More

  ಶಾಪಗ್ರಸ್ತ ಮೀನು ಮಾರುಕಟ್ಟೆ ರಸ್ತೆ: ದಶಕಗಳಿಂದ ನಡೆದಿಲ್ಲ ದುರಸ್ತಿ ಕಾರ್ಯ

  ಗಂಗೊಳ್ಳಿ: ಗಂಗೊಳ್ಳಿ ಗ್ರಾಮದ ಬಹುತೇಕ ರಸ್ತೆಗಳನ್ನು ಕಾಂಕ್ರೀಟ್ ಹಾಕಿ ಅಭಿವೃದ್ಧಿಗೊಳಿಸಿದ್ದರೂ ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಒಂದಾಗಿರುವ ಮೀನು ಮಾರುಕಟ್ಟೆ ರಸ್ತೆ ಮಾತ್ರ ಇನ್ನೂ ಶಾಪ ಮುಕ್ತವಾಗಿಲ್ಲ.

  ಗಂಗೊಳ್ಳಿಯ ಮುಖ್ಯರಸ್ತೆಯಿಂದ ದಾಕುಹಿತ್ಲು ಪರಿಸರಕ್ಕೆ ಸಂಪರ್ಕ ಕಲ್ಪಿಸುವ ಮೀನು ಮಾರುಕಟ್ಟೆ ರಸ್ತೆ ಹಲವು ದಶಕಗಳಿಂದ ಹದಗೆಟ್ಟಿದೆ. ಈ ಪರಿಸರದಲ್ಲಿ 100ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಪರಿಸರದ ನಿವಾಸಿಗಳು, ಮೀನು ಮಾರುಕಟ್ಟೆಗೆ ಬರುವ ಜನರು ಹಾಗೂ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಗಂಗೊಳ್ಳಿ ಮುಖ್ಯರಸ್ತೆಗೆ ಪರ್ಯಾಯ ರಸ್ತೆಯಂತಿರುವ ಮೀನು ಮಾರುಕಟ್ಟೆ ರಸ್ತೆ ಮಾತ್ರ ಸಂಚರಿಸಲು ಸಾಧ್ಯವಾಗದಷ್ಟು ಹಾಳಾಗಿದೆ.

  ಕೆಲವು ತಿಂಗಳ ಹಿಂದೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಡಿ 100 ಮೀಟರ್ ಉದ್ದದ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದ್ದು, ಇನ್ನುಳಿದ ಶೇ.75ರಷ್ಟು ರಸ್ತೆ ಸಂಪೂರ್ಣವಾಗಿ ನಾಮಾವಶೇಷಗೊಂಡಿದೆ. ದ್ವಿಚಕ್ರ ವಾಹನ ಸಂಚರಿಸಲೂ ಕಷ್ಟಕರವಾಗುತ್ತಿದ್ದು ರಿಕ್ಷಾ, ಕಾರು ಮೊದಲಾದ ವಾಹನಗಳು ಈ ರಸ್ತೆ ಮೂಲಕ ಸಂಚರಿಸಲು ಹಿಂದೇಟು ಹಾಕುತ್ತಿವೆ. ಮಳೆಗಾಲದಲ್ಲಂತೂ ಈ ರಸ್ತೆ ಮೇಲೆ ಸಂಚರಿಸುವುದು ಬಹಳ ಕಷ್ಟಕರ. ಹೊಂಡಗುಂಡಿಗಳಿಂದ ಕೂಡಿದ ಈ ರಸ್ತೆಯಲ್ಲಿ ನಡೆದಾಡಲು ಕೂಡ ಸಮಸ್ಯೆಯಾಗುತ್ತಿದೆ.
  ರಸ್ತೆಯ ಬಹುಭಾಗದಲ್ಲಿ ಎಲ್ಲಿ ನೋಡಿದರಲ್ಲಿ ಹೊಂಡ. ಮಳೆಗಾಲದ ಸಮಯದಲ್ಲಿ ಹಾಗೂ ರಾತ್ರಿ ವೇಳೆ ಈ ರಸ್ತೆಯಲ್ಲಿ ಸಂಚರಿಸುವುದು ಸವಾಲಿನ ಸಂಗತಿ. ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ಇಲ್ಲಿನ ಜನರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಈ ಪರಿಸರದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಪಟ್ಟ ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಪುರುಸೊತ್ತಿಲ್ಲ. ಮುಖ್ಯರಸ್ತೆಗೆ ಪರ್ಯಾಯವಾಗಿರುವ ಮೀನು ಮಾರುಕಟ್ಟೆ ರಸ್ತೆಯನ್ನು ಅಭಿವೃದ್ಧಿಪಡಿಸಿ ಎಂದು ಮಾಡಿದ ಮನವಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

  ಗಂಗೊಳ್ಳಿ ಮೀನು ಮಾರುಕಟ್ಟೆ ರಸ್ತೆ ದುರಸ್ತಿ ಬಗ್ಗೆ ಕಳೆದ ಹಲವು ವರ್ಷಗಳಿಂದ ಮನವಿ ಮಾಡುತ್ತಾ ಬಂದಿದ್ದರೂ ಈವರೆಗೆ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ. ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ವಾಹನಗಳು ಈ ರಸ್ತೆಯ ಮೂಲಕ ಸಂಚರಿಸಲು ಹಿಂದೇಟು ಹಾಕುತ್ತಿವೆ. ಸಂಬಂಧಪಟ್ಟ ಇಲಾಖಾಧಿಕಾರಿಗಳು ತುರ್ತಾಗಿ ಸ್ಪಂದಿಸಿ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು.
  ರಾಘವೇಂದ್ರ ಮಡಿವಾಳ, ಸ್ಥಳೀಯ ನಿವಾಸಿ

  ಮೀನು ಮಾರುಕಟ್ಟೆ ರಸ್ತೆ ದುರಸ್ತಿ ಬಗ್ಗೆ ಶಾಸಕರು, ಸಂಸದರು, ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿದ್ದು, ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ಸಂಪೂರ್ಣ ಹಾಳಾಗಿರುವ ಮೀನು ಮಾರುಕಟ್ಟೆ ರಸ್ತೆ ದುರಸ್ತಿ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮತ್ತೊಮ್ಮೆ ಮನವಿ ಮಾಡಿಕೊಂಡು ಕ್ರಮ ಕೈಗೊಳ್ಳಲಾಗುವುದು.
  ಶ್ರೀನಿವಾಸ ಖಾರ್ವಿ, ಅಧ್ಯಕ್ಷರು.
  ಗಂಗೊಳ್ಳಿ ಗ್ರಾಮ ಪಂಚಾಯಿತಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts