More

    ಚತುಷ್ಪಥ ರಸ್ತೆ ಕೆಲಸ ಬಿರುಸು

    ಪುತ್ತೂರು: ರಾಜ್ಯ ಹೆದ್ದಾರಿಗೆ ಸೇರ್ಪಡೆಗೊಂಡಿರುವ ಉಪ್ಪಿನಂಗಡಿ- ಪುತ್ತೂರು ರಸ್ತೆಯ ಕೆಮ್ಮಾಯಿ- ಸೇಡಿಯಾಪು ತನಕ 12 ಕೋಟಿ ರೂ. ವೆಚ್ಚದ ಚತುಷ್ಪಥ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಧೂಳು ತುಂಬಿರುವುದರಿಂದ ರಸ್ತೆ ಸಂಚಾರ ಕಷ್ಟವಾಗಿದೆ.

    ಬೊಳುವಾರು ಬಳಿಯಿಂದ ಪುತ್ತೂರು- ಉಪ್ಪಿನಂಗಡಿ ರಸ್ತೆ 10.2 ಕಿ.ಮೀ. ವ್ಯಾಪ್ತಿ ಇದ್ದು, ಹಾರಾಡಿಯಿಂದ ಕೃಷ್ಣನಗರ ತನಕ ಶಕುಂತಳಾ ಟಿ.ಶೆಟ್ಟಿ ಶಾಸಕರಾಗಿದ್ದ ಅವಧಿಯಲ್ಲಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಕಂಡಿತ್ತು. ಕೆಮ್ಮಾಯಿಯಿಂದ ಸೇಡಿಯಾಪುವರೆಗಿನ 4 ಕಿ.ಮೀ. ರಸ್ತೆ ಪ್ರಸ್ತುತ ಶಾಸಕ ಸಂಜೀವ ಮಠಂದೂರು ಅನುದಾನದಲ್ಲಿ ಅಭಿವೃದ್ಧಿ ಕಾಣುತ್ತಿದೆ.

    100ಕ್ಕೂ ಅಧಿಕ ಮರಗಳ ತೆರವು: ಚತುಷ್ಪಥ ನಿರ್ಮಾಣಕ್ಕೆ ರಸ್ತೆ ಮಧ್ಯಭಾಗದಿಂದ ಎರಡೂ ಕಡೆ ಏಳು ಮೀಟರ್ ಡಾಂಬರು ರಸ್ತೆ, ಎರಡು ಮೀಟರ್ ರಸ್ತೆ ಬದಿ ಹಾಗೂ ಚರಂಡಿ ಸೇರಿದಂತೆ ಒಟ್ಟು 22 ಮೀಟರ್ ಅಗಲ ರಸ್ತೆ ನಿರ್ಮಿಸಲಾಗುತ್ತಿದೆ. ಈ ಭಾಗದಲ್ಲಿ ಹಾದುಹೋಗಿರುವ ವಿದ್ಯುತ್ ಲೈನ್ ಬದಲಾವಣೆಗೆ ಸುಮಾರು 70 ವಿದ್ಯುತ್ ಕಂಬ, 100ಕ್ಕೂ ಅಧಿಕ ಮರ ತೆರವು ಮಾಡಲಾಗಿದೆ. ಕೆಮ್ಮಾಯಿಯಿಂದ ಸೇಡಿಯಾಪು ತನಕದ ರಸ್ತೆ ಚತುಷ್ಪಥಗೊಳಿಸಲು ಸರ್ಕಾರ 12 ಕೋಟಿ ರೂ. ಮಂಜೂರು ಮಾಡಿದೆ. ರಸ್ತೆ ವಿಸ್ತರಣೆ ಜತೆಗೆ ಜಲ್ಲಿ ಮಿಶ್ರಣ ಹಾಕುವ ಕಾಮಗಾರಿ ಪ್ರಗತಿಯಲ್ಲಿದೆ. ನಗರಕ್ಕೆ ಹಾದುಹೋಗಿರುವ ಕುಡಿಯುವ ನೀರಿನ ಪೈಪ್ ಅಗತ್ಯದ ಸ್ಥಳದಲ್ಲಿ ಸ್ಥಳಾಂತರಗೊಳಿಸಲಾಗುತ್ತಿದೆ.

    ರಾಜ್ಯ ಹೆದ್ದಾರಿ-118ಕ್ಕೆ ಸೇರ್ಪಡೆ: ಪುತ್ತೂರು ಮತ್ತು ಉಪ್ಪಿನಂಗಡಿ ಸಂಪರ್ಕಿಸುವ 10.2 ಕಿ.ಮೀ. ಜಿಲ್ಲಾ ಮುಖ್ಯರಸ್ತೆಯನ್ನು ರಾಜ್ಯ ಹೆದ್ದಾರಿ-118ಕ್ಕೆ ಸೇರ್ಪಡೆಗೊಳಿಸಲಾಗಿದೆ. ಗುರುವಾಯನಕೆರೆ- ಉಪ್ಪಿನಂಗಡಿ ಸಂಪರ್ಕಿಸುವ 26 ಕಿ.ಮೀ. ರಸ್ತೆ ಈಗಾಗಲೇ ರಾಜ್ಯ ಹೆದ್ದಾರಿ ಆಗಿದ್ದು, ಇದೇ ಹೆದ್ದಾರಿಯನ್ನು ಪುತ್ತೂರು ತನಕ ವಿಸ್ತರಿಸಲಾಗಿದೆ. ಈ ಮೂಲಕ 36 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ಆಗಿ ಪರಿವರ್ತನೆಗೊಂಡಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಿ ಅನುಷ್ಠಾನಗೊಳಿಸಲಾಗಿದೆ.

    ರಾಷ್ಟ್ರೀಯ ಹೆದ್ದಾರಿ ಸಂಪರ್ಕಕ್ಕೆ ಸಹಕಾರಿ
    ಪುತ್ತೂರು -ಉಪ್ಪಿನಂಗಡಿ ಸಂಪರ್ಕಿಸುವ ಹೊಸ ರಾಜ್ಯ ಹೆದ್ದಾರಿ ಜಿಲ್ಲೆಯ ಪ್ರಮುಖ ರಸ್ತೆಯಾಗಿದ್ದು, ಮೂರು ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುತ್ತದೆ. ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ, ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ಕಾರಣ ಮುಖ್ಯ ಹೆದ್ದಾರಿಯಾಗಲಿದೆ.

    ಉಪ್ಪಿನಂಗಡಿ-ಪುತ್ತೂರು ರಾಜ್ಯ ರಸ್ತೆಯ ಕೆಮ್ಮಾಯಿ- ಸೇಡಿಯಾಪು ತನಕ 12 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ನೆಕ್ಕಿಲಾಡಿ ತನಕ ಚತುಷ್ಪಥ ರಸ್ತೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಉಪ್ಪಿನಂಗಡಿ ಪುತ್ತೂರು ಚತುಷ್ಪಥ ರಸ್ತೆಯಾಗಿ ರೂಪುಗೊಳ್ಳಲಿದೆ. ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಧೂಳು ಸಾಮಾನ್ಯ.
    -ಸಂಜೀವ ಮಠಂದೂರು ಪುತ್ತೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts