More

    ರಸ್ತೆ ಗುಂಡಿಯಿಂದಾದ ಸಾವಿಗೆ 3 ಲಕ್ಷ ರೂ. ಪರಿಹಾರ : ಪರಿಹಾರಕ್ಕೆ ತಿಂಗಳೊಳಗೆ ಪಾಲಿಕೆಗೆ ಅರ್ಜಿ ಸಲ್ಲಿಸಿ

    ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ರಸ್ತೆಗುಂಡಿ ಪರಿಣಾಮ ಬಿದ್ದು ಗಾಯಗೊಂಡವರಿಗೆ ಹಾಗೂ ಮೃತಪಟ್ಟ ವಾಹನ ಸವಾರರ ಕುಟುಂಬಗಳಿಗೆ 15 ಸಾವಿರ ರೂ.ಗಳಿಂದ 3 ಲಕ್ಷ ರೂ.ವರೆಗೆ ಪರಿಹಾರ ನೀಡಲು ಬಿಬಿಎಂಪಿ ಮುಂದಾಗಿದೆ. ಈ ಪರಿಹಾರವನ್ನು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

    ಹದಗೆಟ್ಟ ರಸ್ತೆಯಲ್ಲಿ ಸಂಚಾರ ಮಾಡಿ ಗಾಯಗೊಂಡ ವಾಹನಸವಾರರು ತಿಂಗಳ ಒಳಗಾಗಿ ಪಾಲಿಕೆ ಕಂದಾಯ ವಿಭಾಗದ ವಿಶೇಷ ಆಯುಕ್ತರಿಗೆ ಸ್ಥಳ, ಗಾಯದ ವಿಧ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವಿವರದ ದಾಖಲೆಗಳನ್ನು ಒಳಗೊಂಡ ಅರ್ಜಿ ಸಲ್ಲಿಸಬೇಕು. ಮೃತರ ಕುಟುಂಬದವರು ವೈದ್ಯಕೀಯ ವರದಿ ಮತ್ತು ಪೊಲೀಸ್ ಠಾಣೆ ವರದಿಯನ್ನು ಸಲ್ಲಿಸಬೇಕು. ಘಟನೆ ನಡೆದಾಗ ಸಿಸಿ ಕ್ಯಾಮರಾ ಇದ್ದರೆ ಅದರ ದೃಶ್ಯಾವಳಿಯನ್ನು ಸಾಕ್ಷಿಯಾಗಿ ಒದಗಿಸಬಹುದು.

    ವಿಶೇಷ ಅಧಿಕಾರಿಯಿಂದ ಪರಿಶೀಲನೆ: ರಸ್ತೆಗುಂಡಿಯಿಂದ ಅಪಘಾತಗೊಂಡು ಹಾನಿಗೀಡಾದ ಸಂತ್ರಸ್ತರ ಅರ್ಜಿ ಸಲ್ಲಿಕೆಯಾದ ಒಂದು ವಾರದಲ್ಲಿ ಕಂದಾಯ ವಿಭಾಗದ ವಿಶೇಷ ಅಧಿಕಾರಿಗಳು ಅಪಘಾತದ ದಾಖಲೆ ಮತ್ತು ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ನಂತರ, ಪರಿಹಾರ ನೀಡಲು 45 ದಿನಗಳಲ್ಲಿ ವರದಿ ನೀಡುತ್ತಾರೆ. ಆ ವರದಿ ಆಧರಿಸಿ ಪಾಲಿಕೆ ಕೆಲಸದ 55 ದಿನಗಳ ತರುವಾಯ ಸಂತ್ರಸ್ತರ ಕೈಗೆ ಹಣ ದೊರಕುತ್ತದೆ.

    1 ಪ್ರಕರಣದಲ್ಲಿ ಪರಿಹಾರ ಲಭ್ಯ: ಅಪಘಾತದಲ್ಲಿ ಯಾವುದಾದರೂ ಸ್ವತ್ತಿಗೆ ಹಾನಿಯಾಗಿದ್ದರೆ ಅಥವಾ ವ್ಯಕ್ತಿ ಮೃತಪಟ್ಟಿದ್ದರೆ, ಗಾಯಗೊಂಡಿದ್ದರೆ ಮೋಟಾರು ವಾಹನ ಕಾಯ್ದೆ ಪ್ರಕಾರ ಅಥವಾ ಬಿಬಿಎಂಪಿ ಮೂಲಕ, ಒಂದು ಪ್ರಕರಣದಲ್ಲಿ ಮಾತ್ರ ಪರಿಹಾರ ಪಡೆಯಲು ಅರ್ಹರು. ಇದಕ್ಕಾಗಿ ವ್ಯಕ್ತಿಯು ಗಾಯಗೊಂಡ ಬಗ್ಗೆ ವೈದ್ಯಕೀಯ ಪ್ರಮಾಣಪತ್ರ ಅಥವಾ ವಾಹನಗಳಿಗೆ ಧಕ್ಕೆ ಆಗಿದ್ದಲ್ಲಿ ಆಟೋಮೊಬೈಲ್ ಸರ್ವೀಸ್ ಸೆಂಟರ್‌ನಿಂದ ಪ್ರಮಾಣ ಪತ್ರ ಲಗತ್ತಿಸಬೇಕು.

    ಅರ್ಜಿ ತಿರಸ್ಕಾರದ ಸಾಧ್ಯತೆಗಳು: ಬಿಬಿಎಂಪಿ ಮಾರ್ಗಸೂಚಿ ಪ್ರಕಾರ, ಪರಿಹಾರದ ಅರ್ಜಿ ತಿರಸ್ಕಾರಕ್ಕೂ ಅವಕಾಶವಿದೆ. ಅರ್ಜಿಯೊಂದಿಗೆ ಲಗತ್ತಿಸಿದ ದಾಖಲೆಗಳು ನಕಲಿಯಾಗಿದ್ದಲ್ಲಿ, ತಿಂಗಳ ಅವಧಿ ಮೀರಿದ್ದಲ್ಲಿ ವಿಶೇಷ ಅಧಿಕಾರಿಗಳು ತಿರಸ್ಕರಿಸುತ್ತಾರೆ. ಜತೆಗೆ, ಅಪಘಾತ ನಡೆದ ರಸ್ತೆಯಲ್ಲಿ ಮುನ್ನೆಚ್ಚರಿಕೆ ಮತ್ತು ಜಾಗೃತಿ ಫಲಕಗಳನ್ನು ಅಳವಡಿಸಿಯೂ ಅಪಘಾತ ಸಂಭವಿಸಿದ್ದರೆ, ಅಂಥ ಸಂತ್ರಸ್ತರಿಗೆ ಪರಿಹಾರ ನೀಡುವುದಕ್ಕೆ ಬಿಬಿಎಂಪಿ ಸಹ ನಿರಾಕರಿಸುವ ಅವಕಾಶವಿರುತ್ತದೆ. ಕಳಪೆ ರಸ್ತೆ ಮತ್ತು ಗುಂಡಿಗಳಿಂದಾಗಿ ಅಪಘಾತ ನಡೆದಿದೆ ಎಂಬುದರ ಬಗ್ಗೆ ನೇರ ಸಾಕ್ಷಿ, ದಾಖಲೆ ಅಥವಾ ಸಿಸಿ ಕ್ಯಾಮರಾ ದೃಶ್ಯಾವಳಿ ನೀಡಬೇಕು.

    ಹೈಕೋರ್ಟ್ ಆದೇಶ : ರಾಜಧಾನಿಯಲ್ಲಿ ಪ್ರತಿವರ್ಷ ಕನಿಷ್ಠ 500ಕ್ಕೂ ಹೆಚ್ಚು ಮಂದಿ ರಸ್ತೆಗುಂಡಿಯಿಂದಾಗಿ ಬಿದ್ದು ಅಥವಾ ಗುಂಡಿ ತಪ್ಪಿಸಲು ಹೋಗಿ ಬಿದ್ದು ಗಾಯಗೊಳ್ಳುತ್ತಾರೆ. ಆದರೆ ಬೆರಳೆಣಿಕೆ ಪ್ರಕರಣಗಳಲ್ಲಿ ಸಾವು ಸಂಭವಿಸುತ್ತದೆ. 2019ರ ಜೂನ್‌ನಲ್ಲಿ ಹೈಕೋರ್ಟ್ ನೀಡಿದ ಆದೇಶದ ಅನ್ವಯ ಪರಿಹಾರ ನಿಯಮದ ಬಗ್ಗೆ ಪಾಲಿಕೆ ಎರಡು ಬಾರಿ ಪ್ರಕಟಣೆ ಹೊರಡಿಸಿದೆ.


    ಯಾವುದಕ್ಕೆ ಎಷ್ಟು ಪರಿಹಾರ?
    ಗಾಯದ ವಿಧ                 ಪರಿಹಾರ ಮೊತ್ತ
    ಸಣ್ಣ ಪ್ರಮಾಣದ ಗಾಯ       ₹5 ಸಾವಿರ
    ಮಧ್ಯಂತರದ ಗಾಯ          ₹10 ಸಾವಿರ
    ಮೂರ್ನಾಲ್ಕು ದಿನ ಚಿಕಿತ್ಸೆಗೆ   ₹10 ಸಾವಿರ
    ಗಂಭೀರ ಪ್ರಮಾಣದ ಗಾಯ   ₹15 ಸಾವಿರ
    ಮೃತಪಟ್ಟರೆ                   ₹3 ಲಕ್ಷ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts