More

    ವಾಹನ ದಟ್ಟಣೆ ಸವಾಲು: ಮಂಗಳೂರಲ್ಲಿ ಆಮೆಗತಿಯಲ್ಲಿ ಸಾಗುತ್ತಿದೆ ಕಾಮಗಾರಿ

    ಹರೀಶ್ ಮೋಟುಕಾನ ಮಂಗಳೂರು
    ಮಂಗಳೂರು ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಸ್ತೆ ಕಾಂಕ್ರೀಟ್, ಒಳ ಚರಂಡಿ, ಫುಟ್‌ಪಾತ್ ಮೊದಲಾದ ಕಾಮಗಾರಿಗಳು ಆಮೆ ಗತಿಯಲ್ಲಿ ಸಾಗುತ್ತಿರುವುದರಿಂದ ಸಾರ್ವಜನಿಕರು ಹಲವು ಸಮಯದಿಂದ ತೊಂದರೆ ಅನುಭವಿಸುವಂತಾಗಿದೆ.

    ಸ್ಮಾರ್ಟ್‌ಸಿಟಿ, ಅಮೃತ್, ಜಲಸಿರಿ, ಗ್ಯಾಸ್ ಪೈಪ್‌ಲೈನ್ ಮೊದಲಾದ ಯೋಜನೆಯಡಿ ನಗರದ ಹೃದಯ ಭಾಗ, ಒಳಭಾಗಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಕೆಲವು ಕಾಮಗಾರಿಗಳು ಆರಂಭಗೊಂಡು ವರ್ಷವಾದರೂ ಪೂರ್ಣಗೊಂಡಿಲ್ಲ. ಇದರಿಂದ ದಿನವಿಡೀ ರಸ್ತೆ ಬ್ಲಾಕ್, ವಾಹನ ದಟ್ಟಣೆ ಮೊದಲಾದ ಸಮಸ್ಯೆಗಳನ್ನು ಅನುಭವಿಸುವಂತಾಗಿದೆ.

    ಕದ್ರಿ ಕಂಬಳ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ಆರಂಭಗೊಂಡು ತಿಂಗಳು ಪೂರ್ಣಗೊಂಡಿದೆ. ಸರ್ಕೀಟ್ ಹೌಸ್‌ನಿಂದ ಬಂಟ್ಸ್ ಹಾಸ್ಟೆಲ್ ಕಡೆಗೆ ಬರುವವರು ಹಾಗು ಹೋಗುವವರು ಸುತ್ತು ಬಳಸಿ ಹೋಗುವಂತಾಗಿದೆ. ಜೈಲ್ ರಸ್ತೆಯಲ್ಲೂ ಕಾಂಕ್ರೀಟ್, ಒಳಚರಂಡಿ ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ಸಂಚಾರಕ್ಕೆ ತಡೆ ಒಡ್ಡಲಾಗಿದೆ. ಬೆಸೆಂಟ್‌ನಿಂದ ಶಾರದಾ ವಿದ್ಯಾಲಯದ ಕಡೆಗೆ ಹೋಗುವ ರಸ್ತೆಯೂ ಬಂದ್ ಆಗಿದೆ. ಮೇರಿಹಿಲ್‌ನಲ್ಲಿ ಮೌಂಟ್‌ಕಾರ್ಮೆಲ್ ಶಾಲಾ ಬಳಿಯಿಂದ ಸಾಗುವ ಒಳ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಇದರಿಂದ ಶಾಲಾ ಎದುರು ವಾಹನ ದಟ್ಟಣೆ ಉಂಟಾಗುತ್ತಿದೆ. ಹಲವು ಸಮಯಗಳಿಂದ ಬಂದ್ ಆಗಿದ್ದ ಶರವು ದೇವಳ ರಸ್ತೆಯಲ್ಲಿ ಇದೀಗ ವಾಹನ ಸಂಚಾರ ಆರಂಭಗೊಂಡಿದೆ.

    ಆಂಬುಲೆನ್ಸ್ ಸಂಚಾರಕ್ಕೂ ತೊಂದರೆ: ಶಾಲಾ, ಕಾಲೇಜುಗಳು ಆರಂಭಗೊಂಡಿರುವುದರಿಂದ ಬೆಳಗ್ಗೆ ಮತ್ತು ಸಂಜೆಯ ವೇಳೆ ನಗರದ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ಆಂಬುಲೆನ್ಸ್ ಸಹಿತ ತುರ್ತು ವಾಹನ ಸಂಚಾರಕ್ಕೂ ಇದರಿಂದ ತೊಂದರೆಯಾಗುತ್ತಿದೆ. ನಗರದ ಸಭಾಂಗಣಗಳಲ್ಲಿ ವಿವಾಹ ಕಾರ್ಯಕ್ರಮಗಳು ಇರುವ ದಿನ ನಗರದಾದ್ಯಂತ ವಾಹನ ದಟ್ಟಣೆ ಸಾಮಾನ್ಯ. ಗೇಲ್ ಸಂಸ್ಥೆಯ ಮನೆ ಮನೆಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಪೈಪ್ ಅಳವಡಿಸುವ ಕಾಮಗಾರಿ ಭರದಿಂದ ಸಾಗುತ್ತಿದ್ದು, ಇದರಿಂದಾಗಿಯೂ ವಾಹನ ದಟ್ಟಣೆ ಉಂಟಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

    ನಿಧಾನಗತಿಗೆ ಕಾರಣ?: ಕೆಲವು ಗುತ್ತಿಗೆದಾರರು ದೊಡ್ಡ ಮಟ್ಟದ ಹಲವು ಕಾಮಗಾರಿಗಳನ್ನು ವಹಿಸಿಕೊಳ್ಳುವುದರಿಂದ ಅವರಲ್ಲಿ ಕಾರ್ಮಿಕರ ಕೊರತೆ ಇದೆ. ಎರಡು ಮೂರು ಕಡೆ ಹಂಚಿ ಹಾಕುವುದರಿಂದ ಎಲ್ಲ ಕಾಮಗಾರಿಗಳು ನಿಧಾನವಾಗಿ ಸಾಗುತ್ತದೆ. ಇದರಿಂದ ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಒಳಚರಂಡಿಗೆ ರಸ್ತೆ ಅಗೆದು ಹಾಕಿದರೆ ಅದನ್ನು ಸರಿ ಮಾಡಲು ಮತ್ತೆ ತಿಂಗಳುಗಟ್ಟಲೆ ಕಾಯಬೇಕು. ಅವೈಜ್ಞಾನಿಕ ಕಾಮಗಾರಿಗಳೂ ವಿಳಂಬಗತಿಗೆ ಕಾರಣವಾಗುತ್ತದೆ. ಕಾಂಕ್ರೀಟ್ ಕಾಮಗಾರಿ ಮಾಡಿದ ಮೇಲೆ ಒಳಚರಂಡಿಗೆ ಅಗೆಯುವ ಪ್ರಕ್ರಿಯೆ ಇಲ್ಲಿ ನಡೆಯುತ್ತಿದೆ. ಇದರಿಂದ ದುಂದು ವೆಚ್ಚದ ಜತೆಗೆ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.

    ಮಂಗಳೂರು ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಭರದಿಂದ ನಡೆಯುತ್ತಿದೆ. ಈ ಸಂದರ್ಭ ಒಂದಷ್ಟು ಅಡಚಣೆಗಳು ಸಹಜ. ಸಾರ್ವಜನಿಕರು ಸಹಕರಿಸಬೇಕು. ವಿಳಂಬ ಕಾಮಗಾರಿಗಳನ್ನು ಚುರುಕುಗೊಳಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗುವುದು.
    ಪ್ರೇಮಾನಂದ ಶೆಟ್ಟಿ, ಮೇಯರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts