More

    ದೇಶ ನಿರ್ಮಾಣದಲ್ಲಿ ಶಿಲ್ಪಿಗಳ ಪಾತ್ರ ಹಿರಿದು: ಎಸ್.ಎನ್.ಚನ್ನಬಸಪ್ಪ

    ಶಿವಮೊಗ್ಗ: ಶಿಲ್ಪಕಲೆಯ ಮೂಲಕ ತಮ್ಮದೇ ಆದ ರೀತಿಯಲ್ಲಿ ದೇಶ ಕಟ್ಟುವ ಕಾರ್ಯ ಮಾಡಿರುವುದು ಜಕಣಾಚಾರಿಯಂತಹ ಶಿಲ್ಪಿಗಳು. ಸೋಮನಾಥ ದೇವಾಲಯ, ಬೇಲೂರು, ಹಳೇಬೀಡು ಸೇರಿದಂತೆ ನೂರಾರು ಕಡೆಗಳಲ್ಲಿ ಶಿಲ್ಪಿಗಳ ಪ್ರತಿಭೆ ಅನಾವರಣಗೊಂಡಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

    ಜಿಲ್ಲಾಡಳಿತದಿಂದ ಸೋಮವಾರ ಏರ್ಪಡಿಸಿದ್ದ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ದೇವರ ಬಗ್ಗೆ ನಮ್ಮ ಮನಸ್ಸಿನಲ್ಲಿ ಒಂದು ಚಿತ್ರಣ ಮೂಡುವಂತೆ ಮಾಡಿದ ಅನೇಕ ಶಿಲ್ಪಿಗಳ ಪೈಕಿ ಜಕಣಾಚಾರಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ ಎಂದರು.
    ನಮ್ಮದು ಸಾಂಸ್ಕೃತಿಕ ನೆಲೆಗಟ್ಟಿನ ಮತ್ತು ಉನ್ನತ ಪರಂಪರೆಯ ರಾಷ್ಟ್ರವಾಗಿದೆ. ವಿಶ್ವವೇ ನಮ್ಮೆಡೆ ನೋಡುವಂತೆ ಮಾಡಿರುವುದು ಶಿಲ್ಪಿಗಳು. ಇವರೆಲ್ಲರೂ ದೇಶದ ಶಿಲ್ಪಕಲೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ನಮ್ಮ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಶಿಲ್ಪಕಲೆ ದೇಶದ ಅಸ್ಮಿತೆಯಾಗಿದೆ. ದೇವಾಲಯಗಳ ಬಗ್ಗೆ ಶ್ರದ್ಧೆ, ನಂಬಿಕೆ ಮತ್ತು ಆಸಕ್ತಿ ಹೊಂದಿರುವವರು ನಾವು. ನಮ್ಮದು ಸನಾತನ, ದೇವ ನಿರ್ಮಿತ ದೇಶ. ಸೋಮನಾಥಪುರ ಸೇರಿದಂತೆ ಅಯೋಧ್ಯೆ, ಕಾಶಿ ವಿಶ್ವನಾಥ ಹೀಗೆ ಅನೇಕ ದೇವಾಲಯಗಳನ್ನು ಭಗ್ನಗೊಳಿಸಲಾಗಿತ್ತು. ಹೋರಾಟದ ಮೂಲಕ ನಮ್ಮ ದೇವಾಲಯಗಳು ಮತ್ತು ಪರಂಪರೆಯನ್ನು ಉಳಿಸಿಕೊಂಡಿದ್ದೇವೆ ಎಂದು ಹೇಳಿದರು.
    ಶೃಂಗೇರಿಯ ಕನ್ನಡ ಪ್ರಾಧ್ಯಾಪಕ ಡಾ. ಕೆ.ಎಸ್.ವೆಂಕಪ್ಪ ಆಚಾರ್ಯ ವಿಶೇಷ ಉಪನ್ಯಾಸ ನೀಡಿ, ನಮ್ಮ ದೇಶದ ಕಲೆ, ಕೌಶಲ, ಸಾಧನೆಗಳಿಂದಾಗಿ ವಿಶ್ವ ಇಂದು ನಮ್ಮನ್ನು ಗುರುತಿಸುತ್ತಿದೆ. ಆದರೆ ಹಿಂದಿನ ಅನೇಕ ಶಿಲ್ಪಕಲೆಗಳ ನಿರ್ಮಾತೃಗಳನ್ನು ಎಲ್ಲೂ ತೋರಿಸಿಲ್ಲ. ಕಲೆಯ ನಿರ್ಮಾತೃಗಳನ್ನು ಜಗತ್ತಿಗೆ ತೋರಿಸಬೇಕಿದೆ. ಶಿಲ್ಪಿ ಅಥವಾ ಕಲಾವಿದನನ್ನು ಮುಂದಿನ ಪೀಳಿಗೆಗೆ ತಿಳಿಯಪಡಿಸಬೇಕಿದ್ದು ಈ ಸಂಸ್ಮರಣಾ ದಿನಚರಣೆಯು ಇಂತಹ ಶಿಲ್ಪಿಗಳನ್ನು ಸಂಸ್ಮರಿಸಲು ಮತ್ತು ಸಮುದಾಯದವರೆಲ್ಲ ಒಟ್ಟುಗೂಡಲು ಉತ್ತಮ ವೇದಿಕೆಯಾಗಿದೆ ಎಂದರು.
    12ನೇ ಶತಮಾನದಲ್ಲಿ ತುಮಕೂರು ಬಳಿಯ ಕ್ರೀಡಾಪುರದಲ್ಲಿ ಜಕಣಾಚಾರಿ ಜನಿಸಿದರು. ವಿಶ್ವ ಪ್ರಸಿದ್ಧ ಬೇಲೂರು, ಹಳೇಬೀಡು, ಸೋಮನಾಥ ದೇವಾಲಯ ನಿರ್ಮಾಣ ಮಾಡಿ ತಮ್ಮ ಕಲೆ, ಕೌಶಲ, ಜಾಣ್ಮೆ, ಶ್ರದ್ದೆ ಮತ್ತು ಹಠವನ್ನು ಶಿಲ್ಪಕಲೆ ಮೂಲಕ ವಿಶ್ವಕ್ಕೇ ಸಾರಿದ್ದಾರೆ ಎಂದು ವಿವರಿಸಿದರು.
    ಶಿಲ್ಪಿಗಳಾದ ನವೀನ್ ಮತ್ತು ಭರತ್ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಮತ್ತು ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಜಿಲ್ಲಾ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಅಗರದಹಳ್ಳಿ ನಿರಂಜನಮೂರ್ತಿ, ಗೌರವಾಧ್ಯಕ್ಷ ಸತ್ಯನಾರಾಯಣ, ಕಾರ್ಯದರ್ಶಿ ಎನ್.ಟಿ.ಬಸವರಾಜ್, ಜಿಲ್ಲಾ ವಿಶ್ವಕರ್ಮ ಬ್ರಾಹ್ಮಣರ ಸಮಾಜದ ಅಧ್ಯಕ್ಷ ಸೋಮಾಚಾರಿ, ನಗರಸಭೆ ಮಾಜಿ ಉಪಾಧ್ಯಕ್ಷ ರಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts