More

    ಸಾಮರಸ್ಯದಿಂದ ಕರೊನಾ ವಿರುದ್ಧ ಹೋರಾಡಬೇಕು ಎಂದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್; ಪಾಲ್ಗಾರ್​ ಹತ್ಯೆ, ತಬ್ಲಿಘಿ ಬಗ್ಗೆ ಹೇಳಿದ್ದೇನು?

    ನಾಗ್ಪುರ: ಕರೊನಾ ವೈರಸ್​ನಿಂದ ಭಾರತ ಸಂಪೂರ್ಣ ಲಾಕ್​ಡೌನ್ ಆದ ಬಳಿಕ ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ ಆರ್​ಎಸ್​ಎಸ್​ ಸರಸಂಘಸಂಚಾಲಕ ಮೋಹನ್​ ಭಾಗವತ್​ ಅವರು, ದೇಶದ ಜನತೆಗೆ ಒಂದು ಎಚ್ಚರಿಕೆಯನ್ನು ನೀಡಿದ್ದಾರೆ.

    ಸಾಂಕ್ರಾಮಿಕ ಕರೊನಾ ವಿರುದ್ಧ ಹೋರಾಡಲು ಎಲ್ಲರೂ ಸಾಮರಸ್ಯದಿಂದ ಕೆಲಸ ಮಾಡಬೇಕು ಎಂದು ಕರೆ ಕೊಟ್ಟ ಮೋಹನ್ ಭಾಗವತ್​ ಅವರು, ಈ ಕೊವಿಡ್​ ಪರಿಸ್ಥಿತಿಯನ್ನು ಕೆಲವು ದೇಶ ವಿರೋಧಿ ಗುಂಪುಗಳು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿವೆ. ಅಂಥವರ ಬಗ್ಗೆ ಜಾಗರೂಕರಾಗಿರಿ ಎಂದು ಎಚ್ಚರಿಕೆ ನೀಡಿದ್ದಾರೆ.

    ಕೊವಿಡ್​ನಿಂದ ಉಂಟಾಗಿರುವ ಈ ಸಂಕಷ್ಟ, ಆತಂಕದ ಪರಿಸ್ಥಿತಿಯಲ್ಲಿ ಭಾರತ್​ ತೇರೆ ತುಕ್ಡೆ ಹೋಂಗೆ ಗ್ಯಾಂಗ್​​ನ ಸದಸ್ಯರು ಉಳಿದ ಸಾರ್ವಜನಿಕರನ್ನು ಪ್ರಚೋದಿಸುತ್ತಿದ್ದಾರೆ. ಇದರಲ್ಲಿ ಕೆಲವು ರಾಜಕಾರಣಿಗಳೂ ಭಾಗಿಯಾಗಿದ್ದಾರೆ. ಆದರೆ ಯಾರೂ ಸಿಟ್ಟಾಗಬೇಡಿ…ಉದ್ವೇಗಕ್ಕೆ ಒಳಗಾಗಬೇಡಿ. ಎಲ್ಲರೂ ಏಕಸ್ಥಾಯಿಯಿಂದ ಹೋರಾಡಬೇಕು ಎಂದು ಮೋಹನ್​ ಭಾಗವತ್​ ಹೇಳಿದ್ದಾರೆ.

    ನಾಗ್ಪುರದಿಂದ ವಿಡಿಯೋ ಮೂಲಕ ಮಾತನಾಡಿದ ಅವರು, ದೆಹಲಿಯ ನಿಜಾಮುದ್ದೀನ್​ ಮರ್ಖಜ್​​ನಲ್ಲಿ ತಬ್ಲಿಘಿ ಜಮಾತ್​ ನಡೆಸಿದ ಧಾರ್ಮಿಕ ಸಮಾವೇಶ, ಅದಾದ ನಂತರ ನಡೆದ ಘಟನೆಗಳನ್ನು ಪ್ರಸ್ತಾಪಿಸಿದ ಮೋಹನ್​ ಭಾಗವತ್​ ಅವರು, ಆ ಸಮುದಾಯದ ಕೆಲವರು ಮಾಡಿದ ತಪ್ಪಿಗೆ ಇಡೀ ಸಮುದಾಯದ ವಿರುದ್ಧ ನಾವು ಹಗೆ ಸಾಧಿಸಬಾರದು. ಅಂತಹ ದ್ವೇಷ ಬೆಳೆಯಲು ಅವಕಾಶ ಮಾಡಿಕೊಡಬಾರದು. ನಾವೆಲ್ಲ 130 ಕೋಟಿ ಭಾರತೀಯರೂ ಒಂದೇ ಎಂದು ಹೇಳಿದರು.

    ಹಾಗೇ, ಮಹಾರಾಷ್ಟ್ರದ ಪಾಲ್ಗಾರ್​​ನಲ್ಲಿ ನಡೆದ ಇಬ್ಬರು ಹಿಂದು ಸಾಧುಗಳು ಮತ್ತು ಅವರ ಕಾರಿನ ಚಾಲಕನ ಹತ್ಯೆ ಬಗ್ಗೆಯೂ ಆರ್​ಎಸ್​ಎಸ್ ಮುಖ್ಯಸ್ಥರು ಪ್ರಸ್ತಾಪ ಮಾಡಿದರು.

    ಸ್ಥಳದಲ್ಲಿದ್ದರೂ ದಾಳಿಕೋರರನ್ನು ನಿಯಂತ್ರಿಸಲಾಗದ ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಾನೂನು ಕೈಗೆ ತೆಗೆದುಕೊಂಡ ದುಷ್ಕರ್ಮಿಗಳನ್ನೂ ದೂಷಿಸಿದರು.
    ಪ್ರಸ್ತುತ ಪರಿಸ್ಥಿತಿ ಮತ್ತು ಇದರಲ್ಲಿ ನಮ್ಮ ಪಾತ್ರ ಎಂಬ ವಿಚಾರದ ಬಗ್ಗೆ ಮಾತನಾಡಿದ ಮೋಹನ್​ ಭಾಗವತ್​, ನಾವು ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕು ಮತ್ತು ನಮ್ಮ ಸುತ್ತಲಿನ ಪರಿಸರವನ್ನೂ ಉತ್ತಮಗೊಳಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.

    ಲಾಕ್​ಡೌನ್​ನಿಂದ ಸಂತ್ರಸ್ತರಾಗಿರುವ ಅನೇಕ ಜನರಿಗೆ ದೇಶಾದ್ಯಂತ ಆರ್​​ಎಸ್​ಎಸ್​ ಸಹಾಯಹಸ್ತ ಚಾಚಿದೆ. ದೇಶದ 55,000 ಪ್ರದೇಶಗಳಲ್ಲಿ ಸುಮಾರು ಮೂರು ಲಕ್ಷ ಸ್ವಯಂ ಸೇವಕರು ಬಡವರಿಗೆ, ನಿರಾಶ್ರಿತರಿಗೆ, ವಲಸೆ ಕಾರ್ಮಿಕರಿಗೆ ಊಟ, ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದುವರೆಗೆ ಆರ್​ಎಸ್​ಎಸ್​ ತನ್ನ ಸಂಪರ್ಕ ಬಳಸಿ 33 ಲಕ್ಷ ರೇಷನ್​ ಕಿಟ್​ಗಳನ್ನು ಅಗತ್ಯ ಇರುವವರಿಗೆ ವಿತರಣೆ ಮಾಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts