More

    ನಿಗದಿತ ಓವರ್‌ಗಳ ತಂಡಕ್ಕೆ ರೋಹಿತ್ ಶರ್ಮ ಸಾರಥ್ಯ?

    ಮುಂಬೈ: ಅನುಭವಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಅವರಿಗೆ ಟಿ20 ವಿಶ್ವಕಪ್ ಮುಕ್ತಾಯಗೊಂಡ ಬಳಿಕ ಭಾರತ ನಿಗದಿತ ಓವರ್‌ಗಳ ತಂಡದ ನಾಯಕತ್ವ ಜವಾಬ್ದಾರಿ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಮೂರು ಮಾದರಿಗೂ ನಾಯಕನಾಗಿರುವ 32 ವರ್ಷದ ವಿರಾಟ್ ಕೊಹ್ಲಿ, ಮುಂದೆ ಕೇವಲ ಟೆಸ್ಟ್ ತಂಡ ಮುನ್ನಡೆಸಲಿದ್ದಾರೆ ಎನ್ನಲಾಗಿದೆ. ಭಾರತ ತಂಡದ ಅತ್ಯಂತ ಯಶಸ್ವಿ ನಾಯಕರಲ್ಲಿ ಕೊಹ್ಲಿ ಕೂಡ ಒಬ್ಬರಾಗಿದ್ದು, ಜವಾಬ್ದಾರಿ ಹಂಚಿಕೆ ದೃಷ್ಟಿಯಿಂದ ಮುಂಬೈ ಬ್ಯಾಟ್ಸ್‌ಮನ್ 34 ವರ್ಷದ ರೋಹಿತ್ ಶರ್ಮಗೂ ನಾಯಕತ್ವ ನೀಡಲಾಗುತ್ತಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದರೊಂದಿಗೆ ಕಳೆದ ಹಲವು ತಿಂಗಳಿಂದ ನಿಗದಿತ ಓವರ್‌ಗಳ ತಂಡಕ್ಕೆ ರೋಹಿತ್ ಶರ್ಮ ನಾಯಕನಾಗಲಿದ್ದಾರೆ ಎಂಬ ಸುದ್ದಿಗೆ ಇದೀಗ ಮತ್ತಷ್ಟು ಪುಷ್ಠಿ ನೀಡಿದೆ.

    ಭಾರತ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ಸರಣಿ ಜಯಿಸಿದ ಬಳಿಕವಂತು ಕೊಹ್ಲಿ ನಿಗದಿತ ಓವರ್‌ಗಳ ತಂಡದ ನಾಯಕತ್ವ ತ್ಯಜಿಸಲಿದ್ದಾರೆ ಎನ್ನಲಾಗಿತ್ತು. ನಾಯಕತ್ವ ಬಿಟ್ಟುಕೊಡುವ ಕುರಿತು ಸ್ವತಃ ವಿರಾಟ್ ಕೊಹ್ಲಿಯೇ ಮಾಹಿತಿ ನೀಡಲಿದ್ದು, ಬ್ಯಾಟಿಂಗ್ ಕಡೆ ಹೆಚ್ಚು ಗಮನ ಹರಿಸುವ ದೃಷ್ಟಿಯಿಂದ ಏಕದಿನ ಹಾಗೂ ಟಿ20 ನಾಯಕತ್ವ ಬಿಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಕುರಿತು ಯಾವುದೇ ರೀತಿ ಪ್ರತಿಕ್ರಿಯೆ ನೀಡಲು ಬಿಸಿಸಿಐ ಅಧಿಕಾರಿಗಳು ನಿರಾಕರಿಸಿದ್ದಾರೆ.

    ನಾಯಕತ್ವ ಬಿಡಲು ಬ್ಯಾಟಿಂಗ್ ಕಾರಣ
    2018ರ ಅವಧಿಯಲ್ಲಿ ಕೊಹ್ಲಿ ನಾಯಕತ್ವದಲ್ಲಿಯೇ ಭಾರತ ತಂಡ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನೆಲಗಳಲ್ಲಿ ಟೆಸ್ಟ್ ಸರಣಿ ಜಯಿಸಿತ್ತು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ತಂಡ ಉತ್ತಮ ಯಶ ಕಂಡಿದ್ದರೂ ವೈಯಕ್ತಿಕವಾಗಿ ಕೊಹ್ಲಿ ರನ್‌ಗಳಿಸಲು ವಿಲರಾಗುತ್ತಿದ್ದಾರೆ. ಮತ್ತಷ್ಟು ವರ್ಷ ಟೀಮ್ ಇಂಡಿಯಾಗೆ ಕೊಹ್ಲಿ ಸೇವೆ ಸಲ್ಲಬೇಕು, ಹೀಗಾಗಿ ನಾಯಕತ್ವ ವಿಭಜನೆಯೇ ಸೂಕ್ತ ಎಂದಿರುವ ಬಿಸಿಸಿಐ ಈ ಕುರಿತು ಕೊಹ್ಲಿ ಜತೆಗೆ ಮಾತುಕತೆಗೆ ಮುಂದಾಗಿದೆ. ಕೊಹ್ಲಿ ಕನಿಷ್ಠ 5 ರಿಂದ 6 ವರ್ಷಗಳ ಕಾಲ ಟೀಮ್ ಇಂಡಿಯಾದಲ್ಲಿ ಇರಬೇಕು, 2022ರ ಟಿ20 ಹಾಗೂ 2023ರ ಏಕದಿನ ವಿಶ್ವಕಪ್ ಟೂರ್ನಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಸಿಸಿಐ ಶೀಘ್ರವೇ ನಾಯಕತ್ವ ವಿಭಜನೆಗೆ ಮುಂದಾಗಲಿದೆ ಎಂದು ಹೇಳಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts