More

    ರಸ್ತೆ ವಿಭಜಕಕ್ಕೆ ಪುಷ್ಪಾಲಂಕಾರ, ರಾಮಕೃಷ್ಣ ಮಿಷನ್ ಸಹಯೋಗದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಯೋಜನೆ

    ಹರೀಶ್ ಮೋಟುಕಾನ ಮಂಗಳೂರು

    ಮಂಗಳೂರು ನಗರವನ್ನು ಸುಂದರ ಮತ್ತು ಆಕರ್ಷಣೀಯಗೊಳಿಸಲು ನಗರಾಭಿವೃದ್ಧಿ ಪ್ರಾಧಿಕಾರ ಯೋಜನೆ ರೂಪಿಸಿದೆ. ನಗರದ ಪ್ರಮುಖ ರಸ್ತೆ ವಿಭಜಕಗಳು ಇನ್ಮುಂದೆ ಬಣ್ಣಬಣ್ಣದ ಹೂವುಗಳಿಂದ ಕಂಗೊಳಿಸಲಿದ್ದು, ಇದಕ್ಕಾಗಿ ರಾಮಕೃಷ್ಣ ಮಿಷನ್ ಜತೆಗೂಡಿ ಮಳೆಗಾಲದಲ್ಲಿ ಹೂವಿನ ಗಿಡಗಳನ್ನು ನೆಡಲು ನಿರ್ಧರಿಸಿದೆ.

    ನಗರದ ಬಹುತೇಕ ರಸ್ತೆಗಳು ಚತುಷ್ಪಥಗೊಂಡು ಕಾಂಕ್ರೀಟ್ ಹಾಕಲ್ಪಟ್ಟಿದೆ. ಇದರ ಮಧ್ಯೆ ರಸ್ತೆ ವಿಭಜಕವಿದ್ದು, ಕೆಲವೆಡೆ ನಿಷ್ಪ್ರಯೋಜಕ ಗಿಡಗಳು ತುಂಬಿದ್ದರೆ ಕೆಲವೆಡೆ ಖಾಲಿ ಬಿದ್ದಿವೆ. ವಿಮಾನ ನಿಲ್ದಾಣ ರಸ್ತೆಯಲ್ಲಿ ಈ ಹಿಂದೆ ಹೂವಿನ ಗಿಡಗಳನ್ನು ನೆಡಲಾಗಿತ್ತು. ಆದರೆ ಹೆಚ್ಚಿನ ಗಿಡಗಳು ಸತ್ತು ಹೋಗಿವೆ. ಒಂದೆರಡು ಕಡೆ ಹೂವು ಅರಳುತ್ತಿದ್ದು, ನೋಡಲು ಸುಂದರವಾಗಿದೆ.

    ಬಲ್ಮಠ, ಬಂಟ್ಸ್‌ಹಾಸ್ಟೆಲ್, ಫಳ್ನೀರ್, ಎಂ.ಜಿ.ರೋಡ್, ಕೆ.ಎಸ್.ರಾವ್ ರಸ್ತೆ, ವಿಮಾನ ನಿಲ್ದಾಣ ರಸ್ತೆ, ಕಂಕನಾಡಿ, ವೆಲೆನ್ಸಿಯಾ ರಸ್ತೆ, ಲೇಡಿಹಿಲ್-ಉರ್ವಸ್ಟೋರ್-ಕೊಟ್ಟಾರ ಚೌಕಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ವೈವಿಧ್ಯಮಯ, ಆಕರ್ಷಣೀಯ ಹೂವಿನ ಗಿಡಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ. ಮಂಗಳೂರಿಗೆ ಬರುವ ಪ್ರವಾಸಿಗರ ಮನಸ್ಸು ಮುದಗೊಳಿಸಿ, ನಗರ ಸಂಚಾರವನ್ನು ಆನಂದದಾಯಕವಾಗಿಸುವ ಉದ್ದೇಶ ಹೊಂದಲಾಗಿದೆ.

    ಗಿಡ ಹಾಳಾಗದಂತೆ ನಿರ್ವಹಣೆ: ರಸ್ತೆ ವಿಭಜಕಗಳಲ್ಲಿ ಹೆಚ್ಚು ಎತ್ತರಕ್ಕೆ ಬೆಳೆಯದ ಗಿಡಗಳನ್ನು ನೆಡಲು ನಿರ್ಧರಿಸಲಾಗಿದೆ. ಬಳಿಕ ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಮುಡಾ ಜತೆಗೆ ರಾಮಕೃಷ್ಣ ಮಿಷನ್ ಕೈಜೋಡಿಸಲಿದೆ. ಬೇಸಿಗೆಯಲ್ಲಿ ಗಿಡಗಳು ಒಣಗಿ ಹೋಗದಂತೆ ನೀರುಣಿಸಿ ಕಾಪಾಡಬೇಕಿದೆ. ಗಿಡಗಳನ್ನು ಕಿಡಿಗೇಡಿಗಳು ಹಾಳು ಮಾಡದಂತೆಯೂ ನೋಡಿಕೊಳ್ಳಬೇಕು. ಪ್ರಾಣಿಗಳೂ ತಿಂದು ಹೋಗದಂತೆ ಬೇಲಿ ಅಳವಡಿಸಿ ರಕ್ಷಣೆ ನೀಡುವ ನಿಟ್ಟಿನಲ್ಲೂ ಮುಡಾ ಜವಾಬ್ದಾರಿ ವಹಿಸಬೇಕಾಗಿದೆ.

    ಹಣ್ಣಿನ ಗಿಡಗಳ ನಾಟಿಗೆ ಸಿದ್ಧತೆ: ಗ್ರೀನ್ ಟೈಗರ್ ಜತೆಗೂಡಿ ನಗರದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಮುಡಾದ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಬೈರಾಡಿ ಕೆರೆ ಬಳಿ ಕಳೆದ ವಾರ ಚಾಲನೆ ನೀಡಿದ್ದಾರೆ. ಇದಕ್ಕೆ ಜಾಗ ಹುಡುಕುವ ಕೆಲಸ ಪ್ರಗತಿಯಲ್ಲಿದ್ದು, ಮಳೆಗಾಲದ ವೇಳೆಗೆ ಜಾಗ ಅಂತಿಮಗೊಳಿಸಿ, ಹಣ್ಣಿನ ಗಿಡಗಳ ನಾಟಿಗೆ ಸಿದ್ಧತೆ ನಡೆಸಲಾಗಿದೆ. ಮುಡಾ ಹಮ್ಮಿಕೊಳ್ಳುವ ವಿನೂತನ ಯೋಜನೆಗಳಿಗೆ ಸಹಕಾರ ನೀಡಬೇಕು ಎಂದು ಮುಡಾ ಅಧ್ಯಕ್ಷ ರವಿಶಂಕರ ಮಿಜಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

    ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರು ನಗರದ ರಸ್ತೆಗಳು, ಫುಟ್‌ಪಾತ್, ಒಳಚರಂಡಿ ಮೊದಲಾದ ಕಾಮಗಾರಿಗಳು ನಡೆಯುತ್ತಿವೆ. ಪ್ರಸ್ತುತ ನ್ಯಾಯಾಲಯದ ತಡೆಯಾಜ್ಞೆ ಇರುವುದರಿಂದ ಕಾಮಗಾರಿಗಳು ಸ್ಥಗಿತಗೊಂಡಿವೆ. ಈಗಾಗಲೇ ಕೈಗೆತ್ತಿಕೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳು ಮಳೆಗಾಲಕ್ಕೆ ಮೊದಲು ಪೂರ್ಣಗೊಳ್ಳಲಿದೆ. ಹಣ್ಣಿನ ಗಿಡಗಳು, ಹೂವಿನ ಗಿಡಗಳು ಮಂಗಳೂರು ನಗರದ ಸೌಂದರ್ಯ ಹೆಚ್ಚಿಸಲಿವೆ.

    ವೇದವ್ಯಾಸ ಕಾಮತ್, ಶಾಸಕ

    ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ರಸ್ತೆ ವಿಭಜಕಗಳಲ್ಲಿ ಹೂವಿನ ಗಿಡಗಳನ್ನು ನೆಡಲು ಯೋಜನೆ ರೂಪಿಸಿದೆ. ನಗರದಲ್ಲಿ ಶೇ.33ರಷ್ಟು ಹಸಿರು ಇರುವಂತೆ ನೋಡಿಕೊಳ್ಳಲು ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಪಾರ್ಕ್‌ಗಳ ಅಭಿವೃದ್ಧಿ ಕಡೆಗೂ ಗಮನ ವಹಿಸಲಾಗಿದೆ. ಹಣ್ಣಿನ ಗಿಡಗಳನ್ನು ಕೂಡ ನೆಡಲು ಉದ್ದೇಶಿಸಿದ್ದು, ಬೈರಾಡಿ ಕೆರೆ ಬಳಿ ಈಗಾಗಲೇ ಚಾಲನೆ ನೀಡಲಾಗಿದೆ.

    ರವಿಶಂಕರ ಮಿಜಾರ್
    ಮುಡಾ ಅಧ್ಯಕ್ಷರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts