More

    ಮುಂಬೈ ದಾಳಿಗೆ 12 ವರ್ಷ- ಸಾವಿಗೇ ಸವಾಲೆಸೆದು ಹುತಾತ್ಮರಾದ ಯೋಧರಿವರು…

    ಮುಂಬೈ: 26/11. ಈ ದಿನ ಬಂದಾಗಲೆಲ್ಲಾ ಮನಸ್ಸು 12 ವರ್ಷಗಳ ಹಿಂದೆ ಸಾಗುತ್ತದೆ. ಮುಂಬೈನಲ್ಲಿ ನಡೆದಂಥ ಮಹಾದಾಳಿ ಅದು. ಇಡೀ ಭಾರತವೇ ಬೆಚ್ಚಿ ಬೀಳುವಂಥ ಈ ಕೃತ್ಯ ನಡೆದದ್ದು 2008ರ ನವೆಂಬರ್​ 26ರಂದು. 12 ವರ್ಷಗಳೇ ಸಂದಿಹೋಗಿವೆ. ಆದರೆ ಈ ದಾಳಿಯಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿ ಹುತಾತ್ಮರಾದ ಯೋಧರನ್ನು ನೆನಪಿಸುವ ದಿನ ಇದಾಗಿದೆ.

    ಈ ಘಟನೆಯಲ್ಲಿ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಮಂದಿ ಮೃತಪಟ್ಟಿದ್ದರು. ಒಂಬತ್ತು ಉಗ್ರರನ್ನು ನಮ್ಮ ಯೋಧರು ಹೊಡೆದುರುಳಿಸಿದ್ದರು. ಕೊನೆಗೂ ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆಯ ಅಜ್ಮಲ್ ಕಸಬ್​ನನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಸೇನೆ ಯಶಸ್ವಿಯಾಗಿತ್ತು. 2012ರ ನವೆಂಬರ್ 21ರಂದು ಈತನಿಗೆ ಗಲ್ಲುಶಿಕ್ಷೆ ವಿಧಿಸಲಾಯಿತು.

    ಈ ಘಟನೆಯಲ್ಲಿ ಕಳೆದುಕೊಂಡಿರುವ ಯೋಧರ ಪೈಕಿ ಸದಾ ನೆನಪಿನಾಳದಲ್ಲಿ ಇರುವವರು ಮುಂಬೈ ದಾಳಿಯಲ್ಲಿ ಭಯೋತ್ಪಾದಕ (ಎಟಿಎಸ್) ನಿಗ್ರಹ ದಾಳಿಯ ವರಿಷ್ಠ ಹೇಮಂತ್ ಕರ್ಕರೆ, ಆರ್ಮಿ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಮುಂಬೈಯ ಹೆಚ್ಚುವರಿ ಪೊಲೀಸ್ ಕಮಿಷನರ್ ಅಶೋಕ್ ಕಾಮ್ಟೆ, ಪೊಲೀಸ್ ಇನ್ಸ್ ಪೆಕ್ಟರ್ ವಿಜಯ್ ಸಾಲಸ್ಕರ್, ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ (ಎಎಸ್ ಐ) ತುಕಾರಾಂ ಓಂಬ್ಳೆ, ಮೇಜರ್​ ಉನ್ನಿ ಕೃಷ್ಣನ್​ ಹಾಗೂ ಇನ್ನೂ ಅನೇಕರು.

    ಮುಂಬೈ ದಾಳಿಗೆ 12 ವರ್ಷ- ಸಾವಿಗೇ ಸವಾಲೆಸೆದು ಹುತಾತ್ಮರಾದ ಯೋಧರಿವರು...ಸಾವು ಎದುರಿಗಿದ್ದರೂ ಹೋರಾಡಿದ ತುಕಾರಾಂ
    ಈ ಘಟನೆಯಲ್ಲಿ ಹುತಾತ್ಮರಾದವರಲ್ಲಿ ತುಕಾರಾಂ ಒಂಬಳೆ ಒಬ್ಬರು. ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ನಂತರ ಮುಂಬೈ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

    ಘಟನೆಯ ದಿನ ತುಕಾರಾಂ ದಕ್ಷಿಣ ಮುಂಬೈನ ಚೌಪಟ್ಟಿಯಲ್ಲಿ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆಗ ಮರೀನಾ ಡ್ರೈವ್ ನಲ್ಲಿ ನಿಲ್ಲಿಸಿದ್ದ ಕಾರನ್ನು ಇಬ್ಬರು ಉಗ್ರರು ಹೈಜಾಕ್ ಮಾಡಿಕೊಂಡು ಮಲಬಾರ್ ಹಿಲ್ ಕಡೆ ಹೊರಟಿದ್ದಾರೆ, ಅವರನ್ನು ತಡೆಯಿರಿ ಎಂಬ ಸಂದೇಶ ಇವರಿಗೆ ಬಂತು. ಕೂಡಲೇ ತುಕಾರಾಂ ಚೌಪಟ್ಟಿ ಸಮೀಪ ಬ್ಯಾರಿಕೇಡ್ ಹಾಕಿ ಕಾರಿಗಾಗಿ ಕಾಯುತ್ತಿದ್ದರು.

    ವೇಗವಾಗಿ ಬಂದ ಕಾರು ಬ್ಯಾರಿಕೇಡ್​ನಿಂದ ಸುಮಾರು 50 ಅಡಿ ದೂರದಲ್ಲಿ ನಿಂತಿತು. ಕಾರಿನ ಬೀಮ್ ಲೈಟ್ಸ್ ಆನ್ ಆಗಿ ಬ್ಯಾರಿಕೇಡ್​ನತ್ತ ವೇಗವಾಗಿ ಚಲಿಸತೊಡಗಿತು. ತಡ ಮಾಡದ ತುಕಾರಾಂ ಬ್ಯಾರಿಕೇಡ್ ಹಿಂದೆ ಹೋಗಿ ನಿಂತರು.

    ಈ ಸಂದರ್ಭದಲ್ಲಿ ಕಾರಿನಿಂದ ಹೊರಗೆ ಹಾರಿದ್ದೇ ಕಸಬ್​. ಆತನ ಬಳಿ ಅಪಾರ ಶಸ್ತ್ರಾಸ್ತ್ರ ಇರುವುದನ್ನು ಗಮನಿಸಿದರೂ ತುಕಾರಾಂ ಅವನನ್ನು ಹಿಡಿದರು. ಆತ ಇವರ ಮೇಲೆ ಹಲ್ಲೆ ಮಾಡಿದ. ಆದರೂ ಜಗ್ಗದ ತುಕಾರಾಂ ಅವರು ಕಸಬ್​ನ ಕೈಯಲ್ಲಿದ್ದ ಎಕೆ 47 ರೈಫಲ್​ನ ಬ್ಯಾರೆಲ್ ಅನ್ನು ಹಿಡಿದುಕೊಂಡರು.

    ಮನಸ್ಸು ಮಾಡಿದ್ದರೆ ಅವರು ಸುಲಭದಲ್ಲಿ ತಪ್ಪಿಸಿಕೊಂಡು ಹೋಗಬಹುದಿತ್ತು. ಆದರೆ ಕಸಬ್​ನನ್ನು ಹಿಡಿಯಲೇಬೇಕು ಎಂದು ಆತನನ್ನು ಗಟ್ಟಿಯಾಗಿ ಹಿಡಿದಿದ್ದರು. ಆದರೆ ತಪ್ಪಿಸಿಕೊಂಡ ಕಸಬ್​, ಅವರ ದೇಹದೊಳಕ್ಕೆ 40 ಗುಂಡುಗಳನ್ನು ಹಾರಿಸಿಯೇಬಿಟ್ಟ. ಆದರೂ ತಮ್ಮ ಬಿಗಿಪಟ್ಟು ಬಿಡದ ತುಕಾರಾಂ ಆತನನ್ನು ಹಿಡಿದೇ ಇದ್ದರು. ಉಳಿದ ಅಧಿಕಾರಿಗಳು ಕಸಬ್​ನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಅದಾಗಲೇ ತುಕಾರಾಂ ಕೊನೆಯುಸಿರು ಎಳೆದಿದ್ದರು. 2009ರ ಜನವರಿ 26ರಂದು ಅಶೋಕಚಕ್ರ ಪ್ರದಾನ ಮಾಡಲಾಯಿತು.

    ಇದನ್ನೂ ಓದಿ: ಕೋಮುವಾದಿ ಪಕ್ಷದಲ್ಲಿ ಇರಲಾರೆವು: ಮೆಹಬೂಬಾ ಮುಫ್ತಿಗೆ ಮತ್ತೊಮ್ಮೆ ಆಘಾತ

    ಕರ್ತವ್ಯಕ್ಕೆ ಓಗೊಟ್ಟು ಹುತಾತ್ಮರಾದರು
    ಈ ಪೈಕಿ, ಹೇಮಂತ್ ಕರ್ಕರೆ, ಆಶೋಕ್ ಕಾಮ್ಟೆ ಮತ್ತು ವಿಜಯ್ ಸಾಲಾಸ್ಕರ್, ಅವರು ಕಸಬ್ ಹಾಗೂ ಆತನ ಸಹಚರ ಇಸ್ಮಾಯಿಲ್ ನಡೆಸಿದ ದಾಳಿಯಲ್ಲಿ ಹುತಾತ್ಮರಾದರು.

    ಹೇಮಂತ್ ಕರ್ಕರೆ ದಾದರ್ ನಿವಾಸದಲ್ಲಿದ್ದ ವೇಳೆ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣದಲ್ಲಿ ಉಗ್ರರು ದಾಳಿ ನಡೆಸಿದ್ದಾರೆಂದು ಕರೆ ಬಂತು. ಅಗ ಕರ್ಕರೆ ಚಾಲಕ ಹಾಗೂ ಅಂಗರಕ್ಷಕನ ಜತೆ ಸಿಎಸ್​ಟಿನತ್ತ ಹೊರಟಿದ್ದರು. ಆದರೆ ಉಗ್ರರು ಕಾಮಾ ಆಸ್ಪತ್ರೆ ಮತ್ತು ಅಲ್ ಬ್ಲೇಸ್ ಆಸ್ಪತ್ರೆಯತ್ತ ದೌಡಾಯಿಸಿರುವುದಾಗಿ ಕರ್ಕರೆಗೆ ಮಾಹಿತಿ ಬಂದಿತ್ತು.

    ಕಾಮಾ ಆಸ್ಪತ್ರೆ ಬಳಿ ಕರ್ಕರೆ ಗುಂಡಿನ ದಾಳಿಯಿಂದ ಕಸಬ್ ಗಾಯಗೊಂಡಿದ್ದ, ಆದರೆ ಇಸ್ಮಾಯಿಲ್ ಖಾನ್ ಗುಂಡಿನ ದಾಳಿ ನಡೆಸಿದ. ಅದಕ್ಕೆ ಕರ್ಕರೆ, ಅಶೋಕ್ ಕಾಮ್ಟೆ ಮತ್ತು ಸಾಲಾಸ್ಕರ್ ಬಲಿಯಾದರು. 2009ರ ಜನವರಿ 26ರಂದು ಮರಣೋತ್ತರ ಅಶೋಕ ಚಕ್ರ ನೀಡಲಾಗಿತ್ತು.

    ಎದೆಗುಂದದೇ ಗುಂಡಿಗೆ ಎದೆಯೊಡ್ಡಿದ ಬೆಂಗಳೂರು ಕುವರ
    ಕರ್ನಾಟಕದವರಾದ ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಏಕಾಂಗಿಯಾಗಿ ಶಸ್ತ್ರಾಸ್ತ್ರವಿದ್ದ ಉಗ್ರರ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ದೇಶಕ್ಕಾಗಿ ಮುಡಿಪಾಗಿಟ್ಟರು. ಉಗ್ರರು ಇದ್ದ ತಾಜ್‌ ಹೋಟೆಲ್‌ನೊಳಗೆ ನುಗ್ಗಿದ ಉನ್ನಿ ಕೃಷ್ಣನ್, ತನ್ನ ಸಹದ್ಯೋಗಿಗಳಾದ ಎನ್‌ಎಸ್‌ಜಿ ಕಮಾಂಡೋ ಹಾಗೂ ಹೋಟೆಲ್‌ನಲ್ಲಿದ್ದ ಅತಿಥಿಗಳನ್ನು ಉಗ್ರರಿಂದ ರಕ್ಷಿಸಿದರು.

    ಹೋಟೆಲ್‌ನ ಕಾರಿಡಾರ್‌ನಲ್ಲಿ ಏಕಾಂಗಿಯಾಗಿ ಗ್ರೆನೇಡ್‌, ಎಕೆ -47 ಶಸ್ತ್ರಸಜ್ಜಿತ ಉಗ್ರನ ವಿರುದ್ಧ ಹೋರಾಡಿದರು. ಒಬ್ಬ ಉಗ್ರನನ್ನು ಗಾಯಗೊಳಿಸಿದರು. ನಂತರ ಹೋಟೆಲ್‌ ಒಳಗಿದ್ದ ಉಗ್ರರನ್ನು ರೆಸ್ಫೋರೆಂಟ್‌ನ ಕೆಳಗಿನ ಭಾಗಕ್ಕೆ ಓಡಿಸುವಲ್ಲಿ ಯಶಸ್ವಿಯಾಗಿದ್ದರು.

    ಮೇಜರ್ ಉನ್ನಿಕೃಷ್ಣನ್ ಅವರಿಗೆ ಮರಣೋತ್ತರ ಅಶೋಕ್ ಚಕ್ರವನ್ನು ನೀಡಿ ಗೌರವಿಸಲಾಯಿತು.

    ಹೊಟ್ಟೆನೋವಿನಿಂದ ಕುಸಿದೆ, ಮಗು ಕಳೆದುಕೊಳ್ಳುತ್ತಿರುವ ಅರಿವಾಯ್ತು- ರಾಜಕುಮಾರಿ ಬಿಚ್ಚಿಟ್ಟ ನೋವಿನ ಘಟನೆ

    ಪ್ಲಾಸ್ಮಾ ದಾನ ಮಾಡಿ 350 ಮಂದಿ ಕರೊನಾ ಸೋಂಕಿತರ ಜೀವ ಉಳಿಸಿದ ಪೊಲೀಸರು

    ಅನಾಥ ಮನೆ, ಘೋರ ನಿಃಶ್ಶಬ್ದ… ಪತ್ನಿ-ಮಕ್ಕಳ ನೆನೆದು ಕಣ್ಣೀರಾದ ಜೋ ಬೈಡೆನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts