More

    ನವಲಗುಂದ ಪರಿಷ್ಕೃತ ಬೈಪಾಸ್​ಗೆ ಅನುಮೋದನೆ

    ಹುಬ್ಬಳ್ಳಿ : ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ 218 ರ ಮೇಲಿನ ಬಹು ನಿರೀಕ್ಷಿತ ನವಲಗುಂದ ಪರಿಷ್ಕೃತ ಬೈಪಾಸ್ ರಸ್ತೆಗೆ ಭಾರತ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅನುಮತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

    ಕಿಮೀ ಚೈನೇಜ್ 154.620 ರಿಂದ 159.30 ವರೆಗಿನ 6.695 ಕಿಮೀ ಅಂತರದ ಈ ನವಲಗುಂದ ಬೈಪಾಸ್ ನಿರ್ಮಾಣ ನವಲಗುಂದ ಪಟ್ಟಣದ ಮೇಲಿನ ವಾಹನ ಸಂಚಾರ ದಟ್ಟಣೆ ಸುಗಮಗೊಳಿಸಿ, ನವಲಗುಂದ ಪಟ್ಟಣದಿಂದ ಅಣ್ಣಗೇರಿ, ರೋಣ ಹಾಗೂ ಇಬ್ರಾಹಿಂಪುರ ರಸ್ತೆಗಳನ್ನು ಜೋಡಿಸುವ ಯೋಜನೆಗಾಗಿ 2014 ರಲ್ಲಿಯೇ ಮಂಜೂರಾಗಿತ್ತು.

    ಆದರೆ, ನಂತರ ಹೆದ್ದಾರಿ ಇಲಾಖೆ ಕೆಲವು ತಾಂತ್ರಿಕ ಕಾರಣಗಳ ಆಧಾರದ ಮೇಲೆ ಈ ಮಂಜೂರಾದ ಮಾರ್ಗ ಬದಲಾಗಿ ನವಲಗುಂದ ನಗರದ ಬಲಭಾಗದಿಂದ ಬೇರೆ ಮಾರ್ಗ ಸೂಚಿಸಿ ಬದಲಾವಣೆ ಮಾಡಿತ್ತು. ಆದರೆ, ನವಲಗುಂದ ಹಾಗೂ ಸುತ್ತಲಿನ ಗ್ರಾಮಗಳ ಜನರು ಮೊದಲು ತಯಾರಿಸಲಾದ ಮಾರ್ಗವನ್ನು ಅನುಮೋದಿಸಲು ಒತ್ತಾಯಿಸಿದ ಹಿನ್ನೆಲೆಯಲ್ಲಿ ಸಚಿವ ಜೋಶಿ ಜನರ ಕೋರಿಕೆಯಂತೆ ಸ್ವತಃ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದರು.

    ಸಚಿವ ಪ್ರಲ್ಹಾದ ಜೋಶಿ ಅವರು ಕೇಂದ್ರ ಹೆದ್ದಾರಿ ಸಚಿವರಿಗೆ ಪತ್ರ ಬರೆದು, ಖುದ್ದಾಗಿ ಬೇಟಿಯಾಗಿ ಸಭೆ ನಡೆಸಿದ್ದರ ಫಲವಾಗಿ ಹೆದ್ದಾರಿ ಸಚಿವ ಗಡ್ಕರಿ ಅವರು ಮೊದಲಿನ ಬೈಪಾಸ್ ಮಾರ್ಗವನ್ನೇ ಈಗ ಅನುಮೋದಿಸಿ, ಆದೇಶ ಹೊರಡಿಸಿದ್ದಾರೆಂದು ಸಚಿವ ಜೋಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಈ ಆದೇಶದಲ್ಲಿ ಕೇಂದ್ರ ಹೆದ್ದಾರಿ ಇಲಾಖೆ ಈ ಪರಿಷ್ಕೃತ ಬೈಪಾಸ್ ಮಾರ್ಗಕ್ಕೆ ಡಿಪಿಆರ್ ಇತ್ಯಾದಿ ಸಲ್ಲಿಸಲು ರಾಜ್ಯ ಹೆದ್ದಾರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ಸಚಿವ ಜೋಶಿ ಕೂಡಲೇ ಡಿಪಿಆರ್ ಸಲ್ಲಿಸಲು ಆದೇಶಿಸಿದ್ದಾರೆ.

    ಈ ಪರಿಷ್ಕೃತ ನವಲಗುಂದ ಬೈಪಾಸ್ ರಸ್ತೆ ಅಣ್ಣಿಗೇರಿ, ಇಬ್ರಾಹಿಂಪುರ ಹಾಗೂ ರೋಣಗಳತ್ತ ಹೋಗುವ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವುದರಿಂದ ಈ ಎಲ್ಲ ಊರುಗಳ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಸಚಿವ ಪ್ರಲ್ಹಾದ ಜೊಶಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts