More

    ಅಭಿವೃದ್ಧಿ ಕಾಮಗಾರಿ ಭರ ವಾಹನ ಸಂಚಾರ ದುಸ್ತರ

    ಹರೀಶ್ ಮೋಟುಕಾನ ಮಂಗಳೂರು
    ಸ್ಮಾರ್ಟ್‌ಸಿಟಿ, ಜಲಸಿರಿ, ಗೈಲ್ ಯೋಜನೆ, ಪಾಲಿಕೆ ಸಾಮಾನ್ಯ ಅಭಿವೃದ್ಧಿ ಕಾಮಗಾರಿಗಳು ನಗರದ ವಿವಿಧ ಕಡೆ ನಡೆಯುತ್ತಿದ್ದು, ಕೆಲವು ಕಡೆಗಳಲ್ಲಿ ಕಾಂಕ್ರೀಟ್ ಮುಖ್ಯ ರಸ್ತೆಯನ್ನು ಅಗೆದು ಹಾಕಲಾಗಿದೆ. ಇದರಿಂದ ಪ್ರತಿ ದಿನ ಜನಸಾಮಾನ್ಯರು ಕಿರಿ ಕಿರಿ ಅನುಭವಿಸುವಂತಾಗಿದೆ.

    ಕೆಲವು ಕಾಮಗಾರಿಗಳು ಸ್ಥಗಿತಗೊಂಡಿದ್ದರೆ, ಇನ್ನು ಕೆಲವು ನಿಧಾನಗತಿಯಲ್ಲಿ ಸಾಗುತ್ತಿವೆ. ವಾಹನ ಸವಾರರು ಇದರಿಂದ ತೊಂದರೆ ಅನುಭವಿಸುತ್ತಿದ್ದು, ಬೆಳಗ್ಗೆ ಮತ್ತು ಸಂಜೆ ವೇಳೆ ನಗರದಾದ್ಯಂತ ವಾಹನ ದಟ್ಟಣೆಗೆ ಕಾರಣವಾಗಿದೆ. ಪರಿಣಾಮ ಸಮಯ ಹೊಂದಾಣಿಕೆ ಮಾಡಲು ಖಾಸಗಿ ಬಸ್‌ಗಳು ಒಳರಸ್ತೆಗಳಲ್ಲಿ ಸಂಚರಿಸುತ್ತಿದ್ದು, ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎನ್ನುವ ಆರೋಪ ವ್ಯಕ್ತವಾಗಿದೆ.

    ಮಂಗಳೂರು ನಗರ ಸ್ಮಾರ್ಟ್‌ಸಿಟಿಯಾಗಿ ರೂಪುಗೊಳ್ಳುತ್ತಿದೆ. ಅಭಿವೃದ್ಧಿ ಕೆಲಸಗಳು ನಡೆಯುವಾಗ ಜನರಿಗೆ ಅನಾನುಕೂಲ ಸಹಜ. ಆದರೆ ಹಲವು ಕಾಮಗಾರಿಗಳು ಏಕಕಾಲದಲ್ಲಿ ಆರಂಭಗೊಂಡು, ನಿಗದಿತ ಅವಧಿಗೆ ಪೂರ್ಣಗೊಳ್ಳದೇ ಇದ್ದಾಗ ಮತ್ತು ಸ್ಥಗಿತಗೊಂಡಾಗ ಅಂತಹ ಕಾಮಗಾರಿಗಳ ವಿರುದ್ಧ ಜನರು ಅಸಮಾಧಾನಕ್ಕೆ ಕಾರಣವಾಗುತ್ತದೆ. ಮೊದಲೇ ವಾಹನ ಪಾರ್ಕಿಂಗ್‌ಗೆ ಸ್ಥಳಾವಕಾಶದ ಕೊರತೆ ಎದುರಾಗಿದ್ದು, ಇದೀಗ ಕಾಮಗಾರಿಗಳು ಪ್ರಗತಿಯಲ್ಲಿರುವುದರಿಂದ ವಾಹನ ನಿಲುಗಡೆಗೆ ಪರದಾಡುವಂತಾಗಿದೆ.

    ಲಾಲ್‌ಭಾಗ್, ಪಿವಿಎಸ್, ಯೆಯ್ಯಡಿ, ಕೊಂಚಾಡಿ, ಕಾಪಿಕಾಡ್, ಬಂಟ್ಸ್ ಹಾಸ್ಟೆಲ್, ಬಿಜೈ ಮೊದಲಾದ ಕಡೆ ಕಾಮಗಾರಿಗಳು ನಡೆಯುತ್ತಿವೆ. ಗೇಲ್ ಪೈಪ್‌ಲೈನ್ ಅಳವಡಿಸಲು ಫುಟ್‌ಪಾತ್, ಕಾಂಕ್ರೀಟ್ ರಸ್ತೆಗಳನ್ನು ಅಗೆಯುತ್ತಿದ್ದಾರೆ. ಕಾಮಗಾರಿ ಕಾರಣದಿಂದ ಹಲವು ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ರಾತ್ರಿ ವೇಳೆ ವಾಹನ ಸವಾರರಿಗೆ ಅಪಾಯವನ್ನು ಆಹ್ವಾನಿಸುತ್ತಿದೆ. ವಾರದ ಹಿಂದೆ ಸುರಿದ ಮಳೆಗೆ ಅಗೆದು ಹಾಕಿದ್ದ ಮಣ್ಣು, ಮರಳು ರಸ್ತೆಗೆ ಬಂದು ನಿಂತಿದೆ. ಇದರಿಂದ ದ್ವಿಚಕ್ರ ಸವಾರರು ಅಲ್ಲಲ್ಲಿ ಸ್ಕಿಡ್ ಆಗಿ ಬೀಳುತ್ತಿದ್ದಾರೆ.

    ಕಂಕನಾಡಿ-ಮಂಗಳಾದೇವಿ ರಸ್ತೆಯಲ್ಲಿ ಹಲವು ಸಮಯದಿಂದ ಜಲಸಿರಿ ಕಾಮಗಾರಿ ನಡೆಯುತ್ತಿದೆ. ರಸ್ತೆ ಬಳಿಯ ಫುಟ್‌ಪಾತ್, ರಸ್ತೆಯ ಕೆಲವು ಭಾಗ ಅಗೆಯಲಾಗಿದೆ. ಈ ಪ್ರದೇಶದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಪಾಲಿಕೆ ವತಿಯಿಂದ ನಗರದ ವಿವಿಧ ಕಡೆ ಫುಟ್‌ಪಾತ್, ಒಳಚರಂಡಿ ಕಾಮಗಾರಿ ನಡೆಯುತ್ತಿವೆ. ಇದರ ಜತೆಗೆ ಸ್ಮಾರ್ಟ್‌ಸಿಟಿ ಕಾಮಗಾರಿಗಳು ನ್ಯಾಯಾಲಯದ ತಡೆಯಾಜ್ಞೆ ತೆರವುಗೊಂಡ ಬಳಿಕ ಆರಂಭಗೊಂಡಿವೆ.

    ಸಭೆಯ ತೀರ್ಮಾನ ಅನುಷ್ಠಾನವಿಲ್ಲ: ಮನಪಾ ವ್ಯಾಪ್ತಿಯೊಳಗೆ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿ ಪಾಲಿಕೆಯಲ್ಲಿ ಸಭೆ ನಡೆದು ಸ್ಮಾರ್ಟ್‌ಸಿಟಿ ಯೋಜನೆಯಡಿ ಅನುಷ್ಠಾನವಾಗುತ್ತಿರುವ ರಸ್ತೆ ಅಭಿವೃದ್ಧಿ, ನೀರು ಸರಬರಾಜು, ಒಳಚರಂಡಿ ಕಾಮಗಾರಿಗಳಿಗೆ, ಗೈಲ್ ಸಂಸ್ಥೆಗಳಿಂದ ನಗರದ ವಿವಿಧ ಕಡೆಗಳಲ್ಲಿ ರಸ್ತೆ ಅಗೆಯಲಾಗುತ್ತಿದೆ. ನಗರದಲ್ಲಿ ಈ ಕಾಮಗಾರಿಗಳ ಸಮರ್ಪಕ ಅನುಷ್ಠಾನದ ಬಗ್ಗೆ ಪಾಲಿಕೆಯೊಂದಿಗೆ ಸಮನ್ವಯ ಸಾಧಿಸಿಕೊಂಡು ಪ್ರಕ್ರಿಯೆಯನ್ನು ಮುಂದುವರಿಸುವ ಕುರಿತು ಪಾಲಿಕೆ, ಸ್ಮಾರ್ಟ್‌ಸಿಟಿ, ಗೈಲ್ ಸಂಸ್ಥೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಸಭೆಯ ತೀರ್ಮಾನ ಪಾಲನೆ ಆಗಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ.

    ಮನಪಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಭರದಿಂದ ನಡೆಯುತ್ತಿವೆ. ಈ ಸಂದರ್ಭ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ಗಮನದಲ್ಲಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಳೆಗಾಲ ಆರಂಭವಾಗುವ ಮೊದಲು ಬಹುತೇಕ ಕಾಮಗಾರಿಗಳು ಪೂರ್ಣಗೊಳ್ಳಲಿದೆ.
    ಪ್ರೇಮಾನಂದ ಶೆಟ್ಟಿ, ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts