More

    ತುಳು ಮಾನ್ಯತೆಗೆ ಸಮಗ್ರ ಪ್ರಸ್ತಾವನೆ

    ಮಂಗಳೂರು: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ವಿಚಾರಕ್ಕೆ ಸಂಬಂಧಿಸಿ ಶೀಘ್ರ ಕೇಂದ್ರ ಸರ್ಕಾರಕ್ಕೆ ಸಮಗ್ರ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

    ಪಿಲಿಕುಳ ನಿಸರ್ಗಧಾಮಕ್ಕೆ ಶುಕ್ರವಾರ ಭೇಟಿ ನೀಡಿದ ಅವರು, ತುಳುವಿಗೆ ಮಾನ್ಯತೆ ಕುರಿತಂತೆ ಹಿಂದೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು; ಆದರೆ ಅದು ಸಮಗ್ರವಾಗಿಲ್ಲ ಎಂದು ಕೇಂದ್ರ ವಾಪಸ್ ಕಳುಹಿಸಿತ್ತು. ಆ ಬಳಿಕ ಹಿಂದಿನ ಸರ್ಕಾರಗಳು ಈ ವಿಚಾರವಾಗಿ ಮುಂದುವರಿದಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಮತ್ತೆ ಸಮಗ್ರ ವರದಿಯೊಂದನ್ನು ಕೇಂದ್ರಕ್ಕೆ ಕಳುಹಿಸಲಾಗುವುದು. ಇದಕ್ಕೆ ಒಪ್ಪಿಗೆ ಸಿಗುವ ವಿಶ್ವಾಸವಿದೆ ಎಂದರು.

    ಅರಣ್ಯವಾಸಿಗಳ ಬಲವಂತ ಸ್ಥಳಾಂತರವಿಲ್ಲ: ಪರಿಸರ ಸೂಕ್ಷ್ಮಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಬುಡಕಟ್ಟು ಹಾಗೂ ಗುಡ್ಡಗಾಡು ಜನರನ್ನು ಬಲವಂತವಾಗಿ ಜನವಸತಿ ಪ್ರದೇಶಕ್ಕೆ ಸ್ಥಳಾಂತರಿಸುವುದಿಲ್ಲ. ಆದರೆ ಅವರನ್ನು ಒಪ್ಪಿಸುವ ಪ್ರಯತ್ನ ಮಾಡಲಾಗುವುದು. ಅರಣ್ಯದಲ್ಲೇ ಇರಲು ಇಚ್ಛಿಸಿದರೆ ಅಲ್ಲಿಯೇ ಮೂಲಸೌಕರ್ಯ ಒದಗಿಸಲಾಗುವುದು. ಹಲವರು ಈಗಾಗಲೇ ನಗರಕ್ಕೆ ಬರಲು ಒಪ್ಪಿದ್ದು, ಅವರಿಗೆ ಪುನರ್ವಸತಿ ಕಲ್ಪಿಸಲಾಗುವುದು. ಕಾಡಿನಲ್ಲಿರುವ ಬಹುತೇಕರು ಎಸ್‌ಟಿ ಸಮುದಾಯಕ್ಕೆ ಸೇರಿರುವುದರಿಂದ ಹುಲಿ ಯೋಜನೆ ಸೇರಿದಂತೆ ಪರಿಸರ ಪೂರಕ ಯೋಜನೆ ಜಾರಿಗೊಳಿಸುವ ಮೊದಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.

    ಮೂಡುಬಿದಿರೆ ಒಂಟಿಕಟ್ಟೆಯ ಕಡಲ ಕೆರೆ ನಿಸರ್ಗಧಾಮದ ಸಾಲುಮರ ತಿಮ್ಮಕ್ಕ ಸಸ್ಯೋದ್ಯಾನವನ ಆವರಣದಲ್ಲಿ ರಾಣಿ ಅಬ್ಬಕ್ಕ ಬಿದಿರು ಉದ್ಯಾನವನ ಲೋಕಾರ್ಪಣೆಗೊಳಿಸಿದ ಸಚಿವರು, ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ದರ್ಶನ ಪಡೆದರು.

    ಪಿಲಿಕುಳ ಅಭಿವೃದ್ಧಿಗೆ ಸಹಕಾರ: ಪ್ರಾಣಿಗಳನ್ನು ಗೂಡುಗಳಲ್ಲಿ ಕೂಡಿ ಹಾಕದೆ ಕಾಡಿನ ವಾತಾವರಣದಲ್ಲೇ ಮುಕ್ತವಾಗಿ ಬಿಟ್ಟಿರುವುದು ಹೆಚ್ಚು ಅನುಕೂಲಕರವಾಗಿದೆ. ಪಿಲಿಕುಳದ ಅಭಿವೃದ್ಧಿ ಕುರಿತಂತೆ ನೂತನ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಜತೆ ಮಾತನಾಡಲಾಗುವುದು. ರಾಜ್ಯ ಅರಣ್ಯ ಇಲಾಖೆಯೂ ಎಲ್ಲ ಸಹಕಾರ ನೀಡಲಿದೆ ಎಂದು ಸಚಿವ ಅರವಿಂದ ಲಿಂಬಾವಳಿ ಭರವಸೆ ನೀಡಿದರು. ಪಿಲಿಕುಳ ನಿಸರ್ಗಧಾಮದ ಜೈವಿಕ ಉದ್ಯಾನವನದ ಆವರಣದಲ್ಲಿ ಸಸಿಯೊಂದನ್ನು ನೆಟ್ಟ ಬಳಿಕ ಗುತ್ತಿನ ಮನೆಗೂ ಭೇಟಿ ನೀಡಿ ತುಳುನಾಡಿನ ಸಂಸ್ಕೃತಿ, ಆಚರಣೆಗಳ ಕುರಿತು ಮಾಹಿತಿ ಪಡೆದರು.
    ಶಾಸಕ ಉಮಾನಾಥ ಕೋಟ್ಯಾನ್, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಕಮಿಷನರ್ ವೆಂಕಟೇಶ್ ಜಿ.ಎಸ್., ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ ರಾವ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೆಟಾಲ್ಕರ್, ಡಿಎಫ್‌ಒ ಡಾ.ಕರಿಕಾಳನ್, ಎಸಿಎಫ್ ಸುಬ್ರಹ್ಮಣ್ಯ, ವಲಯ ಅರಣ್ಯಾಧಿಕಾರಿ ಶ್ರೀಧರ್ ಮೊದಲಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts