More

    ಹೊಡಿಯಲ್ಲ, ಬಡಿಯಲ್ಲ… ಎಂಇಎಸ್‌ ಪುಂಡರು, ‘ಮಹಾ’ ಸರ್ಕಾರಕ್ಕೆ ಕಾರ್ಮಿಕರಿಂದ ಹೀಗೊಂದು ಬಿಗ್‌ ಶಾಕ್‌!

    ಬೆಂಗಳೂರು: ಕನ್ನಡಿಗರ ಮೇಲೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಪುಂಡರ ಆಟಾಟೋಪ ಹೆಚ್ಚಾಗುತ್ತಿರುವ ಬೆನ್ನಲ್ಲೇ ಎಪಿಎಂಸಿ ಕಾರ್ಮಿಕ ಸಂಘಟನೆ ವಿಭಿನ್ನವಾಗಿ ತಿರುಗೇಟು ನೀಡಲು ಯೋಜನೆ ರೂಪಿಸಿದೆ. ಒಂದೆಡೆ ಕನ್ನಡದ ಪರ ಸಂಘಟನೆಗಳು ತಮ್ಮದೇ ಆದ ರೀತಿಯಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಹೊಡೆತ, ಬಡಿತ ಏನೂ ಇಲ್ಲದೇ ಮಹಾರಾಷ್ಟ್ರದ ವಿರುದ್ಧ ವಿನೂತನವಾಗಿ ಪ್ರತಿಭಟನೆ ಶುರು ಮಾಡಿದ್ದಾರೆ.

    ಅದೇನೆಂದರೆ, ಬೆಂಗಳೂರು ಎಪಿಎಂಸಿಯಲ್ಲಿ ಮಹಾರಾಷ್ಟ್ರ ವಸ್ತುಗಳಿಗೆ ನಿರ್ಬಂಧ ಹೇರಲು ಎಲ್ಲಾ ತಯಾರಿ ನಡೆಸಲಾಗಿದೆ. ಇದು ಸೋಮವಾರದಿಂದಲೇ (ಡಿ.20) ಜಾರಿಗೆ ಬರಲಿದೆ. ಬೆಂಗಳೂರಿನ ಎಪಿಎಂಸಿಯಲ್ಲಿ ಮಹಾರಾಷ್ಟ್ರದಿಂದ ಲಾರಿಗಳಲ್ಲಿ ಬರುವ ವಸ್ತುಗಳ ಲೋಡ್‌, ಅನ್‌ಲೋಡ್‌ಗೆ ಅವಕಾಶ ಕಲ್ಪಿಸದೇ ಮಹಾರಾಷ್ಟ್ರ ವಸ್ತುಗಳ ಆಮದು ಮತ್ತು ಸಾಗಾಟಕ್ಕೆ ಬ್ರೇಕ್ ಹಾಕಲು ಸಕಲ ಸಿದ್ಧತೆ ನಡೆದಿದೆ.

    ಈ ಕುರಿತು ಮಾತನಾಡಿರುವ ಎಪಿಎಂಸಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಅರುಣ್ ಪರಮೇಶ್, ಒಂದು ವೇಳೆ ಇದೇ ರೀತಿ ಕನ್ನಡಿಗರು, ಕರ್ನಾಟಕದ ಮೇಲೆ ದಬ್ಬಾಳಿಕೆ ಮಾಡುತ್ತಿದ್ದರೆ, ಪ್ರತಿಫಲ ಚೆನ್ನಾಗಿರಲ್ಲ ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದಿದ್ದಾರೆ. ಕರ್ನಾಟಕದ ಮೇಲೆ ಎಂಇಎಸ್ ದಾಳಿ ಖಂಡಿಸುತ್ತೇವೆ. ಕನ್ನಡಿಗರ ಮೇಲೆ ನಡೆಯುತ್ತಿರುವ ದಾಳಿ ನಿಲ್ಲುವವರೆಗೆ ನಿರಂತರ ಹೋರಾಟ ಮಾಡುತ್ತೇವೆ. ನಮಗೆ ಕೂಲಿ ಇಲ್ಲ ಎಂದರೂ ಪರವಾಗಿಲ್ಲ ಹೋರಾಟ ಬಿಡಲ್ಲ ಎಂದು ಅವರು ಹೇಳಿದ್ದಾರೆ.

    ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ಆಗುತ್ತಿರುವ ದಬ್ಬಾಳಿಕೆ, ದೌರ್ಜನ್ಯ ಬಗ್ಗೆ ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಮೌನ ವಹಿಸಿದ್ದೂ ಅಲ್ಲದೇ, ಕನ್ನಡಿಗರೇ ಅವರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿರುವುದು ಕನ್ನಡಿಗರನ್ನು ಕೆರಳಿಸಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಪುಂಡರು ಕನ್ನಡಿಗರ ಹೋಟೆಲ್‌ಗಳು, ವಾಹನಗಳ ಮೇಲೆ ದಾಳಿ ಮಾಡ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಿಂತು ಕನ್ನಡಿಗರ ವಾಹನಗಳಿಗೆ ಕಪ್ಪು ಮಸಿ ಬಳಿಯುತ್ತಿದ್ದಾರೆ. ಇದೀಗ ಶಿವಸೇನೆ ಪುಂಡರ ಪುಂಡಾಟಿಕೆ ಮರೆತು ಸಿಎಂ ಉದ್ಧವ್​ ಠಾಕ್ರೆ ಕನ್ನಡಿಗರ ಮೇಲೆ ಗೂಬೆ ಕೂರಿಸುತ್ತಿರುವ ಕಾರಣ ಮಹಾರಾಷ್ಟ್ರ ಸರ್ಕಾರಕ್ಕೂ ಬುದ್ಧಿ ಕಲಿಸಲು ಕಾರ್ಮಿಕ ಸಂಘಟನೆ ಮುಂದಾಗಿದೆ.

    ಮಹಾರಾಷ್ಟ್ರದಿಂದ ಸಕ್ಕರೆ ಮತ್ತು ಬೇಳೆ ಆಮದಾಗತ್ತಿದ್ದು, ಕರ್ನಾಟಕದಿಂದ ಅಲ್ಲಿಗೆ ಕಾಳುಗಳ ಸಾಗಣಿಗೆ ಆಗುತ್ತಿದೆ. ಆದರೆ ಕನ್ನಡಿಗರಿಗೆ ಆಗುತ್ತಿರುವ ಅವಮಾನವನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದಿರುವ ಎಪಿಎಂಸಿ ಕಾರ್ಮಿಕರು ಆಮದು, ರಫ್ತು ಎಲ್ಲದಕ್ಕೂ ನಿಷೇಧ ಹೇರಲು ಮುಂದಾಗಿದೆ. ಎಪಿಎಂಸಿ ಆವರಣಕ್ಕೆ ಲಾರಿಗಳಿಗೆ ಪ್ರವೇಶ ನಿರ್ಬಂಧಿಸಲು ರೆಡಿಯಾಗಿವೆ. ಸದ್ಯ ಇದು ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದು, ಶೀಘ್ರದಲ್ಲಿಯೇ ರಾಜ್ಯಾದ್ಯಂತ ಈ ಕ್ರಮ ತೆಗೆದುಕೊಳ್ಳುವುದಾಗಿ ಕಾರ್ಮಿಕ ಸಂಘಟನೆ ಎಚ್ಚರಿಕೆ ನೀಡಿದೆ.

    ಪ್ರಿಯಕರನ ಜತೆ ವೈಮನಸ್ಸು, ದುಡುಕಿ ನಿರ್ಧಾರ ತೆಗೆದುಕೊಂಡ ಬೀದರ್‌ನ ಯುವ ವೈದ್ಯೆ ನೇಣಿಗೆ ಶರಣು!

    ದರ್ಗಾಗೆ ಪ್ರಯಾಣಿಸುತ್ತಿದ್ದವರು ರಸ್ತೆ ಮಧ್ಯೆಯೇ ಹೆಣವಾದರು! ಭಯಾನಕ ಅಪಘಾತದಲ್ಲಿ ಆರು ಮಂದಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts