More

    ತಂದೆಯವರು ನನಗೇನೂ ಆಸ್ತಿ ಕೊಟ್ಟಿಲ್ಲ- ಕೇಸ್​ ಹಾಕಬಹುದಾ?

    ತಂದೆಯವರು ನನಗೇನೂ ಆಸ್ತಿ ಕೊಟ್ಟಿಲ್ಲ- ಕೇಸ್​ ಹಾಕಬಹುದಾ?ಪ್ರಶ್ನೆ: ನಮ್ಮ ತಂದೆಗೆ ನಾವು ಮೂವರು ಮಕ್ಕಳು. ನಾನು ದೊಡ್ಡವಳು. ನನ್ನ ಸೋದರ ಮಾವನೇ ನನ್ನ ಗಂಡ. ಕೈಷಿಕರಾಗಿದ್ದಾರೆ. ನಾನು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ತಮ್ಮ ದೊಡ್ಡ ಕೆಲಸದಲ್ಲಿ ಇದ್ದಾನೆ. ನನ್ನ ತಂಗಿ ಅಮೆರಿಕದಲ್ಲಿ ಡಾಕ್ಟರ್ ಆಗಿದ್ದಾಳೆ.
    ನಮ್ಮ ತಂದೆ ಶಿಕ್ಷಕರಾಗಿದ್ದು, ಈಗ ರಿಟೈರ್ ಆಗಿದ್ದಾರೆ. ನಮ್ಮ ತಾತನ ಆಸ್ತಿ ನಮ್ಮ ತಂದೆಗೆ 12 ಎಕರೆ ಬಂದಿದೆ. ನಮ್ಮ ತಾತ 1980ರಲ್ಲಿಯೇ ತೀರಿಕೊಂಡಿದ್ದಾರೆ.

    1982ರಲ್ಲಿ ನಮ್ಮ ತಂದೆ 7 ಎಕರೆ ಜಮೀನು ಖರೀದಿ ಮಾಡಿದ್ದಾರೆ. 2009ರಲ್ಲಿ 20 ಎಕರೆ ಖರೀದಿಸಿದ್ದಾರೆ. ಅದರಲ್ಲಿ ಹತ್ತು ಎಕರೆ ತಮ್ಮನ ಹೆಸರಿಗೆ ಹಾಗೂ ತಮ್ಮನ ಹೆಂಡತಿಯ ಹೆಸರಿಗೆ ಹತ್ತು ಎಕರೆ ಮಾಡಿದ್ದಾರೆ. ನನಗೆ ಹಣ ಸಹಾಯ ಮಾಡು ಎಂದರೆ ನಮ್ಮ ತಂದೆ ನಿರಾಕರಿಸಿದ್ದಾರೆ. ಈಗ ನಾನು ಕೇಸು ಹಾಕಿದರೆ ಆಸ್ತಿಯಲ್ಲಿ ಭಾಗ ಸಿಗುತ್ತದೆಯೇ? ಎಷ್ಟು ಸಿಗುತ್ತದೆ? ದಯವಿಟ್ಟು ತಿಳಿಸಿ.

    ಉತ್ತರ: ನಿಮ್ಮ ತಂದೆ ಸಂಪಾದಿಸಿದ ಹಣದಿಂದ ಖರೀದಿಸಿದ ಆಸ್ತಿ ಅವರ ಸ್ವಯಾರ್ಜಿತ ಆಸ್ತಿ ಆಗಿರುತ್ತದೆ. ಈ ಸ್ವಯಾರ್ಜಿತ ಆಸ್ತಿಯನ್ನು ಅವರು ಯಾರಿಗೆ ಬೇಕಾದರೂ ಕೊಡಬಹುದು. ಹೀಗಾಗಿ ನಿಮ್ಮ ತಂದೆ ತಮ್ಮ ಮತ್ತು ಅವನ ಹೆಂಡತಿಗೆ ಆಸ್ತಿ ಕೊಟ್ಟಿರುವ ಬಗ್ಗೆ ನೀವು ತಕರಾರು ಮಾಡುವ ಹಾಗಿಲ್ಲ. ನಿಮ್ಮ ತಂದೆ ಸಂಪಾದಿಸಿದ ಉಳಿದ ಆಸ್ತಿಯಲ್ಲೂ ಅವರು ಬದುಕಿರುವವರೆಗೆ ನಿಮಗೆ ಭಾಗ ಬರುವುದಿಲ್ಲ.

    ನಿಮ್ಮ ತಂದೆಗೆ ಅವರ ತಂದೆಯಿಂದ (ನಿಮ್ಮ ತಾತನಿಂದ) ಬಂದ ಆಸ್ತಿ ಅವರ ಪ್ರತ್ಯೇಕ ಆಸ್ತಿ ಆಗಿರುತ್ತದೆ. ಹೀಗಾಗಿ ಈ ಆಸ್ತಿಯನ್ನೂ ಅವರು ಏನು ಬೇಕಾದರೂ ಮಾಡಬಹುದು.

    ನಿಮ್ಮ ತಂದೆ ಬದುಕಿರುವವರೆಗೆ, ನಿಮ್ಮ ತಾತನಿಂದ ನಿಮ್ಮ ತಂದೆಗೆ ಬಂದ ಆಸ್ತಿಯಲ್ಲಿ ನೀವು ಭಾಗ ಕೇಳುವ ಹಾಗಿಲ್ಲ. ನಿಮ್ಮ ತಂದೆ ತೀರಿಕೊಂಡರೆ ಅವರು ಉಳಿಸಿದ ಆಸ್ತಿಯಲ್ಲಿ ನಿಮಗೆ ನಿಮ್ಮ ತಂದೆಯ ಎಲ್ಲ ಮಕ್ಕಳ ಜತೆಗೆ ಸಮಪಾಲು ಸಿಗುತ್ತದೆ, ಈಗ ನೀವು ಆಸ್ತಿಯಲ್ಲಿ ಭಾಗ ಕೇಳಿ ಕೇಸು ಹಾಕುವುದರಲ್ಲಿ ಪ್ರಯೋಜನವಿಲ್ಲ. ಬದಲಿಗೆ ನಿಮ್ಮ ತಂದೆಯ ಪ್ರೀತಿ ವಿಶ್ವಾಸ ಗಳಿಸಿಕೊಳ್ಳಲು ಪ್ರಯತ್ನ ಮಾಡಿ.

    ವಿ.ಸೂ : (ನಿಮ್ಮ ತಂದೆಯ ತಾತನಿಗೆ ಆಸ್ತಿ ಹೇಗೆ ಬಂದಿತ್ತು ಎನ್ನುವುದರ ವಿವರ ನಿಮ್ಮ ಪತ್ರದಲ್ಲಿ ಇಲ್ಲ. ಅದು ನಿಮ್ಮ ತಾತನೇ ಸಂಪಾದಿಸಿದ ಆಸ್ತಿ ಇರಬಹುದು ಎನ್ನುವ ಆಧಾರದ ಮೇಲೆ ಈ ಮೇಲಿನ ಸಲಹೆ ಕೊಡಲಾಗಿದೆ.)

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ https://www.vijayavani.net/ ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್​ ಮೇಲೆ ಕ್ಲಿಕ್​ ಮಾಡಿ.

    ತಂದೆಯ ಆಸ್ತಿ ಹೇಗೆ ಬೇಕಾದರೂ ಹಂಚಬಹುದೆ? ವಿಲ್​ ಮಾಡದಿದ್ದರೆ ಏನಾಗುತ್ತದೆ?

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts