More

    ನೆಚ್ಚಿದ ಬೆಳೆಗೆ ರೋಗ ಬಾಧೆ-ಹೆಚ್ಚಿದ ಆತಂಕ

    ಲಕ್ಷ್ಮೇಶ್ವರ: ಮುಂಗಾರು ಮಳೆ ಕೊರತೆಯ ನಡುವೆಯೂ ಖರ್ಚು-ವೆಚ್ಚದ ಲೆಕ್ಕಾಚಾರ ಹಾಕಿದ ಬಹುತೇಕ ರೈತ ಸಮುದಾಯ ಗೋವಿನಜೋಳ ಬಿತ್ತನೆ ಮಾಡಿದ್ದಾರೆ. ಆದರೆ ಗೋವಿನ ಜೋಳ ಬೆಳೆ ಮೆಲೇಳುವ ಮೊದಲೇ ಲದ್ದಿಹುಳು ಬಾಧೆ ಆವರಿಸುತ್ತಿದ್ದು ರೈತರಿಗೆ ಸಂಕಷ್ಟ ತಪ್ಪದಂತಾಗಿದೆ.
    ಆಳಿನ ಸಮಸ್ಯೆ, ಕಡಿಮೆ ಖರ್ಚು, ನಿರ್ವಹಣೆ ಸುಲಭ ಎಂಬಿತ್ಯಾದಿ ಕಾರಣದಿಂದ ತಾಲೂಕಿನ ಬಹುತೇಕ ರೈತರು ಗೋವಿನಜೋಳ ಬೆಳೆಗೆ ಮಾರು ಹೋಗಿದ್ದಾರೆ. ಪರಿಣಾಮ ಲಕ್ಷ್ಮೇಶ್ವರ ತಾಲೂಕಿನ ಲಕ್ಷ್ಮೇಶ್ವರ ದೊಡ್ಡೂರ, ಶಿಗ್ಲಿ, ಸೂರಣಗಿ, ಬಡ್ನಿ, ಅಡರಕಟ್ಟಿ, ಬಾಲೆಹೊಸೂರ, ಉಂಡೇನಹಳ್ಳಿ, ಯಲ್ಲಾಪುರ ಸೇರಿ ಒಟ್ಟು ೧೦೦೦೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಒಟ್ಟು ೩೦ ಸಾವಿರ ಹೆಕ್ಟೇರ್ ಪ್ರದೇಶದ ಬಿತ್ತನೆ ಕ್ಷೇತ್ರದಲ್ಲಿ ಗೋವಿನ ಜೋಳದ್ದೇ ಸಿಂಹಪಾಲು. ಜೂನ್ ಕೊನೆ ಮತ್ತು ಜುಲೈ ಮೊದಲ ವಾರದಲ್ಲಿ ಬಿತ್ತನೆಯಾಗಿರುವ ಬೆಳೆ ಈಗ ೧೫-೨೦ ದಿನಗಳ ಕಾಲಾವಧಿಯದ್ದಾಗಿದೆ. ಕಷ್ಟದ ನಡುವೆಯೂ ಸಾವಿರಾರೂ ಖರ್ಚು ಮಾಡಿ ಬಿತ್ತಿರುವ ಬೆಳೆಗೀಗ ಲದ್ದಿ ಹುಳು ಬಾಧೆ ಆವರಿಸಿರುವುದು ರೈತರ ಜಂಗಾಬಲವೇ ಉಡುಗಿದೆ.
    ಗಾಯದ ಮೇಲೆ ಬರೆ ಎಳೆದಂತಾಗಿದೆ ರೈತರ ಪರಿಸ್ಥಿತಿ:
    ಕಳೆದ ವರ್ಷದ ಅತಿವೃಷ್ಟಿ-ಅನಾವೃಷ್ಟಿಯಿಂದ ಕೃಷಿಯಲ್ಲಿ ನಷ್ಟ ಅನುಭವಿಸಿದ್ದರೂ ಹೊಸ ಭರಸವೆಯೊಂದಿಗೆ ಸಾಲಶೂಲ ಮಾಡಿ ಮತ್ತೇ ಭೂಮಿತಾಯಿಗೆ ಉಡಿ ತುಂಬಿರುವ ರೈತರು ಚಿಂತೆಗೀಡಾಗಿದ್ದಾರೆ. ಬೆಳೆಗೆ ತಗುಲಿರುವ ರೋಗಬಾಧೆ ತಡೆಯಲು ಸಾವಿರಾರು ರೂ ಖರ್ಚು ಮಾಡಿ ಕ್ರಿಮಿನಾಕಶಕ ಸಿಂಪಡಣೆಗೆ ಮೊರೆ ಹೋಗಿದ್ದಾರೆ. ಈಗಾಗಲೇ ಪ್ರತಿ ಎಕರೆಗೆ ಉಳುಮೆ, ಬೀಜ, ಗೊಬ್ಬರ, ಬಿತ್ತನೆ ವೆಚ್ಚ ಸೇರಿ ಹತ್ತಾರು ಸಾವಿರ ರೂ ಖರ್ಚು ಮಾಡಿದ್ದಾರೆ. ಮಳೆ ಕೊರತೆ, ರೋಗಬಾಧೆ, ಬೆಳೆಹಾನಿ, ಬೆಲೆ ಕುಸಿತ ಹೀಗೆ ಹತ್ತಾರು ಸಮಸ್ಯೆಗಳು ರೈತರ ಪಾಲಿಗೆ ತಪ್ಪದ ಗೋಳಾಗಿದೆ. ಹೀಗಾದರೆ ರೈತ ಬದುಕುವುದಾದರೂ ಹೇಗೆ ? ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂಬುದು ರೈತರಾದ ವಿರುಪಾಕ್ಷಪ್ಪ ಗುಡ್ಡಣ್ಣವರ, ಚನ್ನಪ್ಪ ಷಣ್ಮುಕಿ, ಶಂಭು ಭಂಡಿವಾಡ ಸೇರಿ ಗೋವಿನಜೋಳ ಬೆಳೆದ ಬಹುತೇಕ ರೈತರ ಅಳಲಾಗಿದೆ.

    – ಭೂಮಿಯಲ್ಲಿ ಹಸಿರು ಹೆಚ್ಚಿದಂತೆ ಈ ರೀತಿಯ ಕೀಟಗಳ ಸಂತಾನೋತ್ಪತ್ತಿಗೆ ಪೂರಕ ವಾತಾವರಣ ಕಲ್ಪಿಸಿದಂತಾಗಿ ಅವುಗಳ ಪ್ರಮಾಣ, ಪ್ರಭಾವ ಹೆಚ್ಚುತ್ತದೆ. ೧೦-೧೫ ದಿನಗಳ ಅವಧಿಯ ಬೆಲೆಯಿಂದ ಒಂದು ತಿಂಗಳ ಅವಧಿಯ ಬೆಳೆಗಳಿಗೆ ನಷ್ಟ ಮಾಡುತ್ತದೆ. ರೈತರು ಪ್ರಾರಂಭಿಕ ಹಂತದಲ್ಲಿಯೇ ಇದನ್ನು ಗಮನಿಸಿ ೧ ಟ್ಯಾಂಕ್(೧೫ ಲೀಟರ್) ನೀರಿಗೆ ೮-೧೦ ಗ್ರಾಂ ಎಮಾಮೆಕ್ಟೂö್ಯವ್ ಬೆಂಜ್ಯೂಯೇಟ್ ಬೆರೆಸಿ ಸಿಂಪಡಣೆ ಮಾಡಬೇಕು. ಲಕ್ಷ್ಮೇಶ್ವರದ ರೈತ ಸಂಪರ್ಕ ಕೇಂದ್ರದಲ್ಲಿ ಕ್ರಿಮಿನಾಶಕ ಲಬ್ಯವಿದೆ. ರೈತರು ಕೃಷಿ ಸಹಾಯಕ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.
    – ಚಂದ್ರಶೇಖರ ನರಸಮ್ಮನವರ-ಕೃಷಿ ಅಧಿಕಾರಿ ಲಕ್ಷ್ಮೇಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts