More

    ಕೋಟೆ ಕೆರೆ ಏರಿಯಲ್ಲಿ ಸಾಗಿದರೆ ಜೇಬಿಗೆ ಕತ್ತರಿ!

    ಕೋಟೆ ಕೆರೆ ಏರಿಯಲ್ಲಿ ಸಾಗಿದರೆ ಜೇಬಿಗೆ ಕತ್ತರಿ!

    ಚಿಕ್ಕಮಗಳೂರು: ವಾಹನ ಪರವಾನಗಿ, ಲೈಸೆನ್ಸ್, ಇನ್ಸೂರೆನ್ಸ್, ಹೊಗೆ ತಪಾಸಣಾ ದಾಖಲೆ ಹೀಗೆ ಎಲ್ಲ ಸರಿಯಿದ್ದರೂ ಕೋಟೆ ಕೆರೆ ಏರಿ ಮೇಲೆ ಭಾರಿ ವಾಹನಗಳು ಸಾಗಿದರೆ ಜೇಬಿಗೆ 2 ಸಾವಿರ ರೂ. ಕತ್ತರಿ ಬೀಳುವುದು ನಿಶ್ಚಿತ!

    ಇದೇನು ಆರ್​ಟಿಒ, ಪೊಲೀಸ್ ಅಧಿಕಾರಿಗಳು ತಪಾಸಣೆ ನಡೆಸಿ ವಿಧಿಸುವ ಶುಲ್ಕ ಅಂದುಕೊಳ್ಳಬೇಡಿ. ದುರಸ್ತಿಯಾಗುತ್ತಿರುವ ಕೋಟೆ ಕೆರೆ ಏರಿ ರಸ್ತೆ ಮಳೆಯಿಂದ ಕೆಸರುಮಯವಾಗಿದ್ದು ಲಾರಿ, ಟ್ರಕ್ ಸೇರಿ ಭಾರಿ ವಾಹನಗಳು ಸಿಲುಕಿಕೊಂಡು 1,500ರಿಂದ 2 ಸಾವಿರ ರೂ. ಕೊಟ್ಟು ಜೆಸಿಬಿಯಿಂದ ಎಳೆಸಿದ ನಂತರ ಮುಂದೆ ಸಾಗುವಂತಾಗಿದೆ. ಇದು ಬೇಲೂರು-ಹಾಸನ ರಾಜ್ಯ ಹೆದ್ದಾರಿಯ ದುಸ್ಥಿತಿ.

    ಬೆಂಗಳೂರು, ಮೈಸೂರಿನಿಂದ ಆಯಾಸವಿಲ್ಲದೆ ಹಿರೇಮಗಳೂರು, ನಗರದ ಕೋಟೆವರೆಗೂ ಬರುತ್ತಾರೆ. ಆದರೆ ಕೆರೆ ಏರಿ ದಾಟುವಾಗ ವಾಹನಗಳು ಅತ್ತಿಂದಿತ್ತ ಓಲಾಡುತ್ತವೆ. ಮೂರ್ನಾಲ್ಕು ದಿನಗಳಿಂದ ಲಾರಿಗಳು ಕೆಸರಲ್ಲಿ ಸಿಲುಕಿ ಚಾಲಕರು, ನಿರ್ವಾಹಕರು ಪರದಾಡಿದ್ದಾರೆ. ಸೋಮವಾರ ರಾತ್ರಿ ಹಾಸನದಿಂದ ಚಿಕ್ಕಮಗಳೂರಿಗೆ ಬರುತ್ತಿದ್ದ ಲಾರಿಯೊಂದು ಕೆಸರಲ್ಲಿ ಹೂತು ನಾಲ್ಕೈದು ತಾಸು ಪರದಾಡಿ ನಂತರ ಮುಂದೆ ಸಾಗಿದೆ.

    ಮಂಗಳವಾರ ಮುಂಜಾನೆ 4 ಗಂಟೆಗೆ ಟ್ರಕ್​ವೊಂದು ಏರಿ ನಡುವೆ ಕೆಸರಲ್ಲಿ ಸಿಲುಕಿದ್ದರೆ, ಅದರ ಹಿಂದೆಯೇ ಬನ್ನೂರಿನಿಂದ ಚಿಕ್ಕಮಗಳೂರಿಗೆ ಬಂದಿದ್ದ ಲಾರಿಯ ಚಕ್ರ ಹೂತು ಸಂಪೂರ್ಣ ವಾಲಿತ್ತು. ವಾಹನ ಮುಂದೆ ತರಲು ಚಾಲಕ ಎಷ್ಟೇ ಪ್ರಯತ್ನಿಸಿದರೂ ಆಗಲಿಲ್ಲ. ನಂತರ ಜೆಸಿಬಿ ಕರೆಸಿ 2 ಸಾವಿರ ರೂ. ಕೊಟ್ಟು ಲಾರಿ ಎಳೆಸಬೇಕಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

    ಬುಧವಾರ ಕಿರುಗಾವಲಿನಿಂದ ಬಂದಿದ್ದ ಲಾರಿ ಮುಂಜಾನೆ 5 ಗಂಟೆಗೆ ಕೆಸರಲ್ಲಿ ಟೈರ್ ಸ್ಕಿಡ್ ಆಗಿ ಮುಂದೆ ಸಾಗಲಾಗದೆ ಚಾಲಕ ಕೈಚೆಲ್ಲಬೇಕಾಯಿತು. ಮಧ್ಯಾಹ್ನ 11 ಗಂಟೆಯಾದರೂ ಲಾರಿ ತೆಗೆಯಲಾಗಲಿಲ್ಲ. ಒಂದು ಸಾವಿರ ರೂ. ಕೊಟ್ಟು ಜೆಸಿಬಿಯಲ್ಲಿ ತೆಗೆಯಬೇಕಾಯಿತು ಎಂದು ಚಾಲಕ ಲೋಕೇಶ್ ಹೇಳಿದರು.

    ಕಾರುಗಳು ಸಾಗುವಾಗ ವಾಹನದ ಕೆಳಭಾಗದ ರಸ್ತೆಗೆ ತಾಗುತ್ತದೆ. ಇನ್ನು ದ್ವಿಚಕ್ರವಾಹನ ಸವಾರರು ಮಕ್ಕಳು, ಮಹಿಳೆಯರನ್ನು ಕೂರಿಸಿಕೊಂಡು ಭಯದಿಂದಲೇ ಸಾಗಬೇಕಿದೆ. ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿರುವ 100 ಮೀ. ರಸ್ತೆ ನಿರ್ಮಾಣ ಕಾರ್ಯ 2 ತಿಂಗಳಾದರೂ ಪೂರ್ಣಗೊಳ್ಳದಿರುವುದು ವಿಪರ್ಯಾಸವೇ ಸರಿ.

    ಕೋಟೆ ಕೆರೆ ಏರಿ ಅಭಿವೃದ್ಧಿ ಕೆಲಸ ಆರಂಭಿಸಿ ಒಂದು ತಿಂಗಳಾಗಿದೆ. ಏರು ರಸ್ತೆಯಾಗಿದ್ದರಿಂದ ಇಲ್ಲಿ ಆಗಾಗ ಅಪಘಾತವಾಗುತ್ತಿತ್ತು. ಹಾಗಾಗಿ ಏರಿಯನ್ನು 2 ಮೀಟರ್ ತಗ್ಗಿಸಲಾಗಿದೆ. ಸೇತುವೆ ನಿರ್ವಣಕ್ಕೂ ಹೆಚ್ಚು ಸಮಯ ತೆಗೆದುಕೊಂಡಿತು. ಶುಕ್ರವಾರ ಬೆಳಗ್ಗೆಯಿಂದ ಕೆಲಸ ಆರಂಭವಾಗುತ್ತದೆ. ಜಿಎಸ್​ಬಿ ಹಾಕಿ ವೆಟ್​ವಿುಕ್ಸ್ ಮಾಡಿ ಕೂಡಲೇ ಡಾಂಬರೀಕರಣ ಮಾಡುತ್ತೇವೆ. ಮಳೆ ಬಿಡುವು ಕೊಟ್ಟರೆ 10ರಿಂದ 15 ದಿನಗಳಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಪಿಡಬ್ಲ್ಯುಡಿ ಸಹಾಯಕ ಅಭಿಯಂತ ಗವಿರಂಗಪ್ಪ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts