ಡ್ರಗ್ಸ್‌ ಕೇಸ್‌ ಆರೋಪಿಗಳಿರುವ ಜೈಲಿಗೆ ಬೆಂಕಿ; ಅಗ್ನಿಗೆ ಸಿಲುಕಿ ಸುಟ್ಟು ಕರಕಲಾದ ಕೈದಿಗಳು

fire
Published on

ಜಕಾರ್ತ: ಇಂಡೋನೇಷ್ಯಾದ ಬಾಂಟೆನ್ ಪ್ರಾಂತ್ಯದ ಜೈಲಿನಲ್ಲಿ ಬೆಂಕಿ ದುರಂತ ಸಂಭವಿಸಿದ್ದು, ಈ ಘಟನೆಯಲ್ಲಿ ಕೈದಿಗಳು ಸೇರಿದಂತೆ ಕನಿಷ್ಠ 41 ಮಂದಿ ಮೃತಪಟ್ಟಿದ್ದು, 40ಕ್ಕೂ ಅಧಿಕ ಮಂದಿಗೆ ಭೀಕರ ಗಾಯಗಳಾಗಿವೆ. ಮೃತಪಟ್ಟವರಲ್ಲಿ ಪೋರ್ಚಗಲ್‌ ಮತ್ತು ದಕ್ಷಿಣ ಆಫ್ರಿಕಾದ ಕೈದಿಗಳೂ ಇದ್ದರು, ಇವರೆಲ್ಲರೂ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾರೆ ಎನ್ನಲಾಗಿದೆ.

ರಾಜಧಾನಿ ಜಕಾರ್ತಾದ ಹೊರಗಿರುವ ಟಾಂಗರಾಂಗ್ ಪೆನಿಟರಿಯಲ್ಲಿ ಮುಂಜಾನೆ ಈ ಘಟನೆ ಸಂಭವಿಸಿದೆ. ಮಾದಕ ದ್ರವ್ಯ ಅಪರಾಧಿಗಳಿಗಾಗಿ ಇರುವ ಜೈಲು ಇದಾಗಿದೆ. ಜೈಲಿನ ಬ್ಲಾಕ್ ಸಿ ಯಲ್ಲಿ ಈ ದುರಂತ ಸಂಭವಿಸಿದೆ ಎಂದು ಕಾನೂನು ಮತ್ತು ಮಾನವ ಹಕ್ಕುಗಳ ಸಚಿವಾಲಯದ ಜೈಲು ಇಲಾಖೆಯ ವಕ್ತಾರ ರಿಕಾ ಅಪ್ರಿಯಂತಿ ಮಾಹಿತಿ ನೀಡಿದ್ದಾರೆ.

1,225 ಕೈದಿಗಳನ್ನು ಇಡುವಷ್ಟು ಸಾಮರ್ಥ್ಯವಿರುವ ಈ ಜೈಲಿನಲ್ಲಿ 2 ಸಾವಿರಕ್ಕೂ ಅಧಿಕ ಕೈದಿಗಳನ್ನು ಇಡಲಾಗಿದೆ ಎಂದು ಆರೋಪಿಸಲಾಗಿದೆ. ಬೆಂಕಿ ಅವಘಡ ಸಂಭವಿಸಿದ್ದ ಸಿ ಬ್ಲಾಕ್‌ನಲ್ಲಿ 122 ಅಪರಾಧಿಗಳಿದ್ದರು. ಇವರ ಪೈಕಿ ಹೆಚ್ಚಿನವರು ಅಗ್ನಿಗೆ ಬಲಿಯಾಗಿದ್ದಾರೆ. ಬೆಂಕಿ ನಿಯಂತ್ರಿಸಲು ನೂರಾರು ಪೋಲಿಸರು ಮತ್ತು ಸೈನಿಕರನ್ನು ನಿಯೋಜಿಸಲಾಗಿದೆ ಎಂದು ರಿಕಾ ವಿವರಿಸಿದ್ದಾರೆ.

ಇಂಡೋನೇಷ್ಯಾದಲ್ಲಿ ಗಲಭೆಗಳು ಸಾಮಾನ್ಯವಾಗಿದ್ದು, ಕಡಿಮೆ ವ್ಯವಸ್ಥೆಗಳಿರುವ ಜೈಲಿನಲ್ಲಿ ಅತಿಯಾದ ಕೈದಿಗಳಿರುವುದು ಸಮಸ್ಯೆಯಾಗಿದೆ ಎನ್ನಲಾಗಿದ್ದು, ಅಗ್ನಿ ದುರಂತಕ್ಕೆ ಸ್ಪಷ್ಟ ಕಾರಣ ಇದುವರೆಗೆ ಸಿಕ್ಕಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಷಾರ್ಟ್‌ ಸರ್ಕೀಟ್‌ನಿಂದ ಇದು ಸಂಭವಿಸಿರಬಹುದು ಎನ್ನಲಾಗುತ್ತಿದ್ದರೂ ನಿಖರ ಕಾರಣ ತಿಳಿಯಬೇಕಿದೆಯಷ್ಟೇ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net