More

    ಭತ್ತ ಬಿತ್ತನೆ ಪ್ರದೇಶ ಕುಂಠಿತ

    ನಾಗರಾಜ ಮಂಜಗುಣಿ ಅಂಕೋಲಾ

    ಸದ್ಯ ಮುಂಗಾರು ಆರಂಭಗೊಂಡಿದ್ದು, ರೈತರು ಕೃಷಿ ಚಟುವಟಿಕೆಯತ್ತ ಗಮನ ಹರಿಸುತ್ತಿದ್ದಾರೆ. ಆದರೆ, ತಾಲೂಕಿನಲ್ಲಿ ಕಳೆದೆರಡು ವರ್ಷಗಳಿಂದ ಭತ್ತದ ಕೃಷಿಯಲ್ಲಿ ಇಳಿಮುಖವಾಗುತ್ತಿರುವುದು ಕೃಷಿ ಇಲಾಖೆಯ ಅಂಕಿ ಅಂಶದಲ್ಲಿ ದಾಖಲಾಗಿದೆ.

    ತಾಲೂಕಿನಲ್ಲಿ 5,500 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರಿನಲ್ಲಿ ಭತ್ತದ ಕೃಷಿ ಮಾಡಲಾಗುತ್ತಿತ್ತು. ಆದರೆ, ಕಳೆದ ಎರಡು ವರ್ಷಗಳಲ್ಲಿ ಕೃಷಿ ಭೂಮಿಯು ನಿವೇಶನ ಹಾಗೂ ಇತರೆ ಉದ್ದೇಶಗಳಿಗಾಗಿ ಪರಿ ವರ್ತನೆಯಾಗಿದ್ದು, 4,700 ಹೆಕ್ಟೇರ್​ಗೆ ಇಳಿಮುಖವಾಗಿದೆ. ಹೀಗಾಗಿ, ಎರಡೇ ವರ್ಷದಲ್ಲಿ 800 ಹೆಕ್ಟೇರ್ ಭತ್ತ ಬೆಳೆಯುವ ಪ್ರಮಾಣ ತಗ್ಗಿದಂತಾಗಿದೆ.

    ಇತರೆ ಬೆಳೆ: ಮುಂಗಾರು ಬೆಳೆಯಾಗಿ 37 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಇನ್ನು, 5 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗುತ್ತಿದೆ. ಹಿಂಗಾರು ಬೆಳೆಗೆ ಮಾತ್ರ ಶೇಂಗಾ ಬೀಜ ವಿತರಣೆ ಮಾಡುತ್ತಿದ್ದರು. ಆದರೆ, ಈಗ ಮುಂಗಾರಿನಲ್ಲಿ ರೈತರು ಶೇಂಗಾ ಬೀಜವನ್ನು ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ.

    ಮೊಬೈಲ್ ಆಪ್: ಈ ಹಿಂದೆ ಕೃಷಿ ಇಲಾಖೆಯವರು ವಿವಿಧ ಭಾಗಗಳಿಗೆ ತೆರಳಿ ಸಮೀಕ್ಷೆ ನಡೆಸಿ ಬೆಳೆಗಳ ಬಗ್ಗೆ ಮಾಹಿತಿ ಪಡೆದು, ದಾಖಲೆಗಳನ್ನು ನಿರ್ವಹಣೆ ಮಾಡುತ್ತಿದ್ದರು. ಆದರೆ, ಈಗ ಆಧುನೀಕರಣದಿಂದಾಗಿ ಮೊಬೈಲ್​ಫೋನ್ ಆಪ್​ನಿಂದಲೆ ಎಷ್ಟು ಕ್ಷೇತ್ರ ಭೂ ಪರಿವರ್ತನೆಯಾಗಿದೆ ಮತ್ತು ಯಾವ್ಯಾವ ಬೆಳೆಯನ್ನು ಎಷ್ಟೆಷ್ಟು ಪ್ರದೇಶದಲ್ಲಿ ಬೆಳೆಯಲಾಗುತ್ತದೆ ಎಂದು ಸುಲಭವಾಗಿ ತಿಳಿಯಬಹುದಾಗಿದೆ.

    ರೈತ ಸಂಪರ್ಕ ಕೇಂದ್ರ: ತಾಲೂಕಿನಲ್ಲಿ ಬಾಸಗೋಡ, ಬಳಲೆ, ಬೇಲೆಕೇರಿ, ಅಂಕೋಲಾ ಸೇರಿ 4 ರೈತ ಸಂಪರ್ಕ ಕೇಂದ್ರಗಳಿವೆ. ರೈತರಿಗೆ ಅಗತ್ಯವಿರುವ ಜಯಾ, ಎಂ.ಟಿ.ಯು. 1001, ಎಂ.ಓ. 4, ಜೆ.ಜಿ.ಎಲ್. ತಳಿಗಳು ಹಾಗೂ ಪಿ.ಎ.ಸಿ. 837 ಮತ್ತು ವಿ.ಎನ್.ಆರ್. 2233 ಎಂಬ ಹೈಬ್ರಿಡ್ ತಳಿಗಳನ್ನು ರೈತ ಸಂಪರ್ಕ ಕೇಂದ್ರಗಳಿಂದ ಪಡೆಯಬಹುದಾಗಿದೆ.

    ಬಾರದ ಗೊಬ್ಬರ: ಕೃಷಿ ಇಲಾಖೆಯಿಂದ ಈ ಹಿಂದೆ ನೀಡಲಾಗುತ್ತಿದ್ದ ಸಾವಯವ ಗೊಬ್ಬರ ಇದುವರೆಗೂ ಬಂದಿಲ್ಲ. ಅದು ಬಂದ ನಂತರ ರೈತರ ಅಗತ್ಯಕ್ಕೆ ಬೇಕಾಗುವಷ್ಟು ಪೂರೈಸಲಾಗುವುದು ಎಂದು ಕೃಷಿ ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ರೈತರಿಗೆ ಅಗತ್ಯವಿರುವ ಸೌಲಭ್ಯವನ್ನು ಕೃಷಿ ಇಲಾಖೆ ಯಿಂದ ನೀಡಲಾಗುತ್ತಿದೆ. ಯಾವುದೇ ರೋಗ ರುಜಿನ ಗಳು ಕಾಣಿಸಿಕೊಂಡರೂ ಸ್ಥಳ ಪರಿಶೀಲನೆ ನಡೆಸಿ ಅದಕ್ಕೆ ಪರಿಹಾರ ಕ್ರಮಕ್ಕೆ ಸೂಚಿಸ ಲಾಗುವುದು. ಆದಷ್ಟು ಭೂಮಿಯನ್ನು ಬಂಜರು ಬಿಡದೆ ರೈತರು ಕೃಷಿಗೆ ಹೆಚ್ಚಿನ ಒಲವು ತೋರಬೇಕು.

    | ಎನ್.ಜೆ. ಅಂಬಿಗ, ಸಹಾಯಕ ಕೃಷಿ ಅಧಿಕಾರಿ, ಅಂಕೋಲಾ

    ಕೆಲವು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಸಾಕಷ್ಟು ಭತ್ತದ ಬೆಳೆ ನಾಶವಾಗಿದೆ. ಆಗಸ್ಟನಲ್ಲಿ ಉಂಟಾದ ಪ್ರವಾಹದಿಂದಾಗಿ ಭತ್ತದ ಬೆಳೆ ನಾಶವಾಗಿದ್ದರೂ ಅದಕ್ಕೆ ಸೂಕ್ತ ಪರಿಹಾರ ಇದುವರೆಗೂ ಬಂದಿಲ್ಲ. ಹೀಗಾಗಿ, ರೈತರು ಕೃಷಿಯಿಂದ ವಿಮುಖರಾಗುವಂತಾಗಿದೆ. ಈ ಬಗ್ಗೆ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು.

    | ಹುಲಿಯಾ ಗೌಡ, ಕೃಷಿಕ, ಶಿರಗುಂಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts