More

    ಮುಲಾಜಿಲ್ಲದೆ ಒತ್ತುವರಿ ತೆರವು ಮಾಡಿ

    ಮುಳಬಾಗಿಲು: ರಾ.ಹೆ.75 ಬೆಂಗಳೂರಿನ ಕೆ.ಆರ್.ಪುರಂನಿಂದ ಹೊಸಕೋಟೆ, ಕೋಲಾರ, ಮುಳಬಾಗಿಲು ಮಾರ್ಗವಾಗಿ ನಂಗಲಿ ಬಳಿಯ ಆಂಧ್ರ ಗಡಿವರೆಗೆ ಚತುಷ್ಪಥದಿಂದ 6 ಪಥಕ್ಕೆ ಮೇಲ್ದರ್ಜೆಗೇರಿಸಿ ಅಭಿವೃದ್ಧಿ ಪಡಿಸಲು ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಕಾಮಗಾರಿ ತಕ್ಷಣ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

    ತಾಲೂಕಿನ ನಂಗಲಿ ಬಳಿಯ ಆಂಧ್ರ ಗಡಿಭಾಗದಲ್ಲಿ ಗುರುವಾರ ರಸ್ತೆ ಪರಿಶೀಲಿಸಿ ಮಾತನಾಡಿ, ಅಪಘಾತ ರಹಿರ ರಸ್ತೆಯಾಗಿ ನಿರ್ಮಿಸಲು ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಈ ಹಿಂದೆಯೇ 6 ಪಥ ರಸ್ತೆಗೆ ಬೇಕಾಗುವಷ್ಟು 60 ಮೀಟರ್ ಜಮೀನಿನ ಭೂ ಸ್ವಾಧೀನ ಮಾಡಿಕೊಂಡು ಪರಿಹಾರ ವಿತರಿಸಲಾಗಿದೆ. ಆದರೆ ಕೆಲವರು ಒತ್ತುವರಿ ಮಾಡಿಕೊಂಡಿದ್ದು ಅದನ್ನು ಅಧಿಕಾರಿಗಳು ಮುಲಾಜಿಲ್ಲದೆ ತೆರವುಗೊಳಿಸಬೇಕು, ಪ್ರಯಾಣಿಕರ ಸುರಕ್ಷತೆ ಮುಖ್ಯ ಎಂದರು.

    ಮುಳಬಾಗಿಲು ತಾಲೂಕಿನ ಹನುಮನಹಳ್ಳಿ, ದೇವರಾಯಸಮುದ್ರ, ಕಾಂತರಾಜ ಸರ್ಕಲ್, ಕೋಲಾರ ಬೈಪಾಸ್ ಜಂಕ್ಷನ್, ವಿರೂಪಾಕ್ಷಿ, ಕೆಜಿಎಫ್ ರಸ್ತೆ, ತಾಯಲೂರು ರಸ್ತೆ, ಕೆಬಿಪಿ ರಸ್ತೆ, ನರಸಿಂಹತೀರ್ಥ ಜಂಕ್ಷನ್, ಎನ್.ವಡ್ಡಹಳ್ಳಿ, ನಂಗಲಿಗಳಲ್ಲಿ ವೈಜ್ಞಾನಿಕವಾಗಿ ಫ್ಲೈಓವರ್ ಮತ್ತು ಅಂಡರ್‌ಪಾಸ್, ಸ್ಕೈವಾಕ್ ನಿರ್ಮಿಸಿ ಅಪಘಾತ ತಡೆಯಲು ಕಾಮಗಾರಿ ಮಾಡಲಾಗುತ್ತಿದೆ ಎಂದರು.

    ಡಿಸಿ ಸೆಲ್ವಮಣಿ, ಎಸ್.ಪಿ.ಕಾರ್ತಿಕ್‌ರೆಡ್ಡಿ ಕೋಲಾರ ತಾಲೂಕಿನ ರಾಮಸಂದ್ರ ಗಡಿಯಿಂದ ವಡಗೂರು, ತಂಬಿಹಳ್ಳಿವರೆಗೆ ಸಂಸದರೊಂದಿಗೆ ರಸ್ತೆ ಸರ್ವೇಯಲ್ಲಿ ಪಾಲ್ಗೊಂಡಿದ್ದರೆ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಯೋಜನಾ ನಿರ್ದೇಶಕ ಸೋಮಶೇಖರ್ ನಂಗಲಿ ಗಡಿವರೆಗೆ ಇದ್ದು ರಸ್ತೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಂಸದರೊಂದಿಗೆ ಚರ್ಚೆ ನಡೆಸಿದರು.

    ಕೋಲಾರ ಎಪಿಎಂಸಿ ಅಧ್ಯಕ್ಷ ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ರೆಡ್ಡಿ, ಜಿಲ್ಲಾ ಮಾಜಿ ಉಪಾಧ್ಯಕ್ಷ ಎಂ.ವೆಂಕಟೇಶ್, ಸಿ.ಡಿ.ರಾಮಚಂದ್ರೇಗೌಡ, ಖಜಾಂಚಿ ಕೆ.ಜಿ.ವೆಂಕಟರವಣ, ಒಬಿಸಿ ಘಟಕ ಅಧ್ಯಕ್ಷ ಕೆ.ಎಚ್.ನಾಗರಾಜ್, ಮುಳಬಾಗಿಲು ತಾಲೂಕು ಬಿಜೆಪಿ ಅಧ್ಯಕ್ಷ ಅಶೋಕ್‌ರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಸ್.ರಮೇಶ್, ನಂಗಲಿ ವಿಶ್ವನಾಥರೆಡ್ಡಿ, ನಗರ ಘಟಕ ಅಧ್ಯಕ್ಷ ಕಲ್ಲುಪಲ್ಲಿ ಕೆ.ಜಿ.ಮೋಹನ್, ಪ್ರಧಾನ ಕಾರ್ಯದರ್ಶಿ ವಿ.ಟಿ.ಶಂಕರ, ಮುಖಂಡ ಕಾರ್ ಶ್ರೀನಿವಾಸ್, ಯುವಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ, ನಗರ ಯುವಮೋರ್ಚಾ ಅಧ್ಯಕ್ಷ ಆರ್.ಕಿರಣ್‌ಕುಮಾರ್ ಇದ್ದರು.

    ಕೋಲಾರ ತಾಲೂಕಿನ ಹೊಸಕೋಟೆ ಗಡಿ ರಾಮಸಂದ್ರ ಗೇಟ್‌ನಿಂದ ನಂಗಲಿ ಗಡಿವರೆಗೆ 42 ಸ್ಥಳಗಳನ್ನು ಅಪಘಾತ ವಲಯವೆಂದು ಗುರುತಿಸಿದ್ದು, ಈ ಸ್ಥಳಗಳಲ್ಲಿ ರಸ್ತೆಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಸಲಾಗುವುದು. ಫ್ಲೈಓವರ್, ಅಂಡರ್‌ಪಾಸ್, ಸ್ಕೈವಾಕ್, ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗುವುದು. ಈಗಿರುವ ಚತುಷ್ಪಥ ರಸ್ತೆ ಪಕ್ಕದಲ್ಲಿ ಇನ್ನೂ 2 ಪಥ ರಸ್ತೆಯನ್ನು ಹೊಸದಾಗಿ ಅಭಿವೃದ್ಧಿ ಪಡಿಸಲಾಗುವುದು, ಇದಕ್ಕೆ ಭೂ ಸ್ವಾಧೀನ ಬೇಕಾಗಿಲ್ಲ. ಹೈವೇ ಜಮೀನು ಸಾಕು.
    ಎಸ್.ಮುನಿಸ್ವಾಮಿ, ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts