More

    ಕಳಸದ ಆನೆಗುಡ್ಡದಲ್ಲಿ ಸ್ಫೋಟ

    ಕಳಸದ ಆನೆಗುಡ್ಡದಲ್ಲಿ ಸ್ಫೋಟ

    ಕಳಸ: ಕಳೆದ ವರ್ಷ ಅತಿವೃಷ್ಟಿಯಿಂದ ಗುಡ್ಡಗಳು ಜರಿದು ಭಾರಿ ಅನಾಹುತ ಉಂಟಾಗಿದ್ದ ಕಳಸದಲ್ಲಿ ಈ ಬಾರಿ ಮಳೆಗಾಲ ಆರಂಭಕ್ಕೂ ಮುನ್ನವೇ ಆನೆಗುಡ್ಡದಲ್ಲಿ ಸ್ಫೋಟ ಆಗುವುದರೊಂದಿಗೆ ಅಪಾಯದ ಮುನ್ಸೂಚನೆ ನೀಡಿದೆ.

    ತಾಲೂಕಿನ ಸುತ್ತಮುತ್ತಲ ಬೆಟ್ಟಗಳ ಸಾಲಿನಲ್ಲಿ ಅತ್ಯಂತ ಎತ್ತರದ ಗುಡ್ಡಗಳಲ್ಲಿ ಒಂದಾದ ಆನೆ ಗುಡ್ಡದಲ್ಲಿ ಭಾರಿ ಪ್ರಮಾಣದಲ್ಲಿ ಸ್ಪೋಟವಾಗಿ ಬಂಡೆಗಳು ಜಾರಿ ಬಿರುಕು ಬಿಟ್ಟಿವೆ.

    ಆನೆಗುಡ್ಡ ಕಳಸದಿಂದ 9 ಕಿಮೀ ದೂರದಲ್ಲಿದ್ದು, ಸರಿಸುಮಾರು 1500 ಮೀ ಎತ್ತರ, ಮೂರ್ನಾಲ್ಕು ಕಿಮೀ ವ್ಯಾಪ್ತಿಯಲ್ಲಿದೆ. ಈ ಗುಡ್ಡದಲ್ಲಿ ಮೇ 9ರಂದು ಬೆಳಗಿನ ಜಾವ 6.15ರ ಸುಮಾರಿಗೆ ಭಾರಿ ಸ್ಪೋಟದ ಶಬ್ದ ಕೇಳಿಬಂದಿದೆ. ಮತ್ತದೇ ದಿನ ಎರಡು ಮೂರು ಬಾರಿ ಗುಡ್ಡದ ಕಡೆಯಿಂದ ಭಾರಿ ಶಬ್ದ ಕೇಳಿಬಂದಿದೆ.

    ಆತಂಕಗೊಂಡ ಸ್ಥಳೀಯ ಕೆಲ ಯುವಕರು ಗುಡ್ಡದ ಬುಡಕ್ಕೆ ಹೋಗಿ ನೋಡಿದಾಗ ಮೇಲಿಂದ ಬಂಡೆಯೊಂದು ಉರುಳಿ ಬಂದಿರುವುದು ಕಂಡುಬಂದಿದೆ. ಇದರ ಜಾಡು ಹಿಡಿದು ಗುಡ್ಡ ಹತ್ತಿ ನೋಡಿದಾಗ ಆ ಪ್ರದೇಶ ಬಿರುಕು ಬಿಟ್ಟು ಗುಡ್ಡದ ಒಂದು ಭಾಗ ಸ್ಪೋಟಗೊಂಡು ಕಲ್ಲುಗಳು ಜಾರಿರುವುದು ಮತ್ತು ಕಲ್ಲುಗಳು ಚೂರಾಗಿರುವುದನ್ನು ನೋಡಿದರು.

    ಗುಡ್ಡದ ಅರ್ಧ ಭಾಗಕ್ಕೆ ಮಾತ್ರ ಸದ್ಯಕ್ಕೆ ತೆರಳಲು ಸಾಧ್ಯವಾಗುತ್ತಿದೆ. ಗುಡ್ಡದ ನೆತ್ತಿಯಲ್ಲಿ ಯಾವ ರೀತಿಯ ಅನಾಹುತ ಸಂಭವಿಸಿದೆ ಎಂಬುದು ತಿಳಿಯುತ್ತಿಲ್ಲ. ಕೆಲ ಭಾಗದಿಂದ ನೋಡುವಾಗ ಗುಡ್ಡದ ನೆತ್ತಿ ಭಾಗದಲ್ಲಿ ಕಲ್ಲುಗಳು ಬಿರುಕು ಬಿಟ್ಟ ಸ್ಥಿತಿಯಲ್ಲಿ ಗೋಚರಿಸುತ್ತಿವೆ.

    ಪ್ರಾಣಿ, ಪಕ್ಷಿಗಳ ಅರಚಾಟ: ಗುಡ್ಡದಿಂದ ಭಾರಿ ಶಬ್ದ ಕೇಳಿಬರುವ ಮೊದಲೇ ನಾಯಿ, ನವಿಲು, ಪ್ರಾಣಿಗಳು ಕೂಗಾಡುವ ಶಬ್ದ ಕೇಳಿಬಂದಿದೆ. ಇದಾದ ಕೆಲವೇ ಕ್ಷಣಗಳಲ್ಲಿ ಗುಡ್ಡದಿಂದ ಶಬ್ದವೂ ಕೇಳಿಬಂದಿದೆ. ವಿಚಿತ್ರವಾಗಿ ಶಬ್ದ ಕೇಳಿಬಂದಿದ್ದು ಅದಕ್ಕೆ ಸರಿಯಾಗಿ ಗುಡ್ಡವೂ ಜಾರಿ ಬಿದ್ದಿರುವುದು ಅಪಾಯದ ಮುನ್ಸೂಚನೆ ಕೊಡುತ್ತಿದೆ ಎಂದು ಗುಡ್ಡ ಆಸುಪಾಸಿನಲ್ಲೇ ವಾಸವಿರುವ ಹಿರಿಯರಾದ ಕೃಷ್ಣಮೂರ್ತಿ ವಿವರಿಸುತ್ತಾರೆ.

    ಭದ್ರಾ ನದಿಗೂ ಕಂಟಕ: ಆನೆ ಗುಡ್ಡಕ್ಕೆ ಹೊಂದಿಕೊಂಡು ಬೆಟ್ಟಗೇರಿ, ನೆಲ್ಲಿಕೋಟ, ಕಡೇಮನೆ, ಲಲಿತಾದ್ರಿ, ವಡಬೇರೆ, ಅಜ್ಜಯ್ಯನ ಮನೆ, ವಲ್ಲಿಕುಡಿಗೆ,ನಾರಿನಕುಡಿಗೆ, ಸಂಪಿಗೆಗದ್ದೆ ಕಾಲನಿ, ಕೆರ್ನಾಳಿ, ಕೋಡಿಗೆಹಿತ್ಲು, ಹೊಕ್ಕಲಿ ಮನೆ, ಕೆಳವಲ್ಲಿಕುಡಿಗೆ, ಮುಜೆಖಾನ್, ಗುಡ್ಡೆತೋಟ ಊರುಗಳಿವೆ. ಇಲ್ಲಿ 150ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿವೆ. ಒಂದು ವೇಳೆ ಗುಡ್ಡ ಜಾರಿದಲ್ಲಿ ಇಷ್ಟೂ ಪ್ರದೇಶ ಭಾರಿ ಅಪಾಯಕ್ಕೆ ಸಿಲುಕಬಹುದು. ಅಲ್ಲದೆ 4 ಕಿಮೀ ದೂರದಲ್ಲಿರುವ ಭದ್ರಾ ನದಿಗೂ ಅಪಾಯ ತಂದೊಡ್ಡಬಲ್ಲದು. ಗುಡ್ಡ ಜಾರಿದಲ್ಲಿ ಗುಡ್ಡದಿಂದ ಬರುವ ನೀರು, ಗುಡ್ಡದ ಅವಶೇಷಗಳಿಂದ ನದಿ ಹರಿವಿನ ದಿಕ್ಕೇ ಬದಲಾಗಬಹುದು.

    ಅಪಾಯದ ಮುನ್ಸೂಚನೆ: ಮೇ 8ರ ರಾತ್ರಿ ಆನೆಗುಡ್ಡ ಪ್ರದೇಶದಲ್ಲಿ ಭಾರಿ ಮಳೆಯಾಗಿತ್ತು. ಮರುದಿನ ಬೆಳಗಿನ ಜಾವ ಗುಡ್ಡ ಜಾರಿದೆ. ಕಳೆದ ಬಾರಿ ಪ್ರವಾಹದ ಸಂದರ್ಭದಲ್ಲಿ ಇದೇ ಗುಡ್ಡದಲ್ಲಿ ಸುಮಾರು ಒಂದು ಕಿಮೀ ದೂರ ಸಣ್ಣ ಗಾತ್ರದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಗುಡ್ಡದ ಬುಡದಲ್ಲಿರುವ ಸುರುಮನೆ, ಕೆರ್ನಾಳಿ, ಮುಜೆಖಾನ್, ಗುಡ್ಡೆತೋಟ, ಕಡೇಮನೆ, ನಾರಾಯಣಕಟ್ಟೆ ಎಂಬಲ್ಲಿ ಭೂಕುಸಿತ, ಜಲಸ್ಪೋಟಗಳು ಸಂಭವಿಸಿ ಹಲವಾರು ಮನೆ, ತೋಟಗಳಿಗೆ ಹಾನಿಯಾಗಿತ್ತು. ಅಲ್ಲದೆ ಗುಡ್ಡದ ಎದುರಿನ ಮಲ್ಲೇಶನ ಗುಡ್ಡ ಕಳೆದ ಮಳೆಗಾಲದಲ್ಲಿ ಜಾರಿ ಬಹಳಷ್ಟು ಅನಾಹುತ ಸಂಭವಿಸಿತ್ತು. ಈ ಬಾರಿ ಮುಂಗಾರು ಪೂರ್ವ ಮಳೆಯಲ್ಲೇ ಈ ರೀತಿಯ ಮುನ್ಸೂಚನೆ ಕಂಡುಬಂದಿರುವುದು ಸಹಜವಾಗೇ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts