More

    ಸಾಕುಮಗನಿಗೆ ಆಸ್ತಿಯಲ್ಲಿ ಹಕ್ಕು ಇದೆಯೆ? ಕಾನೂನು ಏನು ಹೇಳುತ್ತದೆ?

    ಸಾಕುಮಗನಿಗೆ ಆಸ್ತಿಯಲ್ಲಿ ಹಕ್ಕು ಇದೆಯೆ? ಕಾನೂನು ಏನು ಹೇಳುತ್ತದೆ?

    ಪ್ರಶ್ನೆ: ನಮ್ಮ ದೊಡ್ಡಪ್ಪನಿಗೆ ಎರಡು ಮದುವೆ, ಎರಡು ಹೆಂಡತಿಯರಿಗೂ ಮಕ್ಕಳಿಲ್ಲ. ಅವರಿಬ್ಬರೂ ನಮ್ಮ ದೊಡ್ಡಪ್ಪನನ್ನು ಬಿಟ್ಟು ನಲವತ್ತು ವರ್ಷಗಳಾಗಿವೆ. ಗಂಡನನ್ನು ಬಿಟ್ಟ ಮೇಲೆ ಅವರಿಬ್ಬರಿಗೂ ಅಕ್ರಮ ಸಂಬಂಧದಿಂದ ಮಕ್ಕಳಾಗಿವೆ. ಹೆಂಡತಿಯರು ಬಿಟ್ಟಿದ್ದರಿಂದ ನಮ್ಮ ದೊಡ್ಡಪ್ಪ ನನ್ನನ್ನು ಸಾಕಿಕೊಂಡಿದ್ದರು. ನಾನೆ ಅವರ ಕಷ್ಟ ಸುಖ ನೋಡಿಕೊಂಡಿದ್ದೇನೆ. ನಮ್ಮ ದೊಡ್ಡಪ್ಪ ಅವರಿವರ ಮಾತು ಕೇಳಿ ಎರಡನೇ ಹೆಂಡತಿ ಹತ್ತಿರಹೋಗಿ ತನ್ನ ಗಳಿಸಿದ ಆಸ್ತಿ ಎಲ್ಲಾ ಅವಳ ಹೆಸರಿಗೆ ಮಾಡಿ ಆರು ತಿಂಗಳ ಹಿಂದೆ ತೀರಿಕೊಂಡಿದ್ದಾರೆ. ಈಗ ಅವರ ಆಸ್ತಿ ಯಾರಿಗೆ ಸೇರುತ್ತದೆ? ನಾನು ಕೋರ್ಟಿನಲ್ಲಿ ಕೇಸು ಹಾಕಲೇ?

    ಉತ್ತರ: ನಿಮ್ಮ ದೊಡ್ಡಪ್ಪನ ಆಸ್ತಿಯಲ್ಲಿ ನಿಮಗೆ ಏನೂ ಸಿಗುವುದಿಲ್ಲ. ಸಾಕುಮಗನಿಗೆ ಸಾಕಿದವರ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ. ನೀವು ಕೋರ್ಟಿಗೆ ಹೋಗಿ ಹಣ ಮತ್ತು ಸಮಯವನ್ನು ಕಳೆದುಕೊಳ್ಳಬೇಡಿ. ನಿಮ್ಮ ದೊಡ್ಡಪ್ಪ ಯಾರ ಹೆಸರಿಗೆ ಅವರ ಆಸ್ತಿ ಮಾಡಿರುತ್ತಾರೋ ಅವರಿಗೇ ಹೋಗುತ್ತದೆ. ಒಂದು ವೇಳೆ ನಿಮ್ಮ ದೊಡ್ಡಪ್ಪನ ಎರಡನೇ ಹೆಂಡತಿ ಮೋಸದಿಂದ ಆಸ್ತಿಯನ್ನು ತನ್ನ ಹೆಸರಿಗೆ ಬರೆಯಿಸಿಕೊಂಡರು ಎನ್ನುವುದನ್ನು ಪುರಾವೆ ಮಾಡಿದರೆ, ಆಗಲೂ ಆಸ್ತಿ ನಿಮ್ಮ ದೊಡ್ಡಪ್ಪನ ಮೊದಲ ಹೆಂಡತಿ, ಮತ್ತು ಆಕೆಯ ಮಕ್ಕಳು ಮತ್ತು ಎರಡನೇ ಹೆಂಡತಿಯ ಮಕ್ಕಳಿಗೆ ಸಮವಾಗಿ ಹಂಚಿಕೆ ಆಗುತ್ತದೆ.

    ಆ ಮಕ್ಕಳು ನಿಮ್ಮ ದೊಡ್ಡಪ್ಪನ ಮಕ್ಕಳೇ ಅಲ್ಲ ಎನ್ನುವುದನ್ನು ಸಾಬೀತು ಪಡಿಸಿದರೂ , ಆಗಲೂ ಎಲ್ಲ ಆಸ್ತಿ ಮೊದಲನೇ ಹೆಂಡತಿಗೆ ಹೋಗುತ್ತದೆ. ಒಂದು ವೇಳೆ ನಿಮ್ಮ ದೊಡ್ಡಪ್ಪ ಇಬ್ಬರು ಹೆಂಡತಿಯರನ್ನು 1955ಕ್ಕೆ ಹಿಂದೆಯೇ ವಿವಾಹ ಆಗಿದ್ದರೆ, ಎರಡನೇ ಹೆಂಡತಿಗೂ ಪಾಲು ಬರುತ್ತದೆ. ಯಾವುದೇ ರೀತಿಯಲ್ಲಿ ನೋಡಿದರೂ ನಿಮಗೆ ಪಾಲು ಬರುವುದಿಲ್ಲ. ಬದುಕಿರುವಾಗಲೇ ನಿಮ್ಮ ದೊಡ್ಡಪ್ಪ ನಿಮಗೆ ಆಸ್ತಿಯನ್ನು ನೋಂದಾಯಿತ ದಾನ ಪತ್ರದ ಮೂಲಕವೋ , ಅಥವಾ ವಿಲ್ ಮೂಲಕವೋ ಮಾಡಿದ್ದರೆ ನಿಮಗೆ ಹಕ್ಕು ಬರುತ್ತಿತ್ತು.

    ರಾಜಿ ಮಾತಿನ ಮೂಲಕ ಏನಾದರೂ ಪಡೆಯಬಹುದೇ ಎಂದು ಪ್ರಯತ್ನಿಸಿ ನೋಡಿ. ಒಬ್ಬ ವ್ಯಕ್ತಿಯ ಕಷ್ಟ ಸುಖ ನೊಡಿಕೊಂಡರೆ, ಆ ಕಾರಣ ಮಾತ್ರದಿಂದ ಆ ವ್ಯಕ್ತಿಯ ಆಸ್ತಿಯಲ್ಲಿ ಪಾಲು ಬರುವುದಿಲ್ಲ.

    (ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು vijayavani.net ಕ್ಲಿಕ್ಕಿಸಿ. ಅಲ್ಲಿ ಅಂಕಣ ಕಾಲಮ್‌ನಲ್ಲಿ ನ್ಯಾಯದೇವತೆ ಎಂದು ಇದ್ದು ಅದರ ಮೇಲೆ ಕ್ಲಿಕ್‌ ಮಾಡಿದರೆ ಎಲ್ಲವೂ ಲಭ್ಯ.)

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಅಥವಾ [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ಹೆಣ್ಣುಮಕ್ಕಳೇ ವಿಚ್ಛೇದನ ಕೇಳಿದರೆ ತೊಂದರೆ ಆಗುತ್ತದೆಯೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts