More

    ದಶಕಗಳಿಂದಲೂ ಬಗೆಹರಿದಿಲ್ಲ ಕೆ.ಶೆಟ್ಟಹಳ್ಳಿ ರಸ್ತೆ ಸಮಸ್ಯೆ: ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಹಿಡಿಶಾಪ, ಮಳೆ ಬಂದಾಗ ಸಂಚಾರ ಕಷ್ಟ

    ನಂದಗುಡಿ: ಹೋಬಳಿಯ ನೆಲವಾಗಿಲು ಗ್ರಾಮ ಪಂಚಾಯಿತಿಯ ಕೆ.ಶೆಟ್ಟಹಳ್ಳಿಯಲ್ಲಿ ಹಲವು ದಶಕಗಳಿಂದ ಸಮರ್ಪಕ ರಸ್ತೆ ಇಲ್ಲದೆ ಜನರು ಪರದಾಡುತ್ತಿದ್ದರೂ ರಸ್ತೆ ನಿರ್ಮಿಸಿಕೊಡುವ ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.

    ಸಿದ್ದನಹಳ್ಳಿ-ನೆಲವಾಗಿಲು ಮಾರ್ಗವಾಗಿ ಕೋಲಾರ ಹೆದ್ದಾರಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯೇ ಹದಗೆಟ್ಟಿದ್ದು, ಚರಂಡಿ ವ್ಯವಸ್ಥೆಯೂ ಇಲ್ಲದೆ, ಕೊಳಚೆನೀರು ಮಣ್ಣಿನ ರಸ್ತೆಯಲ್ಲೇ ಹರಿದು, ಓಡಾಡಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದಾಗ ರಸ್ತೆ ಸಂಪೂರ್ಣ ಕೆಸರುಗದ್ದೆಯಾಗುತ್ತದೆ.

    ಕೆ.ಶೆಟ್ಟಿಹಳ್ಳಿಯಲ್ಲಿ 50ಕ್ಕೂ ಹೆಚ್ಚು ಮನೆಗಳಿದ್ದು, 200ಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ರಸ್ತೆ ಸರಿಯಿಲ್ಲದ ಕಾರಣ ಜೀವ ಕೈಯಲ್ಲಿಡಿದು ಶಾಲಾ-ಕಾಲೇಜು, ಕಚೇರಿಗಳಿಗೆ ಹೋಗಿ ಬರುವುದು ಅನಿವಾರ್ಯವಾಗಿದೆ.

    ಗ್ರಾಮದ ಜನ ಹೈನುಗಾರಿಕೆಯನ್ನೇ ಅವಲಂಬಿಸಿದ್ದಾರೆ. ಡೇರಿಗೆ ಹಾಲು ಪೂರೈಕೆ ಮಾಡಲು ಗ್ರಾಪಂ ಸೊಸೈಟಿಗೆ ಹೋಗಬೇಕಾಗುತ್ತದೆ. ಪ್ರೌಢಶಾಲೆಗೆ ತೆರಳುವ ಮಕ್ಕಳು 2 ಕಿ.ಮೀ. ದೂರದ ನೆಲವಾಗಿಲು ಗ್ರಾಮಕ್ಕೆ ಹಾಗೂ ಕಾಲೇಜಿಗೆ ತೆರಳುವ ಮಕ್ಕಳು ಆರು ಕಿ.ಮೀ. ದೂರದಲ್ಲಿರುವ ನಂದಗುಡಿಗೆ ಹೋಗಿ ಬರಬೇಕಾಗುತ್ತದೆ. ಇವರೆಲ್ಲರೂ ಸಿದ್ದನಹಳ್ಳಿ-ನೆಲವಾಗಿಲು ರಸ್ತೆಯಲ್ಲೇ ಹೋಗಿ ಬರುತ್ತಾರೆ. ಮಳೆ ಬಂದಾಗ ಕೆಸರಿನ ರಸ್ತೆಯಲ್ಲಿ ಸಂಚಾರಕ್ಕೆ ತ್ರಾಸವಾದರೆ, ಬೇಸಿಗೆಯಲ್ಲಿ ಧೂಳು ಕಂಗೆಡಿಸಿದೆ.

    ಮಳೆ ಬರುವುದೇ ಬೇಡ!: ಕೃಷಿ ಚಟುವಟಿಕೆಯಲ್ಲಿ ತೊಡಗಿರುವವರು ಸಕಾಲದಲ್ಲಿ ಮಳೆಯಾಗಿ ಬೆಳೆ ಸಮೃದ್ಧಿ ಆಗಲಿ ಎಂದು ಪ್ರಾರ್ಥಿಸುವುದು ಸಾಮಾನ್ಯ. ಆದರೆ, ಕೆ.ಶೆಟ್ಟಿಹಳ್ಳಿ ನಿವಾಸಿಗಳು ಯಾವುದೇ ಕಾರಣಕ್ಕೂ ಮಳೆ ಆಗುವುದೇ ಬೇಡ ಎಂದು ದೇವರಲ್ಲಿ ಮೊರೆ ಇಡುವಂತಾಗಿದೆ. ಮಳೆ ಬಂದರೆ ರಸ್ತೆ ಕೆಸರುಮಯವಾಗಿ ಓಡಾಡಲು ತೊಂದರೆ ಆಗುತ್ತದೆ ಎಂಬುದು ಇದಕ್ಕೆ ಕಾರಣ.

    ಸಿದ್ದನಹಳ್ಳಿ-ನೆಲವಾಗಿಲು ಮಣ್ಣಿನ ರಸ್ತೆಯಲ್ಲೇ ನಡೆದುಕೊಂಡು ನಿತ್ಯವೂ ಶಾಲೆ, ಕಾಲೇಜಿಗೆ ಹೋಗಿ ಬರುತ್ತೇವೆ. ರಸ್ತೆಯಲ್ಲಿ ಅಡಿಗಡಿಗೂ ಗುಂಡಿ ಬಿದ್ದಿವೆ. ಮಳೆಗಾಲ ಬಂದರೆ ರಸ್ತೆಯಲ್ಲಿ ಓಡಾಡಲು ತುಂಬಾ ಕಷ್ಟವಾಗುತ್ತದೆ.
    ಗೀತಾ, ಶಾಲೆ ವಿದ್ಯಾರ್ಥಿನಿ

    ಚುನಾವಣೆ ಬಂದಾಗ ಮಾತ್ರ ರಾಜಕಾರಣಿಗಳು ಮನೆ ಬಾಗಿಲಿಗೆ ಬರುತ್ತಾರೆ. ಅಭಿವೃದ್ಧಿ ವಿಷಯದಲ್ಲಿ ಯಾರೊಬ್ಬರೂ ತಲೆಕೆಡಿಸಿಕೊಳ್ಳುವುದಿಲ್ಲ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಕೆರೆ ಕೋಡಿ ಬಿದ್ದು, ರಸ್ತೆಯಲ್ಲಿ ನೀರು ಹರಿದಿತ್ತು. ಇದರಿಂದ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ. ದ್ವಿಚಕ್ರ ವಾಹನ ಸವಾರರು ವಾಹನ ಚಲಾಯಿಸಲು ಸರ್ಕಸ್ ಮಾಡಬೇಕಾಗುತ್ತದೆ. ಹಲವರು ಬಿದ್ದು ಗಾಯಗೊಂಡಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ದುರಸ್ತಿಗೆ ಗಮನಹರಿಸಬೇಕು.
    ಕೆ. ಚಂದ್ರಪ್ಪ, ಗ್ರಾಮಸ್ಥ

    ನರೇಗಾದಡಿ ಗ್ರಾಮಕ್ಕೆ ಚರಂಡಿ, ದನದ ಕೊಟ್ಟಿಗೆ, ಸ್ಮಶಾನ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಇಲ್ಲಿ ಸಮರ್ಪಕವಾಗಿ ರಸ್ತೆಗಳಿಲ್ಲದೆ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ರಸ್ತೆ ಅಭಿವೃದ್ಧಿ ಜವಾಬ್ದಾರಿ ಪಂಚಾಯತ್ ರಾಜ್ ಮತ್ತು ಸಣ್ಣ ನೀರಾವರಿ ಇಲಾಖೆಯದ್ದಾಗಿರುವುದರಿಂದ, ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡಿ, ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
    ಮುನಿರಾಜ್, ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts