More

    ಅಂಗನವಾಡಿಗಳಿಗೆ ಮೊಟ್ಟೆ ಬಿಸಿ

    ಚಿಕ್ಕಮಗಳೂರು: ಕೋಳಿ ಮಾಂಸದ ದರ ಹೆಚ್ಚಾದ ಬೆನ್ನಲ್ಲೇ ಮೊಟ್ಟೆಗೂ ಭಾರಿ ಬೇಡಿಕೆ ಕಂಡು ಬಂದಿದೆ. ಚಿಲ್ಲರೆ ಅಂಗಡಿಗಳಲ್ಲಿ ಪ್ರತಿ ಮೊಟ್ಟೆ 6ರಿಂದ 7 ರೂ.ಗೆ ಮಾರಾಟ ಆಗುತ್ತಿರುವುದು ಅಂಗನವಾಡಿ ಕಾರ್ಯಕರ್ತೆಯರ ಚಿಂತೆಗೆ ಕಾರಣವಾಗಿದೆ.

    ಜಿಲ್ಲೆಯಲ್ಲಿ 1667 ಅಂಗನವಾಡಿ ಕೇಂದ್ರ ಮತ್ತು 158 ಮಿನಿ ಅಂಗನವಾಡಿ ಕೇಂದ್ರಗಳಿದ್ದು 1825 ಅಂಗನವಾಡಿ ಕಾರ್ಯಕರ್ತೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ಗೌರವಧನ ಸೇರಿ ಹಲವು ಸಂಕಷ್ಟಗಳ ನಡುವೆ ಕೆಲಸ ಮಾಡುತ್ತಿರುವ ಕಾರ್ಯಕರ್ತೆಯರಿಗೆ ಇದೀಗ ಮೊಟ್ಟೆಯ ದರ ಕೂಡ ಭಾರವಾಗುತ್ತಿದೆ.

    ಸೆಪ್ಟೆಂಬರ್ ಅಂತ್ಯಕ್ಕೆ 53705 ಸಾಮಾನ್ಯ ಮಕ್ಕಳಿಗೆ ವಾರಕ್ಕೆ ಎರಡು ದಿನ, 206 ಅಪೌಷ್ಟಿಕ ಮಕ್ಕಳಿಗೆ ವಾರಕ್ಕೆ ಐದು ದಿನ, 5603 ಗರ್ಭಿಣಿಯರು ಮತ್ತು 5936 ಬಾಣಂತಿಯರಿಗೆ ಪ್ರತಿದಿನ (ಭಾನುವಾರ ಮತ್ತು ಸರ್ಕಾರಿ ರಜೆ ದಿನ ಹೊರತುಪಡಿಸಿ)ವೂ ಮೊಟ್ಟೆ ವಿತರಿಸಲಾಗಿದೆ. ಆದರೆ ಪ್ರತಿ ತಿಂಗಳು ಗರ್ಭಿಣಿಯರು ಮತ್ತು ಬಾಣಂತಿಯರಿಗೆ 4.33 ಲಕ್ಷ ರೂ. ಹಾಗೂ ಸಾಮಾನ್ಯ ಮಕ್ಕಳಿಗೆ 6.44 ಲಕ್ಷ ರೂ. ಮತ್ತು ಅಪೌಷ್ಟಿಕ 6 ಸಾವಿರ ರೂ. ಸೇರಿ ಪ್ರತಿ ತಿಂಗಳು ಬರೋಬ್ಬರಿ 10.83 ಲಕ್ಷ ರೂ. ಹೆಚ್ಚುವರಿ ಹೊರೆಯಾಗುತ್ತಿದೆ. ಹೆಚ್ಚುವರಿ ದರವನ್ನು ಅಂಗನವಾಡಿ ಕಾರ್ಯಕರ್ತೆಯರೇ ಭರಿಸಬೇಕಾಗಿದೆ. ಜಿಲ್ಲೆಯ ಪ್ರತಿ ಅಂಗನವಾಡಿಗೆ ತಿಂಗಳಿಗೆ 593 ರೂ. ವರೆಗೆ ಹೊರೆ ಬೀಳá-ತ್ತಿದೆ.

    ಮೊಟ್ಟೆ ಇಡುವ ಕೋಳಿ ಸಾಕಣೆ ಕುಂಠಿತ: ಕರೊನಾದಿಂದ ಕಳೆದ ಎರಡು ತಿಂಗಳ ಹಿಂದೆ ಕೋಳಿ ದರ ನೆಲ ಕೆಚ್ಚಿದ ಪರಿಣಾಮ ಇದೀಗ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿತ್ತು. ಸಾವಿರಾರು ಕೋಳಿಗಳನ್ನು ಫೌಲ್ಟ್ರಿ ಮಾಲೀಕರು ಗುಂಡಿ ತೆಗೆದು ಮುಚ್ಚಿದ್ದರು. ಈ ವೇಳೆ ಕೋಳಿ ಮರಿ ಮತ್ತು ಮೊಟ್ಟೆಗಳ ಉತ್ಪಾದನಾ ಘಟಕಗಳ ನಿರ್ವಹಣೆಗೆ ಹಿಂದೇಟು ಹಾಕಿದರು. ಅದರ ಪರಿಣಾಮವೇ ಇಂದು ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ. ಬೇಡಿಕೆಯಷ್ಟು ಮೊಟ್ಟೆ ಪೂರೈಕೆ ಆಗುತ್ತಿಲ್ಲ. ಇದರಿಂದ ಚಿಲ್ಲರೆ ಮಾರುಕಟ್ಟೆಯಲ್ಲೇ ದರ ಹೆಚ್ಚಳವಾಗಿದೆ. ಕೋಳಿ ಮಾಂಸಕ್ಕೆ ಬೇಡಿಕೆ ಕುಸಿದು ಕೋಳಿ ಮರಿ ಉತ್ಪಾದನಾ ಘಟಕಗಳು ಪ್ರತಿದಿನ ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದವು. ಅದರಿಂದ ಇದೀಗ ಚಿಕನ್ ಜತೆಗೆ ಮೊಟ್ಟೆ ದರವೂ ಏರಿಕೆ ಕಂಡಿದೆ. ಸಗಟು ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ 5.50 ರೂ. ಇದ್ದರೆ ಚಿಲ್ಲರೆ ಅಂಗಡಿಗಳಲ್ಲಿ 6ರಿಂದ 7 ರೂ.ವರೆಗೆ ಮಾರಾಟವಾಗುತ್ತಿದೆ ಎನ್ನುತ್ತಾರೆ ಮೊಟ್ಟೆ ಉತ್ಪಾದನಾ ಘಟಕಗಳ ವ್ಯಾಪಾರಿಗಳು.

    ಸಂಕಷ್ಟಗಳ ಜತೆಗೆ ಕಾರ್ಯಕರ್ತೆಯರ ಕಾರ್ಯ: ಅಂಗನವಾಡಿ ಕಾರ್ಯಕರ್ತೆಯರನ್ನೂ ಕರೊನಾ ಸೇನಾನಿಗಳೆಂದು ಗುರುತಿಸಿದ್ದು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಪ್ರತಿನಿತ್ಯವೂ ದುಡಿಸಿಕೊಳ್ಳಲಾಗುತ್ತಿದೆ. ಜತೆಗೆ ಸರ್ವೆ, ಗರ್ಭೀಣಿಯರು, ಬಾಣಂತಿಯರ ಮನೆಗಳಿಗೆ ಭೇಟಿ, ಮಕ್ಕಳಿಗೆ ಇಂಜೆಕ್ಷನ್ ನೀಡುವ ಮಾಹಿತಿ ಒಳಗೊಂಡಂತೆ ಸರ್ಕಾರದ ಅನೇಕ ಯೋಜನೆಗಳಿಗೆ ಕಾರ್ಯಕರ್ತೆಯರನ್ನು ಬಳಸಿಕೊಳ್ಳಲಾಗುತ್ತಿದೆ. ಈ ನಡುವೆ ಕರೊನಾ ಕಾಣಿಸಿಕೊಂಡ ಬಳಿಕ ಮಕ್ಕಳು, ಬಾಣಂತಿಯರು, ಗರ್ಭಿಣಿಯರ ಮನೆಗಳಿಗೆ ತೆರಳಿ ಆಹಾರ, ದವಸಧಾನ್ಯಗಳನ್ನು ವಿತರಿಸಬೇಕಾಗಿದೆ.

    ಮೊಟ್ಟೆ ಬದಲು ಹೆಸರು ಕಾಳು ತಲುಪುತ್ತಿಲ್ಲ: ಬಹಳಷ್ಟು ಗರ್ಭಿಣಿಯರು ಮತ್ತು ಬಾಣಂತಿಯರು ಮೊಟ್ಟೆ ತಿನ್ನುವುದಿಲ್ಲ. ಆ ಕಾರಣದಿಂದ ಮೊಟ್ಟೆ ಬದಲಿಗೆ ಪ್ರತಿ ತಿಂಗಳು 1.300 ಕೆಜಿ ಹೆಸರು ಕಾಳು ವಿತರಣೆ ಮಾಡಬೇಕೆಂದು ಸರ್ಕಾರವೇ ಆದೇಶಿಸಿದೆ. ಈ ನಡುವೆ ಅಂಗನವಾಡಿ ಕಾರ್ಯಕರ್ತೆಯರ ಬಳಿ ಮೊಟ್ಟೆ ಬದಲು ಹೆಸರು ಅಥವಾ ಶೇಂಗಾ ಬೀಜಕ್ಕೆ ಬೇಡಿಕೆ ಇಡುತ್ತಿದ್ದಾರೆ. ಆದರೆ ಬಹಳಷ್ಟು ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಸರ್ಕಾರದ ಈ ಯೋಜನೆ ತಲುಪುತ್ತಿಲ್ಲ ಎಂಬ ಆರೋಪಗಳೂ ಕೇಳಿಬಂದಿವೆ.

    ರಾಜ್ಯ ಸರ್ಕಾರ ಪ್ರತಿ ಮೊಟ್ಟೆಗೆ 5 ರೂ. ದರ ನಿಗದಿ ಮಾಡಿದೆ. ಇದರಿಂದ ಪ್ರತಿನಿತ್ಯವೂ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಪ್ರತಿ ಮೊಟ್ಟೆಗೆ 1ರಿಂದ 2 ರೂ. ಹೊರೆ ಬೀಳುತ್ತಿದೆ. ತಿಂಗಳಿಗೆ ಕನಿಷ್ಠ 12ರಿಂದ 13 ಲಕ್ಷ ರೂ. ಹೊರೆಯಾಗುತ್ತಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸರ್ಕಾರವೇ 5 ರೂ. ದರ ನಿಗದಿ ಮಾಡಿರುವುದರಿಂದ ನಾವೇನು ಮಾಡಲು ಸಾಧ್ಯವಿಲ್ಲ ಎಂಬ ನಿರುತ್ತರ ಸಿಗುತ್ತಿದೆ ಎಂಬುದು ಹೆಸರು ಹೇಳಲಿಚ್ಛಿಸದ ಅಂಗನವಾಡಿ ಕಾರ್ಯಕರ್ತೆಯ ಅಳಲು.

    ಮೊಟ್ಟೆ ಬೆಲೆ ಹೆಚ್ಚಳ ಕುರಿತಂತೆ ಅಂಗನವಾಡಿ ಕಾರ್ಯಕರ್ತೆಯರು ಸಲ್ಲಿಸಿರುವ ಮನವಿಯನ್ನು ನಿರ್ದೇಶನಾಲಯಕ್ಕೆ ಕಳುಹಿಸಲಾಗಿದೆ. ಇದು ರಾಜ್ಯದ ಸಮಸ್ಯೆಯಾಗಿದ್ದು ಸರ್ಕಾರದ ಮಟ್ಟದಲ್ಲಿ ದರ ನಿಗದಿ ಬಗ್ಗೆ ನಿರ್ಧಾರವಾಗಬೇಕಿರುವುದರಿಂದ ಮನವಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಸೂಚನೆ ಬಂದಾಕ್ಷಣ ಸಮಸ್ಯೆ ಬಗೆಹರಿಯುತ್ತದೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಭಾರ ಉಪ ನಿರ್ದೇಶಕ ಬಿ.ಮಲ್ಲಿಕಾರ್ಜುನ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts