More

    ಆಸ್ಟ್ರೇಲಿಯಾ ವಿರುದ್ಧ ಎರಡನೇ ಏಕದಿನ ಪಂದ್ಯಕ್ಕಿಲ್ಲ ರಿಷಬ್​ ಪಂತ್​

    ಮುಂಬೈ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಹೆಲ್ಮೆಟ್​ಗೆ ಏಟು ತಿಂದಿದ್ದ ರಿಷಭ್ ಪಂತ್, ಶುಕ್ರವಾರ ರಾಜ್​ಕೋಟ್​ನಲ್ಲಿ ನಡೆಯಲಿರುವ 2ನೇ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದೇ ಅವಧಿಯಲ್ಲಿ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನದಲ್ಲಿ ಭಾಗಿಯಾಗಲಿದ್ದಾರೆ.

    ಬುಧವಾರ ಇಡೀ ತಂಡ ರಾಜ್​ಕೋಟ್​ಗೆ ಪ್ರಯಾಣ ಮಾಡಿದ್ದರೆ, ರಿಷಭ್ ಪಂತ್ ಪ್ರಯಾಣಿಸಿರಲಿಲ್ಲ. ಅವರು ತಡವಾಗಿ ತಂಡ ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತಾದರೂ, ಕೊನೇ ಹಂತದಲ್ಲಿ 2ನೇ ಏಕದಿನ ಪಂದ್ಯದಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ. 44ನೇ ಓವರ್​ನಲ್ಲಿ ಪ್ಯಾಟ್ ಕಮ್ಮಿನ್ಸ್​ರ ಬೌನ್ಸರ್ ಎಸೆತವೊಂದು ಹೆಲ್ಮೆಟ್​ಗೆ ಬಡಿದಿತ್ತಲ್ಲದೆ, ಇದರ ಪರಿಣಾಮವಾಗಿ ಅವರು ಔಟ್ ಕೂಡ ಆಗಿದ್ದರು. ಇದರಿಂದಾಗಿ ರಿಷಭ್ ಪಂತ್ ಬದಲಿಯಾಗಿ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಿದ್ದರೆ, ಬದಲಿ ಆಟಗಾರನಾಗಿ ಮನೀಷ್ ಪಾಂಡೆ ಮೈದಾನಕ್ಕೆ ಇಳಿದಿದ್ದರು. ಮಂಗಳವಾರ ಇಡೀ ಆಸ್ಪತ್ರೆಯಲ್ಲಿದ್ದ ರಿಷಭ್ ಪಂತ್, ಬುಧವಾರ ಮಧ್ಯಾಹ್ನದ ವೇಳೆ ಬಿಡುಗಡೆಯಾಗಿದ್ದರು. ಬಿಸಿಸಿಐ ನಿಯಮಗಳ ಪ್ರಕಾರ ಗಾಯಗೊಂಡಿರುವ ಅವರು ಪುನಶ್ಚೇತನಕ್ಕಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಬರಲಿದ್ದಾರೆ. ರಿಷಭ್ ಪಂತ್ ಸ್ಥಾನದಲ್ಲಿ ಮನೀಷ್ ಪಾಂಡೆ ಆಡುವ ಸಾಧ್ಯತೆಗಳಿವೆ.

    ಕೆಎಲ್ ರಾಹುಲ್ ಕೀಪರ್: ಪ್ರಸ್ತುತ ತಂಡದಲ್ಲಿ ಸ್ಪೆಷಲಿಸ್ಟ್ ವಿಕೆಟ್ ಕೀಪರ್ ಇಲ್ಲ. ಪಂತ್​ಗೆ ಪ್ರತಿಸ್ಪರ್ಧಿಯಾಗಿದ್ದ ಸಂಜು ಸ್ಯಾಮ್ಸನ್, ಭಾರತ ಎ ತಂಡದೊಂದಿಗೆ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದಾರೆ. ಇದರಿಂದಾಗಿ 2ನೇ ಏಕದಿನ ಪಂದ್ಯದಲ್ಲೂ ಕೆಎಲ್ ರಾಹುಲ್ ಅವರೇ ವಿಕೆಟ್ ಕೀಪರ್ ಆಗಿ ಮುಂದುವರಿಯಲಿದ್ದಾರೆ. ಮುಂಬೈ ಏಕದಿನ ಪಂದ್ಯದ ವೇಳೆ ರಾಹುಲ್, ಡೇವಿಡ್ ವಾರ್ನರ್​ರ ಕ್ಯಾಚ್ ಬಿಟ್ಟು ಜೀವದಾನ ನೀಡಿದ್ದರು. -ಪಿಟಿಐ/ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts