More

    ಗ್ರಾಮೀಣ ಭಾಗದ ಮನೆ ಮನೆಗೆ ಜಲ ಜೀವನ್ ಮಿಷನ್‌ನಿಂದ ನೀರು

    ಕನಕಗಿರಿ: ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ನೀರಿನ ಸೌಕರ್ಯ ಕಲ್ಪಿಸಲು ನಲ್ಲಿ ಸಂಪರ್ಕ ಕಲ್ಪಿಸುತ್ತಿದೆ ಎಂದು ಗಂಗಾವತಿ ತಾಪಂ ಇಒ ಡಾ.ಡಿ.ಮೋಹನ್ ಹೇಳಿದರು.

    ಪಟ್ಟಣದ ಯಾತ್ರಿ ನಿವಾಸದಲ್ಲಿ ಸೋಮವಾರ ಜಲ ಜೀವನ್ ಮಿಷನ್ (ಜೆಜೆಎಂ) ಅನುಷ್ಠ್ಠಾನ ಕುರಿತು ಇಲಾಖೆ ಅಧಿಕಾರಿಗಳು, ಗ್ರಾಪಂ ಪಿಡಿಒಗಳು, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಗ್ರಾಮೀಣ ಭಾಗದ ಪ್ರತಿ ವ್ಯಕ್ತಿಗೆ ದಿನಕ್ಕೆ 55 ಲೀಟರ್ ನೀರು ಕೊಡುವುದು ಯೋಜನೆಯ ಗುರಿಯಾಗಿದೆ. ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಗ್ರಾಪಂ ಅಧಿಕಾರಿಗಳು ನಿಗಾವಹಿಸಬೇಕು ಎಂದು ಹೇಳಿದರು.

    ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇ ಚಿದಾನಂದ ಮಾತನಾಡಿ, ಕನಕಗಿರಿ ತಾಲೂಕಿನ 56 ಹಳ್ಳಿಗಳಲ್ಲಿ ಮೊದಲ ಹಂತದಲ್ಲಿ ಜೆಜೆಎಂ ಕಾಮಗಾರಿ ಆರಂಭಿಸಲಾಗುತ್ತಿದೆ. ಈಗಾಗಲೇ ತಾಲೂಕಿನ ಎಷ್ಟು ಗ್ರಾಮಗಳಲ್ಲಿ ನಲ್ಲಿ ಸಂಪರ್ಕ ನೀಡಲಾಗಿದೆ. ಇನ್ನು ಎಷ್ಟು ಬೇಕಿದೆ ಎಂಬ ಮಾಹಿತಿಯನ್ನು ಗ್ರಾಪಂಗಳಿಂದ ಸಂಗ್ರಹಿಸಿ ಕ್ರಿಯಾಯೋಜನೆ ತಯಾರಿಸಲಾಗಿದೆ. ಟೆಂಡರ್ ಪಡೆದ ಗುತ್ತಿಗೆದಾರರು ಕಾಮಗಾರಿ ಆರಂಭಿಸಲಿದ್ದಾರೆ ಎಂದರು.

    ಪ್ರೋಬೆಷನರಿ ಎಸಿ ಹಾಗೂ ಕನಕಗಿರಿ ತಾಪಂ ಇಒ ಕಾವ್ಯರಾಣಿ ಮಾತನಾಡಿ, ಗ್ರಾಮಕ್ಕೆ ನಲ್ಲಿ ಸಂಪರ್ಕ ಕಲ್ಪಿಸುವ ಸಾಮಗ್ರಿಗಳನ್ನು ಪಿಡಿಒಗಳು, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಪರಿಶೀಲಿಸಿ ಗುಣಮಟ್ಟದ ಕಾಮಗಾರಿಗಾಗಿ ಎಲ್ಲರೂ ನಿಗಾವಹಿಸಬೇಕು ಎಂದು ತಿಳಿಸಿದರು. ತಾಪಂ ಯೋಜನಾ ನಿರ್ದೇಶಕ ಕೆ.ರಾಜಶೇಖರ, ಸಹಾಯಕ ನಿರ್ದೇಶಕ ವೀರಣ್ಣ ನಕ್ರಳ್ಳಿ, ಗ್ರಾಪಂ ಪಿಡಿಒಗಳಾದ ರಾಮಾ ನಾಯಕ, ನಾಗೇಶ ಬಡಿಗೇರ, ಶಂಶೀರ್ ಅಲಿ, ರವೀಂದ್ರ ಕುಲಕರ್ಣಿ ಇತರರಿದ್ದರು.

    ಅಡುಗೆಯಿಲ್ಲದೆ ಊಟಕ್ಕೆ ಕರೆದಂತೆ !
    ಗ್ರಾಮಕ್ಕೆ ನೀರು ತಂದು ಆಮೇಲೆ ಮನೆಗೂ ಮನೆಗೂ ನಲ್ಲಿಗಳನ್ನು ಅಳವಡಿಸಲು ಮುಂದಾಗಬೇಕು. ಇಲ್ಲವಾದರೆ ಈ ಯೋಜನೆ ಅಡುಗೆಯಿಲ್ಲದೇ ಊಟಕ್ಕೆ ಕರೆದಂತಾಗುತ್ತದೆ ಎಂದು ಹಿರೇಖೇಡ ಗ್ರಾಪಂ ಅಧ್ಯಕ್ಷ ಭೀಮನಗೌಡ ಸಭೆಯಲ್ಲಿ ಚಟಾಕಿ ಸಿಡಿಸಿದರು. ನೀರಿನ ಸೌಲಭ್ಯಕ್ಕಿಂತ ಮೊದಲು ಮನೆಗೆ ಮನೆಗೆ ನಲ್ಲಿ ಅಳವಡಿಸಿ ನಂತರ ನೀರು ಲಭ್ಯವಾಗದಿದ್ದರೆ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಗ್ರಾಮೀಣ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಸಭೆಯ ಗಮನಕ್ಕೆ ತಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts