More

    ಕೆಸರು ರಸ್ತೆಯಲ್ಲೇ ಉಸ್ತುವಾರಿ ಸಚಿವರ ಸಂಚಾರ

    ಕಡಬ: ತಿಂಗಳ ಹಿಂದೆ ಕೆಡಿಪಿ ಸಭೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಕಡಬ ಅಂಬೇಡ್ಕರ್ ಭವನದ ಮುಂಭಾಗದ ಕೆಸರು ರಸ್ತೆಯಲ್ಲೇ ಸಂಚರಿಸಿದ್ದು ಅದೇ ದೃಶ್ಯ ಮಂಗಳವಾರ ಮತ್ತೊಮ್ಮೆ ಪುನರಾವರ್ತನೆಯಾಗಿದೆ.

    ಅಂಬೇಡ್ಕರ್ ಭವನದ ಮುಂಭಾಗ ಕೆಸರು ತುಂಬಿ ವಾಹನಗಳು ಸಂಚರಿಸಲು ಪರದಾಡುತ್ತಿದ್ದು, ಅದರ ದುರಸ್ತಿಗೆ ಅಧಿಕಾರಿಗಳು ಒಂದು ತಿಂಗಳಾದರೂ ಕ್ರಮ ಕೈಗೊಂಡಿಲ್ಲ. ಸಚಿವ ಅಂಗಾರ ಕಳೆದ ಬಾರಿ ಇಲ್ಲಿಗೆ ಆಗಮಿಸಿದ್ದಾಗ ರಸ್ತೆ ಸ್ಥಿತಿ ಹೇಗಿತತೋ ಈ ಬಾರಿ ಅದಕ್ಕಿಂತಲೂ ಹೆಚ್ಚೇ ಹದಗೆಟ್ಟಿದೆ. ಸಚಿವರ ಆಗಮನದ ಸುಳಿವಿದ್ದರೂ ರಸ್ತೆಯನ್ನು ಕನಿಷ್ಠ ತಾತ್ಕಾಲಿಕವಾಗಿ ದುರಸ್ತಿ ಮಾಡುವಲ್ಲೂ ಅಧಿಕಾರಿಗಳು ಮುಂದಾಗಿಲ್ಲ. ಸಚಿವರು ಕೆಸರಿದ್ದರೂ ಪಂಚೆ ಎತ್ತಿ ದಾಟಿ ಹೋಗುತ್ತಾರೆಂಬ ಅವರ ಸರಳತೆಯನ್ನೇ ವಿಡಂಬನೆ ಮಾಡಿದಂತೆ ನಡೆದುಕೊಂಡಿರುವ ಅಧಿಕಾರಿಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಉಂಟುಮಾಡಿದೆ.

    ಅಂಬೇಡ್ಕರ್ ಭವನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಾಹನಗಳು ಹೂತು ಅವುಗಳನ್ನು ದೂಡುವ ದೃಶ್ಯ ಸಾಮಾನ್ಯವಾಗಿತ್ತು. ಇಲ್ಲಿ ನಡೆದ ಅಕ್ರಮ ಸಕ್ರಮ ಸಭೆಗೆ ಆಗಮಿಸಿದ ಸಚಿವರ, ಅಧಿಕಾರಿಗಳ, ಸಾರ್ವಜನಿಕರ, ಜನಪ್ರತಿನಿಧಿಗಳ ವಾಹನಗಳೂ ಹೂತು ಹೊರಲಾಡಿ ಕೆಸರಲ್ಲಿ ಮಿಂದೆದ್ದವು. ಮಸೀದಿ ಬಳಿಯ ಕಿರು ರಸ್ತೆ ಸೇರುವಲ್ಲಿ ಕೂಡ ಕೆಸರಿನ ಗುಂಡಿಯೇ ನಿರ್ಮಾಣವಾಗಿದೆ. ಇಷ್ಟೊಂದು ಅವ್ಯವಸ್ಥೆ ಇದ್ದರೂ ಅಧಿಕಾರಿಗಳು ಗಮನ ಹರಿಸಿಲ್ಲ. ಅಧಿಕಾರಿಗಳ ಬಗ್ಗೆ ಮೃದು ಧೋರಣೆ ಹೊಂದಿರುವ ಸಚಿವ ಅಂಗಾರರ ಸರಳತೆಯನ್ನೇ ದುರುಪಯೊಗಪಡಿಸಿಕೊಂಡಿರುವ ಅಧಿಕಾರಿಗಳು ಸಚಿವರ ಆಗಮನದ ಬಗ್ಗೆ ಗೊತ್ತಿದ್ದರೂ ರಸ್ತೆ ಸರಿಪಡಿಸುವ ಗೋಜಿಗೆ ಮುಂದಾಗಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

    ಕಡಬ ಅಂಬೇಡ್ಕರ್ ಭವನದ ಸಂಪರ್ಕ ರಸ್ತೆಯನ್ನು ತಕ್ಷಣಕ್ಕೆ ತಾತ್ಕಾಲಿಕವಾಗಿ ದುರಸ್ತಿ ಮಾಡುವ ಸಲುವಾಗಿ ಪಟ್ಟಣ ಪಂಚಾಯಿತಿ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡುವರು. ಅಲ್ಲಿನ ಸ್ಥಿತಿ ಪರಿಶೀಲಿಸಿ ಕ್ರಿಯಾಯೋಜನೆ ತಯಾರಿಸಿದ ಬಳಿಕ ದುರಸ್ತಿ ಕಾರ್ಯ ಮಾಡಲಾಗುವುದು.
    – ಮತ್ತಡಿ,
    ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts