More

    ಅಭಿವೃದ್ಧಿಯತ್ತ ಗ್ರಾಮೀಣ ರಸ್ತೆ, ನೀರುಮಾರ್ಗ-ಅಡ್ಯಾರ್‌ಪದವು-ಅರ್ಕುಳ ರಸ್ತೆ ಮೇಲ್ದರ್ಜೆಗೆ

    ಭರತ್ ಶೆಟ್ಟಿಗಾರ್ ಮಂಗಳೂರು

    ಹೊರವಲಯದ ಗ್ರಾಮಾಂತರ ರಸ್ತೆ ಅಭಿವೃದ್ಧಿಪಡಿಸುವ ಮೂಲಕ ನಗರ ಪ್ರದೇಶದಲ್ಲಿ ವಾಹನಗಳ ಒತ್ತಡ ಕಡಿಮೆ ಮಾಡುವ ಯೋಜನೆಯಂತೆ ಗ್ರಾಮೀಣ ರಸ್ತೆಗಳ ದುರಸ್ತಿ, ಡಾಂಬರೀಕರಣ ಕೆಲಸಗಳು ವಿವಿಧೆಡೆ ನಡೆಯುತ್ತಿದೆ.

    ಅದರಂತೆ ಹಲವು ವರ್ಷಗಳಿಂದ ಅಭಿವೃದ್ಧಿಯ ನಿರೀಕ್ಷೆಯಲ್ಲಿದ್ದ ನೀರುಮಾರ್ಗ-ಅಡ್ಯಾರ್‌ಪದವು-ಅರ್ಕುಳ(ವಳಚ್ಚಿಲ್) ಜಿಲ್ಲಾ ಮುಖ್ಯ ರಸ್ತೆ ಮೇಲ್ದರ್ಜೆಗೇರುತ್ತಿದೆ. ಈ ಹಿಂದೆ 5.5 ಮೀಟರ್ ಇದ್ದ ರಸ್ತೆಯನ್ನು 7 ಮೀಟರ್‌ಗೆ ಅಗಲ ಮಾಡಲಾಗುತ್ತಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುತ್ತಿದೆ. ಏರಿಳಿತ ಹಾಗೂ ಅಪಾಯಕಾರಿ ತಿರುವುಗಳಿರುವ ರಸ್ತೆಯಾಗಿರುವುದರಿಂದ ಅಗಲ ಮಾಡಿದರೆ ಎರಡು ವಾಹನಗಳು ಏಕಕಾಲದಲ್ಲಿ ಎದುರುಬದುರಾಗಿ ಚಲಿಸಬಹುದು.

    ಎರಡು ಹಂತದಲ್ಲಿ ಅಭಿವೃದ್ಧಿ: ನೀರುಮಾರ್ಗದ ಅಡ್ಯಾರ್‌ಪದವು ಕ್ರಾಸ್ ರಸ್ತೆಯಿಂದ ವಳಚ್ಚಿಲ್‌ವರೆಗಿನ ಒಟ್ಟು 6.2 ಕಿ.ಮೀ ರಸ್ತೆ ಭಾಗವನ್ನು ಎರಡು ಹಂತದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಅದರಂತೆ ಮೊದಲ ಹಂತದಲ್ಲಿ ರಸ್ತೆಯ ಆರಂಭದಿಂದ 1.71ವರೆಗೆ ಮತ್ತು 4.4ರಿಂದ 6.2 ಕಿ.ಮೀ ವರೆಗೆ 3.50 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಅಗಲೀಕರಣ ಮತ್ತು ಡಾಂಬರು ಕಾಮಗಾರಿ ನಡೆಯಲಿದೆ. ಈಗಾಗಲೇ ಮೊದಲ ಭಾಗದಲ್ಲಿ 300 ಮೀ.ನಷ್ಟು ರಸ್ತೆ ಸಂಪೂರ್ಣವಾಗಿ ತೆಗೆದು ಮರು ನಿರ್ಮಾಣ ಮಾಡಲಾಗಿದೆ. ಒಂದು ಹಂತದ ಅಗಲೀಕರಣ ಕಾಮಗಾರಿ ಮುಗಿದು, ಡಾಂಬರು ಹಾಕುವ ಕೆಲಸ ನಡೆಯುತ್ತಿದೆ.

    ಎರಡನೇ ಹಂತದ 1.7ರಿಂದ 4.4 ಕಿ.ಮೀ ವರೆಗಿನ ಉಳಿಕೆ 2.7 ಕಿ.ಮೀ. ರಸ್ತೆ ಕಾಮಗಾರಿಗೆ 5 ಕೋಟಿ ರೂ. ಮೊತ್ತದ ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಲಾಗಿದ್ದು, ಅನುದಾನ ನಿರೀಕ್ಷಿಸಲಾಗುತ್ತಿದೆ. ಇದರಲ್ಲಿ ಅಡ್ಯಾರ್‌ಪದವು ಚರ್ಚ್ ಬಳಿ ಸುಮಾರು 200 ಮೀ. ನಷ್ಟು ಚತುಷ್ಪಥ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಜಂಕ್ಷನ್ ಪ್ರದೇಶವಾಗಿರುವುದರಿಂದ ಪ್ರಸ್ತಾವನೆಯಲ್ಲಿ ಸೇರಿಸಲಾಗಿದೆ.

    ಮೊದಲ ಭಾಗದಲ್ಲಿ ಅಂತಿಮ ಹಂತದ ಡಾಂಬರು ಕೆಲಸ ಆರಂಭವಾಗಿದ್ದು, ಒಂದು ವಾರದಲ್ಲಿ ಪೂರ್ಣಗೊಳ್ಳಲಿದೆ. ಎರಡನೇ ಭಾಗದಲ್ಲಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಂಜೀವ ಕುಮಾರ್ ನಾಯಕ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಹೊರ ವಲಯದಲ್ಲೇ ಸಂಚಾರ: ಈ ರಸ್ತೆ ಅಭಿವೃದ್ಧಿಯಿಂದ ಅಡ್ಯಾರು, ಫರಂಗಿಪೇಟೆ, ತುಂಬೆ, ಕಣ್ಣೂರು ಭಾಗದಿಂದ ಮೂಡುಬಿದಿರೆ, ವಿಮಾನ ನಿಲ್ದಾಣ ಮೊದಲಾದೆಡೆ ತೆರಳುವವರು ನಗರಕ್ಕೆ ಬಾರದೆ ಹೊರ ರಸ್ತೆಯಲ್ಲೇ ತೆರಳಬಹುದಾಗಿದೆ. ವಳಚ್ಚಿಲ್‌ನಿಂದ ನೇರವಾಗಿ ನೀರುಮಾರ್ಗ-ಬೈತುರ್ಲಿ, ವಾಮಂಜೂರು ಮೂಲಕ ನಿಗದಿತ ಸ್ಥಳಕ್ಕೆ ತಲುಪಬಹುದು. ಇದರಿಂದ ನಗರ ಪ್ರದೇಶದ ದಟ್ಟಣೆಯೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಗ್ರಾಮೀಣ ಭಾಗದ ಜನರೂ ಉತ್ತಮ ರಸ್ತೆಯಲ್ಲಿ ಓಡಾಡುವಂತಾಗುತ್ತದೆ ಎನುತ್ತಾರೆ ಸ್ಥಳೀಯ ಶಾಸಕ ಡಾ.ವೈ.ಭರತ್ ಶೆಟ್ಟಿ.

    ನಗರಕ್ಕೆ ಹೊಂದಿಕೊಂಡಂತಿರುವ ಹೊರರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದ್ದು, ಅದರಂತೆ ನೀರುಮಾರ್ಗ-ಅಡ್ಯಾರ್‌ಪದವು-ಅರ್ಕುಳ ರಸ್ತೆ ಅಗಲಗೊಳಿಸಿ ಡಾಂಬರು ಹಾಕುವ ಕಾಮಗಾರಿ ನಡೆಯುತ್ತಿದೆ. ಮೊದಲ ಹಂತದ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ.

    ಡಾ.ವೈ.ಭರತ್ ಶೆಟ್ಟಿ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts