ-ಹೊರೆ ರಾಜ್ಯಗಳಲ್ಲಿ ರದ್ದಾದ ಒತ್ತಡಗಳ ಮಧ್ಯೆಯೂ ರಾಜ್ಯ ಸರ್ಕಾರ ಎಸ್​ಎಸ್​ಎಲ್​ಸಿ ಅಗ್ನಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದೆ. ಕೊನೇ ವಿಷಯದ ಪರೀಕ್ಷೆ ಶುಕ್ರವಾರ ಸುಸೂತ್ರವಾಗಿ ನೆರವೇರಿದ್ದು, ಮುಖ್ಯಮಂತ್ರಿ, ಶಿಕ್ಷಣ ಸಚಿವರಾದಿಯಾಗಿ ಹೊಣೆ ಹೊತ್ತ ಇಲಾಖೆಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ.

    ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಎಶ್. ಸುರೇಶ್​ಕುಮಾರ್ ಮಾತನಾಡಿ, ಎಸ್​ಎಸ್​ಎಲ್​ಸಿ ವಾರ್ಷಿಕ ಪರೀಕ್ಷೆಯಲ್ಲ, ಈ ಬಾರಿಯ ನಾಡಹಬ್ಬವೆಂಬ ಅಭಿದಾನ ನೀಡಿದರು. ಪರೀಕ್ಷಾ ಕೇಂದ್ರದಿಂದ ಒಂದೇ ಒಂದು ಕರೊನಾ ಸೋಂಕು ಹರಡದೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದರ ಶ್ರೇಯಸ್ಸು ಮಕ್ಕಳಿಗೆ ಸಲ್ಲುತ್ತದೆ. ಸಂಬಂಧಿಸಿದ ಇಲಾಖೆಗಳು, ಜಿಲ್ಲಾ ಆಡಳಿತಗಳ ಸಮನ್ವಯದಿಂದ ಅಸಾಧ್ಯವಾದದ್ದನ್ನು ಸಾಧ್ಯವೆಂದು ಸಾಧಿಸಿ ತೋರಿಸಿದ್ದು, ಇಡೀ ದೇಶಕ್ಕೆ ಮಾದರಿಯಾಗಿದೆ. ನೆರೆ-ಹೊರೆ ರಾಜ್ಯಗಳು ಪರೀಕ್ಷೆಗಳನ್ನು ರದ್ದುಮಾಡಿದ್ದವು. ಕೇರಳದಲ್ಲೂ 3 ವಿಷಯಗಳ ಪರೀಕ್ಷೆಗಳನ್ನು ನಡೆಸಲಾಯಿತು. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಪರೀಕ್ಷೆ ನಡೆಸಿಯೇ ಬಿಡಬೇಕೆಂಬ ತೀರ್ವನಕ್ಕೆ ಸಿಎಂ ಆದಿಯಾಗಿ ಸಚಿವ ಸಂಪುಟದ ಸಹೋದ್ಯೋಗಿಗಳು, ಶಾಸಕರು, ಎಂಎಲ್ಸಿಗಳು, ಪ್ರತಿಪಕ್ಷಗಳು ಬೆಂಬಲಕ್ಕೆ ನಿಂತರೆ, ಹಲವು ಮಠಾಧೀಶರು ಪೋ›ತ್ಸಾಹ ರೂಪದಲ್ಲಿ ಆಶೀರ್ವದಿಸಿದರು ಎಂದರು.

    ವೃದ್ಧಿಸಿದ ಆತ್ಮವಿಶ್ವಾಸ

    ಮೊದಲ ದಿನ ಪಾಲಕರಲ್ಲಿ ಆತಂಕ, ಮಕ್ಕಳಲ್ಲಿ ಅಳುಕು ಹಾಗೂ ಸರ್ಕಾರಕ್ಕೆ ಸವಾಲಾಗಿತ್ತು. ಆದರೆ, ಮಕ್ಕಳ ಬದ್ಧತೆ, ನಿಯಮಗಳ ಪಾಲನೆಯಲ್ಲಿ ಶಿಸ್ತು, ವಿವಿಧ ಪರೀಕ್ಷೆ ಕೇಂದ್ರಗಳಿಗೆ ಭೇಟಿ ನೀಡಿದಾಗ ಮಕ್ಕಳಲ್ಲಿನ ಭಾವನೆ ಆತ್ಮವಿಶ್ವಾಸ ವೃದ್ಧಿಸಿತು. ಕೆಲವರು ಹೈಕೋರ್ಟ್, ಸುಪ್ರೀಂ ಕೋರ್ಟ್​ಗೆ ಹೋದರೂ ಅಡ್ವೋಕೇಟ್ ಜನರಲ್ ನೀಡಿದ ಬೆಂಬಲ, ಕಾಲ ಕಾಲಕ್ಕೆ ಕರೊನಾ ನಿರ್ವಹಣೆಗೆ ರಚಿತ ತಜ್ಞರ ಸಮಿತಿಯ ಮಾರ್ಗದರ್ಶನ, ಶಿಕ್ಷಣ ಸೇರಿ ವಿವಿಧ ಇಲಾಖೆಗಳು ಅಹರ್ನಿಶಿ ಶ್ರಮಿಸಿವೆ. ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿಯ ಕಿರೀಟಕ್ಕೊಂದು ಸಾಧನೆ ಗರಿಯಿದಾಗಿದೆ ಎಂದು ಸುರೇಶ್ ಕುಮಾರ್ ಬಣ್ಣಿಸಿದರು. ಪರೀಕ್ಷೆ ನಡೆಸುವ ಬಗ್ಗೆ ವಿಭಿನ್ನ ಧ್ವನಿ ಎದ್ದಾಗಲೂ ಸಿಎಂ ಬಿ.ಎಸ್.ಯಡಿಯೂರಪ್ಪ ಬೆನ್ನಿಗೆ ನಿಂತು ಆತ್ಮಸ್ಥೈರ್ಯ ತುಂಬಿದರು. ಸಮಾಜ ನಮಗೆ ಪರೀಕ್ಷೆ ಯೊಡ್ಡಿತ್ತು. ಕರೊನಾ ಪ್ರಕರಣ ವರದಿಯಾದರೂ ಅವು ಕೇಂದ್ರದಾಚೆಗೆ ಸೇರಿದವುಗಳಾಗಿವೆ ಎಂದು ಸ್ಪಷ್ಟಪಡಿಸಿದರು. ಪರೀಕ್ಷೆ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.

    ಮೂವರು ಡಿಬಾರ್

    • ವಿಜಯಪುರ ಜಿಲ್ಲೆಯಲ್ಲಿ ಶುಕ್ರವಾರ ಕೊನೆಗೊಂಡ ತೃತೀಯ ವಿಷಯ (ಹಿಂದಿ) ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ.
    • ಸೊರಬ ತಾಲೂಕಿನ ಚಿಕ್ಕಶಕುನ ಗ್ರಾಮದ ಅಂಬೇಡ್ಕರ್ ಪ್ರೌಢಶಾಲೆ ವಿದ್ಯಾರ್ಥಿ ತಂದೆಗೆ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದರೂ, ಅವಕಾಶ ನೀಡದೆ ಹೋಂ ಕ್ವಾರಂಟೈನ್​ನಲ್ಲಿರುವಂತೆ ಸೂಚಿಸಿ ಮನೆಗೆ ಕಳುಹಿಸಲಾಯಿತು.

    ಸಾವಿನ ನೋವಲ್ಲೂ ಪರೀಕ್ಷೆ ಬರೆದ ಮಕ್ಕಳು

    ಶಿವಮೊಗ್ಗ ಜಿಲ್ಲೆ ಸೊರಬ ಪಟ್ಟಣದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಚಂದನ್ ಎಂ.ಆರ್. ತಂದೆ ಸಾವಿನ ದುಃಖದಲ್ಲೂ ಪರೀಕ್ಷೆ ಬರೆದು ಸಂಜೆ ನಡೆದ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ. ಗದಗ ನಗರದ ಈಶ್ವರ ಬಡಾ ವಣೆಯ ವಿದ್ಯಾರ್ಥಿನಿ ಅನೂಷಾ ಭಜಂತ್ರಿ ಅನಾರೋಗ್ಯದಿಂದ ನಿಧನರಾದ ತಂದೆ ಸಾವಿನ ಮಧ್ಯೆಯೂ ಪರೀಕ್ಷೆಗೆ ಹಾಜರಾದಳು. ಮೈಸೂರಿನ ತಾಲೂಕಿನ ಬೀರಿಹುಂಡಿ ಗ್ರಾಮದ ದೀಪಾ ತಾಯಿಯನ್ನು ಕಳೆದುಕೊಂಡ ದುಃಖದ ನಡುವೆಯೂ ಪರೀಕ್ಷೆ ಪೂರ್ಣಗೊಳಿಸಿದಳು. ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕು ಪೀರಾಪುರ ಗ್ರಾಮದಲ್ಲಿ ಹಾವು ಕಚ್ಚಿ ತಂದೆ ಸಾವಿಗೀಡಾದ ದುಃಖದ ಮಡುವಿನಲ್ಲಿಯೂ ವಿದ್ಯಾರ್ಥಿ ಪರಶುರಾಮ ಪರೀಕ್ಷೆ ಬರೆದು ನಂತರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿ ವಿಧಿ ವಿಧಾನಗಳನ್ನು ಪೂರೈಸಿದ.

    ಶೇ.98.10 ಹಾಜರಿ

    ಶುಕ್ರವಾರ ನಡೆದ ಕೊನೆಯ ವಿಷಯದ ಪರೀಕ್ಷೆಗೆ 7,76,251 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು, 7,61,506 ವಿದ್ಯಾರ್ಥಿಗಳು ಹಾಜರಾಗಿದ್ದರೆ, 14,745 ಮಕ್ಕಳು ಗೈರಾಗಿದ್ದರು.

    ಒಳ್ಳೆಯತನಕ್ಕೆ ಸಾಕ್ಷಿ

    ಸ್ಕೌಟ್ಸ್-ಗೌಡ್ಸ್ ಸಂಸ್ಥೆ 8.50 ಲಕ್ಷ ಉಚಿತ ಮಾಸ್ಕ್ ವಿತರಿಸಿ 8,000 ಸ್ವಯಂ ಸೇವಕರನ್ನು ನಿಯೋಜಿಸಿತು. ರೆಡ್ ಕ್ರಾಸ್ ಸ್ವಯಂ ಸೇವಕರ ಸೇವೆ ಒದಗಿಸಿತು. ಹೀಗೆ ಸಮಾಜದ ಒಳ್ಳೆಯತನಕ್ಕೆ ಹಲವು ಸಾಕ್ಷ್ಯಗಳಿವೆ ಎಂದು ಸಚಿವರು ಹೇಳಿದರು.

    ಶೀಘ್ರ ಎರಡೂ ಪರೀಕ್ಷೆಗಳ ಫಲಿತಾಂಶ

    ಆಗಸ್ಟ್ ಮೊದಲ ವಾರ ಎಸ್ಸೆಸ್ಸೆಲ್ಸಿ, ಜುಲೈ 3ನೇ ವಾರ ಪಿಯು ಫಲಿತಾಂಶ ಪ್ರಕಟಿಸಲಾಗುವುದು. 55 ವರ್ಷ ಮೇಲ್ಪಟ್ಟ ಮತ್ತು ಹೃದಯ ಸಂಬಂಧಿ, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಶಿಕ್ಷಕರಿಗೆ ಮೌಲ್ಯಮಾಪನ ಕಾರ್ಯದಿಂದ ವಿನಾಯಿತಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

    ಹೊಸಬರೆಂದು ಪರಿಗಣನೆ

    ಸಕಾರಣದಿಂದ ಪರೀಕ್ಷೆಗೆ ಗೈರು ಹಾಜರಾದ ವಿದ್ಯಾರ್ಥಿಗಳಿಗೆ ಹೊಸಬರು (ಫ್ರೆಷರ್) ಎಂದು ಪರಿಗಣಿಸಿ ಮತ್ತೆ ಪರೀಕ್ಷೆಗೆ ಅವಕಾಶ ಕೊಡಲಾಗುವುದು. ಹಿರಿಯ ಅಧಿಕಾರಿಯೊಬ್ಬರ ಮಗಳಿಗೆ ಕೊನೆಯ ದಿನದ ಪರೀಕ್ಷೆಯಿತ್ತು. ಆದರೆ, ಅವರ ಮನೆಯಲ್ಲಿ ಒಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದ್ದರಿಂದ ಎಷ್ಟೇ ಮನವಿ ಮಾಡಿದರೂ ಪರೀಕ್ಷೆ ಬರೆಯಲು ಅವಕಾಶ ಕೊಡಲಿಲ್ಲ. ಪ್ರಮಾಣಿತ ಪ್ರಕ್ರಿಯೆ (ಎಸ್ ಒಪಿ)ಯಲ್ಲಿ ಯಾವುದೇ ರಾಜಿಯಿಲ್ಲ ಎನ್ನುವುದಕ್ಕೆ ಸಚಿವ ಸುರೇಶ್ ಕುಮಾರ್ ಈ ನಿದರ್ಶನ ನೀಡಿದರು.

    ನಿಮ್ಮ ಕಣ್ಣಿಗೊಂದು ಸವಾಲ್: ಈ ಚಿತ್ರದಲ್ಲಿ ಅಡಗಿ ಕುಳಿತಿರೋ ಬೆಕ್ಕನ್ನು ಗುರುತಿಸಿದ್ರೆ ನೀವೇ ಗ್ರೇಟ್​!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts