More

    ಸಮಾಜದಲ್ಲಿ ಆರೆಸ್ಸೆಸ್ ಪ್ರಭಾವ ವೃದ್ಧಿಗೆ ಸಂತಸ: ಪ್ರಧಾನ ಕಾರ್ಯದರ್ಶಿಯಾಗಿ ಕರ್ನಾಟಕದ ಹೊಸಬಾಳೆ ಪುನರಾಯ್ಕೆ

    ನಾಗ್ಪುರ: ಸಮಾಜದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಪ್ರಭಾವ ಹೆಚ್ಚಾಗುತ್ತಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ (ಸರ ಕಾರ್ಯವಾಹ) ದತ್ತಾತ್ರೇಯ ಹೊಸಬಾಳೆ ಸಂತೋಷ ವ್ಯಕ್ತಪಡಿಸಿದ್ದಾರೆ.

    ಮೂರು ದಿನ ನಡೆದ ಸಂಘ ಪರಿವಾರದ ಅತ್ಯುಚ್ಚ ನೀತಿ ನಿರೂಪಣಾ ಅಂಗವಾದ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಚುನಾವಣೆಯಲ್ಲಿ ಪುನರಾಯ್ಕೆಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹೊಸಬಾಳೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ವಣವಾಗಬೇಕೆಂಬ ಸಂಘದ ಕನಸು ನನಸಾಗಿದೆ ಎಂದು ಹೇಳಿದರು.

    ಶತಾಬ್ದಿ ಯೋಜನೆ: ಆರೆಸ್ಸೆಸ್​ನ ಶತಮಾನೋತ್ಸವದ ನಿಮಿತ್ತ ಸಂಘಟನಾ ದೃಷ್ಟಿಯಿಂದ ಸಂಘದ ಕಾರ್ಯವಿಸ್ತಾರದ ಕುರಿತು ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಹೊಸಬಾಳೆ ಹೇಳಿದರು. 2025ರ ವಿಜಯದಶಮಿಯಂದು ಶತಾಬ್ದಿ ಸಮಾರಂಭ ಆರಂಭವಾಗಲಿದೆ ಎಂದರು.

    ದೇಶದ ಪ್ರಗತಿಯ ವೇಗವನ್ನು ಕುಂಠಿತಗೊಳಿಸುವ ಶಕ್ತಿಗಳು ಆಗಾಗ ತಲೆಯೆತ್ತುತ್ತವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ರಾಷ್ಟ್ರದ ವಿರುದ್ಧ ಯಾವುದೇ ಕೆಲಸಗಳಾದರೂ ಅದರ ವಿರುದ್ಧ ದನಿಯೆತ್ತುವ ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಸಂಘ ಮಾಡುತ್ತಿದೆ ಎಂದು ತಿಳಿಸಿದರು.

    ಮತದಾನಕ್ಕೆ ಜಾಗೃತಿ: ಮುಂಬರುವ ಲೋಕಸಭೆ ಚುನಾವಣೆಯನ್ನು ಪ್ರಸ್ತಾಪಿಸಿದ ಹೊಸಬಾಳೆ, ಮುಂದಿನ ದಿನಗಳಲ್ಲಿ ದೇಶವನ್ನು ಉತ್ತಮಗೊಳಿಸುವ ಹಾಗೂ ಪ್ರಜಾಪ್ರಭುತ್ವ, ಏಕತೆ ಮತ್ತು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಶೇ. 100 ಮತದಾನವಾಗುವಂತೆ ಆರೆಸ್ಸೆಸ್ ಸ್ವಯಂಸೇವಕರು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಲಿದ್ದಾರೆ ಎಂದು ಹೇಳಿದರು.

    ಪುನರಾಯ್ಕೆ: ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕರ್ನಾಟಕ ಮೂಲದ ದತ್ರಾತ್ರೇಯ ಹೊಸಬಾಳೆ ಭಾನುವಾರ ಎರಡನೇ ಅವಧಿಗೆ ಪುನರಾಯ್ಕೆಗೊಂಡಿದ್ದಾರೆ. ಆರು ಮಂದಿ ಸಹಸರಕಾರ್ಯವಾಹರಾಗಿ ಡಾ.ಕೃಷ್ಣ ಗೋಪಾಲ್, ಮುಕುಂದ ಸಿ.ಆರ್., ಅರುಣ್ ಕುಮಾರ್, ರಾಮದತ್ ಚಕ್ರಧರ್, ಅತುಲ್ ಲಿಮಯೆ, ಅಲೋಕ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಹೊಸಬಾಳೆಯನ್ನು ಸಂಸ್ಥೆಯ ಎರಡನೇ ಅತ್ಯುನ್ನತ ಹುದ್ದೆಗೆ ಮೂರು ವರ್ಷ ಅವಧಿಗೆ ಎಬಿಪಿಎಸ್ ಆಯ್ಕೆ ಮಾಡಿತು. 2027ರವರೆಗೆ ಅವರು ಈ ಹುದ್ದೆಯಲ್ಲಿ ಇರಲಿದ್ದಾರೆ. 2024ರ ಲೋಕಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಣೆ ಜೊತೆಗೆ ಕಾಕತಾಳೀಯವೆನ್ನುವಂತೆ ಎಬಿಪಿಎಸ್ ಸಭೆ ನಾಗ್ಪುರದಲ್ಲಿ ನಡೆಯಿತು. ಆರೆಸ್ಸೆಸ್ ಸಂಯೋಜಿತ ವಿವಿಧ ಸಂಘಟನೆಗಳ 1,500ಕ್ಕೂ ಅಧಿಕ ಪ್ರತಿನಿಧಿಗಳು ಮೂರು ದಿನಗಳ ಸಭೆಯಲ್ಲಿ ಭಾಗವಹಿಸಿದ್ದರು. 2021ರಿಂದಲೂ ಹೊಸಬಾಳೆ ಸುರೇಶ್ ಭಯ್ಯಾಜಿ ಜೋಷಿ ಸ್ಥಾನದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೋಷಿ ಒಂಬತ್ತು ವರ್ಷ ಕಾಲ ಮೂರು ಅವಧಿಗೆ ಆ ಹುದ್ದೆಯಲ್ಲಿದ್ದರು. ಸರಕಾರ್ಯವಾಹ ಹುದ್ದೆಯು ಸರಸಂಘಚಾಲಕ ಹುದ್ದೆಯ ನಂತರದ ಸ್ಥಾನವಾಗಿದೆ. ಪ್ರಸ್ತುತ ಮೋಹನ್ ಭಾಗವತ್ ಸರಸಂಘಚಾಲಕರಾಗಿದ್ದಾರೆ.

    ಸೊರಬದಲ್ಲಿ ಜನನ: ಹೊಸಬಾಳೆ, ಶಿವಮೊಗ್ಗದ ಸೊರಬದಲ್ಲಿ ಜನಿಸಿದವರಾಗಿದ್ದು 1968ರಲ್ಲಿ ಆರೆಸ್ಸೆಸ್ ಹಾಗೂ 1972ರಲ್ಲಿ ಎಬಿವಿಪಿ ಸೇರಿದ್ದರು.

    ಏಳು ತಿಂಗಳ ಗರ್ಭಿಣಿ ಮಾಡೋ ಕೆಲಸನಾ ಇದು? ನಟಿ ಅಮಲಾ ಪೌಲ್​ಗೆ ನೆಟ್ಟಿಗರ ತರಾಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts