More

    ಚಲಿಸುತ್ತಿದ್ದ ರೈಲಿನಿಂದ ಚಿನ್ನಾಭರಣ, ಹಣವಿದ್ದ ಬ್ಯಾಗ್ ಎಗರಿಸಿ ಓಡಿದ ಕಳ್ಳ, ಬೆನ್ನಟ್ಟಿದ ಮಹಿಳೆಗೆ ಗಾಯ

    ಈಶ್ವರಮಂಗಲ: ಬೆಂಗಳೂರಿನಿಂದ ಕಾರವಾರಕ್ಕೆ ಸಂಚರಿಸುತ್ತಿದ್ದ ರೈಲಿನಲ್ಲಿದ್ದ ಮಹಿಳೆಯೊಬ್ಬರ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ಹಣವಿದ್ದ ವ್ಯಾನಿಟಿ ಬ್ಯಾಗನ್ನು ಮಂಗಳವಾರ ನಸುಕಿನ ವೇಳೆ ಪುತ್ತೂರು ರೈಲು ನಿಲ್ದಾಣ ಬಳಿ ಕಳ್ಳನೊಬ್ಬ ಎಗರಿಸಿ ಬೋಗಿಯಿಂದ ಜಿಗಿದು ಪರಾರಿಯಾಗಿದ್ದಾನೆ. ಆತನನ್ನು ಹಿಡಿಯುವ ಯತ್ನದಲ್ಲಿ ಮಹಿಳೆ ರೈಲಿನಿಂದ ಬಿದ್ದು ಗಾಯಗೊಂಡಿದ್ದಾರೆ.

    ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಉತ್ತರ ಕನ್ನಡ ಜಿಲ್ಲೆ ಕಾರವಾರ ಮೂಲದ ಶಿಕ್ಷಕ ರಮೇಶ್ ಮತ್ತು ನಿರ್ಮಲಾ ದಂಪತಿ ದರೋಡೆಗೊಳಗಾದವರು. ದಂಪತಿ ಸೋಮವಾರ ರಾತ್ರಿ ಬೆಂಗಳೂರಿನಿಂದ ರೈಲಿನಲ್ಲಿ ಊರಿಗೆ ಹೊರಟಿದ್ದರು. ರೈಲು ಮಂಗಳವಾರ ನಸುಕಿನ ಜಾವ 2.20ರ ಸುಮಾರಿಗೆ ಕಬಕ-ಪುತ್ತೂರು ರೈಲ್ವೆ ನಿಲ್ದಾಣಕ್ಕೆ ತಲುಪಿತ್ತು. ಅಲ್ಲಿಂದ ಹೊರಟ ರೈಲು ಸಮೀಪವೇ ಇರುವ ಹಾರಾಡಿ ಮೇಲ್ಸೇತುವೆ ದಾಟಿ ಸಿಟಿಗುಡ್ಡೆ ತಲುಪುತ್ತಿದ್ದಂತೆ ಘಟನೆ ನಡೆದಿದೆ.

    ತಲೆಯಡಿಯಿಂದ ಬ್ಯಾಗ್ ಎಗರಿಸಿದ ಕಳ್ಳ: ನಿರ್ಮಲಾ ಅವರು ಮಲಗುವ ವೇಳೆ ವ್ಯಾನಿಟಿ ಬ್ಯಾಗನ್ನು ತಲೆಯ ಅಡಿಯಲ್ಲಿಟ್ಟಿದ್ದರು. ಬ್ಯಾಗ್‌ನ ಕೈ ಅವರ ಕುತ್ತಿಗೆಯಲ್ಲಿತ್ತು. ಪುತ್ತೂರು ಬಳಿ ಅಪರಿಚಿತನೊಬ್ಬ ಬ್ಯಾಗನ್ನು ಎಳೆಯುತ್ತಿರುವುದು ನಿರ್ಮಲಾ ಗಮನಕ್ಕೆ ಬಂದಿತ್ತು. ಗಾಬರಿಗೊಂಡ ಅವರು ಆತನನ್ನು ದೂಡಿದ್ದರು. ಈ ವೇಳೆ ವ್ಯಾನಿಟಿ ಬ್ಯಾಗ್‌ನ ಕೈ ತುಂಡಾಗಿತ್ತು. ಬ್ಯಾಗ್‌ನೊಂದಿಗೆ ಓಡಿದ ಆತ ಬೋಗಿಯಿಂದ ಹಾರಲೆತ್ನಿಸಿದ ವೇಳೆ ನಿರ್ಮಲಾ ಅವರು ಆತನನ್ನು ಹಿಡಿದುಕೊಂಡು ತುರ್ತು ಸಂದರ್ಭ ರೈಲು ನಿಲ್ಲಿಸುವ ಚೈನ್ ಎಳೆದಿದ್ದಾರೆ. ರೈಲಿನ ವೇಗ ನಿಧಾನವಾಗುತ್ತಿದ್ದಂತೆ ಕಳ್ಳ ರೈಲಿನಿಂದ ಹಾರಿದ್ದಾನೆ. ಆತನನ್ನು ಹಿಡಿದುಕೊಳ್ಳುವ ಪ್ರಯತ್ನದಲ್ಲಿ ನಿರ್ಮಲಾ ಅವರು ರೈಲಿನಿಂದ ಬಿದ್ದು ಗಾಯಗೊಂಡಿದ್ದಾರೆ. ರೈಲಿನಿಂದ ಜಿಗಿದ ಕಳ್ಳ ಕತ್ತಲೆಯಲ್ಲಿ ಓಡಿ ಮರೆಯಾಗಿದ್ದಾನೆ.

    ಗಾಯಗೊಂಡಿರುವ ನಿರ್ಮಲಾ ಅವರನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಘಟನೆಯ ಕುರಿತು ದಂಪತಿ ಮಂಗಳೂರು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ. 40 ಸಾವಿರ ರೂ., ಚಿನ್ನಾಭರಣ ಸೇರಿ ಒಟ್ಟು 8 ಲಕ್ಷ ರೂ. ಮೌಲ್ಯದ ಸೊತ್ತು ದರೋಡೆಯಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts