More

    ಮೃತದೇಹಗಳ ರಾಶಿಯ ಮೇಲೆ ಆಧುನಿಕ ದೆಹಲಿ ನಿರ್ಮಿಸಲಾಗದು: ಶಾಂತಿ ಕಾಪಾಡಲು ಸಿಎಂ ಕೇಜ್ರಿವಾಲ್​ ಮನವಿ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಈಶಾನ್ಯ ಭಾಗದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಹಿಂದೂಗಳಿಗಾಗಲಿ ಅಥವಾ ಮುಸ್ಮೀಮರಿಗಾಗಲಿ ಯಾವುದೇ ಪ್ರಯೋಜನವಿಲ್ಲ. ದಯವಿಟ್ಟು ಎಲ್ಲರೂ ಶಾಂತಿ ಕಾಪಾಡಿ ಎಂದು ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ಮನವಿ ಮಾಡಿಕೊಂಡಿದ್ದಾರೆ.

    ಹಿಂಸಾಚಾರ ಸಮಸ್ಯೆ ಕುರಿತು ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್​, ರಾಜಕೀಯ ಅಂಶಗಳು ಮತ್ತು ಹೊರಗಿನವರಿಂದಲೇ ಈ ಹಿಂಸಾಚಾರ ನಡೆದಿದೆ ಎಂದು ಆರೋಪಿಸಿದರು.

    ಗಲಭೆಯಿಂದ ಉಂಟಾಗಿರುವ ನಷ್ಟದಿಂದ ಎಲ್ಲರು ಬಳಲಿದಿದ್ದಾರೆ. 20ಕ್ಕೂ ಹೆಚ್ಚು ಮಂದಿಯ ಹತ್ಯೆಯಾಗಿದೆ. ಗಲಭೆಯಲ್ಲಿ ಹಿಂದು ಮತ್ತು ಮುಸ್ಲಿಂ ಇಬ್ಬರು ಹತರಾಗಿದ್ದಾರೆ. ಹಿಂಸಾಚಾರದಲ್ಲಿ ಗಾಯಗೊಂಡವರ ಪಟ್ಟಿ ನನ್ನ ಬಳಿ ಇದೆ. ಹಿಂದು-ಮುಸ್ಲಿಂ ಇಬ್ಬರು ಗಾಯಗೊಂಡು ಬಳಲುತ್ತಿದ್ದಾರೆ ಎಂದು ಹೇಳಿದರು.

    ಇದೀಗ ದೆಹಲಿಗೆ ಉಳಿದಿರುವುದು ಎರಡೇ ಆಯ್ಕೆ. ಒಂದು ಜನರು ಒಟ್ಟಾಗಿ ಬಂದು ಪರಿಸ್ಥಿತಿಯನ್ನು ಉತ್ತಮವಾಗಿಸಬೇಕು ಅಥವಾ ಒಬ್ಬರನ್ನೊಬ್ಬರು ಹೊಡೆದು ಕೊಲ್ಲಬೇಕು. ಆದರೆ, ಮೃತದೇಹಗಳ ರಾಶಿಯ ಮೇಲೆ ಆಧುನಿಕ ದೆಹಲಿಯನ್ನು ನಿರ್ಮಿಸಲಾಗದು. ಇಲ್ಲಿಯವರೆಗೆ ಆಗಿದ್ದು ಸಾಕಾಯಿತು. ರಾಜಕೀಯ ದ್ವೇಷ, ಗಲಭೆ ಹಾಗೂ ಮನೆಗಳನ್ನು ಸುಡುವುದನ್ನು ಇನ್ನು ಸಹಿಸಲಾಗದು ಎಂದರು.

    ಇದೇ ವೇಳೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸೇನೆಯನ್ನು ಕರೆತರುವಂತೆ ಹಾಗೂ ಹಿಂಸಾಚಾರ ಪ್ರದೇಶಗಳಲ್ಲಿ ಕರ್ಪ್ಯೂ ಜಾರಿ ಮಾಡುವಂತೆ ಒತ್ತಾಯಿಸಿದರು. ಹಿಂಸೆಯನ್ನು ಬಿಡಿ. ನಿಮ್ಮ ಏರಿಯಾದಲ್ಲಿ ಹೊರಗಿನವರು ಬಂದು ಶಾಂತಿ ನೆಮ್ಮದಿಯನ್ನು ಹಾಳುಗೆಡವಿದರೆ ಪೊಲೀಸರಿಗೆ ಮಾಹಿತಿ ನೀಡಿ ಎಂದು ದೆಹಲಿ ಜನತೆಗೆ ಕೇಜ್ರಿವಾಲ್​ ಮನವಿ ಮಾಡಿಕೊಂಡರು. ಒಂದು ವೇಳೆ ಗಲಭೆಕೋರರಿಗೆ ಪೊಲೀಸರು ಸಹಾಯ ಮಾಡಿರುವುದು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಇದೇ ವೇಳೆ ಎಚ್ಚರಿಸಿದರು

    ನಿಮ್ಮ ಆರೋಗ್ಯಯುತ ಜೀವನ ನಮ್ಮ ಜವಾಬ್ದಾರಿಯಾಗಿದೆ ಎಂಬುದನ್ನು ದೆಹಲಿ ಜನತೆಗೆ ಖಚಿತಪಡಿಸಲು ಇಚ್ಛಿಸುತ್ತೇನೆ. ನೀವು ನಮ್ಮ ಜವಾಬ್ದಾರಿ. ಪೀತಿಯಿಂದ ಬಾಳುವುದನ್ನು ದೆಹಲಿ ಜನತೆ ಬಯಸಿದ್ದಾರೆ. ಪ್ರತಿಯೊಂದು ಧರ್ಮದ ಜನರು ಭ್ರಾತೃತ್ವದಿಂದ ಬಾಳ್ವೆ ನಡೆಸುತ್ತಿದ್ದಾರೆ ಎಂದರು.

    ಈಶಾನ್ಯ ದೆಹಲಿಯ ಹಿಂಸಾಚಾರದಲ್ಲಿ ಈವರೆಗೂ 23 ಮಂದಿ ಸಾವಿಗೀಡಾಗಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts