More

    ನದಿ ತೀರದ ಜನರು ಮುನ್ನೆಚ್ಚರಿಕೆ ವಹಿಸಿ

    ಅಥಣಿ: ಕೆಲ ದಿನಗಳಿಂದ ಸುರಿಯುತ್ತಿರುವ ಮಹಾಮಳೆಯಿಂದ ಗಡಿನಾಡಿನಲ್ಲಿ ಮತ್ತೆ ಆತಂಕ ಶುರುವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ತಹಸೀಲ್ದಾರ್ ದುಂಡಪ್ಪ ಕೋಮಾರ ಶುಕ್ರವಾರ ತಾಲೂಕಿನ ಮುಳುಗಡೆ ಗ್ರಾಮಗಳಾದ ಹುಲಗಬಾಳ, ದರೂರ, ಹಲ್ಯಾಳ, ಚಿಕ್ಕೂಡ, ತೀರ್ಥ, ಸಪ್ತಸಾಗರ, ಶಂಕ್ರಟ್ಟಿ, ನಾಗನೂರ ಪಿ.ಕೆ ಸೇರಿ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಿದರು.

    ಮಹಾಪೂರ ಬಂದರೆ ಜನರು ಗಂಜಿ ಕೇಂದ್ರಗಳಿಗೆ ತೆರಳಲು ಸಿದ್ಧರಾಗುವಂತೆ ಸೂಚಿಸಿದರು. ಈಗಾಗಲೇ ಎರಡು ಬೋಟ್ ವ್ಯವಸ್ಥೆ ಮಾಡಲಾಗಿದೆ. ದರೂರ ಸೇತುವೆ ನೀರಿನ ಮಟ್ಟವು ದಿನದಿಂದ ದಿನಕ್ಕೆ ಏರಿಕೆ ಕಂಡಿದೆ. ಅನಂತಪುರ, ಜನವಾಡ ಗ್ರಾಮಗಳಲ್ಲಿ 4-5 ಮನೆಗಳು ಕುಸಿದು ಬಿದ್ದಿವೆ. ಯಾವುದೇ ಪ್ರಾಣಹಾನಿಯಾಗಿಲ್ಲ. ಹಾನಿಯ ಸರ್ವೇ ಮಾಡುವಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು. ನೆರೆ ಹಾವಳಿಗೆ ತುತ್ತಾಗುವ ತಾಲೂಕಿನ 22 ಗ್ರಾಮಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಿ ಜನ-ಜಾನುವಾರುಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು.

    ಕೊಕಟನೂರ ವರದಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಅಥಣಿ ತಾಲೂಕಿನ ಕೃಷ್ಣಾ ನದಿ ಮೈದುಂಬಿ ಹರಿಯುತ್ತಿರುವ ಪರಿಣಾಮ ಶುಕ್ರವಾರ ನದಿ ದಡದ ವಿವಿಧ ಗ್ರಾಮಗಳಿಗೆ ಅಥಣಿ ತಹಸೀಲ್ದಾರ್ ದುಂಡಪ್ಪ ಕೋಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ತಾಲೂಕಿನ ಕೃಷ್ಣಾ ನದಿ ದಡದ ಸಪ್ತಸಾಗರ, ನದಿ ಇಂಗಳಗಾಂವ, ಖವಟಕೊಪ್ಪ ಸೇರಿ ಹಲವು ಗ್ರಾಮಗಳ ನದಿ ಪ್ರದೇಶ ವೀಕ್ಷಿಸಿ ಬಳಿಕ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ಮಹಾರಾಷ್ಟ್ರದಲ್ಲಿ ಸತತವಾಗಿ ಭಾರಿ ಮಳೆ ಸುರಿಯುತ್ತಿದೆ. ಇದರಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ. ಜನ, ಜಾನುವಾರು ನದಿ ದಡಕ್ಕೆ ಹೋಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಗ್ರಾಮದ ಕಡೆಗೆ ನೀರು ನುಗ್ಗುವ ಹಂತಕ್ಕೆ ಬಂದರೆ ನದಿ ದಡದ ಜನರನ್ನು ಕಾಳಜಿ ಕೇಂದ್ರಗಳಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಕೋಮಾರ ಮಾಹಿತಿ ನೀಡಿದರು. ಕಂದಾಯ ನಿರೀಕ್ಷಕ ಶಿವಾನಂದ ಮೆಣಸಂಗಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ ವಾಘಮೋರೆ, ಮಂಜುನಾಥ ತಳವಾರ, ಗ್ರಾಮ ಲೆಕ್ಕಾಧಿಕಾರಿ ಅಶೋಕ ಕೋಗಿಲೆ, ಸಚಿನ ಸಪ್ತಸಾಗರ ಇತರರು ಇದ್ದರು.

    ಸದಲಗಾ ವರದಿ: ಗಡಿಭಾಗ ಚಿಕ್ಕೋಡಿ ಸೇರಿ ಮಹಾರಾಷ್ಟ್ರ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ನಿಪ್ಪಾಣಿ ತಾಲೂಕಿನ ಹುನ್ನರಗಿ ಗ್ರಾಮಕ್ಕೆ ವೇದಗಂಗಾ ನದಿ ನೀರು ನುಗ್ಗಿದೆ. ಇದರಿಂದ ಗ್ರಾಮದ ರೈತರ ಬೆಳೆಗಳು ನಾಶವಾಗಿವೆ. ಜಿಲ್ಲಾಡಳಿತ ಗ್ರಾಮಸ್ಥರಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts